![](https://vinayavani.com/wp-content/uploads/2022/03/20200917_070529.jpg)
ದಿನಕ್ಕೊಂದು ಕಥೆ
ಪರಾಕ್ರಮದ ಶೌರ್ಯ ಬೇಡ…
ಕೌರವರು ಪಾಂಡವರನ್ನು ಪಗಡೆಯಾಟದಲ್ಲಿ ಸೋಲಿಸಿ, ರಾಜ್ಯ ಭ್ರಷ್ಟರನ್ನಾಗಿ ಮಾಡುತ್ತಾರೆ. ಅದರಿಂದ ವನವಾಸಕ್ಕೆ ಹೋಗಬೇಕಾಗುತ್ತದೆ. ವನವಾಸದ ಸಂದರ್ಭದಲ್ಲಿ ಪಾಂಡವರು ದ್ರೌಪದಿಯೊಡನೆ ವಾಸ ಮಾಡುತ್ತಿದ್ದರು.
ಒಂದು ದಿನ ಗಾಳಿಯಲ್ಲಿ ಹೂವಿನ ಪರಿಮಳವೊಂದು ತೇಲಿ ಬರುತ್ತದೆ. ಅಷ್ಟೊಂದು ಘಮ ಸೂಸುವ ಆ ಹೂವು ಯಾವುದು ಎಂಬ ಕುತೂಹಲ ದೌಪದಿಗೆ. ಅವಳು ಭೀಮನ ಬಳಿಗೆ ಬಂದು, “ಆ ಪರಿಮಳದ ಹೂವನ್ನು ನನಗೆ ತಂದು ಕೊಡುತ್ತೀಯಾ?” ಎಂದು ಕೇಳಿದಳು.
ಭೀಮ ಆ ಹೂವಿನ ಸುವಾಸನೆಯ ಮೂಲಕ ಹೂವನ್ನು ಹುಡುಕುತ್ತಾ ಹೊರಡುತ್ತಾನೆ. ದಟ್ಟ ಅರಣ್ಯವಾದ್ದರಿಂದ ಕಾಲಿಗೆ ಕೈಗೆ ತೊಡರುತ್ತಿದ್ದವೆಲ್ಲವನ್ನು ಗದೆಯಿಂದ ಸವರುತ್ತಾ ಮುನ್ನಡೆಯುತ್ತಾನೆ. ಮುಂದೆ ಹೋದಂತೆ ಹೂವು-ಹಣ್ಣುಗಳಿಂದ ಸಮೃದ್ಧವಾದ ತೋಟವೊಂದು ಸಿಗುತ್ತದೆ. ದಾರಿ ಕಿರಿದಾಗಿರುತ್ತದೆ. ಆ ಕಿರಿದಾದ ದಾರಿಯಲ್ಲಿ ವಾನರವೊಂದು ಮಲಗಿರುತ್ತದೆ. ಅದನ್ನು ನೋಡಿ ಸಿಟ್ಟಿನಿಂದ ಭೀಮ್, “ಎಲೈ ವಾನರನೇ ದಾರಿಗಡ್ಡವಾಗಿ ಯಾಕೆ ಮಲಗಿದ್ದೀಯಾ? ಅತ್ತ ಸರಿ” ಎನ್ನುತ್ತಾನೆ. ಆಗ ವಾನರ, “ಅಯ್ಯಾ, ನನಗೆ ವಯಸ್ಸಾಗಿದೆ. ಎದ್ದು ಓಡಾಡಲು ಆಗುವುದಿಲ್ಲ. ನನ್ನನ್ನು ಬಳಸಿಕೊಂಡು ಹೋಗಬಾರದೆಕೆ?” ಎಂದು ಕೇಳುತ್ತದೆ.
ಭೀಮ ಸಿಟ್ಟಿನಿಂದ, “ನಾನು ಯಾರು ಎಂದು ನಿನಗೆ ಗೊತ್ತಿಲ್ಲವೇ? ನಾನು ಪಾಂಡವರಲ್ಲೊಬ್ಬನಾದ ಪರಾಕ್ರಮಿ ಭೀಮ. ಪಕ್ಕಕ್ಕೆ ಸರಿದು ದಾರಿ ಮಾಡಿಕೊಡು. ಇಲ್ಲದಿದ್ದರೆ ಚೆನ್ನಾಗಿರುವುದಿಲ್ಲ” ಎನ್ನುತ್ತಾನೆ. ವಾನರ ಮುಗುಳುನಕ್ಕು “ಓಹೋ ಪರಾಕ್ರಮಿ ಭೀಮ ನೀನೇನಾ? ಕೌರವರ ಜೊತೆ ಪಗಡೆಯಾಟದಲ್ಲಿ ಸೋತಾಗ ನಿನ್ನ ಶೌರ್ಯ ಎಲ್ಲಿ ಹೋಗಿತ್ತು? ದುಶ್ಯಾಸನ ದೌಪದಿಯ ಸೀರೆ ಎಳೆದಾಗ ನೀನಿರಲಿಲ್ಲವೇ?” ಎಂದು ಪ್ರಶ್ನಿಸಿತು. “ಸುಮ್ಮನೇ ನನ್ನನ್ನು ಕೆಣಕಬೇಡ?” ಎಂದು ಭೀಮ ಅಬ್ಬರಿಸುತ್ತಾನೆ. “ನಿನಗೆ ಸಾಧ್ಯವಿದ್ದರೆ ನನ್ನ ಬಾಲವನ್ನಾದರೂ ಅತ್ತ ಸರಿಸಿ ಮುಂದೆ ಹೋಗಬಹುದು. ನಾನಂತೂ ಮೇಲೇಳಲಾರೆ” ಎಂದಿತು ವಾನರ.
