ವೀರಮಹಾಂತ ಶಿವಾಚಾರ್ಯರು ಪಂಚಭೂತಗಳಲ್ಲಿ ಲೀನ
ಅಪಾರ ಸಂಖ್ಯೆಯಲ್ಲಿ ಸೇರಿದ್ಧ ಭಕ್ತರಿಂದ ಕಣ್ಣೀರ ವಿದಾಯ
ವೀರಮಹಾಂತ ಶಿವಾಚಾರ್ಯರು ಪಂಚಭೂತಗಳಲ್ಲಿ ಲೀನ
ಅಪಾರ ಸಂಖ್ಯೆಯಲ್ಲಿ ಸೇರಿದ್ಧ ಭಕ್ತರಿಂದ ಕಣ್ಣೀರ ವಿದಾಯ
ಸಮಾಜಮುಖಿ ಕಾರ್ಯಗಳಿಂದ ಖ್ಯಾತರಾಗಿದ್ದ ಶ್ರೀಗಳು
yadgiri, ಶಹಾಪುರಃ ಹೃದಯಾಘಾತದಿಂದ ವಿಧಿವಶರಾದ ತಾಲೂಕಿನ ದೋರನಹಳ್ಳಿ ಗ್ರಾಮದ ಹಿರೇಮಠದ ಪೀಠಾಧಿಪತಿಯಾಗಿದ್ದ ಶ್ರೀ ವೀರಮಹಾಂತ ಶಿವಾಚಾರ್ಯರರ ಅಂತ್ಯ ಸಂಸ್ಕಾರವು ಅಪಾರ ಭಕ್ತರ ಶೋಕಸಾಗರದ ನಡುವೆ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಸಂಜೆ ಗೋಧೂಳಿ ಸಮಯದಲ್ಲಿ ಧಾರ್ಮಿಕ ವಿಧಿವಿಧಾನದೊಂದಿಗೆ ಶ್ರೀಮಠದ ಆವರಣದಲ್ಲಿ ಗುರುವಾರ ಜರುಗಿತು.
ದೋರನಹಳ್ಳಿ ಶ್ರೀಮಠದ ಹೊರವಲಯದಲ್ಲಿರುವ ಮಹಾಂತೇಶ್ವರ ಗುಡ್ಡದ ದೇವಸ್ಥಾನದ ಆವರಣದಲ್ಲಿ ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಂತಿಮ ದರ್ಶನಕ್ಕೆ ವಿವಿಧ ಮಠಾಧೀಶರು ಸೇರಿದಂತೆ ನಗರ, ಗ್ರಾಮಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀಗಳ ದರ್ಶನ ಪಡೆದರು. ಸಂಜೆ 4 ಗಂಟೆ ಸುಮಾರಿಗೆ ಶ್ರೀಗಳ ಪಾರ್ಥಿವ ಶರೀರವನ್ನು ಅಲಂಕರಿಸಿದ್ದ ವಾಹನದ ಮೇಲಿಟ್ಟು ಮೆರವಣಿಗೆ ಮೂಲಕ ಗ್ರಾಮದ ಶ್ರೀಮಠಕ್ಕೆ ತರಲಾಯಿತು. ಗೋಧೂಳಿ ಸಮಯದಲ್ಲಿ ಅಂತಿಮ ಸಂಸ್ಕಾರವನ್ನು ಧಾರ್ಮಿಕ ವಿಧಿವಿಧಾನದಂತೆ ಶ್ರೀಮಠದ ಸಂಪ್ರದಾಯದಂತೆ ನೆರವೇರಿಸಲಾಯಿತು.
ಶ್ರೀಮಠದ ವಿಚಿತ್ರ ಸಂಸ್ಕಾರಃ
ಶ್ರೀಮಠದ ಪರಂಪರೆ ಪ್ರಕಾರ ಈ ಮಠದ ಆವರಣದಲ್ಲಿ ಒಂದು ವಿಶೇಷ ಗವಿ ಇದೆ. ಆ ಗವಿಯಡಿಯಲ್ಲಿ ಸಮಾಧಿಯ ಸ್ಥಳ ಇದ್ದು, ಪ್ರತಿ ಪೀಠಾಧಿಪತಿ ಅಸ್ತಂಗತರಾದಾಗ ಇದೇ ಒಂದೇ ಸ್ಥಳದಲ್ಲಿ ಪಾರ್ಥಿವ ಶರೀರ ಸಂಸ್ಕಾರ ಮಾಡುತ್ತಾ ಬರಲಾಗಿದೆ.
