ದಿನಕ್ಕೊಂದು ಕಥೆ
ಸರಳ, ಸೌಜನ್ಯತೆಯಿಂದ ಎಲ್ಲರ ಹೃದಯ ಗೆಲ್ಲಬಹುದು
ಈ ಜಗತ್ತಿನಲ್ಲಿ ಸಾಧು-ಸಂತರನ್ನು ಗೌರವದಿಂದ ಕಂಡು, ಅವರಿಂದ ಪ್ರೇರಣೆ ಪಡೆಯಬೇಕು. ಅವರನ್ನು ಗೌರವಿಸುವುದರಿಂದ ನಮ್ಮ ಗೌರವವೂ ಹೆಚ್ಚುತ್ತದೆ ಎಂಬ ನಿರೀಕ್ಷೆಯಿಂದ ಕೆಲವು ದುರಭಿಮಾನಿಗಳು ಸಾಧು ಸಂತರ ಬಳಿಗೆ ತೆರಳುವ ಮತ್ತು ಗೌರವಿಸುವ ನಾಟಕವಾಡುತ್ತಾರೆ. ಅಂಥವರ ಕಣ್ತೆರೆಸುವ ಒಂದು ರೋಚಕ ಪ್ರಸಂಗ ಹೀಗಿದೆ.
ಹಿಂದಿ ಸಾಹಿತ್ಯದಲ್ಲಿ ಮಹತ್ವದ ಸ್ಥಾನ ಪಡೆದ ಸಂತ ಕವಿ ದಾದೂ ದಯಾಳರು ತಮ್ಮ ಸರಳತೆ ಮತ್ತು ಸಹನಶೀಲತೆಯಂತಹ ಸದ್ಗುಣಗಳಿಂದಾಗಿ ಸರ್ವತ್ರ ವಿಖ್ಯಾತರಾಗಿದ್ದರು. ಅವರ ಪ್ರಸಿದ್ಧಿಯಿಂದ ಆಕರ್ಷಿತನಾದ ಸೇನಾಧಿಕಾರಿಯೊಬ್ಬ ಕುದುರೆಯನ್ನೇರಿ ಅವರ ದರ್ಶನಕ್ಕೆಂದು ಹೊರಟ. ಸಂತ ದಾದೂ ದಯಾಳರು ನಗರದಾಚೆ ಒಂದು ಹಳ್ಳಿಯ ರಸ್ತೆ ಬದಿಯ ಆಲದ ಮರದ ಬುಡದಲ್ಲಿ ಹಳೆಯ ಹರಿದ ವಸ್ತ್ರ ತೊಟ್ಟು ಧ್ಯಾನಮಗ್ನರಾಗಿದ್ದರು.
ಅಹಂಕಾರಿಯಾದ ಸೇನಾಧಿಕಾರಿ ಅದೇ ದಾರಿಯಾಗಿ ಬಂದರೂ, ಸಾಧಾರಣ ಹರಿದ ವಸ್ತ್ರ ತೊಟ್ಟ ಸಂತರನ್ನು ಗುರುತಿಸಲು ಅಸಮರ್ಥನಾದ. ಅವನು ಕುದುರೆಯ ಬೆನ್ನ ಮೇಲೆ ಕುಳಿತಿದ್ದೇ ಜೋರಾದ ದನಿಯಲ್ಲಿ ”ಲೋ ಮುದುಕ, ನಿನಗೆ ಇಲ್ಲಿ ಸಂತ ದಾದೂ ದಯಾಳರು ಎಲ್ಲಿದ್ದಾರೆಂದು ಗೊತ್ತಿದೆಯೆ?” ಎಂದು ಪ್ರಶ್ನಿಸಿದ. ಸಂತರು ಶಾಂತರಾಗಿ ಕುಳಿತೇ ಇದ್ದರು. ಉತ್ತರಿಸಲಿಲ್ಲ. ಆಗ ಸೇನಾಧಿಕಾರಿ ಮತ್ತೊಮ್ಮೆ ”ಲೋ ಮುದಿಯಾ, ನಿನಗೆ ಕಿವಿ ಕೇಳಿಸುವುದಿಲ್ಲವೇ? ಸಂತ ದಾದೂ ದಯಾಳರೆಲ್ಲಿರುತ್ತಾರೆ? ಆಗಿನಿಂದ ಕೇಳುತ್ತಾ ಇದ್ದೇವೆ” ಎಂದು ಕೇಳಿದ. ಸಂತರು ಆಗಲೂ ಪ್ರತಿಕ್ರಿಯಿಸಲಿಲ್ಲ. ಮಂದ ಮುಗುಳುನಗೆಯೊಂದಿಗೆ ತಮ್ಮ ಕೆಲಸ ಮಾಡುತ್ತಿದ್ದರು.