ಭೀಮ ತನ್ನ ಗದೆಯನ್ನೆತ್ತಿ ಬಾಲವನ್ನು ಅತ್ತ ನೂಕಲು ಹೋದ ಸಾಧ್ಯವಾಗಲಿಲ್ಲ, ಸ್ವಲ್ಪ ಜೋರಾಗಿಯೇ ತಳ್ಳಿದ. ಬಲ ಪ್ರಯೋಗಿಸಿದಾಗಲೂ ಬಾಲ ಸ್ವಲ್ಪವೂ ಅಲ್ಲಾಡಲಿಲ್ಲ, ಭೀಮ ಆಶ್ಚರ್ಯಗೊಂಡು ಗದೆಯನ್ನು ಬಾಲದ ಕೆಳಗೆ ಹಾಕಿ ಮೇಲೆತ್ತಲು ಹೋದ, ಗದೆ ಬಾಲದ ಕೆಳಗೆ ಸಿಕ್ಕಿಹಾಕಿಕೊಂಡಿತು.
ತನ್ನ ಬಲವನ್ನೆಲ್ಲಾ ಉಪಯೋಗಿಸಿದರೂ ಭೀಮನಿಗೆ ಗದೆಯನ್ನು ಬಾಲದ ಕೆಳನಿಂದ ತೆಗೆಯಲಾಗಲಿಲ್ಲ. ನನ್ನಂಥವನಿಗೆ ವಾನರನಿಂದ ಅಪಮಾನವೇ? ಮಾಂತ್ರಿಕ ವಾನರನೇ ಇರಬೇಕು ಇದು ಎಂದು ಭೀಮ ಮುಂದುವರಿದು, “ಎಲೈ ವಾನರನೇ, ನೀನ್ಯಾರು ಹೇಳು? ನೀನು ಸಾಧಾರಣ ಕಪಿಯ ಹಾಗೆ ಕಾಣಿಸುವುದಿಲ್ಲ. ಈ ಮಂತ್ರವಿದ್ಯೆಯನ್ನು ಬಿಟ್ಟು ನನ್ನ ಜೊತೆ ಯುದ್ಧಕ್ಕೆ ಬಾ” ಎನ್ನುತ್ತಾನೆ.
ಆಗ ವಾನರ “ನಾನು ಹನುಮಂತ, ರಾವಣನನ್ನು ಕೊಂದ ರಾಮನ ಬಂಟ. ನಿನ್ನನ್ನು ಬಹಳ ದಿವಸದಿಂದ ನೋಡಬೇಕೆಂದು ಕೊಂಡಿದ್ದೆ. ಅದಕ್ಕೆಂದೇ ನಿನ್ನನ್ನು ಮಾತಾಡಿಸಿಕೊಂಡು ನಿಂತೆ” ಎನ್ನುತ್ತಾ ಹನುಮಂತ ಬೆಟ್ಟದೆತ್ತರಕ್ಕೆ ಬೆಳೆಯುತ್ತಾನೆ. ಭೀಮ ಹನುಮಂತನ ಕಾಲಿಗೆ ನಮಸ್ಕರಿಸಿ ಕ್ಷಮೆ ಕೇಳುತ್ತಾನೆ.
ಪರಿಮಳದ ಹೂವುಗಳಿರುವ ಸ್ಥಳ ಎಲ್ಲಿದೆ? ಎಂಬುದನ್ನು ಹನುಮಂತನಿಂದ ತಿಳಿದುಕೊಂಡ ಭೀಮ, ಕುಬೇರನ ಸರೋವರಕ್ಕೆ ಹೋಗಿ, ಅಲ್ಲಿದ್ದ ಭಟರನ್ನೂ, ಹೂವಿಗೆ ಕಾವಲಿದ್ದ ಮೊಸಳೆಗಳನ್ನೂ ಸಾಯಿಸಿ, ಹೂವನ್ನು ಕಿತ್ತು ತಂದು ದೌಪದಿಗೆ ಕೊಡುತ್ತಾನೆ. ದೌಪದಿ ಸಂತೋಷಗೊಳ್ಳುತ್ತಾಳೆ.
ನೀತಿ :– ಪರಾಕ್ರಮದ ಶೌರ್ಯಕ್ಕಿಂತ ಶಾಂತಿ, ಶರಣಾಗತದಿಂದ ಎಲ್ಲವನ್ನೂ ಗೆಲ್ಲಬಹುದು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.