ದಿನಕ್ಕೊಂದು ಕಥೆ
ದಿವಾನನಾಗಿ ಆಯ್ಕೆಯಾದ ನೇಕಾರ
ಒಂದು ಊರಿನಲ್ಲಿ ಒಬ್ಬ ರಾಜನಿದ್ದ. ಸತ್ಯ, ನ್ಯಾಯ, ನಿಷ್ಠೆಯಿಂದ ರಾಜ್ಯವನ್ನಾಳುತ್ತಿದ್ದ. ಒಮ್ಮೆ ತನ್ನ ಆಸ್ಥಾನಕ್ಕೆ ದಿವಾನನನ್ನು ಆರಿಸುವ ಸಂದರ್ಭ ಬಂದಾಗ ತನಗೆ ಪರಿಚಯವಿದ್ದ ಬಡ ನೇಯ್ಗೆಯವನನ್ನು ಆಯ್ಕೆ ಮಾಡಿದ. ಅಂತಹ ಪ್ರತಿಷ್ಠಿತ ಸ್ಥಾನಕ್ಕಾಗಿ ಹಂಬಲಿಸುತ್ತಿದ್ದ ಆಸ್ಥಾನದ ಅಧಿಕಾರಿಗಳಿಗೆ ಅಸಮಾಧಾನವಾಯಿತು. ತಮಗೆ ಮಾಡಿದ ಅವಮಾನ ಎಂದು ಕೋಪಗೊಂಡರು. ತಾವು ಇಷ್ಟು ವರ್ಷಗಳ ಕಾಲ ಪ್ರಾಮಾಣಿಕತೆಯಿಂದ, ಶ್ರದ್ಧೆಯಿಂದ ದುಡಿದರೂ ರಾಜ ತಮ್ಮನ್ನು ಕಡೆಗಣಿಸಿದ್ದಾನೆಂದು ವಿಷಾದ ವ್ಯಕ್ತಪಡಿಸಿದರು. ಧೈರ್ಯದಿಂದ ರಾಜನ ಆಜ್ಞೆಯನ್ನು ಬಹಿರಂಗವಾಗಿ ಪ್ರಶ್ನಿಸಿಯೇ ಬಿಟ್ಟರು.
ಮಹಾಪ್ರಭು, “ತಾವು ತಿಳಿದವರು. ಆದರೂ ಇಂತಹ ನಿರ್ಧಾರವನ್ನು ಯಾಕೆ ತೆಗೆದುಕೊಂಡಿರಿ? ನಾವು ವಿದ್ಯಾವಂತರು, ನಮ್ಮಲ್ಲಿಯೇ ಒಬ್ಬನನ್ನು ಆರಿಸುವ ಬದಲು ಅವನಿಗೆ ಅಂತಹ ಉನ್ನತ ಸ್ಥಾನ ಕೊಡುವ ಅವಶ್ಯಕತೆ ಏನಿತ್ತು?” ಎಂದು ವಾದಿಸಿದರು. ಅವನ ಅರ್ಹತೆಯನ್ನು ಆಸ್ಥಾನದಲ್ಲಿ ಪರೀಕ್ಷಿಸಬೇಕೆಂದು ಮನವಿ ಮಾಡಿದಾಗ ರಾಜನು ಒಪ್ಪಿದ. ತನ್ನ ಆಯ್ಕೆಯ ಬಗ್ಗೆ ರಾಜನಿಗೆ ಅಪಾರವಾದ ನಂಬಿಕೆ,
ದಿವಾನನನ್ನು ಕೂಡಲೇ ಕರೆಸಲಾಯಿತು, ರಾಜನು “ಮಿತ್ರ, ನಿನ್ನಲ್ಲಿ ನನ್ನದೊಂದು ಕೋರಿಕೆ ಇದೆ. ಅದನ್ನು ನೀನು ನಡೆಸಿ ಕೊಡಬೇಕು, ನನಗೋಸ್ಕರ ನವಿರಾದ ಜೇಡರ ಬಲೆಯ ನೂಲಿನಿಂದ ಒಂದು ವಸ್ತ್ರ ನೇಯ್ದುಕೊಡು, ಇದು ನಿನ್ನಿಂದ ಸಾಧ್ಯವಾಗದೇ ಇದ್ದರೆ ಗಡಿಪಾರು ಮಾಡಲಾಗುವುದು” ಎಂದ. ಇಂತಹ ಅಸಾಧ್ಯ ಬೇಡಿಕೆಯ ಹಿಂದೆ ಯಾರ ಕೈವಾಡ ಇದೆ ಎಂದು ತಿಳಿಯಲು ದಿವಾನನಿಗೆ ಹೆಚ್ಚು ಸಮಯ ಹಿಡಿಯಲಿಲ್ಲ.
ಮಹಾರಾಜ, “ಜೇಡರ ಬಲೆಯ ನೂಲಿನೆಳೆಯಿಂದ ವಸ್ತ್ರ ತಯಾರಿಸುವುದು ನನಗೆ ಸುಲಭದ ಕೆಲಸ. ಆದರೆ ಅದಕ್ಕೆ ಒಂದು ಮುಖ್ಯವಾದ ಪದಾರ್ಥದ ಅವಶ್ಯಕತೆ ಇದೆ. ಅದನ್ನು ಒದಗಿಸಿ ಕೊಡಬೇಕು” ಎಂದು ಕೇಳಿದ. ರಾಜನು ಒಪ್ಪಿದ ಮೇಲೆ ದಿವಾನನು “ಅರಮನೆಯ ಸರೋವರಕ್ಕೆ ಬೆಂಕಿ ಹಚ್ಚಿಸಿ, ನೀರಿನಿಂದ ಬೂದಿಯನ್ನು ತಂದುಕೊಡುವಂತೆ ತಮ್ಮ ಆಸ್ಥಾನದ ಅಧಿಕಾರಿಗಳಿಗೆ ಹೇಳಿ” ಎಂದ, ಇದನ್ನು ಕೇಳಿದ ಅಧಿಕಾರಿಗಳಲ್ಲಿ ಒಬ್ಬ “ನೀರಿಗೆ ಬೆಂಕಿ ಹೆಚ್ಚುವುದು ಹೇಗೆ ಸಾಧ್ಯ” ಎಂದು ಆರ್ಭಟಿಸಿದ.
ಅದಕ್ಕೆ ಪ್ರತಿಯಾಗಿ ದಿವಾನನು “ಜೇಡರ ಬಲೆಯ ನೂಲಿನಿಂದ ವಸ್ತ್ರ ನೇಯಬಹುದಾದರೆ, ನೀರಿಗೆ ಬೆಂಕಿ ಹಚ್ಚುವುದು ಖಂಡಿತ ಸಾಧ್ಯವಾದ ಕೆಲಸ” ಎಂದಾಗ ರಾಜನಿಗೆ ಅತೀವ ಸಂತೋಷ ವಾಯಿತು. ಅಧಿಕಾರಿಗಳು ಅವಮಾನದಿಂದ ತೆಲೆ ತಗ್ಗಿಸಿದರು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.