ಪ್ರಮುಖ ಸುದ್ದಿ

ಶಹಾಪುರ: ದೋರನಹಳ್ಳಿ ಪ್ರಕರಣ ಖಂಡಿಸಿ ಪ್ರತಿಭಟನೆ

ದೋರನಹಳ್ಳಿ ಪ್ರಕರಣಃ ಆರೋಪಿ ಗಡಿಪಾರಿಗೆ ಆಗ್ರಹ

ಶಹಾಪುರ: ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಯುವಕನೋರ್ವನ ಕಿಡಿಗೇಡಿತನದಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಿದ್ದಲ್ಲದೆ ಇಡೀ ಸಗರನಾಡಿನಲ್ಲಿ ಅತ್ಯಂತ ಅದ್ಧೂರಿ ಜಾತ್ರಾಮಹೋತ್ಸವಗಳಲ್ಲಿ ಒಂದಾದ ಶ್ರೀಮಹಾಂತೇಶ್ವರ ಜಾತ್ರಾ ಕಾರ್ಯಕ್ರಮಗಳನ್ನು ರದ್ದುಪಡಿಸಲು ಕಾರಣರಾದವರನ್ನು ಕೂಡಲೇ ಬಂಧಿಸಿ ತಪ್ಪಿತಸ್ಥರನ್ನು ಗಡಿಪಾರು ಮಾಡುವ ಮೂಲಕ ಇನ್ನೊಮ್ಮೆ ಇಂತಹ ಘಟನೆಗಳನ್ನು ನಡೆಯದಂತೆ ಎಚ್ಚರಿಕೆ ನೀಡಬೇಕೆಂದು ಆಗ್ರಹಿಸಿ ನಗರದ ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಯುವ ಮುಖಂಡ ಸುಧೀರ ಸಾಹು ಚಿಂಚೋಳಿ ಮಾತನಾಡಿ, ವಿಕೃತ ಕೃತ್ಯದಿಂದ ಜನತೆಯ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಿರುವುದನ್ನು ಖಂಡಿಸಿ ದೋರನಹಳ್ಳಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಗ್ರಾಮದ ಯುವಕರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಿರುವುದು ಅತ್ಯಂತ ದುರದುಷ್ಟಕರ ಹಾಗೂ ಖಂಡನಾರ್ಹ ಸಂಗತಿಯಾಗಿದೆ. ಇದನ್ನೂ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಮುತುವರ್ಜಿ ವಹಿಸಿ ತಪ್ಪಿತಸ್ಥರು ಯಾರೇ ಆಗಿರಲಿ ಅವರನ್ನು ಕಾನೂನಿನಡಿ ಸೂಕ್ತ ಕ್ರಮ ಕೈಗೊಂಡು ಗಡಿಪಾರು ಮಾಡುವ ಮೂಲಕ ನ್ಯಾಯ ಒದಗಿಸಬೇಕಿದೆ ಎಂದು ಆಗ್ರಹಿಸಿದರು.

ಕರವೇ ಅಧ್ಯಕ್ಷ ಶರಣು ಗದ್ದುಗೆ ಮಾತನಾಡಿ, ಈ ಪ್ರತಿಭಟನೆ ಯಾವುದೇ ಸಮುದಾಯದ ವಿರುದ್ಧವಲ್ಲ ಬದಲಿಗೆ ಯಾವುದೇ ಸಮುದಾಯದ ವ್ಯಕ್ತಿಯಿಂದ ಇನ್ನೊಂದು ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದವರ ವಿರುದ್ಧವಾಗಿದೆ. ಶಿವರಾತ್ರಿ ಶಿವಯೋಗದ ದಿನ ಕೆಲ ಸಮುದಾಯಗಳಿಗೆ ಅತ್ಯಂತ ಪವಿತ್ರ ದಿನವಾಗಿದ್ದು ಅಂತಹ ದಿನವೇ ಇಂತಹ ಕೃತ್ಯವೆಸಗುವ ಮೂಲಕ ಧಾರ್ಮಿಖ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ.

ಉದ್ದೇಶ ಪೂರ್ವಕವಾಗಿ ಇಂತಹ ಕೃತ್ಯಗಳನ್ನು ಎಸಗುವ ಮೂಲಕ ಸಾಮಾಜಿಕ ಶಾಂತಿ ಕದಡುವವರಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದು ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ನೂತನ ಉಪಾಧ್ಯಕ್ಷ ಮಹೇಶ ಆನೇಗುಂದಿ, ಬಸವರಾಜ ಪಾಟೀಲ ಹೆರುಂಡಿ ಸೇರಿದಂತೆ ಸಮುದಾಯದ ನೂರಾರು ಯುವಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ಜಗನ್ನಾಥರಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಯುವ ಮುಖಂಡರಾದ ಮಹಾದೇವ ಚಟ್ರಕಿ, ಸಿದ್ದು ಸಾಹು ಆರಬೋಳ, ಶಂಭುಲಿಂಗ ಗೋಗಿ, ಶಿವುಕುಮಾರ ಯಾದಗಿರಿ, ರವಿ ಮೋಟಗಿ, ಬಾಬು ಗೋಡಿಹಾಳ, ವೀರಭದ್ರ ಚೌದ್ರಿ, ರಾಜಶೇಖರ ಮುಡಬೂಳ, ಮಲ್ಲಿಕಾರ್ಜುನ ಆಲೂರು, ವಿರೇಶ ಅಂಗಡಿ, ಮಲ್ಲಿಕಾರ್ಜುನ ಬುಕಿಷ್ಟಗಾರ, ಅರವಿಂದ ಉಪ್ಪಿನ, ಸಿದ್ದಯ್ಯಸ್ವಾಮಿ ಹಿರೇಮಠ, ವಿಜಯ ಸ್ಥಾವರಮಠ, ಡಾ. ಶರಣಬಸವ ಮುಡಬೂಳ, ಲಿಂಗರಾಜ ದೇಶಮುಖ, ಡಾ.ಗಣೇಶ ಚಿಕ್ಕಮಠ, ವಿಕ್ರಮ ಸಜ್ಜನಶೆಟ್ಟಿ, ಮಲ್ಲಿಕಾರ್ಜುನ ಉಳ್ಳಿ, ಶ್ರೀಶೈಲ ಆನೇಗುಂದಿ, ಪ್ರಕಾಶ ತೋಟಗೇರ, ಸುನೀಲ ಶಿರ್ಣಿ ಇನ್ನಿತರರಿದ್ದರು.

 

Related Articles

Leave a Reply

Your email address will not be published. Required fields are marked *

Back to top button