ವಿನಯ ವಿಶೇಷ

ಹೈಕ ವಿಮೋಚನೆಗಾಗಿ ಹೋರಾಡಿದ ಸಗರನಾಡಿನ ಸರದಾರ

ನಿಜಾಮನ ಪಡೆ ಬೆಚ್ಚಿ ಬೀಳುವಂತೆ ಮಾಡಿದ್ದ ಅಚ್ಚಪ್ಪ

ಸ್ವಾತಂತ್ರ್ಯ ಹೋರಾಟಗಾರರ ಶೌರ್ಯ, ಧೈರ್ಯ ಮೆಚ್ಚುಗೆಗೆ ಪಾತ್ರ

– ಬಸವರಾಜ ಸಿನ್ನೂರ.
ಅಂದು 1947ರ ಸಮಯದಲ್ಲಿ ಒಂದೆಡೆ ದೇಶ ಪರಕೀಯರ ಅಧೀನದಿಂದ ಮುಕ್ತಿ ಪಡೆದು ಸ್ವಾತಂತ್ರ್ಯದ ವಿಜಯೋತ್ಸವದಲ್ಲಿತ್ತು. ಇನ್ನೊಂದೆಡೆ ನಿಜಾಮರ ದಾಸ್ಯದಿಂದ ನರಕಯಾತನೆಯನ್ನು ಅನುಭವಿಸುತ್ತಿತ್ತು. ಈ ಪ್ರದೇಶ ಅಂದರೆ ಹೈದರಾಬಾದ ಕರ್ನಾಟಕದ ಕಲಬುರಗಿ, ಬೀದರ, ಬಳ್ಳಾರಿ, ರಾಯಚೂರು, ಕೊಪ್ಪಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪ್ರದೇಶಗಳು ನಿಜಾಮನ ಅಧೀನದಲ್ಲಿದ್ದವು.

ಆತನ ಸಾಮ್ರಾಜ್ಯವು ಭಾರತದೊಂದಿಗೆ ವಿಲೀನಗೊಳಿಸಲು ನಿರಾಕರಿಸಿದ್ದಕ್ಕಾಗಿ ಅಂದಿನ ಗೃಹಮಂತ್ರಿ ‘ಸರದಾರ ವಲ್ಲಭಭಾಯಿ ಪಟೇಲ’ರ ನೇತೃತ್ವದಲ್ಲಿ ಸಾವಿರಾರು ಜನ ನಿಜಾಮರ ವಿರುದ್ಧ ಹೋರಾಟಕ್ಕೆ ಸಜ್ಜಾದರು. ಅವರ ಬಲಿದಾನ, ತ್ಯಾಗ, ಪ್ರೀತಿ, ಶೌರ್ಯ ನಿಜಕ್ಕೂ ಮೆಚ್ಚವಂತಹದ್ದೆ. ಮುಂದೆ ಆತನ ಸಾಮ್ರಾಜ್ಯವನ್ನು ಭಾರತದ ಒಕ್ಕೂಟದಲ್ಲಿ ವಿಲೀನಗೊಳಿಸಲಾಯಿತು.

ಈ ದಿನವನ್ನು “ಹೈದರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆ” ಎಂದು ಆಚರಿಸಲಾಯಿತು. ರಜಾಕಾರರ ಹಾವಳಿಯಿಂದ ಜನತೆ ತತ್ತರಿಸಿ ಹೋಗಿ ಸಾವು ನೋವುಗಳನ್ನು ಸಾಕಷ್ಟು ಅನುಭವಿಸಿದ್ದರು. ರಜಾಕಾರರ ಹಾವಳಿಯಿಂದ ಜನರನ್ನು ಪಾರು ಮಾಡಲು ಈ ಗೌಡರು ನಿಜಾಮರ ವಿರುದ್ದ ಟೊಂಕ ಕಟ್ಟಿ ನಿಂತು ಯುದ್ಧ ಭೂಮಿಯಲ್ಲಿ ಸೆಣಸಾಡಿ ಹೈದರಾಬಾದ ಕರ್ನಾಟಕದ ಗೆಲುವಿನ ಕಹಳೆ ಮೊಳಗಿಸಿದರು. ವೀರ ಕೆಚ್ಚೆದೆಯ ಧೀರ ನಾಯಕ ಸಗರ ಅಚ್ಚಪ್ಪಗೌಡ ಸುಬೇದಾರ.

ಹೈಕ ಭಾಗದಲ್ಲಿ ಅಚ್ಚಪ್ಪಗೌಡರ ಪಾತ್ರ

ಅಚ್ಚಪ್ಪಗೌಡರು ಶಹಾಪುರ ತಾಲ್ಲೂಕಿನ ಸಗರ ಗ್ರಾಮದ ಶರಣಪ್ಪಗೌಡ ಗಂಗಮ್ಮ ಸುಬೇದಾರ ಎಂಬ ದಂಪತಿಗಳ ಮಗನಾಗಿ 1925 ಫೆಬ್ರುವರಿ 18 ರಂದು ಜನಿಸಿದರು.

ಕಲಬುರ್ಗಿ ಮತ್ತು ಹೈದರಾಬಾದನಲ್ಲಿ ವಿದ್ಯಾಭ್ಯಾಸ ಮುಗಿಸಿ ಮುಂದೆ ಭಂಟನೂರ ಗ್ರಾಮದಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದರು. ಆ ದಿನಗಳಲ್ಲಿ ಆಂಗ್ಲರ ದಬ್ಬಾಳಿಕೆ ಮತ್ತು ರಜಾಕಾರರ ವಿರುದ್ಧ ಸಿಡಿದೆದ್ದರು. ಬೆಳಗಾವಿಯ ಹೋರಾಟಕ್ಕೆ ಕಂಕಣ ಬದ್ಧರಾದರು.

ಯಾವ ಯಾವ ಪ್ರದೇಶಗಳ ಮೇಲೆ ಅವರು ದಾಳಿ ಮಾಡಿ ಅನ್ಯಾಯ ಅತ್ಯಾಚಾರ, ಕೊಲೆ ಸುಲಿಗೆ ಮಾಡಿದ್ದಾರೋ ಅಂತಹ ಎಲ್ಲಾ ಗ್ರಾಮಗಳಿಗೆ ತಿರುಗಾಡಿ, ಸಮೀಕ್ಷೆ ಮಾಡಿ ಅಲ್ಲಿಯ ನೊಂದ ಜನತೆಗೆ ಸಾಂತ್ವನ ಹೇಳಿ, ಅವರಲ್ಲಿ ಧೈರ್ಯ ತುಂಬಿ ಅವರು ವಿರುದ್ಧ ಹೋರಾಡುವುದಕ್ಕೆ ಹುರಿದುಂಬಿಸುತ್ತಿದ್ದರು.

ಮನೆ ