ಅಂಕಣಸರಣಿ

ಶೋಷಿತ ವರ್ಗದ ಸಾಹೇಬಾ.. ಡಾ.ಬಿ.ಆರ್.ಅಂಬೇಡ್ಕರ್

ಡಾ.ಅಂಬೇಡ್ಕರ ಶೋಷಿತರ ಜೀವಾಳ

ಡಾ. ಹಣಮಂತ್ರಾಯ ಸಿ. ಕರಡ್ಡಿ 

ಡಾ.ಬಾಬಾ ಸಾಹೇಬ್ ಬಿ,ಆರ್, ಅಂಬೇಡ್ಕರ್ ಅವರು ಆಧುನಿಕ ಭಾರತದ ಮಹಾ ಚೇತನ. ಭಾರತದ ಸಾಮಾಜಿಕ ಚಿಂತಕರಾಗಿ, ವಿದ್ವಂಸರಾಗಿ, ಶೋಷಿತರಪರ ಹೋರಾಟಗಾರರಾಗಿ ಮತ್ತು ಸಾಮಾಜಿಕ ಸಮಾನತೆಗಾಗಿ ಅವರು ಮುನ್ನಡೆಸಿದ ಹೋರಾಟಗಳು ಚರಿತ್ರರ್ಹವಾಗಿವೆ.

ತಳಸ್ಪರ್ಶಿ ಅಧ್ಯಯನ, ಪ್ರಕರವಾದ ವೈಚಾರಿಕತೆ, ಸಾಮಾಜಿಕ ಪಿಡುಗುಗಳ ಮೂಲವನ್ನು ಶೋಧಿಸಿ ಪರಿಹಾರವನ್ನು ಹುಡುಕುವ ಅನ್ವೇಷಕ ಪ್ರವೃತ್ತಿ ಮತ್ತು ಸೂಕ್ಷ್ಮ ಒಳನೋಟಗಳಿಂದ ಚಲನರಹಿತ ಸಮಾಜವು ಸಮಾನತೆಯತ್ತ ಚಲಿಸಲು ಚಾಲನೆ ನೀಡಿದರು. ವಿಶ್ವವೇ ಬೇರಗಾಗುವಂತೆ ತಮ್ಮ ಪಾಂಡಿತ್ಯ ಮತ್ತು ಹೋರಾಟಗಳ ಮೂಲಕ ಮೂಕ ಸಮೂದಾಯವನ್ನು ಮುನ್ನಡೆಸಿದರು.

ಸ್ವ ವಿಮೋಚನೆಯ ತತ್ವ:
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಜೀವನದಲ್ಲಿ ಎಲ್ಲ ಬಗೆಯ ನೋವು ಮತ್ತು ಶೋಷಣೆಯನ್ನು ಅನುಭವಿಸಿದರು. ಅಪಾರ ಜ್ಞಾನ ಸಂಪಾದನೆಯಿಂದ ನ್ಯಾಯಶಾಸ್ತ್ರ, ಅರ್ಥಶಾಸ್ತ್ರ ಮತ್ತು ಸಮಾಜಶಾಸ್ತ್ರವನ್ನು ಆಳವಾಗಿ ಆಭ್ಯಸಿಸಿದರು. ಭಾರತದ ಪವಿತ್ರ ಗ್ರಂಥಗಳು ಮತ್ತು ಶಾಸ್ತ್ರೀಯ ಗ್ರಂಥಗಳನ್ನು ವಿಶ್ಲೇಷಣೆಗೆ ಒಳಪಡಿಸಿದರು.

ಕೇವಲ ಜ್ಞಾನಾರ್ಜನೆ ದಲಿತರನ್ನು ಉದ್ಧರಿಸದೆಂದು ಅಂಬೇಡ್ಕರ್ ಕ್ರಿಯಾತ್ಮಕವಾದ ಕಾರ್ಯಗಳಲ್ಲಿ ತೊಡಗಿಕೊಂಡರು. ಸಮಾನತೆಯ ತಳಹದಿಯ ಮೇಲೆ ಸಮಾಜ ರಚನೆಯಾಗಲು ನಿರಂತರ ಹೋರಾಟ, ಸಂಘರ್ಷ, ಜಿಜ್ಞಾಸೆಗಳ ಮೂಲಕ ಜನರಲ್ಲಿ ಜಾಗೃತಿಯನ್ನು ತುಂಬಿದರು.

ಶಿಕ್ಷಣ, ಸಂಘಟನೆ ಮತ್ತು ಸಂಘರ್ಷ ಅಥವಾ ಹೋರಾಟಗಳ ಮೂಲಕವೇ ಶೋಷಿತರ ಜನಾಂಗ ಉದ್ಧಾರವಾಗಬೇಕೆ ಹೊರತು ತಮ್ಮ ವಿಮೋಚನೆಗೆ ಮಹಾತ್ಮರ ಬರುವಿಕೆಯನ್ನು ಕಾಯಬಾರದು ಎಂಬುವದು ಅಂಬೇಡ್ಕರ್ ರವರ ನಂಬಿದ ತತ್ವವಾಗಿತ್ತು.

