ದಿನಕ್ಕೊಂದು ಕಥೆ
ಶ್ರೇಷ್ಠತೆ ಬರುವುದು ಬಲದಿಂದಲ್ಲ,
ನಡವಳಿಕೆಯಿಂದ
ಬೆಳಕಿನ ವಿಚಾರದಲ್ಲಿ “ನಾನೇ ಶ್ರೇಷ್ಠ, ನಾನೇ ಶ್ರೇಷ್ಠ” ಎಂಬ ತರ್ಕಗಳು ದಿನದಿಂದ ದಿನಕ್ಕೆ ದೇವಲೋಕಕ್ಕೆ ಬರತೊಡಗಿದವು. ಸೂರ್ಯ, ಚಂದ್ರ, ನಕ್ಷತ್ರಗಳು ಪ್ರತಿನಿತ್ಯ ಇದೇ ವಿಷಯದ ಬಗ್ಗೆ ಸಂಬಂಧಿಸಿದವರ ಮೂಲಕ ತಮ್ಮನ್ನೇ ಶ್ರೇಷ್ಠರೆಂದು ಗುರುತಿಸಬೇಕು ಎನ್ನುವ ಬಲವಂತ ಹೇರತೊಡಗಿದವು. ಯಾರನ್ನು ತಾನು ಶ್ರೇಷ್ಠನೆಂದು ಗುರುತಿಸಬೇಕೆಂದು ಬ್ರಹ್ಮನಿಗೆ ಗಲಿಬಿಲಿಯುಂಟಾಯಿತು. ಈ ವಿಚಾರದಲ್ಲಿ ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಿ ತುರ್ತು ಸಭೆ ಕರೆದನು.
ಸಭೆಗೆ ಇಂದ್ರಾದಿ ದೇವತೆಗಳು ಸೇರಿದಂತೆ ಎಲ್ಲರೂ ಹಾಜರಿದ್ದರು. ಸೂರ್ಯ, ಚಂದ್ರ ಹೀಗೆ ಯಾರು ಸ್ಪರ್ಧೆಯಲ್ಲಿ ಇದ್ದರೋ ಅವರಿಗೆ ಕರೆ ಹೊಯಿತು. ಎಲ್ಲರೂ ಬಂದು ಸೇರಿದಾಗ ಸಭೆ ಆರಂಭವಾಯಿತು.
ಭೂಮಿ ಕಡೆಯಿಂದ ಮಿಂಚುಹುಳ ಸ್ಪರ್ಧೆಗೆ ಹೋಗಿತ್ತು. ಭೂಮಿಯಲ್ಲಿ ಬೆಳಕಿಗೆ ಪ್ರತಿನಿಧಿ ನೀನು ಒಬ್ಬನೇನಾ, ಮತ್ಯಾರು ಇಲ್ಲವೇ ಹಣತೆ ಯಾಕೆ ಬಂದಿಲ್ಲ ಎಂದು ಸಭೆಯಲ್ಲಿ ಕೇಳಲಾಯಿತು. ಆಗ ಮಿಂಚುಹುಳವು ಹಣತೆಯನ್ನು ನಾನು ಕರೆದೆ. ಆದರೆ ಹಣತೆ “ನಾನು ಸ್ಪರ್ಧಿಸಲು ಸೂಕ್ತವಾದವನೊ, ಇಲ್ಲವೊ ಗೊತ್ತಿಲ್ಲ. ನೀವು ಹೋಗಿ ಬನ್ನಿ” ಎಂದು ಹೇಳಿ ಕಳಿಸಿತು ಎಂದಿತು.
