ಪೆದ್ದ ಶಿಷ್ಯನ ನಂಬಿಕೆ & ಸತ್ತ ಕತ್ತೆ ಸಮಾಧಿ ಇದನ್ನೋದಿ
ದಿನಕ್ಕೊಂದು ಕಥೆ
ಶಕ್ತಿ ಇರುವುದು, ಪವಾಡದಲ್ಲಾಗಲಿ, ಸಮಾಧಿಯಲ್ಲಾಗಲಿ, ಶಕ್ತಿ ಇರುವುದು ನಮ್ಮ ನಂಬಿಕೆಯಲ್ಲಿ..
ಅದೊಂದು ಊರು. ಅಲ್ಲಿ ಒಂದು ಗುರುಕುಲ. ಗುರುಗಳು ಶಿಷ್ಯರನ್ನು ಮಮತೆಯಿಂದ ನೋಡಿಕೊಂಡು ಜ್ಞಾನವನ್ನು ತಿಳಿಸಿ ಕೊಡುತ್ತಿದ್ದರು.
ಅಲ್ಲಿ ಸಾಕಷ್ಟು ಶಿಷ್ಯರು ಇದ್ದರು. ಅವರಲ್ಲಿ ಕೆಲವರು ಬುದ್ಧಿವಂತರು, ಸುಮಾರಾಗಿ ಬುದ್ಧಿ ಇರುವವರು, ದಡ್ಡರು ಹೀಗೆ ಎಲ್ಲಾ ತರಹದ ಶಿಷ್ಯರು. ಗುರುಗಳು ಮಾತ್ರ ಎಲ್ಲಾ ಶಿಷ್ಯರನ್ನು ಒಂದೇ ಸಮನಾಗಿ ನೋಡುತ್ತಿದ್ದರು.
ಶಿಷ್ಯರಲ್ಲಿ ಅತೀ ಪೆದ್ದ ಶಿಷ್ಯನೊಬ್ಬ. ತುಂಬಾ ಒಳ್ಳೆಯವನು ಹೀಗಾಗಿ ಅವನನ್ನು ಅಲ್ಲೇ ಇಟ್ಟು ಕೊಂಡಿದ್ದರು. ಮುಂದೆ ಅವನ ಗತಿಯೇನು ಎಂಬ ಚಿಂತೆಯೂ ಗುರುಗಳನ್ನು ಕಾಡುತ್ತಿತ್ತು.
ಒಂದು ಸಲ ಎಲ್ಲಾ ಕಡೆ ವಿಪರೀತ ಕ್ಷಾಮ ತಲೆದೋರಿತು. ಆಶ್ರಮಕ್ಕೆ ದಾನ ಕೊಡುವವರು ಯಾರು ಇಲ್ಲವಾಯಿತು. ಗುರುಗಳು ಸಾಕಷ್ಟು ದಿನ ತಳ್ಳಿದರು. ಕೊನೆಗೆ ಅದು ಅಸಾಧ್ಯವಾದಾಗ, ಶಿಷ್ಯರನ್ನೆಲ್ಲ ಕರೆದು, “ನೋಡಿ ಇನ್ನು ಆಶ್ರಮ ನಡೆಸುವುದು ಸಾಧ್ಯವಿಲ್ಲ. ಆದುದರಿಂದ ನೀವೆಲ್ಲರೂ ಎಲ್ಲಿಗೆ ಬೇಕೋ ಅಲ್ಲಿಗೆ ಹೋಗಿರಿ.
ನಾನು ಸಹ ಬೇರೆ ಕಡೆ ಹೋಗುತ್ತೇನೆ. ಆಶ್ರಮದಲ್ಲಿರುವ ವಸ್ತುಗಳನ್ನು ನಿಮಗೆ ಯಾವುದು ಬೇಕೋ, ಅದನ್ನು ತೆಗೆದುಕೊಂಡು ಹೋಗಿರಿ. ಮುಂದೆ ಸಾಧ್ಯವಾದರೆ ಎಲ್ಲರೂ ಸೇರೋಣ” ಎಂದು ತುಂಬಾ ಸಂಕಟದಿಂದ ನುಡಿದರು. ಶಿಷ್ಯರಿಗೂ ತುಂಬಾ ಬೇಸರವಾಯಿತು.
