ಅಕ್ಷಯ ತೃತೀಯ ಹಾಗೂ ಬಸವ ಜಯಂತಿ ಕುರಿತು ಡಾ.ಈಶ್ವರಾನಂದ ಸ್ವಾಮೀಜಿ ಅಭಿಮತ
ದಿನಕ್ಕೊಂದು ಕಥೆ ಮಾಲೆ ಓದಿ
ಅಕ್ಷಯ ತೃತೀಯ ಹಾಗೂ ಬಸವ ಜಯಂತಿ
ನಾಡಿನ ಸಮಸ್ತ ಜನತೆಗೆ ಅಕ್ಷಯ ತೃತೀಯ ಹಾಗೂ ಬಸವ ಜಯಂತಿಯ ಹೃದಯ ಪೂರ್ವಕ ಪ್ರೀತಿಯ ಶುಭಾಶಯಗಳು.
ಅಕ್ಷಯವಾಗಲಿ ನಮ್ಮೆಲ್ಲರ ಬಾಂಧವ್ಯ
ಅಕ್ಷಯವಾಗಲಿ ಪ್ರೀತಿ ವಿಶ್ವಾಸ
ಅಕ್ಷಯವಾಗಲಿ ಸ್ನೇಹ ಗೆಳೆತನ
ಅಕ್ಷಯವಾಗಲಿ ಮಮತೆ
ಅಕ್ಷಯವಾಗಲಿ ಒಲವು
ಅಕ್ಷಯವಾಗಲಿ ಗೆಲುವು
ಅಕ್ಷಯವಾಗಲಿ ಉತ್ತಮ ಆರೋಗ್ಯ
ಅಕ್ಷಯವಾಗಲಿ ನಂಬಿಕೆ ವಿಶ್ವಾಸ
ಅಕ್ಷಯವಾಗಲಿ ಅಭಿವೃದ್ಧಿ
ಅಕ್ಷಯವಾಗಲಿ ಕಾರ್ಯಸಿದ್ಧಿ
ಅಕ್ಷಯ ತೃತೀಯದ ಈ ಶುಭದಿನದಂದು
ಕಷ್ಟ, ಚಿಂತೆ ನೋವು ಕ್ಷಯವಾಗಲಿ,
ಸದಾ ಆನಂದ ನಿಮ್ಮದಾಗಲಿ
ಅಕ್ಷಯ ತೃತೀಯವನ್ನು ಅಕ್ತಿ ಅಥವಾ ಅಖಾ ತೀಜ್ ಎಂದೂ ಕರೆಯುತ್ತಾರೆ, ಅಕ್ಷಯ ತೃತೀಯ ಭಾರತದಲ್ಲಿ ಮಹತ್ವದ ಹಬ್ಬವೆಂದು ಹೇಳುತ್ತಾರೆ. ಹಿಂದೂ ಪಂಚಾಂಗದಲ್ಲಿ ವೈಶಾಖ ತಿಂಗಳ ಮೂರನೇಯ ದಿನದಂದು ಆಚರಿಸಲಾಗುತ್ತದೆ. ಭಾರತದಾದ್ಯಂತ ಅಕ್ಷಯ ತೃತೀಯವನ್ನು ಹಿಂದೂಗಳು ಆಚರಿಸುವ ಅತ್ಯಂತ ಮಂಗಳಕರ ಹಬ್ಬಗಳಲ್ಲಿ ಒಂದು. ಇದು ಅದೃಷ್ಟ ಮತ್ತು ಸಮೃದ್ಧಿಯ ಹಬ್ಬ ಎಂದು ನಂಬಲಾಗುತ್ತದೆ. ಇದು ಸಾಮಾನ್ಯವಾಗಿ ಏಪ್ರಿಲ್ ಅಥವಾ ಮೇ ಅಂದರೆ ಭಾರತೀಯ ತಿಂಗಳ ವೈಶಾಖದಲ್ಲಿ ಶುಕ್ಲ ಪಕ್ಷದ ಮೂರನೇ ದಿನದಂದು ಬರುತ್ತದೆ.
