ಕಥೆ

ನರ್ತಕಿ ಹಾಡಿದ ಆ ನಾಲ್ಕು ಸಾಲು ತಂದ ಬದಲಾವಣೆ ಇದನ್ನೋದಿ

ದಿನಕ್ಕೊಂದು ಕಥೆ

ಸಮಯವು ಕಳೆದಿಹುದು ಬಹಳ
ಉಳಿದಿರುವ ಸಮಯವು ವಿರಳ,
ಪ್ರತಿ ಕ್ಷಣ ಕ್ಷಣಗಳು ಕಳೆದೆವು ನಿರಾತಂಕ
ಕೊನೆ ಕ್ಷಣದಿ ಬಾರದಿರಲಿ ಕಳಂಕ.

ಒಂದೂರಾಗ ಒಬ್ಬ ರಾಜಾ ಇದ್ದ. ಅವಾ ಭಾಳ ವರ್ಷಗಳಿಂದ ತನ್ನ ಸಾಮ್ರಾಜ್ಯವನ್ನ ಆಳ್ತಿದ್ದ.

ತಾನು ರಾಜನ ಪಟ್ಟಕ್ಕೇರಿದ ನಲವತ್ತನೇ ವರ್ಷದ ಆಚರಣೆಯನ್ನ ವಿಜೃಂಭಣೆಯಿಂದ ಆಚರಿಸಬೇಕೆಂಬ ಉದ್ದೇಶದಿಂದ ಒಂದು ಉತ್ಸವವನ್ನ ಏರ್ಪಡಿಸಿದ.

ಆ ಉತ್ಸವಕ್ಕ ತನ್ನ ಆರಾಧ್ಯ ಗುರುಗಳನ್ನು ಹಾಗೂ ಮಿತ್ರ ದೇಶದ ರಾಜರು,ರಾಜಕುಮಾರರನ್ನು ಕೂಡ ಮರ‌್ಯಾದಾಪೂರ್ವಕವಾಗಿ ಆಮಂತ್ರಿಸಿದ್ದ.

ಉತ್ಸವವನ್ನ ರೋಚಕವಾಗಿಸಲು ತನ್ನ ರಾಜ್ಯದ ಸುಪ್ರಸಿದ್ಧ ನರ್ತಕಿಯ ನಾಟ್ಯ ಕಾರ್ಯಕ್ರಮವನ್ನ ಆಸ್ಥಾನದಲ್ಲಿ ಏರ್ಪಡಿಸಿದ್ದ.

ರಾಜನು ಒಂದು ದೊಡ್ಡ ಪಾತ್ರೆಯ ತುಂಬ ಬಂಗಾರದ ನಾಣ್ಯಗಳನ್ನ ತನ್ನ ಗುರುವಿನ ಕೈಯಲ್ಲಿ ಕೊಟ್ಟಿದ್ದ.
ನರ್ತಕಿಯು ಒಳ್ಳೆಯ ಹಾಡು,ನರ್ತನದಿಂದ ಮನಸ್ಸನ್ನು ಉಲ್ಲಸಿತಗೊಳಿಸಿದಲ್ಲಿ,ಆಕೆಗೆ ಗುರುಗಳ ಹಸ್ತದಿಂದ ಆ ನಾಣ್ಯಗಳ ನೀಡಿಸಿ ಸನ್ಮಾನಿಸುವುದು ಆತನ ಇಚ್ಛೆಯಾಗಿತ್ತು.

ರಾತ್ರಿಯೆಲ್ಲ ಹಾಡು,ನಾಟ್ಯ ನಡೆಯುತ್ತ ಬ್ರಾಹ್ಮಿ ಮುಹೂರ್ತದ ಸಮಯವೂ ಬಂದಿತು. ಆಕಸ್ಮಿಕವಾಗಿ ನರ್ತಕಿ ತಬಲ ಬಾರಿಸುವವನ್ನ ನೋಡುತ್ತಾಳೆ. ಪಾಪ ಅವನಿಗೆ ನಿದ್ದೆ ಕಣ್ತುಂಬಿ ಬಂದು ತೂಕಡಿಸುತ್ತಿರುತ್ತಾನೆ.