ಈ ಗವಿಯಲ್ಲಿರುವ ಸಮಾಧಿ ಸ್ಥಳದಲ್ಲಿ ಈ ಮೊದಲು ಅಸ್ತಂಗತರಾಗಿದ್ದ ಶ್ರೀಮಠದ ಪೀಠಾಧಿಪತಿಯ ಪಾರ್ಥಿವ ಶರೀರವಿಟ್ಟು ಸಂಸ್ಕಾರ ಮಾಡಲಾಗಿತ್ತು. ಇದೀಗ ಅದನ್ನು ತೋಡಿ ಅದರಲ್ಲಿ ಉಳಿದ ಮೊದಲಿನ ಶ್ರೀಮಠದ ಪೀಠಾಧಿಪತಿಯ ಅಸ್ತಿಪಂಜರ ತೆಗೆದು ಪಕ್ಕದಲ್ಲಿಯೇ ಇರುವ ಇನ್ನೊಂದು ಅಗೆವು (ಕೇಲ್) ನಲ್ಲಿ ಹಾಕಿ ಮುಚ್ಚಬೇಕು. ಅಗಲಿದ ಈಗನ ಪೀಠಾಧಿಪತಿ ವೀರಮಹಾಂತ ಶ್ರೀಗಳ ಪಾರ್ಥಿವ ಶರೀರಿ ತೋಡಿದ್ದ ಸಮಾಧಿಯಲ್ಲಿ ಹಾಕಿ ಮುಚ್ಚುವಂತ ಪ್ರಕ್ರಿಯೆ ಅನಾದಿಕಾಲದಿಂದಲೂ ಬಂದಿದೆ. ಹೀಗಾಗಿ ಶ್ರೀಮಠದ ಸಾಂಪ್ರದಾಯಿಕ ಸಂಸ್ಕಾರ ಪದ್ಧತಿಯಂತೆ ಪ್ರಸ್ತುತ ಶ್ರೀಗಳ ಪಾರ್ಥಿವ ಶರೀರಿ ಹಳೇ ಸಮಾಧಿ ತೋಡಿ ಅದರಲ್ಲಿಯೇ ವಿಧಿ ವಿಧಾನದಂತೆ ನೆರವೇರಿಸಲಾಯಿತು.
ಕಂಬನಿ ಮಿಡಿದ ಭಕ್ತ ಸಾಗರಃ
1998 ರಲ್ಲಿ ಶ್ರೀವೀರಮಹಾಂತ ಶಿವಾಚಾರ್ಯರು ಶ್ರೀಮಠದ ಪೀಠಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಸುಮಾರು 25 ವರ್ಷಗಳ ಕಾಲ ಸಮಾಜಮುಖಿ ಕಾರ್ಯಗಳನ್ನು ಆಯೋಜಿಸುವ ಮೂಲಕ ಭಕ್ತರ ಮನ ಗೆದ್ದಿದ್ದರು. ಶ್ರೀಮಠದ ಜೀರ್ಣೋದ್ಧಾರ, ಪ್ರವಚನ, ಉಚಿತ ಸಾಮೂಹಿಕ ವಿವಾಹ ಸೇರಿದಂತೆ ಜಾತ್ರೆ ರಥೋತ್ಸವ ಮತ್ತು ಧಾರ್ಮಿಕ ಕಾರ್ಯಗಳನ್ನು ಆಯೋಜಿಸುವ ಮೂಲಕ ಮನೆ ಮಾತಾಗಿದ್ದರು. ಮಹಿಳೆಯರು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಅಂತಿಮ ನಮನ ಸಲ್ಲಿಸುವ ಮೂಲಕ ಕಂಬನಿ ಮಿಡಿದರು.
