ಅಣ್ಣ- ತಮ್ಮಂದಿರ ಜೀವ ತೆಗೆದ ಧನ ಪಿಶಾಚಿ ಅದ್ಭುತ ನೀತಿ ಕಥೆ ಓದಿ

ಸಂಪತ್ತಿನ ವ್ಯಾಮೋಹ
ಒಂದೂರಿನಲ್ಲಿ ಇಬ್ಬರು ಸೋದರರಿದ್ದರು. ಪರಸ್ಪರ ಪ್ರೀತಿ ವಿಶ್ವಾಸದಿಂದಲೇ ಸಂತೃಪ್ತ ಜೀವನ ನಡೆಯಿಸುತ್ತಿದ್ದರು. ಇಬ್ಬರೂ ಸೇರಿ ಹಾಯಾಗಿ ವ್ಯಾಪಾರ ವಹಿವಾಟು ನಡೆಯಿಸುತ್ತಿದ್ದರು.
ಒಮ್ಮೆ ವ್ಯಾಪಾರಕ್ಕೆಂದು ಬೇರೊಂದು ನಗರಕ್ಕೆ ಹೊರಟರು. ಧೈರ್ಯಕ್ಕೆಂದು ಒಂದು ಬಂದೂಕು ಹಿಡಿದು ಒಂಟೆಯ ಮೇಲೆ ಪಯಣಿಸಿದರು.
ರಸ್ತೆಯ ಮಧ್ಯೆ ದಟ್ಟ ಕಾಡಿತ್ತು. ಹೋಗುತ್ತಿದ್ದಂತೆ ಸಾಧು ಒಬ್ಬ ಓಡೋಡಿ ಬಂದು ಇನ್ನು ಮುಂದೆ ಹೋಗದಿರಿ. ಅಲ್ಲಿ ಪಿಶಾಚಿ ಇದೆ. ಆಗ ಕಂಟಕ ಗ್ಯಾರಂಟಿ’ ಎಂದು ಹೆದರಿಸಿದ.
ಆಗ ಸೋದರರು “ಯಾವ ಪಿಶಾಚಿಯನ್ನೂ ನಾವು ನಂಬೊಲ್ಲ. ನಾವು ನಂಬಿದ ದೇವರು ಕೈಬಿಡೊಲ್ಲ” ಎಂದು ಮುಂದೆ ಹೊರಟರು. ಏನಾಶ್ಚರ್ಯ! ದಾರಿಯ ಬದಿಯಲ್ಲಿ ಮುತ್ತು ರತ್ನಗಳ ರಾಶಿಯೇ ಇತ್ತು. ಕಣ್ಣು ಕೋರೈಸುವ ಸಂಪತ್ತನ್ನು ಕಂಡಾಗ ಬಹಳ ಸಂತೋಷವಾಯಿತು.
ಅಣ್ಣನೀಗ ತಮ್ಮನ ಬಳಿ “ನೀನು ಹಿಂದಿರುಗಿ ಹೋಗಿ ಹತ್ತು ಒಂಟೆಗಳು. ಈ ಸಂಪತ್ತು ತುಂಬಲು ದೊಡ್ಡ ದೊಡ್ಡ ಚೀಲ ಕೊಂಡು ತಾ. ನಾನಿಲ್ಲೇ ಇದ್ದು ಬಂದೂಕು ಹಿಡಿದು ಕಾಯುತ್ತಿರುತ್ತೇನೆ” ಎಂದು ಹೇಳುತ್ತಾನೆ.
ತಮ್ಮನು ಆತುರದಿಂದಲೇ ಹೊರಟ. ಎಲ್ಲ ವ್ಯವಸ್ಥೆ ಮಾಡಿಕೊಂಡು ಹೊರಟ. ಮಾರ್ಗದ ಮಧ್ಯೆ ಊಟಕ್ಕೆಂದು ಒಂದೆಡೆ ನಿಂತ. ತಕ್ಷಣ “ಅಣ್ಣನ ಊಟದಲ್ಲಿ ವಿಷ ಬೆರೆಯಿಸುವೆ. ಅದನ್ನುಂಡು ಆತ ಸಾಯುತ್ತಾನೆ. ಆಗ ಎಲ್ಲ ಸಂಪತ್ತಿಗೂ ನಾನೊಬ್ಬನೇ ದೊಡ್ಡ ಒಡೆಯನಾಗುವೆ” ಎಂದು ಯೋಚಿಸಿದ.
ಇತ್ತ ಅಣ್ಣನೂ, ತಮ್ಮ ಬರುತ್ತಿದ್ದಂತೆ ಮರದ ಮರೆಯಿಂದಲೇ ಗುಂಡು ಹಾರಿಸಿ ಸಾಯಿಸುವೆ. ಆಗ ನನಗೇನೇ ಸಂಪತ್ತಾಗುತ್ತೆ ಎಂದು ಯೋಚಿಸಿದ.
ತಮ್ಮ ಬರುತ್ತಿದ್ದಂತೆ ಅಣ್ಣ ಬಂದೂಕದಿಂದ ತಮ್ಮನನ್ನು ಸಾಯಿಸಿದ. ಹಸಿವೆಯಿಂದ ತಮ್ಮ ತಂದ ಊಟ ತಿಂದು ಕೆಲವೇ ಕ್ಷಣದಲ್ಲಿ ಅವನೂ ಸತ್ತು ಬಿದ್ದ,
ಸಾಧು ಮತ್ತೆ ಬಂದು ನೋಡಲಾಗಿ ಇಬ್ಬರ ಮೃತದೇಹಗಳೂ ಅಲ್ಲಿದ್ದವು. “ಕೊನೆಗೂ ಧನಪಿಶಾಚಿ ಇವರಿಬ್ಬರ ಪ್ರಾಣವನ್ನೂ ಹೀರಿದಳಲ್ಲ…. ನನ್ನ ಮಾತು ಕೇಳಿದ್ದರೆ ಬದುಕುತ್ತಿದ್ದರು!” ಎಂದು ಬಹಳಷ್ಟು ವ್ಯಥೆ ಪಟ್ಟನು.
ನೀತಿ :– ಹಣ ಸೇರಿದಲ್ಲಿ ಗುಣವಿಲ್ಲ. ಅದು ತ್ಯಾಗದ ಮನೋಭಾವದಿಂದ ಸಾಧ್ಯ. ಆಗ ಪರಸ್ಪರ ಸಹಮತ ವೃದ್ಧಿಯಾಗುತ್ತದೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.