ನರ್ತಕಿಗೆ ಗಾಬರಿಯಾಯಿತು.ನಿದ್ದೆಗಣ್ಣಿನಲ್ಲಿ ತಬಲದ ದಾಟಿಯನ್ನ ತಪ್ಪು ನುಡಿಸಿದಲ್ಲಿ ರಾಜನಿಗೆ ಕೋಪ ಬಂದು ಏನಾದರೂ ಶಿಕ್ಷೆ ಕೊಟ್ಟಾನು ಎಂಬ ಭಯದಿಂದ,ಆತನನ್ನು ಎಚ್ಚರಿಸಲು ಚೌಪದಿಯ ನುಡಿಯೊಂದನು ಹೇಳುತ್ತಾಳೆ.

“ಸಮಯವು ಕಳೆದಿಹುದು ಬಹಳ
ಉಳಿದಿರುವ ಸಮಯವು ವಿರಳ|
ಪ್ರತಿ ಕ್ಷಣ ಕ್ಷಣಗಳು ಕಳೆದೆವು ನಿರಾತಂಕ
ಕೊನೆ ಕ್ಷಣದಿ ಬಾರದಿರಲಿ ಕಳಂಕ|”

ನರ್ತಕಿಯು ಹೇಳಿದ ಈ ನುಡಿಯನ್ನ ಅಲ್ಲಿರುವ ಬೇರೆ ಬೇರೆ ವ್ಯಕ್ತಿಗಳು ಬೇರೆ ಬೇರ ತೆರನಾಗಿ ಅರ್ಥೈಸಿಕೊಂಡರು.

ತಬಲದವನು ನಿಚ್ಚಳಗೊಂಡು ಸರಿಯಾಗಿ ತಬಲವನ್ನು ಬಾರಿಸಹತ್ತಿದನು.

ನುಡಿಗಳ ಕೇಳಿದ ಗುರುಗಳು ತಮ್ಮ ಹತ್ತಿರದಲ್ಲಿದ್ದ ಎಲ್ಲ ಬಂಗಾರದ ನಾಣ್ಯಗಳನ್ನು ನರ್ತಕಿಗೆ ಅರ್ಪಿಸಿದರು.

ನರ್ತಕಿಯ ನುಡಿಗಳ ಕೇಳಿದ ರಾಜನ ಮಗಳು ತನ್ನ ಕೊರಳಲ್ಲಿದ್ದ ನವರತ್ನದ ಹಾರವನ್ನ ಆಕೆಗೆ ನೀಡಿದಳು.

ನರ್ತಕಿಯ ನುಡಿ ಕೇಳಿದ ಯುವರಾಜ ಕೂಡ ತನ್ನ ಮುಕುಟವನ್ನ ನರ್ತಕಿಯ ಸಮರ್ಪಿಸಿದ.

ಇದೆಲ್ಲವನ್ನೂ ನೋಡುತ್ತಿದ್ದ ಮಹಾರಾಜ ಆಶ್ಚರ್ಯಚಕಿತನಾಗಿ ಯೋಚಿಸ ಹತ್ತಿದ.ರಾತ್ರಿ ಎಲ್ಲಾ ನೃತ್ಯ ನಡೆಯುತ್ತಿದ್ದರೂ ಸುಮ್ಮನೆ ಕುಳಿತಿದ್ದ ಇವರೆಲ್ಲ,ಕೊನೆಯಲ್ಲಿ ನಾಲ್ಕು ಸಾಲಿನ ನುಡಿಯ ಕೇಳಿ ತಮ್ಮಲ್ಲಿಯ ಅಮೂಲ್ಯ ವಸ್ತುಗಳನ್ನ ಆಕೆಗೆ ಅರ್ಪಿಸಿದರಲ್ಲ.
ಗುರುಗಳೆ, ಅಂತಹದ್ದೇನಿದೆ ಈ ಯಕಶ್ಚಿತ್ ನರ್ತಕಿಯ ಆ ನಾಲ್ಕು ಸಾಲುಗಳಲ್ಲಿ? ಎಂದು ಕೇಳಿದಾಗ,