ಬ್ರಹ್ಮನಿಗೆ ಈ ಸಭೆಯಲ್ಲಿ ಹಣತೆ ಇರುವುದು ಸೂಕ್ತವೆನಿಸಿ ತುರ್ತಾಗಿ ಅದನ್ನು ಕರೆಯಿಸಿದ. ಸಭೆಯಲ್ಲಿ ಮೊದಲು ವಾದಿಸುವ ಮತ್ತು ಹಕ್ಕು ಮಂಡಿಸುವ ಅಧಿಕಾರವನ್ನು ಸೂರ್ಯನಿಗೆ ನೀಡಲಾಯಿತು. ಸೂರ್ಯ, “ನನಗೆ ಪ್ರತಿಸ್ಪರ್ಧಿಯೇ ಇಲ್ಲ. ಈ ಸಭೆಯ ಅವಶ್ಯಕತೆಯೂ ಇರಲಿಲ್ಲ. ನಾನು ಇಲ್ಲದ ಜಗತ್ತೇ ಇಲ್ಲ. ಜೀವನ ನಡೆಯುವುದು ನನ್ನ ಬೆಳಕಿನಿಂದನೇ” ಎಂದು ಹೇಳಿ ಅಹಂನಿಂದ ಎಲ್ಲರ ಕಡೆ ನೋಡಿದ.
ಆನಂತರ ಚಂದ್ರ, “ಈ ಸೂರ್ಯ ಎಲ್ಲಾ ಕಾಲದಲ್ಲೂ ಇರವವನಲ್ಲ. ಹಗಲು ಮಾತ್ರ ಅವನ ಕೆಲಸ. ರಾತ್ರಿ ನಾನು ಇಲ್ಲದೆ ಬದುಕಿಲ್ಲ. ಕವಿಗಳಿಗೆ, ಪ್ರೇಮಿಗಳಿಗೆ ನನ್ನಷ್ಟು ಸಹಾಯ ಮಾಡಿದವರು ಯಾರೂ ಇಲ್ಲ. ನಾನು ಸೂರ್ಯನಷ್ಟು ಪ್ರಖರವಾದ ಬಿಸಿಲು ನೀಡಿ ಜನರಿಗೆ ತೊಂದರೆ ಕೊಡುವುದಿಲ್ಲ” ಎಂದು ವಾದಿಸಿದ.
ನಕ್ಷತ್ರಗಳು “ಸೂರ್ಯನ ಬೆಳಕು ಹಗಲು ಮಾತ್ರ ಮತ್ತು ಚಂದ್ರ ತಿಂಗಳಲ್ಲಿ ಕೆಲವು ದಿನ ಮಾತ್ರ. ಆದರೆ ನಾವು ರಾತ್ರಿಯಲ್ಲಿ ಯಾವತ್ತೂ ಇರ್ತೀವಿ. ನಮ್ಮ ಬೆಳಕು ಅವರಿಗೆ ಚಿಕ್ಕದಿರಬಹುದು. ಆದರೆ ಅಷ್ಟರಲ್ಲೇ ಅವರಿಗೆ ಹಾದಿ ತೋರಿಸುತ್ತೀವಿ. ಮಕ್ಕಳಿಗೂ ನಮ್ಮನ್ನು ಕಂಡರೆ ಅಕ್ಕರೆ” ಅಂತ ಹೇಳಿದವು. ಮಿಂಚುಹುಳ ಕೂಡ ನಾನು ಸಣ್ಣವನಾದರೂ ಯಾರ ಸಹಾಯವಿಲ್ಲದೆ ಇಡೀ ಕತ್ತಲೆಯಲ್ಲಿ ಒಂದು ಬೆಳಕಿನ ಸೊಬಗು ಮೂಡಿಸುವೆ ಎಂದು ಹೇಳಿತು.