ಈ ಮುದುಕ ಉದ್ದೇಶಪೂರ್ವಕವಾಗಿ ತನ್ನ ಪ್ರಶ್ನೆಗೆ ಉತ್ತರಿಸುತ್ತಿಲ್ಲ ಎಂದು ಸೇನಾಧಿಕಾರಿಗೆ ಅನ್ನಿಸಿ ಆತ ಗದರಿಸತೊಡಗಿದ. ಆಗಲೂ ಸಂತರು ಸುಮ್ಮನೆ ಇದ್ದುದರಿಂದ ಸೇನಾಧಿಕಾರಿ ಬೈಯುತ್ತಾ ಮುಂದೆ ಸಾಗಿದ. ಇಲ್ಲಿ ಇನ್ನೊಬ್ಬ ಸಿಕ್ಕಿದಾಗ ”ಇಲ್ಲಿ ಸಂತ ದಾದೂ ದಯಾಳರು ಎಲ್ಲಿರುತ್ತಾರೆಂದು ಗೊತ್ತೇ?,” ಎಂದು ಕೇಳಿದ. ಆತ ”ಬನ್ನಿ, ಹಿಂದೆ ಹೋಗೋಣ,” ಎಂದು ಸೇನಾಧಿಕಾರಿಯನ್ನು ಸಂತರ ಬಳಿಗೆ ತಲಪಿಸಿದ.
ಸ್ವಲ್ಪ ಹೊತ್ತು ಮೊದಲು ತಾನು ಬೈದಿದ್ದ ವ್ಯಕ್ತಿಯೇ ಸಂತ ದಾದೂ ದಯಾಳರು ಎಂದು ಅರಿತಾಗ ಆತ ಗಾಬರಿಯಾಗಿ ಬಿಟ್ಟ. ಪಶ್ಚಾತ್ತಾಪಗೊಂಡು ”ಮಹಾತ್ಮರೇ, ನನ್ನನ್ನು ಮನ್ನಿಸಿ. ತಮ್ಮನ್ನು ಗುರುಗಳನ್ನಾಗಿ ಸ್ವೀಕರಿಸಲು ಹೊರಟಿದ್ದೆ. ನೋಡಿ, ಶಿಷ್ಯನಾಗಲು ಹೊರಟ ನನ್ನಿಂದ ಎಂಥ ತಪ್ಪಾಯ್ತು? ನನ್ನನ್ನು ಕ್ಷ ಮಿಸಿಬಿಡಿ,” ಎಂದು ವಿನಂತಿಸಿಕೊಂಡ.
ನಮ್ಮ ಉದ್ದೇಶ ಎಷ್ಟೇ ಹಿರಿದಾಗಿದ್ದರೂ, ಅದಕ್ಕೆ ಅನುಗುಣವಾದ ವ್ಯವಹಾರ, ಆಚರಣೆಗಳು ನಮ್ಮಲ್ಲಿ ಇಲ್ಲದಿದ್ದರೆ ಯಶಸ್ಸನ್ನು ಗಳಿಸಲು ಸಾಧ್ಯವಿಲ್ಲ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎನ್ನುವಂತೆ ಮೃದು ಹೃದಯಿಗಳು ಸ್ವೀಕರಿಸುವ ಸಂಪತ್ತು ಗಟ್ಟಿಯಾದ ಕಟು ಹೃದಯಕ್ಕೆ ಸ್ವೀಕಾರಕ್ಕೆ ಅರ್ಹವೇ? ಸರಳತೆ, ನಿರಹಂಕಾರ, ಸದಾಚಾರಗಳಂತಹ ಸದ್ಗುಣಗಳು ಉಳ್ಳವರಾಗಿ ನಾವು ಜೀವನದಲ್ಲಿ ಸಫಲರಾಗಲು ಸಾಧ್ಯ. ಸರಳತೆ ಸೌಜನ್ಯಗಳಿಂದ ನಾವು ಎಲ್ಲರ ಹೃದಯಗಳನ್ನು ಗೆಲ್ಲಬಲ್ಲೆವು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.