ಗುರುಗಳು ಕಣ್ಣಲ್ಲಿ ನೀರು ತುಂಬಿಕೊಂಡು,
“ಮಹಾರಾಜಾ, ಈಕೆಯನ್ನ ಯಕಶ್ಚಿತ್ ನರ್ತಕಿ ಎನ್ನದಿರಿ. ಈಗ ಆಕೆ ನನ್ನ ಗುರುವಾಗಿದ್ದಾಳೆ. ಯಾಕೆಂದರೆ, ಆಕೆಯ ಆ ನಾಲ್ಕು ಸಾಲುಗಳು ನನ್ನ ಕಣ್ಣನ್ನು ತೆರೆಸಿದವು.

ನಾನು ನನ್ನ ಸಂಪೂರ್ಣ ಜೀವನವನ್ನ ಅರಣ್ಯದಲ್ಲಿ ಭಕ್ತಿಯಿಂದ ತಪಸ್ಸಿನಲ್ಲಿ ಕಳೆದಿದ್ದು,ಕೊನೆಯ ಸಮಯದಲ್ಲಿ ನರ್ತಕಿಯ ನಾಟ್ಯವನ್ನು ನೋಡುತ್ತ ನನ್ನ ಸಾಧನೆಯನ್ನೆಲ್ಲ ಕಳೆದುಕೊಳ್ಳಲು ಇಲ್ಲಿಗೆ ಬಂದೆನೆನಿಸುತ್ತಿದೆ. ಇದನ್ನ ಆಕೆ ಎಚ್ಚರಿಸಿದಳು. ನಾನಿನ್ನು ಮತ್ತೆ ಅರಣ್ಯಕ್ಕೆ ಹೋಗುವೆ.ಎಂದು ಹೇಳಿ ಹೊರಟು ಹೋದರು.

ರಾಜನ ಮಗಳು ಹೇಳಿದಳು. “ಅಪ್ಪಾಜಿ, ನಾನೀಗ ಯೌವನಕ್ಕೆ ಬಂದಿದ್ದರೂ ನೀವು ನನ್ನ ವಿವಾಹದ ವಿಷಯದಲ್ಲಿ ಕಣ್ಣು ಮುಚ್ಚಿ ಕುಳಿತಿದ್ದಿರಿ, ಹಾಗಾಗಿ ನಾನು ಇಂದು ರಾತ್ರಿ ಅಂತಃಪುರದ ಕಾವಲುಗಾರನ ಜೊತೆ ಓಡಿ ಹೋಗುವ ಯೋಜನೆ ಹಾಕಿದ್ದೆನು.

ನರ್ತಕಿಯ ಸಾಲುಗಳು ನನ್ನ ಕಣ್ತೆರೆಸಿದವು. ಇಂದಿಲ್ಲ ನಾಳೆ ನೀನು ನನಗೆ ಯೋಗ್ಯ ವರನೊಡನೆ ಮದುವೆ ಮಾಡಿಸಿಯೇ ತೀರುವಿ.ಹಾಗಿದ್ದಲ್ಲಿ ನಾನು ಓಡಿ ಹೋಗಿ ನಿನಗೆ ಕಳಂಕ ತರುವುದು ಸರಿಯಲ್ಲ ಎಂಬ ಅರಿವು ಉಂಟಾಯಿತು. ಎಂದಳು.

ನಂತರ ಯುವರಾಜ ತನ್ನ ತಂದೆಗೆ ಹೇಳಿದ.
“ಅಪ್ಪಾಜಿ ನನ್ನನ್ನು ಕ್ಷಮಿಸಿಬಿಡಿ. ಇಷ್ಟು ವರ್ಷಗಳ ರಾಜ್ಯಭಾರ ನೀವು ಮಾಡುತ್ತಿದ್ದರಿ ವಿನಾ ವಯಸ್ಸು ತುಂಬಿ ಬಂದಿರುವ ಮಗನ ಕೈಗೆ ರಾಜ್ಯಾಧಿಕಾರ ಕೊಡುತ್ತಿಲ್ಲವಲ್ಲ ಎಂಬ ಕೋಪದಲ್ಲಿ ಇಂದು ರಾತ್ರಿ ನಿನ್ನನ್ನು ಕೊಲೆ ಮಾಡಿಸಿ ನಾನು ಪಟ್ಟಕ್ಕೇರುವ ಯೋಜನೆ ಹಾಕಿಕೊಂಡಿದ್ದೆ.

