ಕಾವ್ಯ
‘ಕತ್ತಲೆಗೆ ಕಣ್ಣಾಗಿ’ ಹಿರಿಯ ಸಾಹಿತಿ ಅಕ್ಕಿ ಕಾವ್ಯ ಬರಹ
ಕತ್ತಲೆಗೆ ಕಣ್ಣಾಗಿ
ಕಡುನೀಲಿ ಪರದೆಯಲಿ
ಬೆಳ್ಳಿತಾಟಿನ ತೆರದಿ
ಹುಣ್ಣಿಮೆಯ ಚಂದಿರನು
ತಾ ಮೂಡಿಬಂದ || ೧ ||
ಅಂಬರದ ಸಂಭ್ರಮಕೆ
ನಗುವ ಚಿಕ್ಕಿಯ ಬಳಗ
ಕತ್ತಲೆಗೆ ಹಚ್ಚಿವೆಯೇ?
ಸರಮಾಲೆ ದೀಪ || ೨ ||
ಬಯಲು ಬದುಗಳಿಂದ
ಮರ ಪೊದೆಗಳೆದೆಯಿಂದ
ಗರಿ ಬಿಚ್ಚಿದಾ ನವಿಲ
ಹಿಗ್ಗಿನಾ ಕೇಕೇ || ೩ ||
ಮೆಲುಗಾಳಿಗೆ ಬೆದರಿ
ತೊನೆವ ಗಿಡಗಳ ಟೊಂಗೆ
ರಾತ್ರಿ ಮುತ್ತೈದೆ ಹಣೆಗೆ
ಸಿರಿಹೂವ ದಂಡೆ || ೪ ||
ನೀರವದ ನಟ್ಟಿರುಳು
ಮಿಂಚಿ ಹರಿಯುವ ನೀರ
ಟಿಂವಕ್ಕಿ ಕೂಗುತಿದೆ
ಅಪಶಕುನ ಸರಿಸಿ || ೫ ||
ನೆತ್ತಿಮೇಲಣ ಚಂದ್ರ
ಬೆಂದೊಡಲ ಭುವಿಗೆ
ಕನಿಕರಿಸಿ ಹಿಡಿದಿಹನೆ?
ಧವಳ ತಂಪಿನ ಛತ್ರ || ೬ ||
ಕತ್ತಲೆಗೆ ಕಣ್ಣಾಗಿ
ಹಾದಿಗೆ ಬೆಳಕೀವ
ತಾರೆ ಚಂದಿರರಂತೆ
ನಾವು ಬಾಳಬೇಕು ||೭ ||
ನೋವು ನುಂಗುತ
ಮುಂದೆ ಸಾಗಬೇಕು
ಜಂಜಡದಲೂ ಸೊಗದ
ಸುಖ ಕಾಣಬೇಕು ||೮ ||
– ಡಿ.ಎನ್.ಅಕ್ಕಿ
ದಿನಾಂಕ :20-12-2021.
9448577898.
ವಿಳಾಸ :
ಡಿ.ಎನ್.ಅಕ್ಕಿ.
ಚಂದ್ರಪ್ರಭು ನಿಲಯ
ಶಾಂತೇಶ ನಗರ
ಇಂಡಿ–586209.
ವಿಜಯಪುರ ಜಿಲ್ಲೆ.