ಅಗಲಿಕೆಯ ನೋವಿನಿಂದ ಗುರುಗಳಿಗೆ ನಮಸ್ಕರಿಸಿ, ಆಶ್ರಮದಲ್ಲಿರುವ ವಸ್ತುಗಳಲ್ಲಿ ತಮಗೆ ಯಾವುದು ಇಷ್ಟವೋ ಅದನ್ನು ತೆಗೆದುಕೊಂಡು ಗುರುಗಳ ಆಶೀರ್ವಾದ ಪಡೆದು ಹೊರಟರು. ಆಶ್ರಮದಲ್ಲಿದ್ದ ಎಲ್ಲಾ ವಸ್ತುಗಳು ಖಾಲಿಯಾದವು. ಆದರೆ ಪೆದ್ದ ಶಿಷ್ಯ ಏನನ್ನು ತೆಗೆದುಕೊಳ್ಳದೆ ಅಲ್ಲೇ ಕುಳಿತಿದ್ದ. ತಗೊಳಬೇಕು ಅನ್ನುವುದು ಅವನಿಗೆ ಗೊತ್ತಿಲ್ಲ.
ಗುರುಗಳು ಅವನನ್ನು ನೋಡಿ ಕನಿಕರದಿಂದ, “ಅಯ್ಯೋ ಹುಡುಗ ನೀನು ಮಾತ್ರ ಏನು ತೆಗೆದುಕೊಳ್ಳಲಿಲ್ಲ, ಎಲ್ಲಾ ವಸ್ತುಗಳು ಖಾಲಿಯಾದವು. ನಿನಗೆ ಕೊಡಲು ಏನೂ ಇಲ್ವಲ್ಲೋ” ಅಂತ ಬೇಜಾರು ಮಾಡಿಕೊಂಡರು.
ಆಮೇಲೆ, ಹೋಗ್ಲಿ ಬಿಡು ನನ್ನ ಹತ್ತಿರ ಒಂದು ಕತ್ತೆ ಇದೆ. ನಾವು ಸಾಮಾನು- ಸರಂಜಾಮು ಸಾಗಿಸಲು ಇಟ್ಟುಕೊಂಡಿದ್ದೆವು. ಇದನ್ನೇ ನನ್ನ ಆಶೀರ್ವಾದ ಅಂತ ತಿಳ್ಕೊಂಡು ಏನಾದರೂ ಜೀವನ ಮಾಡ್ಕೋ ಅಂತ ಕತ್ತೆ ಕೊಟ್ಟು ಅವನನ್ನ ಕಳಿಸಿದರು. ಆಶ್ರಮ ಬಿಟ್ಟು ಗುರುಗಳು ಹೊರಟರು.
ಪೆದ್ದು ಹುಡುಗನು ಬೇರೆ ದಾರಿ ಇಲ್ಲದೆ, ಗುರುಗಳು ಕೊಟ್ಟ ಪ್ರಸಾದವೆಂದು, ಕತ್ತೆಯನ್ನೆ ಹೊಡೆದುಕೊಂಡು ಹೊರಟನು. ಪಾಪ ಅವ್ನೀಗೆ ತಿನ್ನಕ್ಕಿಲ್ಲ. ಇನ್ನು ಕತ್ತೆಗೆಲ್ಲಿಂದ ಹಾಕ್ತಾನೆ. ಕತ್ತೆ ಜೊತೆ ಶಿಷ್ಯ ನಡ್ಕೊಂಡು ಹೋಗ್ತಾ ಇದ್ದ .
ಯಾವುದೋ ಊರಿನ ಹೊರಭಾಗ ಬಂದಾಗ ಇದ್ದಕ್ಕಿದ್ದ ಹಾಗೆ ಕತ್ತೆ ಬಿದ್ದು ಸತ್ತೋಯ್ತು. ಪಾಪ ಶಿಷ್ಯಗೆ ತುಂಬಾ ಅಳು ಬಂತು. ಹಾಗೇಂತ ಎಷ್ಹೊತ್ತು ಇರೋದಕ್ಕೆ ಆಗುತ್ತೆ.
