ಪ್ರಯತ್ನ ಇದ್ದಲ್ಲಿ ದೈವಬಲದ ಸಹಕಾರ ಈ ಅದ್ಭುತ ಕಥೆ ಓದಿ
ದಿನಕ್ಕೊಂದು ಕಥೆ
ದೈವ ಬಲ
ಮಹಾ ಕವಿಯೂ ಶ್ರೀಕೃಷ್ಣನ ಭಕ್ತನೂ ಆದ ಸೂರದಾಸನು ಬಾಲ್ಯದಿಂದಲೂ ಆಂಜನೇಯನ ಪರಮ ಭಕ್ತನಾಗಿದ್ದ. ಅವನು ಹತ್ತು ವಯಸ್ಸಿನ ಬಾಲಕನಾಗಿದ್ದಾಗ ಒಂದು ದಿನ ಕೈಗಾಡಿಯನ್ನು ತಳ್ಳಿಕೊಂಡು ಹೋಗುತ್ತಿದ್ದ. ದಾರಿಯಲ್ಲಿ ಚಕ್ರಗಳು ಹೂತುಕೊಂಡವು, ಸೂರದಾಸನು ಗಾಡಿಯ ಮುಂದೆ ಕುಳಿತು ಅಪ್ಪಾ ಹನುಮಂತ ನೀನೆ ಈ ಚಕ್ರಗಳನ್ನು ಮೇಲೆತ್ತಬೇಕು ಎಂದು ಹೇಳುತ್ತಾ ಅಳುತ್ತಾ ಕುಳಿತ.
ಹಾಗೆ ದಾರಿಯಲ್ಲಿ ಹೋಗುತ್ತಿದ್ದ ರೈತನೊಬ್ಬನು ಸೂರದಾಸನನ್ನು ನೋಡಿ ಮಗೂ ಗಾಳಿಯಲ್ಲಿ ದೀಪವನ್ನು ಇಟ್ಟು ಭಗವಂತನೇ ಗತಿ ಎಂದರೆ ಹೇಗೆ? ಮನುಷ್ಯ ಪ್ರಯತ್ನ ಮಾಡಿದರೆ ದೈವಬಲವೂ ಕೂಡಿಬರುತ್ತದೆ.
ಹನುಮಂತನು ತಾನೇ ಬಂದು ನಿನ್ನ ಗಾಡಿಯ ಚಕ್ರಗಳನ್ನು ಎತ್ತುವನೇ? ನಿನ್ನ ಬಲದಿಂದ ಚಕ್ರಗಳನ್ನು ಎತ್ತಲು ನಿಂತರೆ, ಆಗ ಹನುಮಂತನ ಬಲವು ನಿನ್ನಲ್ಲಿ ಸೇರಿ ಕೆಲಸ ಮಾಡಿಸುತ್ತಾನೆ. “ದೈವಂ ಮನುಷ್ಯರೂಪೇಣ” ಎನ್ನುವಂತೆ ದೇವರು ಮಾನವ ರೂಪದಲ್ಲೇ ನೆರವು ನೀಡುತ್ತಾನೆ ಎಂದ.
ಉತ್ಸಾಹಗೊಂಡ ಸೂರದಾಸನು ಎದ್ದು ಜೈ ಹನುಮಾನ್ ಎನ್ನುತ್ತಾ ಚಕ್ರಗಳಿಗೆ ಕೈ ಹಾಕಿ ಎತ್ತಲು ತೊಡಗಿದ. ಗಾಡಿ ಕೆಸರಿನಿಂದ ಮೇಲೆದ್ದಿತು, ಸೂರದಾಸನು ರೈತನಿಗೆ ವಂದನೆ ಹೇಳೋಣವೆಂದು ತಿರುಗಿ ನೋಡಿದರೆ ಅಲ್ಲಿ ರೈತನಿರಲಿಲ್ಲ. ಹನುಮಂತನೇ ರೈತನ ರೂಪದಲ್ಲಿ ಬಂದು ನನಗೆ ಸಲಹೆ ನೀಡಿದನೆಂದು ತಿಳಿದುಕೊಂಡ.
ನೀತಿ :– ದೈವದಲ್ಲಿ ನಂಬಿಕೆ ಇದ್ದು, ಸ್ವಪ್ರಯತ್ನ ಮಾಡಿದರೆ ದೈವಬಲವು ಕೂಡಿಬರುತ್ತದೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.