ಕದ್ದ ಮಾಲನ್ನು ಹಿಂತಿರುಗಿಸಿದ ಕೂಡಲೇ ಕಳ್ಳ ನಿರಪರಾಧಿ ಆಗ್ತಾನಾ?: ಆರ್ ಅಶೋಕ್
ಬೆಂಗಳೂರು: ಮುಡಾ ಹಗರಣ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಲೋಕಾಯುಕ್ತ, ಇಡಿ ದೂರು ದಾಖಲಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರು 14 ಸೈಟ್ಗಳ ಕ್ರಯ ಪತ್ರ ಹಿಂದಿರುಗಿಸುವುದಾಗಿ ಮುಡಾಗೆ ಪತ್ರ ಬರೆದಿದ್ದಾರೆ. ಇನ್ನೂ ಸಿಎಂ ಪತ್ನಿ ಮುಡಾ ಸೈಟ್ ವಾಪಸ್ ಮಾಡಿರುವ ಬಗ್ಗೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದು, ” ಕದ್ದ ಮಾಲನ್ನು ಹಿಂತಿರುಗಿಸಿದ ಕೂಡಲೇ ಕಳ್ಳ ನಿರಪರಾಧಿ ಆಗ್ತಾನಾ? ” ಎಂದು ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆರ್ ಅಶೋಕ್, ” ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪತ್ನಿ ಹೆಸರಿನಲ್ಲಿ ಪಡೆದಿದ್ದ 14 ಸೈಟುಗಳನ್ನ ಹಿಂತಿರುಗಿಸುವ ನಿರ್ಧಾರ ಮಾಡಿದ್ದು, ನಾನು ತಪ್ಪೇ ಮಾಡಿಲ್ಲ ಎನ್ನುತ್ತಿದ್ದವರು ಈಗ ತಮ್ಮ ತಪ್ಪನ್ನ ಒಪ್ಪಿಕೊಂಡು ಸತ್ಯಕ್ಕೆ ಶರಣಾಗಿರುವುದು ನಮ್ಮ ಹೋರಾಟದ ಹಾದಿಯಲ್ಲಿ ಸಿಕ್ಕಿರುವ ಮತ್ತೊಂದು ಜಯ ” ಎಂದು ಹೇಳಿದ್ದಾರೆ.
ಆದರೆ, ಕದ್ದ ಮಾಲನ್ನು ಹಿಂತಿರುಗಿಸಿದ ಕೂಡಲೇ ಕಳ್ಳ ನಿರಪರಾಧಿ ಆಗಿಬಿಡುತ್ತಾನೆಯೇ? ಕದ್ದ ಮಾಲನ್ನು ವಾಪಸ್ಸು ಕೊಟ್ಟ ತಕ್ಷಣ ಕಳ್ಳತನ ಮಾಫಿ ಆಗಿಬಿಡುತ್ತದೆಯೇ? ‘ಕೆಟ್ಟ ಮೇಲೆ ಬುದ್ಧಿ ಬಂತು’ ಎಂಬಂತೆ ಈಗಲಾದರೂ ಸಿದ್ದರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ ಎನ್ನುವುದು ಸಮಾಧಾನಕರ ವಿಷಯ ಎಂದಿದ್ದಾರೆ.
ಆದರೆ ‘ಅಡಿಕೆಗೆ ಹೋದ ಮಾನ, ಆನೆ ಕೊಟ್ಟರೂ ಬರುವುದಿಲ್ಲ’ ಸಿಎಂ ಸಿದ್ದರಾಮಯ್ಯನವರೇ. ತಾವು ತನಿಖೆ ಎದುರಿಸಲೇ ಬೇಕು. ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲೇ ಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯುತ್ತದೆ ಎಂದು ಆರ್ ಅಶೋಕ್ ಹೇಳಿದ್ದಾರೆ.