ಹಾಗಯೇ ಅವರು ಅದನ್ನು ತಮ್ಮ ಬದುಕಿನಲ್ಲಿ ರೂಪಿಸಿಕೊಂಡು ಶೋಷಿತ ಜನಾಂಗದ ವಿಮೋಚನೆಗೆ ಗುರಿ ಮತ್ತು ಮಾರ್ಗಗಳನ್ನು ಹಾಕಿಕೊಟ್ಟರು. ದಲಿತವರ್ಗದ ಬಿಡುಗಡೆಗೆ ಧಾರ್ಮಿಕ ಸುಧಾರಣೆಗಳಿಂದ, ಸಮಾಜ ಸುಧಾರಕರಿಂದ ಅಥವಾ ಅವರ ಪರ ಸಹಾನುಭೂತಿ ವ್ಯಕ್ತಪಡಿಸುವುದರಿಂದ ಕೇವಲ ಮೇಲು ನೋಟದ ಅಲಂಕಾರಿಕ ಬದಲಾವಣೆ ಸಾಧ್ಯವೇ ಹೊರತು ಅವರ ಸಮಗ್ರ ಬದಲಾವಣೆಗೆ ಸಾಧ್ಯವಿಲ್ಲವೆಂಬುದು ಅವರು ಅರಿತಿದ್ದರು.

ತಳ ವರ್ಗದ ಜನರಿಗೆ ಸಾಮಾಜಿಕ ಭದ್ರತೆ ನೀಡುವ ವiತ್ತು ಶೋಷಣೆ, ಅಸಮಾನತೆಯ ವಿರುದ್ಧ ಕಟ್ಟುನಿಟ್ಟಾಗಿ ವರ್ತಿಸುವ ನ್ಯಾಯಾಂಗದ ಅಸ್ತಿತ್ವಕ್ಕೆ ದಾರಿ ಮಾಡಿಕೊಡುವ ರಾಜಕೀಯ ಪರಿಹಾರವೊಂದೆ ದಲಿತರ ಬದುಕಿಗೆ ಇರುವ ಮಾರ್ಗವೆಂದು ಕಂಡುಕೊಂಡಿದ್ದರು.

ಡಾ. ಬಾಬಾ ಸಾಹೇಬ್ ಬಿ,ಆರ್, ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿಯೆಂದು, ‘ಭಾರತದ ಸಂವಿಧಾನ’ ಭಾರತಕ್ಕೆ ನೀಡಿದ ಬಹುದೊಡ್ಡ ಕೊಡುಗೆಯೆಂದು ಎಲ್ಲರೂ ಶ್ಲಾಘಿಸುವುದು ಸಹಜ ಆದರೆ ಅಂಬೇಡ್ಕರ್ ಅವರು ಆಧುನಿಕ ಭಾರತಕ್ಕೆ ದೊಡ್ಡ ಕೊಡುಗೆ ಎಂದರೆ ‘ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ’ಅವರು ನೀಡಿದ ಮೂರ್ತರೂಪ ಎಂದರೆ ತಪ್ಪಾಗಲಾರದು.

ಸಾಮಾಜಿಕ ನ್ಯಾಯದ ಸ್ಪಷ್ಟನೆ:
‘ಸರ್ವರಿಗೂ ಸಮ ಬಾಳು ಸರ್ವರಿಗೂ ಸಮಪಾಲು’ ಎನ್ನುವ ಮಾನವೀಯ ಮೌಲ್ಯಗಳಲ್ಲಿ ಸಾಮಾಜಿಕ ನ್ಯಾಯವು ಈ ದೇಶದ ಮೂಲಭೂತ ವ್ಯವಸ್ಥೆಯನ್ನು ತಗೆದು ನೋಡಿದಾಗ ಪ್ರಾಯಶಃ ಇಡೀ ಮಾನವ ಕುಲಕ್ಕೆ ಸಂಬಂಧಪಟ್ಟ ಒಂದು ವಿಶೇಷವಾದ ಪದ ಎಂದರೆ ತಪ್ಪಾಗಲಾರದು.

ಸಾಮಾಜಿಕ ನ್ಯಾಯವೆಂದರೆ ಸಮಾಜದಲ್ಲಿ ಇದುವರೆಗೂ ನಡೆದುಬಂದ ಸಂಪ್ರದಾಯ, ಪರಂಪರೆ ಮತ್ತು ರೀತಿ-ನೀತಿಗಳಿಂದ ಉಂಟಾದ ಅಸಮಾನತೆಯನು, ಅನಿಷ್ಟವನ್ನು ಹೊಸಬಗೆಯ ಸಂಪ್ರದಾಯಗಳ ಮೂಲಕ ತೊಡೆದು ಹಾಕುವುದು. ಜಡ್ಡುಗಟ್ಟಿದ ಸಮಾಜದಲ್ಲಿ ಮೂಕ ಜನತೆಯ ತೊದಲುನುಡಿಯ ವಿಪ್ಲವದ ಕಹಳೆಯಂತೆ ಪ್ರತಿನಿಧಿಸುವುದು. ಸಹಜ ಅಂತಹ ವಾತಾವರಣದಲ್ಲಿ ಹಾಹಾಕಾರ, ಸಂಘರ್ಷಗಳು ಏರ್ಪಡುತ್ತವೆ. ಸಮಗ್ರತೆಗೆ ಧಕ್ಕೆಯಾಗುತ್ತದೆ. ಇಂಥ ಸಂಧರ್ಭಗಳನ್ನು ಸಮರ್ಥವಾಗಿ ಎದುರಿಸಬೇಕಾಗುತ್ತದೆ. ಸಾಮಾಜಿಕ ನ್ಯಾಯ ಸಾಧನೆಯ ಹಾದಿಯಲ್ಲಿ ಈ ಅಡ್ಡಿ ಆತಂಕಗಳು ಅನಿವಾರ್ಯವಾಗಿ ಎದುರಿಸಬೇಕಾಗುತ್ತದೆ.

