ಬುದ್ಧನ ಕೃಷಿ ಅದ್ಭುತ ಕಥೆ ಓದಿ

ಬುದ್ಧನ ಕೃಷಿ
ಹಿಂದೆ ಭಾರದ್ವಾಜ ಎನ್ನುವ ಶ್ರೀಮಂತ ಬ್ರಾಹ್ಮಣ ಕೃಷಿಕನೊಬ್ಬನಿದ್ದ ಅವನು ಒಂದು ಸಾರಿ ಸುಗ್ಗಿ ಹಬ್ಬದ ಸಮಯದಲ್ಲಿ ಹರ್ಷಚಿತ್ತನಾಗಿ ಗದ್ದೆಯ ಬದುವಿನ ಮೇಲೆ ನಿಂತಿದ್ದ. ಅಲ್ಲಿಗೆ ಬುದ್ಧ ತನ್ನ ಭಿಕ್ಷಾಪಾತ್ರೆಯನ್ನು ಹಿಡಿದು ಮಧ್ಯಾಹ್ನದ ಭಿಕ್ಷೆಗೆ ಬಂದ. ಕೆಲವರು ಎದ್ದು ಬುದ್ಧನಿಗೆ ನಮಸ್ಕರಿಸಿ ಗೌರವ ಸೂಚಿಸಿದರು. ಬ್ರಾಹ್ಮಣ ಮಾತ್ರ ಸಿಟ್ಟಿನಿಂದ ಅಯ್ಯಾ ಭೀಕ್ಷುಕ, ನೀನು ಭಿಕ್ಷೆ ಬೇಡುವ ಬದಲು ಕೆಲಸ ಮಾಡುವುದು ವಾಸಿ, ನಾನು ಉತ್ತಿ ಬಿತ್ತಿ ಕೃಷಿ ಮಾಡುತ್ತೇನೆ. ನನ್ನ ಹಾಗೆ ನೀನು ಮಾಡಿದ್ದಿದ್ದರೆ ನೀನೂ ಊಟ ಮಾಡಬಹುದಾಗಿತ್ತು’ ಎಂದ.
ಆಗ ಬುದ್ಧ “ಅಯ್ಯಾ ಬ್ರಾಹ್ಮಣ, ನಾನೂ ಉಳುತ್ತೇನೆ, ಬಿತ್ತನೆ ಮಾಡುತ್ತೇನೆ, ಅದರಿಂದ ಬಂದ ಬೆಳೆಯನ್ನು ಉಣ್ಣುತ್ತೇನೆ” ಎಂದ.
“ಓಹೋ, ನಾನೂ ಕೃಷಿಕ ಹೇಗೆ ಎನ್ನುತೀಯಾ! ಎಲ್ಲಿ ನಿನ್ನ ಎತ್ತುಗಳು? ಎಲ್ಲಿ ಬಿತ್ತನೆ ಬೀಜ? ಎಲ್ಲಿ ನೇಗಿಲು??” ಎಂದು ಕೃಷಿಕ ಬ್ರಾಹ್ಮಣ ಬುದ್ಧನಿಗೆ ಕೇಳಿದಾಗ
ಬುದ್ಧ “ನಾನು ನಂಬಿಕೆಯ ಬೀಜಾವಾಪನ ಮಾಡುತ್ತೇನೆ, ಒಳ್ಳೆಯ ಕೃತ್ಯಗಳೇ ಮಳೆಯಾಗಿ ಅದನ್ನು ಬೆಳೆಸುತ್ತೇನೆ. ವಿವೇಕ ನನ್ನ ನೇಗಿಲು, ನನ್ನ ಬುದ್ಧಿಯೇ ಮಿಣಿ, ನಿಯಮಗಳೇ ನೇಗಿಲ ಹಿಡಿ, ಶ್ರಮವೇ ನನ್ನ ಎತ್ತುಗಳು, ನನ್ನ ಉಳುಮೆ ಭ್ರಮೆಯ ಕಳೆಯನ್ನು ತೆಗೆದುಹಾಕುತ್ತದೆ. ನಿರ್ಮಾಣವೇ ಸುಗ್ಗಿಯ ಕೊಯಿಲು, ಅದು ನೀಡುವ ಅಮೃತತ್ತ್ವ ಅಮೃತೋಮಫಲ, ಅದರಿಂದ ಎಲ್ಲ ದುಃಖ ಅಂತ್ಯಗೊಳ್ಳುತ್ತದೆ” ಎಂದು ಹೇಳಿದ.
ಆಗ ಆ ಕೃಷಿಕ ಬ್ರಾಹ್ಮಣ ಬಂಗಾರದ ಪಾತ್ರೆಯೊಂದರಲ್ಲಿ ಹಾಲಲ್ಲಿ ಬೇಯಿಸಿದ ಅಕ್ಕಿಯ ಪಾಯಸವನ್ನು ತಂದು ತಥಾಗತನಿಗೆ ನೀಡುತ್ತ “ಗೌತಮಾ, ನಿನ್ನ ಉಳುಮೆ ಶಾಶ್ವತ, ಅಮೃತತ್ತ್ವವನ್ನು ನೀಡುತ್ತದೆ. ಈ ಪಾಯಸ ಸ್ವೀಕರಿಸಿ ನನ್ನನ್ನೂ ನಿನ್ನ ಅನುಯಾಯಿಯಾಗಿ ಸ್ವೀಕರಿಸು” ಎಂದು ವಿನಮೃತೆಯಿಂದ ಕೇಳಿಕೊಂಡ.
ನೀತಿ :– ನಮ್ಮಲ್ಲಿರುವ ಅಜ್ಞಾನ, ಕಾಮ ಕ್ರೋಧಾದಿಗಳೆಂಬ ಕಸ ಕಡ್ಡಿಗಳನ್ನು ತೆಗೆದು ಜ್ಞಾನ ಬೆಳೆ ಬೆಳಸುವುದು ನಿಜವಾದ ಕೃಷಿಯಾಗಿದೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.