ಗುರುಗಳ ಕೃಪೆ ಇದೂಂದು ಇತ್ತು , ಈಗ ಅದು ಇಲ್ಲವಾಯಿತು ಅಂತ ತುಂಬಾ ಬೇಜಾರು ಮಾಡಿಕೊಂಡು, ತಾನೇ ನೆಲ ಅಗ್ದು ಗುಂಡಿ ಮಾಡಿ ಕತ್ತೆಯನ್ನ ಅದರೊಳಗಿಟ್ಟು ಸಮಾಧಿ ಮಾಡಿದ. ಅದರ ಮೇಲೆ ಒಂದ್ಕಟ್ಟೆ ಕಟ್ಟಿ, ನಿತ್ಯವೂ ಹೂವು ತಂದಿಟ್ಟು ,ಊದಿನಕಡ್ಡಿ ಹಚ್ಚಿ ಆರತಿ ಮಾಡ್ತಿದ್ದ. ಎರಡು ಹೊತ್ತು ಪೂಜೆ ಮಾಡ್ತಾ ಬಂದ. ಗುರುಗಳ ಮೇಲಿನ ಭಕ್ತಿಯಿಂದ ಪೂಜೆಯನ್ನು ತಪ್ಪಿಸಲಿಲ್ಲ.
ಊರಿನ ಜನ ನೋಡಿದ್ರು. ಇವನು ಸಣ್ಣ ಸನ್ಯಾಸಿ, ಪೂಜೆ ಮಾಡ್ತಾನೆ. ಯಾರೋ ಮಹಾನುಭಾವರ ಸಮಾಧಿ ಇರ್ಬೇಕು ಅಂತ ತಿಳಿದುಕೊಂಡು, ಸುಂದರವಾದ ಕಟ್ಟಡ ಕಟ್ಟಿಸಿದರು. ಸಮಾಧಿ ಹತ್ತಿರ ಬರೋರು ಕಾಣಿಕೆ ಹಾಕಿ ಕೈಮುಗಿದರು. ಬೇಡಿಕೊಂಡ ಕೆಲವರಿಗೆ ಸ್ವಪ್ನ ಬಿತ್ತು, ಸ್ಪೂರ್ತಿ ಬಂತು, ಹರಕೆಗಳು ಫಲಿಸಿದವು.
ಮಕ್ಕಳು ಆಗ್ದೇ ಇರೋರಿಗೆ ಮಕ್ಕಳಾದವು. ಅವರ ನಂಬಿಕೆನೋ, ಅಥವಾ ಕಾಲ ಕೂಡಿಬಂದಿತ್ತೋ ಗೊತ್ತಿಲ್ಲ , ಒಟ್ಟಾರೆ ಅದೊಂದು ಶ್ರದ್ಧಾ ಕೇಂದ್ರವಾಗಿ ಬೆಳೆಯಿತು. ಮತ್ತೊಂದಷ್ಟು ಜನ ಸೇರಿ ಒಂದು ಮಠ ಕಟ್ಟಿಸಿದರು. ಮತ್ಯಾರೋ, ಪ್ರಸಾದದ ವ್ಯವಸ್ಥೆ ಮಾಡಿದರು. ದೂರದೂರಿಂದ ಜನಗಳು ಬರಲು ಶುರು ಮಾಡಿದರು.
ಗುರುಗಳು ಇದ್ದಾರೆ ಅಂತ ಆಶ್ರಮವೂ ಕಟ್ಟಿಸಿದರು. ದಿನೇದಿನೇ ಹೋದಂತೆ ಆ ಮಠವು ಪ್ರಸಿದ್ಧಿ ಪಡೆಯಿತು. ಜನಗಳು ಬೇಡಿಕೊಂಡದ್ದು ಸಫಲವಾಯಿತು. ಇದನ್ನು ತಿಳಿದು ಹರಕೆ, ಕಟ್ಟಿಕೊಂಡರು. ಕಾಣಿಕೆಗಳು ಯಥೇಚ್ಛವಾಗಿ ಬರಲು ಶುರುವಾಯಿತು.
ಉತ್ಸವ, ಜಾತ್ರೆ ಎಲ್ಲಾ ನಡೆಯುತ್ತಾ ಬಂದಿತು. ಸುತ್ತಮುತ್ತಲಿನ ಊರುಗಳಿಗೆಲ್ಲ ಪುಣ್ಯಕ್ಷೇತ್ರವಾಗಿ ಪ್ರಸಿದ್ಧಿಯಾಯಿತು. ಭಜನೆ ,ವಿಶೇಷ ಪೂಜೆ, ಹೀಗೆ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿತು.
