ಎಳ್ಳಾಮವಾಸ್ಯೆ ಬೆಳೆಗೆ ಚರಕ ಹೊಯ್ದು ಖುಷಿಪಟ್ಟ ರೈತ ಕುಟುಂಬ
ಸುಗ್ಗಿಕಾಲಃ ಬೆಳೆಗಳಿಗೆ ಚರಕ ಸಂಭ್ರಮದ ಊಟ
ಉತ್ತಮ ಫಸಲಿಗಾಗಿ ಭೂತಾಯಿ ಪೂಜೆ ಸಲ್ಲಿಕೆ, ಹಬ್ಬದೂಟ ಸವಿದು ಸಂಭ್ರಮಿಸುವ ದಿನ
ಶಹಾಪುರಃ ಮಂಗಳವಾರ ಎಳ್ಳಾಮವಾಸ್ಯೆ ನಿಮಿತ್ತ ರೈತಾಪಿ ಜನರು ಬೆಳ್ಳಂಬೆಳಗ್ಗೆ ಹೊಲಕ್ಕೆ ಹೋಗಿ ಮೊದಲೇ ಸಿದ್ಧ ಪಡಿಸಿಕೊಂಡಿದ್ದ ಎಳ್ಳೆಚ್ಚು ಸಜ್ಜೆ ರೊಟ್ಟಿ, ಇಂಡಿ ಪಲ್ಯಾ, ಭರ್ತಾ, ಕಡಬು, ಸೇಂಗಾದ ಹೋಳಿಗೆ, ಮೊಸರು ಅನ್ನ ಸೇರಿದಂತೆ ಖಾದ್ಯ ಪದಾರ್ಥಗಳನ್ನು ತಯಾರಿಸಿಕೊಂಡು ಹೊಲಕ್ಕೆ ತೆರಳಿ ಜಮೀನಿನಲ್ಲಿನ ಬೆಳೆಗಳಿಗೆ ಈ ಎಲ್ಲಾ ಪದಾರ್ಥಗಳನ್ನು ಉಣ ಬಡಿಸಿ ಬನ್ನಿ ಗಿಡಕ್ಕೆ ಭೂಮಿ ಪೂಜೆ ಸಲ್ಲಿಸಿ ಉತ್ತಮ ಮಳೆ ಬೆಳೆಗೆ ಪ್ರಾರ್ಥನೆ ಸಲ್ಲಿಸಿ ನಂತರ ಕುಟುಂಬಸ್ಥರು, ಸ್ನೇಹಿತರು ಸಾಮೂಹಿಕವಾಗಿ ಹಬ್ಬದೂಟ ಸವಿಯುವದು ವಾಡಿಕೆ.
ಅದರಂತೆ ಮಂಗಳವಾರ ನಗರದ ಹೊರ ವಲಯದಲ್ಲಿರುವ ನೀಲಪ್ಪ ಸಾಹು ಚೌದ್ರಿ ಅವರು ಕುಟುಂಬ ಸಮೇತ ತಮ್ಮ ಜೋಳದ ಹೊಲಕ್ಕೆ ತೆರಳಿ ಚರಕ ಒಯ್ದು, ಭೂತಾಯಿಗೆ ಪೂಜೆ ಸಲ್ಲಿಸಿ ಕುಟುಂಬಸ್ಥೆರೆಲ್ಲರೂ ಹಬ್ಬದೂಟ ಸವಿದರು.
ಎಳ್ಳಾಮವಾಸ್ಯೆ ರೈತಾಪಿ ಜನರ ಹಬ್ಬ, ಹೊಲದಲ್ಲಿ ಬೆಳೆ ಚಿಗರೊಡೆದಿರುತ್ತದೆ. ಬೆಳೆಗಳನ್ನು ನೋಡಿ ಜನ ಕುಷಿ ಪಡೆಯುತ್ತಾರೆ. ಭೂತಾಯಿಗೆ ಚನ್ನಾಗಿ ಫಸಲು ನೀಡು ತಾಯಿ ಎಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಎಲ್ಲರೊಂದಿಗೆ ಹೊಲದಲ್ಲಿ ಸುತ್ತಾಡಿ ಬೆಳೆಯ ಬೆಳವಣಿಗೆ ನೋಟ ಸವಿದು, ಹೊಟ್ಟೆ ತುಂಬ ಸಿಹಿ ಬೋಜನ ಸವಿದು ಹಸಿರುಮಯ ವಾತಾವರಣದಲ್ಲಿ ಒಂದಿಷ್ಟು ಸಮಯ ಕಳೆದು ಬರುವದೇ ಎಳ್ಳಾಮವಾಸ್ಯೆ ಸುದಿನವಾಗಿದೆ.
ಈ ದಿನ ಭೂತಾಯಿಗೆ ಪೂಜೆ ಸಲ್ಲಿಸುವದು ರೈತಾಪಿ ಜನರ ಪದ್ಧತಿ. ಅಲ್ಲದೆ ಬೆಳಗ್ಗೆ ಜಾನುವಾರುಗಳನ್ನು ತೊಳೆದು ಅವುಗಳ ಶ್ರಮಕ್ಕೆ ಗೌರವಿಸಿ ಬೆಳ್ಳಂಬೆಳಗ್ಗೆ ಅವುಗಳಿಗೂ ಪೂಜೆ ಸಲ್ಲಿಸಿ ಹೋಳಿಗೆ ಅನ್ನ ಉಣಿಸಿ ಪ್ರೀತಿಸುವ ಗೌರವಿಸುವ ದಿನ. ರೈತರು ಸಂಭ್ರಮ ಖುಷಿ ಪಡುವ ಹಬ್ಬ ಇದಾಗಿದೆ ಎನ್ನುತ್ತಾರೆ ರೈತ ನೀಲಪ್ಪ ಚೌದ್ರಿ.