ಸಂಸ್ಕೃತದಲ್ಲಿ, “ಅಕ್ಷಯ” ಎಂಬ ಪದವು ಸಂಸ್ಕೃತದಲ್ಲಿ ಎಂದಿಗೂ ಕಡಿಮೆಯಾಗುವುದಿಲ್ಲ, ಅಭ್ಯುದಯ, ಯಶಸ್ಸು, ಅನಂತ ಮುಂತಾಗಿ ಸೂಚಿಸುತ್ತದೆ. ಈ ದಿನಕ್ಕೆ ಸಂಬಂಧಿಸಿದಂತೆ ಮಿತಿಯಿಲ್ಲದ ಅದೃಷ್ಟ ಮತ್ತು ಸಮೃದ್ಧಿಯನ್ನು ಸೂಚಿಸಲಾಗುತ್ತದೆ. ಈ ದಿನದಂದು ಪ್ರಾರಂಭಿಸಿದ ಯಾವುದೇ ಹೊಸ ಯೋಜನೆ ಅಥವಾ ಉದ್ಯಮವು ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ ಎಂಬ ನಂಬಕೆ ನಮ್ಮವರಲ್ಲಿದೆ. ಹೊಸ ಉದ್ಯಮಗಳು, ಮದುವೆಗಳು, ಹೂಡಿಕೆಗಳು, ಚಿನ್ನ ಅಥವಾ ಇತರ ಅಮೂಲ್ಯ ವಸ್ತುಗಳನ್ನು ಖರೀದಿಸಲು ಇದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಹೊಸ ನಿವಾಸಕ್ಕೆ ಸ್ಥಳಾಂತರಿಸುವುದು ಮುಂತಾದ ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಇದು ಸೂಕ್ತ ಸಮಯ ಎಂದು ನಂಬಲಾಗಿದೆ.
ಹಿಂದೂ ಧರ್ಮಗ್ರಂಥಗಳ ಪ್ರಕಾರ ಅಕ್ಷಯ ತೃತೀಯ ಹಬ್ಬದ ದಿನದಂದು ವಿಷ್ಣು, ಗಣೇಶ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಅಕ್ಷಯ ತೃತೀಯವನ್ನು ಪರಶುರಾಮ ಜಯಂತಿ ಎಂದೂ ಕರೆಯುತ್ತಾರೆ, ಇದು ಹಿಂದೂ ಧರ್ಮ ಧರ್ಮದ ಅನುಯಾಯಿಗಳು ಆಚರಿಸುವ ಅತ್ಯಂತ ಮಂಗಳಕರ ಸಂದರ್ಭ. ವೈಶಾಖ ಮಾಸದಲ್ಲಿ ಶುಕ್ಲ ಪಕ್ಷದಲ್ಲಿ ಚಂದ್ರನ ಬೆಳವಣಿಗೆಯ ಹಂತವು ಗಮನಾರ್ಹ ಪ್ರಾಮುಖ್ಯತೆಯನ್ನು ಹೊಂದಿದೆ. ಭಕ್ತರು ಈ ಹಬ್ಬವನ್ನು ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಧಾರ್ಮಿಕ ವಿಧಿಗಳನ್ನು ನಿರ್ವಹಿಸುತ್ತಾರೆ. ಅಗತ್ಯವಿರುವವರಿಗೆ ದಾನ ನೀಡುವಂತಹ ದತ್ತಿ ಚಟುವಟಿಕೆಗಳನ್ನು ಮಾಡುತ್ತಾರೆ. ಹೆಚ್ಚುವರಿಯಾಗಿ, ಈ ದಿನವನ್ನು ಚಿನ್ನದ ಆಭರಣಗಳನ್ನು ಖರೀದಿಸಲು ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡಲು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಅಕ್ಷಯ ತೃತೀಯವನ್ನು ಮಂಗಳಕರ ದಿನವೆಂದು ಪರಿಗಣಿಸಲಾಗಿದ್ದರೂ, ಅದಕ್ಕೆ ಸಂಬಂಧಿಸಿದ ನಿರ್ದಿಷ್ಟ ಮೂಢನಂಬಿಕೆಗಳಿಲ್ಲ. ಆದಾಗ್ಯೂ, ಕೆಲವು ಜನರು ಈ ದಿನದಂದು ಚಿನ್ನವನ್ನು ಖರೀದಿಸುವುದು ಅಥವಾ ಹೊಸ ಉದ್ಯಮಗಳನ್ನು ಪ್ರಾರಂಭ ಮಾಡಿದ ಕೆಲವು ಕ್ರಿಯೆಗಳ ಶುಭವನ್ನು ಬಲವಾಗಿ ನಂಬುತ್ತಾರೆ. ಅಕ್ಷಯ ತೃತೀಯವನ್ನು ಕುಟುಂಬದ ಸದಸ್ಯರೊಂದಿಗೆ ತಮ್ಮ ಮನೆಯ ಸೌಕರ್ಯದಿಂದ ಪೂಜೆ ಸಮಾರಂಭಗಳನ್ನು ಮಾಡುತ್ತಾರೆ, ಪ್ರಾರ್ಥನೆಗಳನ್ನು ಸಲ್ಲಿಸಿ, ದತ್ತಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ.
ಭಾರತದ ವಿವಿಧ ಭಾಗಗಳಲ್ಲಿ ಅಕ್ಷಯ ತೃತೀಯವನ್ನು ವಿಭಿನ್ನವಾಗಿ ಆಚರಿಸಲಾಗುತ್ತಾರೆ ಅಕ್ಷಯ ತೃತೀಯಕ್ಕೆ ಸಂಬಂಧಿಸಿದ ಸಂಪ್ರದಾಯ ಮತ್ತು ಪದ್ಧತಿಗಳು ಭಾರತದಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿ ಕಾಣಬಹುದು. ಅದರೆ ಹಬ್ಬದ ಸಾರವು ಒಂದೇ ಆಗಿದೆ. ನಿರ್ದಿಷ್ಟ ಆಚರಣೆಗಳು ಮತ್ತು ಸ್ಥಳೀಯ ಪದ್ಧತಿಗಳು ಮತ್ತು ಸಾಂಸ್ಕೃತಿಕ ಪ್ರಭಾವಗಳ ಆಧಾರದ ಮೇಲೆ ಭಿನ್ನವಾಗಿರುವುದನ್ನು ಕಾಣುತ್ತೇವೆ.
ಕಾಯಕವೇ ಕೈಲಾಸ ಎಂದ ಮಹಾನ್ ಪುರುಷ ಬಸವಣ್ಣ ಹುಟ್ಟಿದ ದಿನವನ್ನ ಬಸವ ಜಯಂತಿ ಎಂದು ನಾಡಿನಾದ್ಯಂತ ಆಚರಣೆ ಮಾಡಲಾಗುತ್ತದೆ. 12 ನೇ ಶತಮಾನದ ಸಮಾಜ ಸುಧಾರಕರಾದ ಇವರ ಜಯಂತಿಯನ್ನು ಹೆಚ್ಚಾಗಿ ಲಿಂಗಾಯುತರು ಆಚರಿಸುತ್ತಾರೆ. ಭಕ್ತಿ ಭಂಡಾರಿ ಬಸವಣ್ಣನನ್ನು ಕವಿ, ದಾರ್ಶನಿಕ ಹಾಗೂ ಲಿಂಗಾಯುತವಾದದ ಸ್ಥಾಪಕ ಸಂತರೆಂದು ನಂಬಲಾಗಿದೆ. ಅನುಭವ ಮಂಟಪವನ್ನು ಕಟ್ಟಿದರು.