ಆ ಶಿಷ್ಯನೇ ಮಠದ ಗುರುವಾಗಿ ಸಮಾಧಿಗೆ ಭಕ್ತಿಯಿಂದ ಪೂಜೆ , ನೈವೇದ್ಯ, ಆರತಿ ಎಲ್ಲ ಮಾಡ್ಕೊಂಡು ಬರ್ತಾ ಇದ್ದ. ಹಾಗಂತ ಪೆದ್ದ ಒಂಚೂರು ಬದಲಾಗಿರಲಿಲ್ಲ.
ಹೀಗೆ ನಡೆಯುತ್ತಿರುವಾಗ ಪಾಪ ಗುರುಗಳು ಎರಡು ಹೊತ್ತಿನ ಊಟಕ್ಕಾಗಿ ಊರೂರು ಓಡಾಡಿಕೊಂಡಿದ್ದು, ಹಾಗೆ ಈ ಊರಿಗೆ ಬಂದರು. ಊಟ ಸಿಗದೇ ಅಲೆದಾಡುತ್ತಿದ್ದರು. ಯಾರೋ ಕಂಡೋರು, ನೋಡಿ ಅಲ್ಲೊಂದು ಆಶ್ರಮ ಇದೆ ನೀವು ಅಲ್ಲಿಗೆ ಹೋಗಿ, ಹೊಟ್ಟೆ ತುಂಬಾ ಊಟ ಸಿಗುತ್ತೆ. ಉಳಿಯಲು ವ್ಯವಸ್ಥೆನೂ ಇರುತ್ತೆ. ಎಂದು ಹೇಳಿದಾಗ ಗುರುಗಳು ಮಠಕ್ಕೆ ಬಂದರು. ಮಠದ ವೈಭವ ನೋಡಿದರು. ಈ ಕ್ಷಾಮದ ಸಮಯದಲ್ಲೂ ಮಠದ ವೈಭವ ಕಂಡು ಬೆರಗಾದರು.
ಸಾವಿರಾರು ಜನ ಭಕ್ತರು, ಶ್ರದ್ಧಾಭಕ್ತಿಯಿಂದ ಬರುತ್ತಿದ್ದರು. ಹಾಗೆಯೇ ಎಲ್ಲವನ್ನು ವೀಕ್ಷಿಸುತ್ತಾ ಗುರುಗಳು ಸಹ ಭಕ್ತಿಯಿಂದ ಬೇಡಿಕೊಂಡು ಸಮಾಧಿ ಸುತ್ತ ಮೂರು ಪ್ರದಕ್ಷಿಣೆ ಬಂದು ಸಾಸ್ಟಾಂಗ ನಮಸ್ಕಾರ ಮಾಡಿದರು.
ಸಮಾಧಿಗೆ ಸಾಯಂಕಾಲದ ಮಂಗಳಾರತಿ ಮಾಡಲು ಗುರುಗಳು ಬಂದರು. ಮಠದ ತುಂಬಾ ಭಕ್ತರು ಭಯ ಭಕ್ತಿಯಿಂದ ಕೈಮುಗಿದು ನಿಂತಿದ್ದಾರೆ.
ಗುರುಗಳು ಸಹ ಕೈಮುಗಿದುಕೊಂಡು ಮಂಗಳಾರುತಿ ಮಾಡುತ್ತಿರುವರು ಯಾರು? ಎಂದು ನೋಡಿದಾಗ ಶಿಷ್ಯನ ಗುರುತು ಅವರಿಗೆ ಸಿಕ್ಕಿತು. ಅಯ್ಯೋ ದೇವ್ರೇ, ಇವ್ನು ನನ್ನ ಪೆದ್ದ್ ಶಿಷ್ಯ ಅಲ್ವಾ ? ಇಂಥಾ ದೊಡ್ಡ ಮಠಕ್ಕೆ ಗುರುಗಳಾ? ಪಾಪ ಗುರುಗಳಿಗೆ ನಂಬಕ್ಕೆ ಆಗಲಿಲ್ಲ. ಕಣ್ಣು ಹೊಸಕಿ, ಹೊಸಕಿ ನೋಡಿಕೊಂಡರು.