ತನ್ನ ವಾದ ಮಂಡಿಸಲು ಮುಂದಾಗಿ ಹಣತೆ “ನನಗೆ ವಾದ ಮಂಡಿಸಲು ಆಸೆಯೇನೂ ಇಲ್ಲ. ನಾನು ಶ್ರೇಷ್ಠನೆಂದೂ ಭಾವಿಸಿಲ್ಲ. ಕನಿಷ್ಠನೆಂದೂ ಭಾವಿಸಿಲ್ಲ. ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ನನ್ನನ್ನು ತಾನು ಸುಟ್ಟುಕೊಂಡು ಬೆಳಕು ನೀಡುವುದರಲ್ಲಿ ನನಗೆ ಖುಷಿ ಇದೆ. ಅದು ಕೇವಲ ಸ್ವಲ್ಪವೇ ಬೆಳಕಾಗಲಿ, ನನ್ನನ್ನು ನಂಬಿ ಹಚ್ಚಿದವರಿಗೆ ನಾನು ಮೋಸ ಮಾಡಲ್ಲ. ಅವರು ಬಯಸುವವರೆಗೂ ಬೆಳಕು ಕೊಡುತ್ತೇನೆ. ಅವರು ಬೇಡವೆಂದರೆ ನನ್ನ ಬೆಳಗುವಿಕೆ ನಿಲ್ಲಿಸುತ್ತೇನೆ. ಸೂರ್ಯನಾಗಲಿ, ಚಂದ್ರನಾಗಲಿ, ನಕ್ಷತ್ರಗಳಾಗಲಿ ಬೇಡವೆಂದರೆ ನಿಲ್ಲಿಸಿಯಾರೆ?
ಜನರಿಗೆ ಬೇಕೋ ಬೇಡ್ವೊ ಗೊತ್ತಿಲ್ಲದೆ ತಮ್ಮ ಪಾಡಿಗೆ ತಾವು ಉರಿಯುತ್ತಲೇ ಇರುತ್ತಾರೆ. ನಾನು ಇಲ್ಲದೆ ಹೋಗಿದ್ದರೆ ಮನುಷ್ಯರ ಜಗತ್ತು ಹೇಗಿರುತ್ತಿತ್ತು ಎಂದು ಊಹಿಸಿ. ಆದರೆ ನನಗೆ ಅದರಲ್ಲಿ ಹೆಗ್ಗಳಿಕೆ ಇಲ್ಲ. ಅದು ನನ್ನ ಕೆಲಸ, ನನ್ನ ಪಾಡಿಗೆ ನಾನು ಉರಿದು ಬೆಳಕು ಕೊಡುವುದು ಕರ್ತವ್ಯ. ಕರ್ತವ್ಯದಲ್ಲಿ ಶ್ರೇಷ್ಠತೆಯ ಲೆಕ್ಕ ಹಾಕುವುದು ನನಗೆ ಸರಿ ಬರುವುದಿಲ್ಲ. ಅದಕ್ಕಾಗಿ ನಾನು ಮೊದಲೇ ಸಭೆಗೆ ಬಂದಿರಲಿಲ್ಲ. ಕ್ಷಮಿಸಿ” ಎಂದು ಕೈ ಮುಗಿಯಿತು.
ಹಣತೆಯ ಮಾತು ಮುಗಿಯುತ್ತಲೇ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಆಗ ಬ್ರಹ್ಮ, “ಯಾರು ಶ್ರೇಷ್ಠರು ಎಂಬುದನ್ನು ನಾನು ತೀರ್ಮಾನಿಸುವ ಅಗತ್ಯ ಇಲ್ಲ. ಇಡೀ ಸಭೆಯೇ ಅದನ್ನು ಗುರುತಿಸಿದೆ. ಶ್ರೇಷ್ಠತೆ ಬರುವುದು ಬರೀ ಬಲದಿಂದಲ್ಲ, ತನ್ನ ಶಕ್ತಿಯಿಂದಲ್ಲ, ಅದರ ಜೊತೆಗೆ ನಡವಳಿಕೆ ಮುಖ್ಯ.
ಸಣ್ಣ ಬೆಳಕು ಕೊಟ್ಟರೂ ಹಣತೆಯ ವ್ಯಕ್ತಿತ್ವ ಗುರುತರವಾದದ್ದು” ಎಂದ. ಎಲ್ಲರೂ ಹಣತೆಗೆ ಜಯಕಾರ ಹಾಕಿದರು. ಸೂರ್ಯ, ಚಂದ್ರ, ನಕ್ಷತ್ರಗಳಿಗೆ ತಮ್ಮ ತಪ್ಪಿನ ಅರಿವಾಯಿತು.
ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ.
– 9341137882.