ಬಸವಣ್ಣನವರು 1134 ರಲ್ಲಿ ಈಗಿನ ಬಿಜಾಪುರ ಜಿಲ್ಲೆಯಲ್ಲಿರುವ ಬಸವನ ಬಾಗೇವಾಡಿ ಗ್ರಾಮದಲ್ಲಿ (ಬಸವಣ್ಣನವರ ತಾಯಿಯ ತವರು ಮನೆಯಾದ ಇಂಗಳೇಶ್ವರ ಗ್ರಾಮದಲ್ಲಿ ಜನಿಸಿದರು ಎಂಬ ಪ್ರತೀತಿ ಇದೆ.), ಶ್ರೀ ಮಾದರಸ ಮತ್ತು ಮಾದಲಾಂಬಿಕೆ ದಂಪತಿಗಳಿಗೆ ಜನಿಸಿದರು. ಬಸವಣ್ಣ ಚಿಕ್ಕಂದಿನಿಂದಲೂ ವೈದಿಕ ಸಂಸ್ಕೃತಿಯ ಕರ್ಮಾಚರಣೆಗಳ ವಿರೋಧಿಯಾಗಿದ್ದರು. ಅಕ್ಕ ನಾಗಮ್ಮ ಮತ್ತು ಭಾವ ಶಿವಸ್ವಾಮಿಯ ಜೊತೆಯಲ್ಲಿ ಬಾಲ್ಯವನ್ನು ಕಳೆದರು.
ಅವರ 8ನೇ ವಯಸ್ಸಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಬಸವಣ್ಣನವರಿಗೆ ಜನಿವಾರ ಹಾಕಲು ಬಂದಾಗ, ಬಸವಣ್ಣನವರು ತನಗಿಂತ ಹಿರಿಯಳಾದ ಅಕ್ಕ ನಾಗಮ್ಮನಿಗೆ ಕೊಡಲು ಕೇಳುತ್ತಾನೆ, ಆಗ ಇದು ಪುರುಷರಿಗೆ ಮಾತ್ರ ಕೊಡುವಂತಹುದು ಆದ್ದರಿಂದ ಅಕ್ಕನಿಗೆ ಕೊಡಲು ಬರುವುದಿಲ್ಲ ಅಂತ ನುಡಿದಾಗ, ಬಸವಣ್ಣ ಪುರುಷ/ಮಹಿಳೆ ಅಸಮಾನತೆಯನ್ನು ವಿರೋಧಿಸಿ ಮನೆಯಿಂದ ನಿರ್ಗಮಿಸಿ ಕೂಡಲಸಂಗಮಕ್ಕೆ ಹೊರಡುತ್ತಾರೆ.
ಬಸವೇಶ್ವರರು ಹನ್ನೆರಡು ವರ್ಷಗಳ ಕಾಲ ಕೂಡಲ ಸಂಗಮದಲ್ಲಿ ಅಧ್ಯಯನ ಮಾಡುತ್ತಾ ಕಳೆದರು.ಅವರ ದೃಷ್ಟಿಯಲ್ಲಿ ದೇವನು ಒಬ್ಬ ಮತ್ತು ಅವನು ಮಾನವಲ್ಲಿದ್ದಾನೆಯೇ ಹೊರತು ಗುಡಿ-ಗುಂಡಾರಗಳಲ್ಲಿ ಅಲ್ಲ. ಕೆಲಸ ಮಾಡಿ ಜೀವನ ನಡೆಸಬೇಕು, ಆಲಸಿ ಜೀವನ ಸಲ್ಲ. ಸುಳ್ಳು ಹೇಳುವುದು, ವಂಚಿಸುವುದು, ಕೊಲೆ-ಸುಲಿಗೆ ಮಾಡುವುದು, ಪ್ರಾಣಿಬಲಿ ನೀಡುವುದು, ಪರಧನ ಹರಣ, ಪರಸ್ತ್ರೀ ವ್ಯಾವೋಹ ಹೊಂದುವುದು ಘೋರ ಅಪರಾಧ. ಕೆಲಸದಲ್ಲಿ ಮೇಲು ಅಥವಾ ಕೀಳು ಎಂಬುದಿಲ್ಲ. ಪುರುಷನಂತೆ ಮಹಿಳೆಗೂ ವಿದ್ಯಾಭ್ಯಾಸದ ಮತ್ತು ತನ್ನ ಜೀವನವನ್ನು ರೂಪಿಸಿಕೊಳ್ಳುವ ಹಕ್ಕಿದೆ.
