ವಿನಯ ವಿಶೇಷ

ಹತ್ತಿ ನೂಲುವ ಘಟಕ ಸ್ಥಾಪನೆಗೆ ಅಗತ್ಯ ಕ್ರಮಕೈಗೊಳ್ಳಿ-ಕೂರ್ಮಾರಾವ್

 

ಯಾದಗಿರಿಃ ಜಿಲ್ಲೆಯ ರೈತರು ಹೆಚ್ಚಿನ ಪ್ರಮಾಣದಲ್ಲಿ ಹತ್ತಿ ಬೆಳೆಯುತ್ತಿರುವುದರಿಂದ ಹತ್ತಿ ನೂಲುವ (ಸ್ಪಿನ್ನಿಂಗ್) ಘಟಕ ಸ್ಥಾಪನೆಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಿಂದ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿಯ 31ನೇ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.

ಸ್ಥಳೀಯವಾಗಿ ಹತ್ತಿ ನೂಲುವ ಘಟಕ ಸ್ಥಾಪನೆಯಾದಲ್ಲಿ ಜಿಲ್ಲೆಯ ರೈತರಿಗೆ ಹೆಚ್ಚಿನ ಲಾಭ ದೊರೆಯುತ್ತದೆ. ಹಾಗಾಗಿ, ಕಡೇಚೂರ ಕೈಗಾರಿಕಾ ಪ್ರದೇಶದಲ್ಲಿ ಹತ್ತಿ ನೂಲುವ ಘಟಕ ಸ್ಥಾಪನೆಗಾಗಿ ಹೊಸ ಉದ್ದಿಮೆದಾರರನ್ನು ಗುರುತಿಸಲು ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ತಿಳಿಸಿದ ಜಿಲ್ಲಾಧಿಕಾರಿಗಳು, ಘಟಕ ಸ್ಥಾಪನೆಗೆ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ನೆರವು ಬೇಕಾದರೆ ಪ್ರಸ್ತಾವನೆ ಸಲ್ಲಿಸಿ. ಎಚ್‍ಕೆಆರ್‍ಡಿಬಿ ಕಾರ್ಯದರ್ಶಿಗಳು ಜಿಲ್ಲೆಗೆ ಆಗಮಿಸಿದಾಗ ಅವರ ಗಮನಕ್ಕೆ ತರಲಾಗುವುದು ಎಂದರು.

ಬಂದಳ್ಳಿ ಹೈಟೆಕ್ ಜವಳಿ ತರಬೇತಿ ಕೇಂದ್ರದ ಸ್ಥಿತಿಗತಿ ಕುರಿತು ಜಿಲ್ಲಾಧಿಕಾರಿಗಳು ಪ್ರಶ್ನಿಸಿದಾಗ, ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದ 10 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಜವಳಿ ತರಬೇತಿ ಕೇಂದ್ರ ಆರಂಭಿಸಲು ಮಂಜೂರಾತಿ ನೀಡಲಾಗಿದೆ.

ಕಟ್ಟಡ ಕಾಮಗಾರಿ ಚಾಲ್ತಿಯಲ್ಲಿದೆ. 10 ಕೋಟಿ ರೂ. ಪೈಕಿ 5 ಕೋಟಿ ರೂ. ಮಂಜೂರಾತಿ ಆಗಿದ್ದು, 2.51 ಕೋಟಿ ರೂ. ಈಗಾಗಲೇ ಬಿಡುಗಡೆಯಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರು ಮಾಹಿತಿ ನೀಡಿದರು.

ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಬಾಕಿ ಹಣ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಲ್ಲಾ ವಾಣಿಜ್ಯ ಸಂಸ್ಥೆ (ಚೇಂಬರ್ ಆಫ್ ಕಾಮರ್ಸ್) ಕಟ್ಟಡ ನಿರ್ಮಾಣಕ್ಕೆ ಮುಂಡರಗಿ ಕೈಗಾರಿಕಾ ಪ್ರದೇಶದಲ್ಲಿ ಸ್ಥಳ ನೀಡುವಂತೆ ಸಮಿತಿಯನ್ನು ಕೋರಲಾಗಿದೆ. ಅದರಂತೆ ಈ ಸಂಸ್ಥೆಯ ಕಚೇರಿ ನಿರ್ಮಾಣಕ್ಕೆ ಸ್ಥಳ ಗುರುತಿಸಬೇಕು ಎಂದು ಹೇಳಿದರು. ಆಗ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಅಭಿವೃದ್ಧಿ ಅಧಿಕಾರಿ ಪ್ರಕಾಶ ಟಿ.ಎಸ್. ಅವರು ಮಾತನಾಡಿ, ಮುಂಡರಗಿ ಕೈಗಾರಿಕಾ ಪ್ರದೇಶದ ನೀರಿನ ಟ್ಯಾಂಕ್ ಪ್ರದೇಶದಲ್ಲಿ ಸ್ಥಳ ಲಭ್ಯವಿದೆ ಎಂದು ತಿಳಿಸಿದರು.