ಅಷ್ಟು ಹೊತ್ತಿಗೆ ಶಿಷ್ಯ ಮಂಗಳಾರತಿ ಕೊಡಲು ಹೊರಗೆ ಬಂದನು. ಅವನಿಗೆ ಗುರುಗಳ ಗುರುತು ಸಿಕ್ಕಿತು. ಓಡಿ ಬಂದವನೇ, ಗೊಳೋಂತಾ ಅಳ್ತಾ ಗುರುಗಳೇ ಅಂತ ಕಾಲಿಗ್ಬಿದ್ದ, ಅವನೋ, ಪಾಪ ತುಂಬಾ ಒಳ್ಳೆ ಶಿಷ್ಯನೇ ಆಗಿದ್ದ, ಈ ಆಶ್ರಮಾನ ಇನ್ನು ನನ್ಕೈಲಿ ನಡ್ಸಕ್ಕೆ ಆಗಲ್ಲ ಗುರುಗಳೇ, ಎಲ್ಲ ನೀವೇ ನೋಡ್ಕಳಿ ಎಂದು ಗುರುಗಳ ಪಾದ ಹಿಡ್ಕಂಡ. ಗುರುಗಳು ಅವನನ್ನ ಪ್ರೀತಿಯಿಂದ ಮೇಲೆ ಎಬ್ಬಿಸಿ ಸಮಾಧಾನಪಡಿಸಿದರು .
ಶಿಷ್ಯ ಗುರುಗಳನ್ನು ಒಳಗೆ ಊಟಕ್ಕೆ ಕರೆದುಕೊಂಡು ಹೋಗಿ ಊಟ ಮಾಡಿಸಿದ. ಮಲಗಲು ಹಾಸಿಕೊಟ್ಟು , ಭಕ್ತಿಯಿಂದ ಗುರುಗಳ ಕಾಲು ಒತ್ತಿದ, ಶಿಷ್ಯನ ಬೆಳವಣಿಗೆ ಕಂಡು ಗುರುಗಳು ಬಹಳ ಸಂತೋಷ, ಸಂಭ್ರಮಪಟ್ಟರು.
ಅಲ್ವೋ, ನಿನ್ನ ಎಷ್ಟು ಪೆದ್ದ ಅಂದ್ಕೊಂಡಿದ್ದೆ, ಆದರೆ ನೀನು ಯಾರೋ ಪವಾಡ ಪುರುಷರನ್ನು ಆಶ್ರಯಿಸಿ ಎಷ್ಟೊಂದು ಬೆಳೆದ್ಬಿಟ್ಯಲ್ಲ. ನನಗೆ ತುಂಬಾ ಸಂತೋಷವಾಯಿತು.
ಎಲ್ಲಪ್ಪ ಅಂಥ ಮಹಾನುಭಾವ ಪವಾಡ ಪುರುಷರು ಸಿಕ್ಕರು, ಎಂದು ಶಿಷ್ಯನನ್ನು ಕೇಳಿದಾಗ?, ಶಿಷ್ಯನು ಅತ್ಗೋತಾ ” ನನಗ್ಯಾರೂ ಪವಾಡ ಪುರುಷರು ಸಿಕ್ಕಿಲ್ಲ . ಗುರುಗಳೇ ಆವತ್ತು ನೀವು ನನಗೆ ಆಶೀರ್ವಾದ ಮಾಡಿ ಒಂದು ಕತ್ತೆನಾ ಕೊಟ್ಟಿದ್ರಲ್ಲ ಆದ್ರದ್ದೇ ಸಮಾಧಿ.” ಅದನ್ನ ಕರ್ಕೊಂಡು ಬರುವಾಗ ಊರ ಹೊರಗಡೆ ಬರ್ತಿದ್ದ ಹಾಗೆ ಸತ್ತೋಯ್ತು ಅಂತ ಹೇಳಿ ದುಃಖದಿಂದ ಮೂಗು ಒರೆಸಿಕೊಳ್ಳುತ್ತಾ, ಅದೇ ಪೆದ್ದ ಶಿಷ್ಯ ಮುಗ್ಧನಾಗಿ ಹೇಳಿದಾಗ, ಗುರುಗಳು ಕಳೆದ ಬಾಯಿ ಮುಚ್ಚದೇ ಆಶ್ಚರ್ಯದಿಂದ ಶಿಷ್ಯನನ್ನೇ ನೋಡುತ್ತಿದ್ದರು.
ಶಕ್ತಿ ಇರುವುದು, ಪವಾಡದಲ್ಲಾಗಲಿ, ಸಮಾಧಿಯಲ್ಲಾಗಲಿ, ಶಕ್ತಿ ಇರುವುದು ನಮ್ಮ ನಂಬಿಕೆಯಲ್ಲಿ. ಶ್ರದ್ಧೆ, ಭಕ್ತಿ, ನಂಬಿಕೆ ಇವುಗಳಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಒಂದು ಉದಾಹರಣೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882