ಆದರೆ ರಾಷ್ಟ್ರದ ಸಮಗ್ರತೆ ಮತ್ತು ಬೆಳವಣಿಗೆಯ ದೃಷ್ಠಿಯಿಂದ ಸಾಮಾಜಿಕ ನ್ಯಾಯ ಜಾರಿಯಾಗಬೇಕಾಗುತ್ತದೆ. ಇದುವರೆಗೂ ಧಾರ್ಮಿಕ ಪಾವಿತ್ರತೆಯ ಹೆಸರಿನಲ್ಲಿ ಅಂತಸ್ತು, ಸವಲ್ಲತುಗಳನ್ನು ಅನುಭವಿಸಿದ ತ್ಯಾಗಕ್ಕೆ ಸಿದ್ಧರಾಗಬೇಕಾಗುತ್ತದೆ. ಅಂಬೇಡ್ಕರ್ ಅವರು ಜೀವನದುದ್ದಕ್ಕೂ ಈ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದರು. ಅದು ಹಲವು ಹತ್ತು ರೀತಿಯಲ್ಲಿ ವ್ಯಕ್ತವಾಗಿತ್ತು ಮತ್ತು ಹತ್ತು ದಿಕ್ಕಿನಲ್ಲಿ ವ್ಯಾಪಿಸಿತು.

ಸಾಮಾಜಿಕ ನ್ಯಾಯದ ಬೀಜ ಮೊಳಕೆ:
1924ರ ವೇಳೆಗೆ ಅಖಂಡ ಪಾಂಡಿತ್ಯವನ್ನು ಸಂಪಾದಿಸಿದ್ದ ಅಂಬೇಡ್ಕರ್ ಅವರು ಸಾರ್ವಜನಿಕ ಜೀವನ ಪ್ರವೇಶಿಸಿದರು. ಸಾಮಾಜಿಕ ಕಾರ್ಯಕರ್ತರಾಗಿ, ರಾಜಕೀಯ ಚಿಂತಕರಾಗಿ, ಬರಹಗಾರರಾಗಿ ಮತ್ತು ಶಿಕ್ಷಣ ತಜ್ಞರಾಗಿ ಸಾರ್ವಜಕನಿಕ ಸೇವಾ ಕಾರ್ಯವನ್ನು ಆರಂಬಿಸಿದರು. ಅಸ್ಪೃಶ್ಯರ ನೈತಿಕ ಮತ್ತು ಪ್ರಾಪಂಚಿಕ ಏಳಿಗೆಗಾಗಿ ‘ಬಹಿಷ್ಕøತ ಹಿತಕಾರಣಿ ಸಭಾ’ವನ್ನು ಪ್ರಾರಂಬಿಸಿದರು. ಇಲ್ಲಿಯೇ ಅವರ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಬೀಜಗಳು ಮೊಳೆತವು.

ಈ ಬಹಿಷ್ಕøತ ಹಿತಕಾರಣಿ ಸಭಾದ ಮುಖ್ಯ ಉದ್ಧೇಶಗಳು ದಲಿತ ಸಮೂದಾಯದ ಶಿಕ್ಷಣ ಹಾಗೂ ಸಾಂಸ್ಕತಿಕ ಪ್ರಸಾರ ಹಾಗೂ ದಲಿತ ಜೀವನ ಸುಧಾರಣೆಗಳು ಸೇರಿದ್ದವು. ಇದಕ್ಕಾಗಿ ಅವರು ದಲಿತರ ವಿಧ್ಯಾಭ್ಯಾಸಕ್ಕೆ ನೆರವಾಗಿ ಬಾಂಬೈ ಪ್ರಾಂತ್ಯದಲ್ಲಿ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿದರು.

ಹಿಂದುಳಿದ ವರ್ಗಗಳಲ್ಲಿ ಸಂಸ್ಕøತಿ ಹರಡಲು ಪುಸ್ತಕ ಭಂಡಾರ, ಸಮಾಜ ಕೇಂದ್ರ ಮತ್ತು ಚಿಂತನೆ ಚಾವಡಿಗಳನ್ನು ಹುಟ್ಟುಹಾಕಿದರು. ಕೈಗಾರಿಕೆ ಮತ್ತು ವ್ಯವಸಾಯ ಶಾಲೆಗಳನ್ನು ಆರಂಭಿಸಿ, ಹಿಂದೂಳಿದ ವರ್ಗದವರ ಆರ್ಥಿಕ ಪರಿಸ್ಥಿತಿಗೆ ನೆರವಾಗಲು ಅನುಯಾಯಿಗಳಿಗೆ ಅವರು ಕರೆ ನೀಡಿದರು. ಈ ದ್ಯೇಯೋದ್ಧೇಶಗಳ ಹಿಂದೆ ಹಿಂದುಳಿದ ವರ್ಗಗಳನ್ನು ಅವರ ಹಕ್ಕಿನ ಬಗ್ಗೆ ಎಚ್ಚರಿಸುವ ಕ್ರಿಯಾಶೀಲತೆ ಇತ್ತು. ಅಂಬೇಡ್ಕರ್ ಅವುಗಳಲ್ಲಿ ಸಫಲರೂ ಆದರು.

