ದಿನಕ್ಕೊಂದು ಕಥೆ
ಬೆಸ್ತನ ಲೋಕೋಪಯೋಗಿ ಕಾರ್ಯ
ಇವನೊಬ್ಬ ಬಡ ಬೆಸ್ತ, ಒಂದು ದಿನ ಅವನು ಕೆಲಸವನ್ನರಸುತ್ತಾ ಸಮುದ್ರದಾಚೆಗಿನ ದೇಶಗಳಿಗೆ ಹಡಗಿನಲ್ಲಿ ಪ್ರಯಾಣ ಕೈಗೊಂಡ, ಒಮ್ಮೆ ಭಯಾನಕ ಬಿರುಗಾಳಿಯಿಂದಾಗಿ ಹಡಗು ಅಲೆಗಳ ಮಧ್ಯ ಸಿಲುಕಿಕೊಂಡಿತು. ಬೆಸ್ತ ಒಂದು ಹಲಗೆ ಹಿಡಿದು ನೀರಿಗೆ ಧುಮುಕಿದ ಕಡೆಗೆ ಈಜುತ್ತಾ ಹೋಗಿ ಒಂದು ದ್ವೀಪಕ್ಕೆ ಹೋದ. ಅಲ್ಲಿ ಹಣ್ಣು, ಹಂಪಲು ತಿಂದು ನಿದ್ರಿಸಿದ.
ಅವನಿಗೆ ಎಚ್ಚರವಾದಾಗ ಅವನ ನೇರಕ್ಕೆ ಆಕಾಶದಲ್ಲಿ ರೆಕ್ಕೆಗಳಿಲ್ಲದೆ ಹಂದಿಯೊಂದು ಹಾರಾಡುತ್ತಿತ್ತು. ಅದು ಅದೇ ದ್ವೀಪದಲ್ಲಿಳಿದು ನಾಲ್ಕೂ ಕಾಲುಗಳನ್ನು ಮುದುಡಿಕೊಂಡು ದಟ್ಟ ನಿದ್ರೆಗೆ ಜಾರಿತು. ಬೆಸ್ತ ಅದರ ಸಮೀಪಕ್ಕೆ ಬಂದಾಗ ಅಲ್ಲಿ ಒಂದು ಚಿಕ್ಕ ವಜ್ರದ ತುಂಡು ಬಿದ್ದಿತ್ತು. ಬೆಸ್ತ ಅದನ್ನು ತೆಗೆದುಕೊಂಡ.
ಒಂದು ವೇಳೆ ಹಂದಿಗೆ ಎಚ್ಚರವಾದರೆ ಅದು ಕೂಡಲೇ ವಜ್ರವನ್ನು ಹುಡುಕುವುದು. ಆಗ ನಾನು ಎದುರಿಗಿರುವ ತೆಂಗಿನ ಎತ್ತರದ ಗರಿಯಲ್ಲಿ ಹೋಗಿ ಕೂತರೆ ಹಂದಿ ನನ್ನನೇನೂ ಮಾಡಲಾಗದು ಎಂದು ಯೋಚಿಸಿದ. ಕೂಡಲೇ ಬೆಸ್ತ ತೆಂಗಿನ ಮರ ಏರಿ ಕುಳಿತ. ಆಗ ಅವನಿಗೆ ಈ ವಜ್ರ ಸಾಮಾನ್ಯ ವಜ್ರವಲ್ಲ, ಇದರಲ್ಲಿ ಮಾಯಾವಿ ಶಕ್ತಿಯಿದೆ ಎಂದು ಅನ್ನಿಸಿತು. ಅವನು ಕೈಗೆ ಸಿಕ್ಕಿದ ಒಂದು ಭಾರವಾದ ತೆಂಗಿನ ಕಾಯಿಯನ್ನು ಕಿತ್ತು ಹಂದಿಯ ತಲೆಯ ಮೇಲೆ ಹಾಕಿದ, ಹಂದಿ ತಕ್ಷಣ ಎದ್ದು ಕೂತಿತು.
ಅದು ಕೂಡಲೇ ವಜ್ರವನ್ನು ಹುಡುಕಿತು, ವಜ್ರ ಕಾಣದೆ ಹುಚ್ಚು ಹಿಡಿದಂತೆ ವರ್ತಿಸಿತು. ಬೆಸ್ತ ಮತ್ತೊಂದು ತೆಂಗಿನಕಾಯಿಯನ್ನು ಕಿತ್ತು ಅದರ ತಲೆಯ ಮೇಲೆ ಹಾಕಿದ. ಆಗ ಹಂದಿ ತಲೆ ಮೇಲೆ ಬೆಸ್ಕನನ್ನು ಗಮನಿಸಿತು. ಅವನ ಕೈಯಲ್ಲಿದ್ದ ವಜ್ರ ಕಡು ಕೆಂಡಾಮಂಡಲವಾಯಿತು .