ಈ ಸಂದರ್ಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು, ದೇವಾಪುರದ ಜಯಶಾಂತಲಿಂಗೇಶ್ವರ ಶಿವಾಚಾರ್ಯರು, ಕಡಕೋಳದ ಡಾ.ರುದ್ರಮುನಿ ಶಿವಾಚಾರ್ಯರು, ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯರು, ದೋರನಹಳ್ಳಿಯ ಚಿಕ್ಕಮಠದ ಶಿವಲಿಂಗರಾಜೇಂದ್ರ ಶಿವಾಚಾರ್ಯರು, ಏಕದಂಡಗಿಮಠದ ಕಾಳಹಸ್ತೇಂದ್ರ ಮತ್ತು ಅಜೇಂದ್ರ ಮಹಾಸ್ವಾಮಿಗಳು, ಕಲ್ಬುರ್ಗಿಯ ಗಿರೆಯಪ್ಪ ಮುತ್ಯಾ, ಗುಂಬಳಾಪುರ ಮಠದ ಸಿದ್ಧೇಶ್ವರ ಶಿವಾಚಾರ್ಯರು, ಮಡ್ನಾಳದ ಮಲ್ಲಿಕಾರ್ಜುನ ಮುತ್ಯಾ, ಗದ್ದುಗೆಯ ಬಸವಯ್ಯ ಶರಣರು, ಬಾರಜ್ಯೋತಿರ್ಲಿಂಗ ದೇವಸ್ಥಾನದ ವಿಶ್ವರಾಧ್ಯ ಸ್ವಾಮೀಜಿ ಸೇರಿದಂತೆ ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಯಾದಗಿರಿ ಶಾಸಕ ವೆಂಕಟರಡ್ಡಿ ಮುದ್ನಾಳ, ಚಂದ್ರಶೇಖರ ಮಾಗನೂರ ಆಗಮಿಸಿ ದರ್ಶನ ಪಡೆದರು. ಮಾಜಿ ಶಾಸಕ ಗುರು ಪಾಟೀಲ್, ಬಿಜೆಪಿ ಮುಖಂಡ ಅಮೀನರಡ್ಡಿ ಪಾಟೀಲ್ ಯಾಳಗಿ, ಡಾ.ಚಂದ್ರಶೇಖರ ಸುಬೇದಾರ ಸೇರಿದಂತೆ ಇತರೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಶ್ರೀಗಳ ಕಿರು ಪರಿಚಯ
ದೋರನಹಳ್ಳಿ ಹಿರೇಮಠಕ್ಕೆ 25 ವರ್ಷಗಳ ಹಿಂದೆ ಅಧಿಕಾರ ವಹಿಸಿಕೊಂಡು ಸಾರ್ಥಕ ಸೇವೆ ಮಾಡಿ ಕ್ಷೇತ್ರದ ಜೊತೆಗೆ ಭಕ್ತಾಧಿಗಳನ್ನು ಉದ್ಧರಿಸಿದ ಪರಮ ಪೂಜ್ಯ ಷ.ಬ್ರ.ವೀರಮಹಾಂತ ಶಿವಾಚಾರ್ಯರು ಕ್ಷೇತ್ರಕ್ಕೆ ಒಲಿದು ಮಹಾಮಹಿಮರು.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಚಿಂಚೋಳಿ ಗ್ರಾಮದ ಸುಸಂಸ್ಕøತ ಮನೆತನದ ವೇ.ಮೂ.ಗಂಗಯ್ಯಸ್ವಾಮಿ ಧರ್ಮಪತ್ನಿ ಬಸ್ಸಮ್ಮ ಶರಣ ದಂಪತಿಗಳ ಕರ ಸಂಜಾತರು. ಹುಟ್ಟೂರಿನಲ್ಲಿ ಪ್ರಾಥಮಿಕ ಹಂತದ ಶಿಕ್ಷಣ ಪಡೆದ ಶ್ರೀಗಳು ಮುಂದೆ ವಾರಣಾಸಿಯಲ್ಲಿ ಉನ್ನತ ವಿದ್ಯಾಭ್ಯಾಸ ನಡೆಸಿದ್ದರು. ಸಂಗೀತ ಸಾಹಿತ್ಯ ವಿಭಾಗದಲ್ಲೂ ಶ್ರೀಗಲು ಪರಿಣಿತಿ ಪಡೆದಿದ್ದರು.
–ಮಲ್ಲಿಕಾರ್ಜುನ ಮುದ್ನೂರ