ಸಾಮಾಜಿಕ ನ್ಯಾಯದ ಸಮೃದ್ಧ ಪೈರು:
ಅಮಾನವೀಯ ಸಂಸ್ಮøತಿ ಮತ್ತು ಮನುಷ್ಯ ವಿರೋಧಿ ಧಾರ್ಮಿಕ ಕಟ್ಟುಪಾಡುಗಳಿಂದ ದಲಿತರನ್ನು ಬಿಡುಗಡೆ ಮಾಡಲು ಅಂಬೇಡ್ಕರ್ ನಿರ್ಧರಿಸಿದರು. ಅದಕ್ಕಾಗಿ ಪರಿಶಿಷ್ಟರಿಗೆ ನಿರಾಕರಿಸಲಾದ ದೇವಾಲಯವನ್ನು ಪ್ರವೇಶಿಸುವುದು, ದಲಿತರಿಗೆ ಕುಡಿಯಲು ನಿರಾಕರಿಸಿದ ಬಾವಿಯಿಂದ ನೀರನ್ನು ತರುವುದು ಮುಂತಾದ ಕಾರ್ಯಕ್ರಮಗಳನ್ನು ಜಾರಿಗೆ ತಂದರು.

1927ರ ಮಾರ್ಚ್‍ನಲ್ಲಿ ಮುಂಬೈಯ ಕೊಲಾಬಾ ಜಿಲ್ಲೆಯ ಮಹಾಡ್ ಕೆರೆಯ ನೀರನ್ನು ಮುಟ್ಟುವ ಮೂಲಕ ಜಡ್ಡುಗಟ್ಟಿದ ಸಂಪ್ರದಾಯಕ್ಕೆ ದೊಡ್ಡಪೆಟ್ಟು ನೀಡಿದರು. ಇದೇ ಸಮಯದಲ್ಲಿ ಅಸ್ಪøಶ್ಯತೆಗೆ ಧಾರ್ಮಿಕ ಕಟ್ಟಳೆ ತೊಡಿಸಿದ ಮನುಸ್ಮøತಿಯನ್ನು ಸುಟ್ಟರು. ಈ ಬಗ್ಗೆ ಅಂಬೇಡ್ಕರ್ ಹೇಳಿದರು ಮನುಸ್ಮøತಿಯನ್ನು ಉದ್ಧೇಶಪೂರ್ವಕವಾಗಿ ಸುಟ್ಟಿದ್ದೇನೆ ಸವರ್ಣ ಹಿಂದುಗಳ ಲಕ್ಷ್ಯ ತಮ್ಮತ್ತ ಸಳೆಯಲು ಮಾಡಿದ ಕ್ರಮ ಅದು.

ನೀವು ಬಾಗಿಲು ಬಡಿಯದಿದ್ದರೆ ಯಾರು ತೆರೆಯುವುದಿಲ್ಲ ಮನುಸ್ಮøತಿಯ ಎಲ್ಲಾ ಭಾಗಗಳು ಖಂಡನರ್ಹವಾಗಿವೆ. ಮನು ಸಮಾಜಶಾಸ್ತ್ರ ಪರಿಣಿತನಲ್ಲ. ಅದರ ಅಡಿಯಲ್ಲಿ ಯುಗ ಯುಗಾಂತರಗಳಿಂದ ನಾವು ನೊಂದಿದ್ದೇವೆ ಅದರಿಂದಲೆ ನಮ್ಮನ್ನು ಬಡತನ, ಅಜ್ಞಾನಕ್ಕಿಡುಮಾಡಲಾಗಿದೆ ಎಂದು ತಮ್ಮ ಕಾರ್ಯಕ್ಕೆ ಸಮರ್ಥನೆ ನೀಡಿದರು. ಅಂದಿನಿಂದಲೆ ಧಾರ್ಮಿಕ ಗ್ರಂಥಗಳ ಬಗೆಗೆ ಹೊಸ ಚಿಂತನೆ ಶುರುವಾಯಿತು. ಸವರ್ಣಿಯ ಚಿಂತಕರು ಹೊಸ ದೃಷ್ಟಿಯಿಂದ ದಲಿತರನ್ನು ನೋಡತೊಡಗಿದರು.

ಸಮಾಜಿಕ ನ್ಯಾಯಕ್ಕೆ ಬೆಂಬಲಿಸಿದ ಚಟುವಟಿಕೆಗಳು:
ದಲಿತರ ಉದ್ಧಾರಕ್ಕಾಗಿಯೇ ಅವರು ಸಮಾಜ ಸಮತಾ ಸಂಘ (1927). ಸಮತಾ (1929). ಜನತಾ ಶಿಕ್ಷಣ ಸಂಸ್ಥೆ (1947)ಸ್ಥಾಪಿಸಿದರು. ಸಂಸ್ಕøತಿ ಮತ್ತು ಜ್ಞಾನ ಪ್ರಸಾರಕ್ಕಾಗಿ ಮೂಕ ನಾಯಕ (1920). ಬಹಿಷ್ಕøತ ಭಾರತ(1927). ಜನತಾ (1930)ಪತ್ರಿಕೆಗಳನ್ನು ತೆರೆದರು.