ನಿಜವಾಗಿ ಹೇಳಬೇಕೆಂದರೆ ಹಂದಿಯ ರೂಪದಲ್ಲಿದ್ದ ಒಬ್ಬ ರಾಕ್ಷಸನಾಗಿದ್ದ. ಅವನ ಶಕ್ತಿಯೆಲ್ಲಾ ಆ ವಜ್ರದಲ್ಲಿತ್ತು. ಅವನು ಆ ಮರವನ್ನು ತನ್ನ ಹಲ್ಲಿನಿಂದ ಉರುಳಿಸಲು ಪ್ರಯತ್ನಿಸಿದ. ಆದರೆ ಅವನ ಹಲ್ಲುಗಳು ಅಲ್ಲಿಯೇ ಸಿಕ್ಕಿಕೊಂಡವು. ಆಗಲೇ ಬೆಸ್ತ ಕೆಳಗಿಳಿದು ಬಂದು ರಾಕ್ಷಸನನ್ನು ಕಲ್ಲುಗಳಿಂದ ಥಳಿಸಿದ.
ಈಗ ಬೆಸ್ತ ವಜ್ರ ಹಿಡಿದು ಮನುಷ್ಯರು ವಾಸಿಸುವ ದ್ವೀಪವೊಂದಕ್ಕೆ ಹೋಗುವ ಇಚ್ಛೆ ವ್ಯಕ್ತ ಪಡಿಸಿದ ಕೂಡಲೇ ಅವನೊಂದು ದ್ವೀಪದಲ್ಲಿದ್ದ, ಅಲ್ಲಿ ಒಬ್ಬ ಉದ್ದ ಗಡ್ಡಧಾರಿ ವ್ಯಕ್ತಿಯೊಬ್ಬ ಬೆಂಕಿಯಲ್ಲಿ ಏನೋ ಸುಡುತ್ತಿದ್ದ, ಬೆಸ್ತ ಅವನ ಮನೆಯಲ್ಲಿ ಕೆಲವು ದಿನಗಳು ಉಳಿಯಲು ಅವಕಾಶ ಕೊಡುವಂತೆ ಕೇಳಿಕೊಂಡ.
ಗಡ್ಡಧಾರಿಗೆ ಬೆಸ್ತನ ಬಳಿ ಮಾಯದ ವಜ್ರ ಇರುವ ವಿಷಯ ತಿಳಿಯಿತು. ಅವನು ಬೆಸ್ತನಿಗೆ ತನ್ನ ಬಳಿ ಇರುವ ಮಾಯದ ಕೊಡಲಿಗೆ ಬದಲಾಗಿ ವಜ್ರವನ್ನು ಕೊಡುವಂತೆ ಕೇಳಿಕೊಂಡ, ಗಡ್ಡಧಾರಿ ಕೊಡಲಿಯ ಬಗ್ಗೆ ಹೇಳುತ್ತ. “ಒಂದು ವೇಳೆ ನೀನು ಈ ಕೊಡಲಿಯನ್ನು ಸವರಿ, ಎದುರಿಗಿರುವ ವ್ಯಕ್ತಿಯ ತಲೆಯನ್ನು ಕತ್ತರಿಸಿ ಹಾಕು ಎಂದರೆ ಅದು ಕೂಡಲೇ ಹೋಗಿ ಎದುರಿಗಿರುವವನ ತಲೆಯನ್ನು ಕಡಿಯುತ್ತದೆ” ಎಂದು ಅದರ ಶಕ್ತಿಯನ್ನು ವರ್ಣಿಸಿದ .
ಬೆಸ್ತ ತನ್ನ ವಜ್ರವನ್ನು ಅವನಿಗೆ ಕೊಟ್ಟು ಅವನಿಂದ ಆ ಕೊಡಲಿಯನ್ನು ಪಡೆದುಕೊಂಡ, ವಜ್ರ ಪಡೆದ ಗಡ್ಡಧಾರಿ ಏನೋ ಹೇಳಬೇಕೆಂದಿದ್ದ. ಆಗಲೇ ಬೆಸ್ತ ಕೊಡಲಿಯನ್ನು ಸವರಿ, “ಎದುರಿಗಿರುವ ವ್ಯಕ್ತಿಯ ತಲೆಯನ್ನು ಕತ್ತರಿಸಿ ಹಾಕು” ಎಂದ. ತಕ್ಷಣ ಕೊಡಲಿ ಗಡ್ಡಧಾರಿಯ ತಲೆಯನ್ನು ಕತ್ತರಿಸಿತು.