ಆದರೆ ಈ ಮಹಾತಾಯಿ ನರ್ತಕಿಯ ಸಾಲುಗಳು, ಏ ಹುಚ್ಚ,ಇಂದಿಲ್ಲ ನಾಳೆ ನೀನೇ ತಾನೆ ಈ ಸಾಮ್ರಾಜ್ಯದ ರಾಜನಾಗುವುದು.ಹಾಗಿದ್ದಾಗ ತಂದೆಯನ್ನು ಕೊಲೆಗೈದು ಪಟ್ಟಕ್ಕೇರಿದನೆಂಬ ಅಪವಾದ ಬೇಕೆ. ಎಂದು ಎಚ್ಚರಿಸಿದವು. ನನ್ನನ್ನು ಕ್ಷಮಿಸಿ ಅಪ್ಪಾಜಿ.ಎಂದ.

ಕೊನೆಗೆ ರಾಜನೂ ಆ ಸಾಲುಗಳನ್ನು ಮನನ ಮಾಡಿಕೊಂಡ. ವಯಸ್ಸಿಗೆ ಬಂದ ಮಗಳನ್ನು ಇನ್ನೂ ಹಾಗೆ ಕೂಡಿಸಿಕೊಂಡಿದ್ದಾನೆ ಅನ್ನಿಸಿಕೊಳ್ಳುವುದು ಬೇಡ ಅಂತ ನಿರ್ಧರಿಸಿ ಮಗಳಿಗೆ ಹೇಳಿದ, ಮಗಳೆ ಹೇಗಿದ್ದರೂ ನಮ್ಮ ಮಿತ್ರ ದೇಶದ ರಾಜಕುಮಾರರು ಬಂದಿದ್ದಾರೆ. ಅವರಲ್ಲಿ ಯಾರನ್ನಾದರೂ ಆಯ್ಕೆ ಮಾಡಿಕೊ ಎಂದ ಮಗಳು ಹಾಗೆಯೇ ಆಯ್ಕೆ ಮಾಡಿಕೊಂಡಳು.

ರಾಜನು ಆ ಕ್ಷಣದಲ್ಲಿಯೇ ತನ್ನ ಮಗನಿಗೆ ರಾಜ್ಯಾಭಿಷೇಕ ಮಾಡಿ ತಾನು ವಾನಪ್ರಸ್ಥಾಶ್ರಮಕ್ಕೆ ಹೊರಟ.

ಇದೆಲ್ಕವನ್ನೂ ನೋಡಿದ ನರ್ತಕಿಯು ಯೋಚಿಸಿದಳು. “ನಾನು ಹೇಳಿದ ನಾಲ್ಕು ಸಾಲುಗಳಿಂದ ಇಷ್ಟು ಜನ ಸುಧಾರಿಸಿದರು. ನಾನೇಕೆ ಸುಧಾರಿಸಬಾರದು” ಎಂದುಕೊಂಡು. ದೇವರೆ ನನ್ನೆಲ್ಲ ಪಾಪಗಳನ್ನು ಕ್ಷಮಿಸಿಬಿಡು.ಇನ್ನು ಮೇಲೇನಿದ್ದರೂ ನಿನ್ನ ನಾಮಸ್ಮರಣೆಯೊಂದೆ ನನ್ನ ಕಾರ್ಯ” ಎಂದಳು.

ಸಮಯ ಕಳೆದಿಹುದು ಬಹಳ
ಉಳಿದಿರುವ ಸಮಯ ವಿರಳ
ಪ್ರತಿ ಕ್ಷಣ ಕ್ಷಣಗಳು ಕಳೆದವು ನಿರಾತಂಕ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button