1932ರಲ್ಲಿ ‘ಸಾಮಾಜಿಕ ನ್ಯಾಯ’ ಸಾಧನೆಯ ಮತ್ತೊಂದು ಹೆಜ್ಜೆಯಾಗಿ ದುಂಡು ಮೇಜಿನ ಪರಿಷತ್ತಿನಲ್ಲಿ ಅಸ್ಪøಶ್ಯರಿಗೆ ಪ್ರತ್ಯೇಕ ಚುನಾವಣೆಯನ್ನು ಕೋರಿದರು. ಆದರೆ ಗಾಂಧೀಜಿಯವರ ಅಮರಣಾಂತರ ಉಪವಾಸಕ್ಕೆ ಮಣಿದ ಅಂಬೇಡ್ಕರ್ ಮೀಸಲಾತಿ ನೀತಿಯ ಒಡಂಬಡಿಕೆ ಮಾಡಿಕೊಂಡಿದ್ದು ‘ಪೂನಾ ಒಪ್ಪಂದ’ (1932) ಎಂದು ಪ್ರಖ್ಯಾತವಾಯಿತು. ಅಲ್ಲಿಂದೀಚೆಗೆ ಸಾಮಾಜಿಕ ನ್ಯಾಯ ಘನೀಕೃತವಾಗತೋಡಗಿತು.

ಸಾಮಾಜಿಕ ನ್ಯಾಯದಡಿಯಲ್ಲಿ ಅಸ್ಪøಶ್ಯರೇ ಅಲ್ಲದೆ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರೂ ಸೇರಿಸಬೇಕೆಂದು ಅಂಬೇಡ್ಕರ್ ಅವರ ಬಯಕೆಯಾಗಿತ್ತು, ಈ ವರ್ಗಗಳು ಮುಖ್ಯ ವಾಹಿನಿಯಲ್ಲಿ ಗುರಿತಿಸಿಕೊಳ್ಳದಿದ್ದರೆ ಸಮಗ್ರತೆಗೆ ಅಪಾಯವೆಂದು ಅವರು ಮನಗಂಡಿದ್ದರು. ಆರ್ಥಿಕ ಮತ್ತು ಸಾಮಾಜಿಕ ನ್ಯಾಯವಿಲ್ಲದ ರಾಜಕೀಯ ಸ್ವಾತಂತ್ರ್ಯವು ಐಕ್ಯಮತ್ಯ ಮತ್ತು ಸಮಗ್ರತೆಯನ್ನು ತಂದುಕೊಡುವುದಿಲ್ಲವೆಂದು ಅವರು ನಂಬಿದ್ದರು.

ಇದನ್ನು ಸಾಧಿಸಲು ಚತುವರ್ಣದ ಅಡಿಪಾಯದ ಮೇಲೆ ಸಮಾಜದಲ್ಲಿರುವ ಶ್ರೇಣಿಕೃತ ರಚನೆಯನ್ನು ನಿರ್ಮೂಲನ ಮಾಡುವುದು ಮೊದಲನೆಯ ಹೆಜ್ಜೆಯಾಗಿತ್ತು. ಜಾತಿ ಮತ್ತು ಅಂತಸ್ತುಗಳ ಆಧಾರದ ಮೇಲೆ ಮುಂದುವರೆದ ಜಾತಿಗಳು ಅನುಭವಿಸುವ ಸೌಲಭ್ಯಗಳನ್ನು ತಗೆದು ಹಾಕಲು ವಾದಿಸಿದರು. ಇವರ ಪರಿಕಲ್ಪನೆಗೆ ಜೀವಂತ ರೂಪಕೊಡಲು ರಾಷ್ಟ್ರ ಅವರಿಗೊಂದು ಸದಾವಕಾಶ ನೀಡಿತು. ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾದ ಅಂಬೇಡ್ಕರ್ ಸಾಮಾಜಿಕ ನ್ಯಾಯದ ಸಾಧನೆಗಾಗಿ ತಮ್ಮೆಲ್ಲ ಚಿಂತನೆಗಳನ್ನು ಅದರಲ್ಲಿ ಸೇರಿಸಿದರು. ಇದೇ ಅವರು ಭಾರತಕ್ಕೆ ನೀಡಿದ ಅತ್ಯದ್ಬುತ ಕೊಡುಗೆ.

ಅಲ್ಪಸಂಖ್ಯಾತರಿಗೆ ಮತ್ತು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಸಂವಿಧಾನ ವಿಶೇಷ ಸಂರಕ್ಷಣೆ ನೀಡಿದೆ. ಭಾರತದಲ್ಲಿ ಬಹುಸಂಖ್ಯಾತರು ಎಂದರೆ ಬಹುಸಂಖ್ಯಾತ ಕೋಮಿನವರೇ ಆಗಿರುತ್ತಾರೆ. ಆದುದ್ದರಿಂದ ಇಲ್ಲಿ ಬಹುಸಂಖ್ಯಾತ ಕೋಮಿನ ಹಿತಾಸಕ್ತಿಯ ಪ್ರತಿನಿಧಿಗಳಾಗಿರುತ್ತಾರೆ, ಅಲ್ಪಸಂಖ್ಯಾತರ ರಕ್ಷಣೆಗೆ ಸಂವಿಧಾನದ ಚೌಕಟ್ಟು ತೋಡಿಸುವುದರಿಂದ ಬಹುಸಂಖ್ಯಾತರ ಹೇರಿಕೆಯನ್ನು ಅವರು ಸಮರ್ಥವಾಗಿ ತಡೆಯಬಲ್ಲರು.