ಬೆಸ್ತ ವಜ್ರ ಮತ್ತು ಕೊಡಲಿಯೊಂದಿಗೆ ಮುಂದಕ್ಕೆ ಸಾಗಿದೆ, ಸಾಕಷ್ಟು ದೂರಕ್ಕೆ ಹೋದ ಮೇಲೆ ಒಂದು ಗುಡಿಸಿಲಿನ ಬಳಿ ಒಬ್ಬ ವೃದ್ಧ ಕೂತಿರುವುದನ್ನು ಬೆಸ್ತ ನೋಡಿದ. ಅವನಿಗೆ ಎರಡೂ ಕೈಗಳು ಇರಲಿಲ್ಲ. ಆದರೆ ಅವನ ಎದುರು ಒಂದು ಪಾತ್ರೆಯಿತ್ತು. ಬೆಸ್ತ ವಜ್ರದ ಸಹಾಯದಿಂದ ಅವನ ಬಳಿಗೆ ಹಾರಿ ಬಂದು ವಜ್ರದ ಶಕ್ತಿಯನ್ನು ವರ್ಣಿಸಿದ ವೃದ್ಧನೂ ಸಹ ತನ್ನ ಪಾತ್ರೆಯ ಬಗ್ಗೆ ಹೇಳಿದ.
“ಈ ಪಾತ್ರೆಯನ್ನು ನೇರವಾಗಿಟ್ಟರೆ ಬೇಕಾದ ಆಹಾರವನ್ನು ಪಾತ್ರೆ ಕೊಡುತ್ತದೆ. ಇದನ್ನು ಮಗುಚಿಟ್ಟರೆ ನದಿಗಳು ಹರಿಯುತ್ತವೆ” ಎಂದ. ವೃದ್ಧ ಮತ್ತು ಬೆಸ್ತ ಪಾತ್ರೆ ಮತ್ತು ವಜ್ರವನ್ನು ಅದಲು ಬದಲು ಮಾಡಿಕೊಳ್ಳಲು ಒಪ್ಪಿದರು.
ವಜ್ರ ಪಡೆದ ವೃದ್ಧ ಏನೋ ಹೇಳಬೇಕೆಂದಿದ್ದ, ಆಗಲೇ ಬೆಸ್ತ ತನ್ನ ಕೊಡಲಿಯಿಂದ ಅವನ ತಲೆಯನ್ನು ಕತ್ತರಿಸಿ ಹಾಕಿಸಿದ, ಬೆಸ್ತ ಅಲ್ಲಿಂದ ಕಾಡುಗಳಿಂದ ಆವೃತಗೊಂಡ ದ್ವೀಪವೊಂದಕ್ಕೆ ಹೋದ, ಅಲ್ಲಿಗೆ ಹೋದೊಡನೆ ಡೋಲಿನ ಭಯಾನಕ ಶಬ್ದ ಕೇಳಿಸಿತು. ಆ ಶಬ್ದಕ್ಕೆ ಸಿಂಹ, ಹುಲಿ, ಚಿರತೆ, ಆನೆ, ನರಿ ಮುಂತಾದ ಜೀವ-ಜಂತುಗಳು ಹೆದರಿ ದಿಕ್ಕಾಪಾಲಾಗಿ ಓಡಿಹೋಗುತ್ತಿದ್ದವು. ಬೆಸ್ತ ತಕ್ಷಣ ವಜ್ರದ ಸಹಾಯದಿಂದ ಡೋಲಿನವನ ಬಳಿಗೆ ಬಂದ. ಅವನೊಬ್ಬ ಭಯಾನಕ ವ್ಯಕ್ತಿಯಾಗಿದ್ದ. ಅವನಿಗೆ ಎರಡೂ ಕೈ ಕಾಲುಗಳಿರಲಿಲ್ಲ.
ಅವನು ಬೆಸ್ತನಿಗೆ ತಿನ್ನಲು ಹಣ್ಣು-ಹಂಪಲು- ಆಹಾರವನ್ನು ಕೊಟ್ಟ. ಆದರೆ ಬೆಸ್ತ ಅದನ್ನು ಮುಟ್ಟದೆ ತನ್ನ ಪಾತ್ರೆಯಿಂದ ನಾನಾ ರೀತಿಯ ಸ್ವಾದಿಷ್ಟ ಭೋಜನವನ್ನು ತರಿಸಿದ, ಡೋಲಿನವ ಡೋಲಿಗೆ ಬದಲಾಗಿ ಮಾಯದ ಪಾತ್ರೆಯನ್ನು ಕೊಡುವಂತೆ ಕೇಳಿದ, ಬೆಸ್ತ ಇದಕ್ಕೊಪ್ಪಿದಾಗ ಡೋಲಿನವ “ಇದರ ಎಡ ಭಾಗಕ್ಕೆ ಬಾರಿಸಿದರೆ ಭಯಾನಕ ಶಬ್ದವಾಗುವುದು.
