ಕಥೆ

ಭಿಕ್ಷುಕನಿಗೆ ಚಿನ್ನದ ರಾಶಿ ನೀಡಿದ ಭಗವಂತ ಆದರೆ…

ದುರಾಸೆಯ ದುಷ್ಪರಿಣಾಮ

ದುರಾಸೆಯ ದುಷ್ಪರಿಣಾಮ

ಓರ್ವ ಭಿಕ್ಷುಕನಿದ್ದನು. ದೇವರ ಮೇಲೆ ಶ್ರದ್ಧೆ ಇದ್ದ ಕಾರಣ ಅವನು ದಿನಪೂರ್ತಿ ನಾಮಜಪ ಮಾಡುತ್ತಿದ್ದನು. ಭಗವಂತನು ಅವನ ನಾಮಜಪದಿಂದ ಪ್ರಸನ್ನನಾಗಿ ಒಂದು ದಿನ ಅವನೆದುರು ಪ್ರಕಟವಾದನು.

ಭಗವಂತನು “ನಾನು ನಿನ್ನ ನಾಮಜಪದಿಂದ ಬಹಳ ಪ್ರಸನ್ನನಾಗಿದ್ದೇನೆ, ನಿನಗೆ ಬೇಕಾದದ್ದನ್ನು ಕೇಳು” ಎಂದು ಹೇಳಿದನು. ಆಗ ಭಿಕ್ಷುಕನು ದುರಾಸೆಯಿಂದ ಚಿನ್ನದ ನಾಣ್ಯಗಳನ್ನು ಕೇಳಿದನು. ಭಗವಂತನು “ಚಿನ್ನದ ನಾಣ್ಯಗಳನ್ನು ಯಾವ ಪಾತ್ರೆಯಲ್ಲಿ ತೆಗೆದುಕೊಳ್ಳುವೆ ?” ಎಂದು ಕೇಳಿದಾಗ ಭಿಕ್ಷುಕನು ತನ್ನ ಅಂಗಿಯನ್ನು ಮುಂದೆಮಾಡಿದನು.

ಭಗವಂತನು ಚಿನ್ನದ ನಾಣ್ಯಗಳನ್ನು ಕೊಡುವ ಮೊದಲು “ಎಲ್ಲಿಯ ವರೆಗೆ ನೀನು ಚಿನ್ನದ ನಾಣ್ಯಗಳನ್ನು ಕೇಳುವುದು ಬಿಡುವುದಿಲ್ಲ ಅಲ್ಲಿಯ ವರೆಗೆ ನಾನು ನಿನ್ನ ಅಂಗಿಯಲ್ಲಿ ಚಿನ್ನದ ನಾಣ್ಯಗಳನ್ನು ಹಾಕುತ್ತಲೇ ಇರುವೆನು ಆದರೆ ಭೂಮಿಯ ಮೇಲೆ ಚಿನ್ನದ ನಾಣ್ಯಗಳು ಬೀಳಬಾರದು. ನೆಲದ ಮೇಲೆ ಬಿದ್ದರೆ ಈ ನಾಣ್ಯಗಳು ಮಣ್ಣಾಗುವವು” ಎಂದು ಹೇಳಿದನು. ಭಿಕ್ಷುಕನು ಒಪ್ಪಿಕೊಂಡ.

ಭಗವಂತನು ಭಿಕ್ಷುಕನ ಅಂಗಿಯಲ್ಲಿ ಚಿನ್ನದ ನಾಣ್ಯಗಳನ್ನು ಹಾಕತೊಡಗಿದ. ಅಂಗಿಯು ತುಂಬುತ್ತ ಹೋಯಿತು ಹಾಗೂ ಭಿಕ್ಷುಕನ ದುರಾಸೆಯು ಹೆಚ್ಚುತ್ತ ಹೋಯಿತು. ಅವನು ‘ಸಾಕು’ ಎಂದು ಹೇಳಲಿಲ್ಲ, ದೇವರು ಕೊಡುವುದನ್ನು ನಿಲ್ಲಿಸಲಿಲ್ಲ. ಕೊನೆಯಲ್ಲಿ ಚಿನ್ನದ ನಾಣ್ಯಗಳ ಭಾರವನ್ನು ಆ ಅಂಗಿಯು ತಡೆದುಕೊಳ್ಳಲಿಲ್ಲ, ಅಂಗಿಯು ಹರಿದು ಹೋಯಿತು. ಇದರಿಂದ ಎಲ್ಲ ನಾಣ್ಯಗಳು ನೆಲದ ಮೇಲೆ ಬಿದ್ದು ಮಣ್ಣಾದವು.

ಮನಸ್ಸಿನಲ್ಲಿ ದುರಾಸೆ ಇರುವುದರಿಂದ ಇಷ್ಟೊಂದು ನಾಣ್ಯಗಳು ದೊರೆತರೂ ಭಿಕ್ಷುಕನು ಬಡವನಾಗಿಯೇ ಉಳಿದನು.

ನೀತಿ :– ಈ ಕಥೆಯಿಂದ ಭಿಕ್ಷುಕನು ಎಲ್ಲಿ ತಪ್ಪಿದನು ಎಂಬುದು ತಮ್ಮ ಗಮನಕ್ಕೆ ಬಂದಿರಬಹುದು. ಅವನು ದುರಾಸೆ ಬಿಟ್ಟು, ಅವನ ಜೀವನಕ್ಕೆ ಬೇಕಾಗುವಷ್ಟು ನಾಣ್ಯಗಳಲ್ಲಿ ಸಂತುಷ್ಟನಾಗಿದ್ದರೆ ಅವನಿಗೆ ಅಷ್ಟೂ ಚಿನ್ನದ ನಾಣ್ಯಗಳು ದೊರೆಯುತ್ತಿದ್ದವು. ಭಗವಂತನು ನೀಡಿದ್ದರಲ್ಲಿ ಸಂತೋಷದಿಂದ ಇರಬೇಕು. ದುರಾಸೆಯು ಬಹಳ ಕೆಟ್ಟದ್ದಾಗಿದೆ. ದುರಾಸೆಯಿಂದ ನಮಗೆ ಏನೂ ದೊರೆಯುವುದಿಲ್ಲ. ತಮಗೆ ಯಾವಾಗಲೂ ಆನಂದದಿಂದ ಇರಬೇಕಿದ್ದರೆ ಸಿಕ್ಕಿರುವುದರಲ್ಲಿ ಸಂತೋಷದಿಂದ ಇರಲು ಕಲಿಯಿರಿ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button