ಭಾರತದಲ್ಲಿ ಮೇಲ್ಜಾತಿಯ ಬಹುಮತಸ್ಥರಿಗೂ ಅನಾದಿಕಾಲದಿಂದ ಇರುವ ತಾರತಮ್ಯವನ್ನು ತೊಡೆದು ಹಾಕಲು ಇಂಥ ವಿಶೇಷ ರಿಯಾಯಿತಿಗಳು ಅವಶ್ಯಕ. ಕಾಲ ಕ್ರಮೇಣ ಈ ಅಲ್ಪಸಂಖ್ಯಾತರು ರಾಷ್ಟ್ರೀಯ ಜೀವನದ ಮುಖ್ಯವಾಹಿನಿ ಸೇರುತ್ತಾ ಸಮಾರೊಪಗೊಂಡು ಕೊನೆಗೆ ಅಲ್ಪಸಂಖ್ಯಾತರೇ ಇಲ್ಲದೆ ಹೋಗಲು ಸಾಧ್ಯವಾಗುತ್ತದೆ, ಈ ಮೌನಕ್ರಾಂತಿಗೆ ಬೀಜ ಬಿತ್ತಿದವರು ಅಂಬೇಡ್ಕರ್, ಇದು ಈಗ ಭಾರತೀಯ ರಾಷ್ಟ್ರ ಜೀವನದ ಸಾಮಾಜಿಕ ಐಕಮತ್ಯದ ವೃದ್ಧಿಯಲ್ಲಿ ಅನುಕೂಲಕರವಾದ ಪರಿಣಾಮ ಬೀರುತ್ತದೆ.

ಸಾಮಾಜಿಕ ನ್ಯಾಯದ ಚಾಲಕಗಳು:
ಭಾರತದ ಸಂವಿಧಾನದಲ್ಲಿ ‘ವ್ಯಕ್ತಿ ಒಂದು ಮೌಲ್ಯ ಮತ್ತು ಒಬ್ಬ ವ್ಯಕ್ತಿ ಒಂದು ಮತ’ತತ್ವವನ್ನು ಅಡಕ ಮಾಡಲಾಗಿದೆ, ಇದರಿಂದ ಒಂದು ವ್ಯಕ್ತಿ ಸಮಾಜದ ಒಂದು ಅಂಶವಾಗಿ ಕಾನೂನಿನ ಅಡಿಯಲ್ಲಿ ಸಮಾನತೆಗೆ ಬದ್ಧನಾಗುತ್ತಾನೆ.ಇದರಿಂದ ಸಾಮಾಜಿಕ ಸಮಾನತೆ ಸಾಧಿಸಿದಂತಾಗುತ್ತದೆ.

‘ಒಬ್ಬ ವ್ಯಕ್ತಿ ಒಂದು ಮತ-ಒಂದು ಮೌಲ್ಯ’ ಆದರ್ಶವನ್ನು ಸಾಧಿಸಲು ಅಸ್ಪøಶ್ಯತೆಯನ್ನು ಆಚರಿಸುವುದು ಶಕ್ಷಾರ್ಹ ಅಪರಾಧವಾಗುತ್ತದೆ ಹಾಗಯೇ ತುಳಿತಕ್ಕೊಳಗಾದವರನ್ನು, ಬಲತ್ಕರಿಸಿ ಕೆಲಸ ಮಾಡಿಸುವುದು ಸಂವಿಧಾನಾತ್ಮಕವಾಗಿ ಅಪರಾಧವಾಗುತ್ತದೆ. ಇದರ ಜೊತೆಗೆ ಯಾವುದೇ ವೃತ್ತಿಯನ್ನು ಕೈಗೆತ್ತಿಕೊಳ್ಳುವ ಹಕ್ಕನ್ನು ಸಂವಿಧಾನ ದಯಪಾಲಿಸಿ ಚಲನರಹಿತ ಜಾತಿಗಳಿಗೆ ಚಲನಶೀಲತೆಯನ್ನು ತಂದುಕೊಟ್ಟಿದೆ.

ಹಾಗಯೇ ಅಭಿವ್ಯಕ್ತಿ ಸ್ವಾತಂತ್ರ್ಯ, ಉದ್ಯೋಗದ ಹಕ್ಕು, ಧಾರ್ಮಿಕ ಆಚರಣೆಯ ಸ್ವಾತಂತ್ರ್ಯದ ಹಕ್ಕನ್ನು ನೀಡಿ ಎಲ್ಲರೂ ಸಮಾನರೆಂಬ ವಿಶಾಲ ತಳಹದಿಯ ಮೇಲೆ ಸಂವಿಧಾನವನ್ನು ರಚಿಸಲಾಗಿದೆ. ಅಂಬೇಡ್ಕರ್ ಅವರು ಈ ದಿಕ್ಕಿನಲ್ಲಿ ನೀಡಿದ ಕೊಡುಗೆ ಮಹತ್ವಪೂರ್ಣವಾದುದ್ದು.