ಕಡೇಚೂರ ಕೈಗಾರಿಕಾ ಪ್ರದೇಶದಲ್ಲಿ ಅವಶ್ಯವಿರುವ 110 ಕೆ.ವಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಸಂಬಂಧಪಟ್ಟಂತೆ ಸೆಪ್ಟೆಂಬರ್‍ನಲ್ಲಿ ನಡೆದ ಸಭೆಯಲ್ಲಿ ನೀಡಿದ ಉತ್ತರವೇ ಈ ಸಭೆಯಲ್ಲಿ ಕೇಳಿಬರುತ್ತಿದೆ. ಮೂರು ತಿಂಗಳಾದರೂ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದು ಜಿಲ್ಲಾಧಿಕಾರಿಗಳು ಜೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮುಂಡರಗಿ ಕೈಗಾರಿಕಾ ಪ್ರದೇಶದಲ್ಲಿ ಸ್ಟ್ರೀಟ್ ಲೈಟ್ ಸೇರಿದಂತೆ ಇತರೆ ಮೂಲ ಸೌಲಭ್ಯಗಳ ಬಗ್ಗೆ ಕೆಐಎಡಿಬಿ ಮತ್ತು ನಗರಸಭೆ ಎಂಜಿನಿಯರ್‍ಗಳು ಜಂಟಿಯಾಗಿ ಪರಿಶೀಲಿಸಬೇಕು. ನಂತರ ಈ ಪ್ರದೇಶವನ್ನು ಕರ ವಸೂಲಿಗಾಗಿ ನಗರಸಭೆಗೆ ಹಸ್ತಾಂತರಿಸುವಂತೆ ಕೆಐಎಡಿಬಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗಾಗಿ ಉದ್ದಿಮೆದಾರರನ್ನು ಉತ್ತೇಜಿಸಬೇಕು. ಆದರೆ, ಅವರಿಗೆ ಮೊದಲು ಕೈಗಾರಿಕಾ ಪ್ರದೇಶದ ಮೂಲ ಉದ್ದೇಶ ತಿಳಿಸಬೇಕು. ವಿವಿಧ ಘಟಕ ಸ್ಥಾಪನೆಗೆ ಬೇಕಾಗುವ ಸ್ಥಳದ ಅವಶ್ಯಕತೆ, ನಿಗದಿತ ದಾಖಲೆಗಳನ್ನು ಪಡೆದ ನಂತರವೇ ಪಾರದರ್ಶಕವಾಗಿ ಭೂ ಹಂಚಿಕೆ ಮಾಡಬೇಕು ಎಂದು ಅವರು ತಿಳಿಸಿದರು.

ಯಾದಗಿರಿ ಮಹತ್ವಾಕಾಂಕ್ಷೆ ಜಿಲ್ಲೆಯಾಗಿರುವುದರಿಂದ ವಿವಿಧ ಕಚೇರಿಗಳ ಸ್ಥಾಪನೆಗೆ ಸುವರ್ಣಾವಕಾಶವಾಗಿದೆ. ಕೇಂದ್ರ ಸರ್ಕಾರದ ಸಚಿವರು, ನೋಡಲ್ ಅಧಿಕಾರಿಗಳು ನೇರ ಸಂಪರ್ಕದಲ್ಲಿರುತ್ತಾರೆ. ಅವರು ಪ್ರತಿ ಬಾರಿಯೂ ಜಿಲ್ಲೆಗೆ ಏನು ಸೌಲಭ್ಯ ಬೇಕು ಎಂದು ಕೇಳುತ್ತಿರುತ್ತಾರೆ. ಆದ್ದರಿಂದ ಜಿಲ್ಲೆಗೆ ಅವಶ್ಯವಿರುವ ಕಚೇರಿ, ಅಭಿವೃದ್ಧಿ ಕಾಮಗಾರಿಗಳ ಕುರಿತು ಇಚ್ಛಾಶಕ್ತಿಯಿಂದ ಲಿಖಿತ ಪ್ರಸ್ತಾವನೆ ಸಲ್ಲಿಸಿದರೆ, ಜಿಲ್ಲೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಅವರು ಸಲಹೆ ನೀಡಿದರು.

ನಗರಸಭೆ ಪೌರಾಯುಕ್ತರಾದ ಸಂಗಪ್ಪ ಉಪಾಸೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೆಶಕರಾದ ಮಹಮ್ಮದ್ ಇರ್ಫಾನ್, ಜಂಟಿ ಕೃಷಿ ನಿರ್ದೇಶಕರಾದ ದೇವಿಕಾ ಆರ್., ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಆರ್.ಗೋಪಾಲ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕರಾದ ರೇಖಾ ಎನ್.ಮ್ಯಾಗೇರಿ, ಕೆಐಎಡಿಬಿ ಉಪ ಅಭಿವೃದ್ಧಿ ಅಧಿಕಾರಿ ಸುಭಾಶ್ ನಾಯಕ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

 

Related Articles

Leave a Reply

Your email address will not be published. Required fields are marked *

Back to top button