ಹೀಗೆ ಸಮಾನತೆ, ಕಾಯಕ, ದಾಸೋಹ ತತ್ವಗಳನ್ನು ಸ್ವೀಕರಿಸುವ ಮತ್ತು ಆಚರಿಸುವ ಯಾರು ಬೇಕಾದರೂ ಶಿವಶರಣರಾಗ ಬಹುದು ಎಂದು ಬಸವಣ್ಣವರು ಸಾರಿದರು. ಪೊಳ್ಳು ದೇವರುಗಳನ್ನು ಸ್ತುತಿಸುತ್ತಿದ್ದ ಮತ್ತು ಪುರೋಹಿತಶಾಹಿಯಿಂದ ನಿರಂತರವಾಗಿ ವಂಚನೆಗೊಳಗಾಗುತ್ತಿದ್ದ ಜನತೆಗೆ ಬಸವಣ್ಣನವರು ಹೊಸ ಜೀವನ ನೀಡಿದರು. ಜಾತಿ, ಮತ, ಲಿಂಗಗಳ ಭೇದವನ್ನು ತಿರಸ್ಕರಿಸಿದ ಬಸವಣ್ಣನವರು ಸಾಮಾಜಿಕ ಕಾರಣವಾದರು.
ಬಸವಣ್ಣ ಒಬ್ಬ ಮಹಾನ್ ಸಾಮಾಜಿಕ ಸುಧಾರಕ ಮತ್ತು ದಾರ್ಶನಿಕ. ವಚನ ಸಾಹಿತ್ಯದ ಮೂಲಕ ಅವರು ಸಾಮಾಜಿಕ ಜಾಗೃತಿ ಪ್ರಾರಂಭಿಸಿದರು. ಲಿಂಗ, ಜಾತಿ ಪದ್ಧತಿಯನ್ನು ತಿರಸ್ಕರಿಸಿದರು. ಇದರ ಜೊತೆಗೆ ಇಷ್ಟಲಿಂಗದ ಬಗ್ಗೆ ಪರಿಚಯಿಸಿದರು. ಬಿಜ್ಜಳ ಸಾಮ್ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಸವಣ್ಣ ಅನುಭವ ಮಂಟಪವನ್ನು ಪ್ರಾರಂಭಿಸಿದರು.
ಇದು ಮುಂದೆ ಎಲ್ಲಾ ವರ್ಗದ ಜನರಿಗೆ ಜೀವನದ ಆಧ್ಯಾತ್ಮಿಕ ಸಮಸ್ಯೆಗಳನ್ನು ಬಹಿರಂಗವಾಗಿ ಚರ್ಚಿಸುವ ಸಾಮಾನ್ಯ ಕೇಂದ್ರವಾಯಿತು. ಬಸವಣ್ಣನ ವಚನ ಸಾಹಿತ್ಯದ ಮೂಲಕ ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ನೀಡಿದರು.
ಅಂತರಂಗ ಶುದ್ಧಿ ಬಹಿರಂಗ ಶುದ್ದಿ ಬಗ್ಗೆ ಸಮಾಜಕ್ಕೆ ಅರಿವು ಮೂಡಿಸಿದ ಬಸವಣ್ಣ 12ನೇ ಶತಮಾನದಲ್ಲಿ ಜನಿಸಿದರು. ಹಿಂದೂ ಕ್ಯಾಲೆಂಡರ್ ಪ್ರಕಾರ, ಸಾಮಾನ್ಯವಾಗಿ ಬಸವಣ್ಣನ ಜನ್ಮದಿನವು ವೈಶಾಖ ತಿಂಗಳ 3 ನೇ ದಿನದಂದು ಆಚರಿಸಲಾಗುತ್ತದೆ.
🖊️ಡಾ .ಈಶ್ವರಾನಂದ ಸ್ವಾಮೀಜಿ.🖋️
📞 – 9341137882.