ದಮನಕ್ಕೊಳಪಟ್ಟ ಜನಾಂಗ ಮೂಲಭೂತ ಮಾನವೀಯ ಹಕ್ಕುಗಳನ್ನು ಅನಿರ್ಭಂಧೀತವಾಗಿ ಅನುಭವಿಸಲು ಅಂಬೇಡ್ಕರ್ ಅವರ ಕ್ರಾಂತಿಕಾರಕ ಬದಲಾವಣೆಗಳನ್ನು ಸಂವಿಧಾನದ ಮೂಲಕ ತಂದರು. ವಾಸ್ತವಾಗಿ ಸಾರ್ವಜನಿಕ ಜೀವನವನ್ನು ಪ್ರವೇಶಿಸಿದ ಕಾಲದಿಂದಲೂ ಅಂಬೇಡ್ಕರ್ ಅವರು ಸಮಾನತೆಗಾಗಿ ಸಾರಿದ ತತ್ವಗಳು ಮರು ಸೂತ್ರಿಕರಣಗೊಂಡು ಸಂವಿಧಾನದ ಪಾವಿತ್ರ್ಯತೆ ಪಡೆದವು ಎಂದೇ ಹೇಳಬಹುದು.

ಸಂವಿಧಾನದ 12ರಿಂದ 18ನೇ ಕಲಂಗಳು ವ್ಯಕ್ತಿಯನ್ನು ಕಾನೂನಿನ ಎದುರಿನಲ್ಲಿ ಸಮಾನವಾಗಿ ನೋಡುವ ಹಕ್ಕನ್ನು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧೀನದಲ್ಲಿರುವ ಎಲ್ಲಾ ನ್ಯಾಯೋಜಿತ ಅಧಿಕಾರ ಸಂಸ್ಥೆಗಳಿಗೆ ಪ್ರಜಾಸಮಾನತೆಯನ್ನು ಸಾಧಿಸಲು ಗುರುತರ ಜವಬ್ದಾರಿಯನ್ನು ನೀಡಲಾಗಿದೆ.

ಮಾನವೀಯ ಹಕ್ಕುಗಳನ್ನು ದಯಪಾಲಿಸುವುದು ಕೇವಲ ಶ್ರದ್ಧಾಭಕ್ತಿಯ ಗಂಭೀರ ಘೋಷಣೆಗಳಾಗಿ ಉಳಿಯುವ ಅಪಾಯವನ್ನು ಅಂಬೇಡ್ಕರ್ ಮನಗಂಡಿದ್ದರು ಎಂತಲೇ ಅವು ಫಲಪ್ರದವಾಗಲು ಅವುಗಳ ಉಲ್ಲಂಘನೆಯನ್ನು ಶಿಕ್ಷಾರ್ಹ ಅಪರಾಧವನ್ನಾಗಿಸಿದರು. ಇದರಿಂದಾಗಿ ಅಸ್ಪøಶ್ಯರು ಮತ್ತು ದುರ್ಬಲ ವರ್ಗದವರಿಗೆ ನಿರಾಕರಿಸಲಾದ ಮಾನವೀಯ ಹಕ್ಕುಗಳನ್ನು ಸಂವಿಧಾನದಲ್ಲಿ ರಕ್ಷಣೆ ಪಡೆದವು.

ಮೀಸಲಾತಿ:
‘ಮಿಸಲಾತಿ’ ಎಂಬುದು ಸಾಮಾಜಿಕ ನ್ಯಾಯವನ್ನು ಸಾಧಿಸಲು ಅನಿವಾರ್ಯವಾದ ವಿಧಾನ, ಇದಕ್ಕೆ ಅಂಬೇಡ್ಕರ್ ಸಂವಿಧಾನಾತ್ಮಕ ಪಾವಿತ್ರ್ಯತೆ ಮತ್ತು ಮಾನ್ಯತೆಯನ್ನು ಒದಗಿಸಿದರು. ದೇಶದ ಕೇಂದ್ರ ವiತ್ತು ರಾಜ್ಯಗಳ ಶಾಸಕಾಂಗಗಳಲ್ಲಿ ಪ್ರತಿನಿಧಿಸುವ ಹಕ್ಕನ್ನು ಮೀಸಲಾತಿ ಮೂಲಕ ನೀಡಲಾಯಿತು, ಇದರಿಂದ ದಲಿತರ ಮತ್ತು ದುರ್ಬಲರು ತಮ್ಮ ಪ್ರತಿನಿಧಿಗಳನ್ನು ಚುನಾಯಿಸುವ ಹಕ್ಕನ್ನು ನೀಡಿ ರಾಜಕೀಯವಾಗಿ ಅವರು ಸಕ್ರೀಯವಾಗಿ ಪಾಲ್ಗೋಳ್ಳುವಂತೆ ನೋಡಿಕೊಳ್ಳಲಾಯಿತು.