ಬಲ ಭಾಗಕ್ಕೆ ಬಾರಿಸಿದರೆ ಇದರಿಂದ ಆಶ್ವಾರೋಹಿಗಳು ಮತ್ತು ಪಾದಾಳು ಸೈನಿಕರ ದಂಡು ಹೊರ ಬರುವುದು. ಆಗ ಯಾರನೇ ಆದರೂ ಜಯಿಸಬಹುದು” ಎಂದ
ಪಾತ್ರೆ ಪಡೆದ ಡೋಲಿನವ ಏನೋ ಹೇಳಬೇಕೆಂದಿದ್ದ. ಆಗಲೇ ಬೆಸ್ತ ತನ್ನ ಕೊಡಲಿಯಿಂದ ಅವನ ತಲೆಯನ್ನು ಕತ್ತರಿಸಿ ಹಾಕಿಸಿದ. ಅಲ್ಲಿಂದ ಬೆಸ್ತ ಒಂದು ನಗರಕ್ಕೆ ಹೋದ, ಅಲ್ಲಿಯ ಜನರು ಮತ್ತು ಪಶು-ಪಕ್ಷಿಗಳು ತುಂಬಾ ಬೇಸರಗೊಂಡಿದ್ದರು.
ಆ ನಗರವನ್ನು ಒಬ್ಬ ದುಷ್ಟ ಆಳುತ್ತಿದ್ದ, ಬೆಸ್ತನನ್ನು ಹಿಡಿಯಲು ಅವನು ಒಂದು ಸೈನ್ಯವನ್ನು ಕಳುಹಿಸಿದ. ಬೆಸ್ತ ತಕ್ಷಣ ಡೋಲಿನ ಎಡ ಭಾಗವನ್ನು ಬಾರಿಸಿದ. ಡೋಲಿನ ಶಬ್ದ ಕೇಳಲಾರದ ಸೈನಿಕರು ಓಟಕಿತ್ತರು. ಆದರೆ ದುಷ್ಟ ತನ್ನ ಸೈನ್ಯಕ್ಕೆ ಬೆಸ್ತನನ್ನು ಬಂಧಿಸುವಂತೆ ಆದೇಶಿಸಿದ.
ಬೆಸ್ತ ಮಾಯದ ಪಾತ್ರೆಯನ್ನು ಮಗುಚಿಟ್ಟು ನದಿಗಳನ್ನು ಹರಿಸಿದ. ಸೈನಿಕರು ನೀರಿನಲ್ಲಿ ಮುಳುಗಿ ಸತ್ತರು. ನಂತರ ಬೆಸ್ತ ಬಲ ಭಾಗದ ಡೋಲು ಬಾರಿಸಿ ಸೈನ್ಯ ಕರೆಸಿದ. ಸೈನ್ಯದೊಂದಿಗೆ ಬೆಸ್ತ ಮುನ್ನುಗ್ಗಿ ಸಾಗಿದ. ಕಡೆಗೆ ತನ್ನ ಕೊಡಲಿಯಿಂದ ದುಷ್ಟನ ತಲೆಯನ್ನು ಕತ್ತರಿಸಿ ಹಾಕಿಸಿದ.
ಅಲ್ಲಿಯ ಜನ ಬೆಸ್ತನನ್ನು ತುಂಬಾ ಗೌರವಿಸಿದರು. ಬೆಸ್ತನಿಗೆ ನೀನೇ ಈ ರಾಜ್ಯಕ್ಕೆ ರಾಜನಾಗು ಎಂದು ವಿನಂತಿಸಿಕೊಂಡರು. ಆಗ ಬೆಸ್ತ “ಇಲ್ಲ , ನಾನು ರಾಜನಾಗುವುದಿಲ್ಲ. ನನಗೆ ಅನಾಯಾಸವಾಗಿಯೇ ಕೆಲವು ಶಕ್ತಿಗಳು ದೊರೆತಿವೆ. ಈ ಶಕ್ತಿಗಳಿಂದ ನಾನು ಇನ್ನೂ ಉತ್ತಮ ಕೆಲಸಗಳನ್ನು ಮತ್ತು ಉಪಕಾರವನ್ನು ಮಾಡಬೇಕಾಗಿದೆ” ಎಂದು ಹೇಳಿ ಅಲ್ಲಿಂದ ಮುಂದಕ್ಕೆ ಹೊರಟು ಹೋದ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.