ವಿಶ್ವಾಸಘಾತಕ ಸ್ನೇಹಿತ ಮೊಸಳೆಯಿಂದ ಪಾರಾದ ಜಾಣ ಕೋತಿ
ವಿಶ್ವಾಸ ಘಾತಕತೆ
ಸಮುದ್ರದ ದಡದಲ್ಲಿ ಒಂದು ಬೋರೆ ಹಣ್ಣಿನ ದೊಡ್ಡ ಮರವಿತ್ತು. ಆ ಮರದ ಮೇಲೆ ದೊಡ್ಡ ಕೋತಿ ವಾಸವಾಗಿತ್ತು. ಒಂದು ದಿವಸ ಒಂದು ಮೊಸಳೆಯ ಈಜಿಕೊಂಡು ಬಂದು ಆ ದೊಡ್ಡ ಸಿಹಿ ಹಣ್ಣುಗಳನ್ನು ತಿನ್ನುತ್ತಿತ್ತು. ಕ್ರಮೇಣ ಕೋತಿ ಅದರ ಸ್ನೇಹ ಮಾಡಿತು.
ಹೀಗೆ ಒಂದು ದಿನ ಆ ಮೊಸಳೆಯ ಹೆಂಡತಿಗೆಂದೂ ಒಂದು ಹಣ್ಣನ್ನು ಇದರೊಡನೆ ಕಳಿಸಿಕೊಟ್ಟಿತು. ಆ ಮೊಸಳೆ ಈ ಹಣ್ಣನ್ನು ತಿಂದಾಗ ಈ ಕೋತಿಯ ಹೃದಯವನ್ನೇ ತಿನ್ನುವ ಆಸೆ ಮೂಡಿಸಿತು. ಗಂಡು ಮೊಸಳೆಯ ಬಳಿ ಕೋತಿಯನ್ನೇ ಮನೆಗೆ ಕರೆತರುವಂತೆಯೂ ಒತ್ತಾಯಿಸಿತು.
ಒಮ್ಮೆ ಗಂಡು ಮೊಸಳೆ ಬಂದು ಕೋತಿಯ ಬಳಿ ಮನೆಗೆ ಬರುವಂತೆ ತೀವ್ರ ಒತ್ತಡವನ್ನು ತಂದಿತು. ಮೊಸಳೆಯ ಬೆನ್ನಿನ ಮೇಲೆ ಕುಳಿತುಕೊಂಡು ಸಮುದ್ರದ ದ್ವೀಪದಲ್ಲಿರುವ ಅದರ ಮನೆಗೂ ಹೋಗಲು ಕೋತಿ ಮನಸ್ಸು ಮಾಡಿತು. ತುಸು ದೂರ ಹೋದೊಡನೆ ಗಂಡು ಮೊಸಳೆ ನಿಜ ವಿಚಾರವನ್ನೇ ಬಯಲು ಮಾಡಿತು. ನನ್ನಾಕೆಗೆ ನಿನ್ನ ಹೃದಯವನ್ನೂ ತಿನ್ನುವ ಆಸೆಯಾಗಿದೆ. ಹಾಗೆಂದೇ ನಾನೀಗ ಕರೆದೊಯ್ಯುತ್ತಿರುವೆ ನಿನ್ನನ್ನು’ ಎಂದು ಹೇಳಿದಾಗಲೇ ಕೋತಿಗೆ ತನ್ನ ಅಂತ್ಯ ಸಮೀಪಿಸಿತೆಂದು ಗೊತ್ತಾಯಿತು.
ತಕ್ಷಣವೇ ಕೋತಿ ಹೇಳಿತು ‘ಹೇ ಗೆಳೆಯಾ. ಈ ವಿಚಾರವನ್ನು ನೀನು ಮೊದಲೇ ಯಾಕೆ ಹೇಳಲಿಲ್ಲ? ಹೇಳಿದ್ದಲ್ಲಿ ಮರದ ಮೇಲೆ ಇಟ್ಟಿರುವ ನನ್ನ ಹೃದಯವನ್ನು ಜತೆಯಲ್ಲೇ ತಂದು ಬಿಡುತ್ತಿದ್ದೆನಲ್ಲ… ಛೇ ಎಂಥ ಕತೆ ಆಯಿತೀಗ…’ ಎಂದು ವ್ಯಧಿಸಿದಂತೆ ಮಾಡಿತು.
‘ಹಾಗಾದರೆ ಪುನಃ ಮರದ ಬಳಿಗೆ ಕರೆದೊಯ್ಯುವೆ. ಆಗ ನೀನು ಮರದ ಮೇಲಿರುವ ನಿನ್ನ ಹೃದಯವನ್ನೂ ತರಬಹುದಲ್ಲವೇ?’ ಎಂದಿತು ಮೊಸಳೆ, ಮೊಸಳೆಗೆ ಏನೂ ತಿಳಿಯದೆ ಹಿಂದಿರುಗಿ ಬಂದು ದಡಕ್ಕೆ ಮುಟ್ಟಿತು. ಕೋತಿ ಒಂದೇ ನೆಗೆತದಲ್ಲಿ ಮರವೇರಿತು.
ಮೊಸಳೆ ಕೋತಿಗಾಗಿ ಕಾದು ನಿರಾಶೆಯಿಂದ ‘ಬೇಗನೇ ಬಾ. ಯಾಕೆ ತಡಮಾಡುವಿ?’ ಎಂದು ಕೂಗಾಡಿತು. ಆಗಲೇ ಕೋತಿ ಹೇಳಿತು ‘ನಿನ್ನ ವಿಶ್ವಾಸ ಘಾತಕತೆ ಗೊತ್ತಾಯಿತು. ಯಾರಾದರೂ ಹೃದಯವನ್ನು ತೆಗೆದಿಡುವರೇನು? ಎಲೈ ಮೂರ್ಖನೇ ತೊಲಗಾಚೆ!’ ಎಂದು ಗದರಿಸಿಬಿಟ್ಟಿತು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.