ಉದ್ಯೋಗಗಳಲ್ಲಿ, ಶಿಕ್ಷಣ ರಂಗಗಳಲ್ಲಿ ವಿಶೇಷ ಸವಲತ್ತು ಮೀಸಲಾತಿ ನೀತಿಯಿಂದ ನಿಮ್ನ ವರ್ಗದ ಜನತೆಗೆ ಶತಮಾನದಿಂದ ಬೆಂಬತ್ತಿದ ಕೀಳುರೀಮೆಯನ್ನು ಕೊಡವಿ ಎದ್ದು ನಿಲ್ಲುವಂತಾಯಿತು. ಅಂಬೇಡ್ಕರ್ ಮೂಕ ಜನತೆಗೆ ಬಾಯಿಯಾದರು. ಅವರು ಸದಾ ಬಗ್ಗಿ ನಡೆಯುತ್ತಿದ್ದ ನಡುವಿಗೆ ಶಕ್ತಿ ತುಂಬಿ ನಿಲ್ಲುವಂತೆ ಮಾಡಿದರು.

ಇದರಿಂದಾಗಿ ಈ ಜನಾಂಗದ ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ ಇತ್ಯಾದಿ ರಂಗಗಳಲ್ಲಿ ಅಭಿವೃದ್ಧಿ ಹೊಂದಿ ಇತರ ಜನಾಂಗದ ಜತೆ ಸಮಾನತೆ ಸಾರುವುದು ಈಗ ನಿಚ್ಚಳವಾಗಿದೆ. ಇದು ಅಂಬೇಡ್ಕರ್ ಅವರ ಕೊಡುಗೆಯಿಂದ ಸಾಧಿತವಾದ ಅಭೂತಪೂರ್ವಕಾರ್ಯ.

ಸಂವಿಧಾನದ 338ನೇ ವಿಧಿಯು ಅನುಸೂಚಿತ ಜಾತಿ ಮತ್ತು ಪಂಗಡಗಳ ಕಮೀಷನರ್ ನೇಮಕ್ಕೆ ಅವಕಾಶ ನೀಡುತ್ತದೆ. ರಾಷ್ಟ್ರಪತಿಯವರಿಂದ 6 ವರ್ಷಕ್ಕೆ ನೇಮಕಗೊಳ್ಳುವ ಕಮೀಷನರ್ ಅವರು ಭಾರತದ ಸಂವಿಧಾನ ಒದಗಿಸಿರುವ ಶಾಸನಸಭೆಗಳ ಪ್ರಾತಿನಿಧ್ಯ ಹಾಗೂ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತೆ ತನಿಖೆಯನ್ನು ಕೈಗೊಳ್ಳುವ ಅಧಿಕಾರ ಹೊಂದಿರುತ್ತಾರೆ.

ಇದರಿಂದಾಗಿ ಸಂವಿಧಾನದತ್ತ ರಕ್ಷಣೆಗಳು ಪರಿಣಾಮಕಾರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳಲಾಗುತ್ತದೆ. ದಮನಕ್ಕೊಳಗಾದ ಜನಗಳ ಹಿತಾಸಕ್ತಿಯನ್ನು ಸದಾ ಪ್ರತಿನಿಧಿಸುತ್ತಿದ್ದ ಸಾಹಸಿ ಹೋರಾಟಗಾರ ಅಂಬೇಡ್ಕರ್ ಅವರಿಗೆ ಈ ಕಾರ್ಯ ಸಾಧನೆಗಳ ಖ್ಯಾತಿ ಸಲ್ಲಬೇಕು.

ಸಾಮಾಜಿಕ ನ್ಯಾಯಕ್ಕೆ ಡಾ.ಅಂಬೇಡ್ಕರ್ ನೀಡಿದ ಮೂರ್ತರೂಪ ಮತ್ತು ಸಾಧನೆ ಇಪ್ಪತ್ತನೇಯ ಶತಮಾನಕ್ಕೆ ಅವರು ಸಲ್ಲಿಸಿದ ಕಾಣಿಕೆ. ನಿರಂಕುಶಾಧಿಕಾರಿ ಮತ್ತು ಮತ ಧವರ್iಗಳ ಕಟ್ಟುಪಾಡುಗಳಿಂದ ಮುಕ್ತವಾದ ಸಮಾನತೆಯ ಆಧಾರದ ಮೇಲೆ ರಚಿತವಾದ ಸಮಾಜ ‘ಸಮಾಜಿಕ ನ್ಯಾಯ’ದ ತಳಹದಿಯ ಮೇಲೆ ರಚಿತವಾಗಿರಬೇಕೆಂಬ ಸೂತ್ರಕ್ಕೆ ಅವರು ಬದ್ಧರಾಗಿದ್ದರು. ಅಂಬೇಡ್ಕರ್ ಅವರ ಕಾಣಿಕೆಯ ಮಹತ್ವ ಕಾಲ ಸಂದಂತೆ ಹೆಚ್ಚು ನಿಚ್ಚಳವಾಗುತ್ತದೆ.

ಡಾ. ಹಣಮಂತ್ರಾಯ ಸಿ. ಕರಡ್ಡಿ ಪಿಎಚ್,ಡಿ ಉಪನ್ಯಾಸಕರು,
 ಸಮಾಜಕಾರ್ಯ ಅಧ್ಯಯನ ವಿಭಾಗ ಗುಲಬರ್ಗಾ ವಿಶ್ವವಿದ್ಯಾಲಯ.
 ಸ್ನಾತಕೋತ್ತರ ಕೇಂದ್ರ ರಾಯಚೂರ 9886108774.

Related Articles

Leave a Reply

Your email address will not be published. Required fields are marked *

Back to top button