ನಿಜವಾದ ಗುರು ?
ನೊಬೆಲ್ ವಿಜ್ಞಾನಿ ಸರ್, ಸಿ.ವಿ.ರಾಮನ ಅವರು ತಮ್ಮ ಶಿಷ್ಯರನ್ನು ಹುರಿದುಂಬಿಸುತ್ತಿದ್ದ ರೀತಿ ಅನನ್ಯ. ಅವರ ಶಿಷ್ಯ ಪಿಷಾರೊದಿ ಇಂಥ ಒಂದು ಸಂದರ್ಭವನ್ನು ಸ್ಮರಿಸಿಕೊಂಡಿದ್ದಾರೆ.
ಒಮ್ಮೆ ಪಿಷಾರೋದಿ ಎಕ್ಸ್-ರೇ ಸಲಕರಣೆಯನ್ನು ಬಳಸಿಕೊಂಡು ಪ್ರಯೋಗವನ್ನು ನಡೆಸುತ್ತಿದ್ದರು. ಆದರೆ ಆ ಪ್ರಯೋಗ ನಿರೀಕ್ಷಿತ ಫಲವನ್ನು ಕೊಡುತ್ತಿರಲಿಲ್ಲ. ಇದರಿಂದ ಸಹಜವಾಗಿಯೇ ಅವರು ಬೇಸರಗೊಂಡು ಜೋಲುಮುಖ ಹಾಕಿಕೊಂಡು ಕುಳಿತಿದ್ದರಂತೆ. ಎಂದಿನಂತೆ ಬೆಳಿಗ್ಗೆಯೆ ರಾಮನ ಪ್ರಯೋಗಾಲಯಕ್ಕೆ ಬಂದರು, ಶಿಷ್ಯನ ಕಳೆಗುಂದಿದ ಮುಖವನ್ನು ಕಂಡರು. “ಏನು ಸಮಾಚಾರ?’ ಎಂದು ವಿಚಾರಿಸಿದರು.
ಆಗ ಪಿಷಾರೊದಿ ಸಾರ್! ನಾನು ಮಾಡುತ್ತಿರುವ ಸಂಶೋಧನೆಯನ್ನೆ ಕೇಂಬ್ರಿಡ್ಜ್‌ನ ವಿಜ್ಞಾನಿಯೊಬ್ಬರು ಮಾಡುತ್ತಿದ್ದಾರೆ. ಅವರಲ್ಲಿ ಐದು ಕಿಲೋವ್ಯಾಟ್ ಶಕ್ತಿಯ ಎಕ್ಸ್-ರೇ ಟ್ಯೂಬ್ ಇದೆ. ನನ್ನ ಬಳಿಯಿರುವುದು ಒಂದು ಕಿಲೋವ್ಯಾಟಿನ ಟ್ಯೂಬ್ ಮಾತ್ರ. ಅವರು ತಮ್ಮ ಕೆಲಸದಲ್ಲಿ ಮುಂದುವರೆಯುತ್ತಿದ್ದಾರೆ, ನಾನು ಮಾತ್ರ ಹಿಂದುಳಿಯುತ್ತಿದ್ದೇನೆ’ ಎಂದರು.
ಆಗ ರಾಮನ್ ಹೇಳಿದರಂತೆ; ‘ಅಯ್ಯೋ ! ಇಷ್ಟೆನೇ. ಇದಕ್ಕೆ ಪರಿಹಾರವನ್ನು ನಾನು ಹೇಳುತ್ತೇನೆ. ನೋಡು ನಿನ್ನಲ್ಲಿ ಹತ್ತು ಕಿಲೋವ್ಯಾಟ್ ಶಕ್ತಿಯ ಬುದ್ಧಿ ಇದೆ. ಅದನ್ನು ಉಪಯೋಗಿಸಿಕೊಂಡು ಮುಂದುವರೆ.
ಪಿಷಾರೋದಿ ಆ ಸಂದರ್ಭವನ್ನು ನೆನೆಯುತ್ತ ತಮ್ಮ ಗುರುಗಳ ಗುಣಗಾನವನ್ನು ಮಾಡುತ್ತ ಕಾಳಿದಾಸನ ಶ್ಲೋಕವನ್ನು ಉಲ್ಲೇಖಿಸಿದ್ದಾರೆ. ‘ಶಿಕ್ಷಣ-ರಕ್ಷಣ-ಭರಣಗಳನ್ನು ನೋಡಿಕೊಳ್ಳುವ ನಿಜವಾದ ತಂದೆಯೆಂದರೆ ಗುರುವೇ ಹೌದು; ತಂದೆಯಾದವನು ಕೇವಲ ಜನ್ಮವನಷ್ಟೇ ಕೊಟ್ಟವನಾಗಿರುತ್ತಾನೆ’ ಎಂದಿದ್ದಾನೆ ಕಾಳಿದಾಸ.
ಶಿಷ್ಯನ ನಿಜವಾದ ಸಾಮರ್ಥ್ಯವನ್ನು ಬೆಳಕಿಗೆ ತಂದು, ಅವನ ಜೀವನಕ್ಕೆ ದಾರಿ ತೋರುವವನೇ ಆದರ್ಶ ಗುರು, ಅಲ್ಲವೇ?
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.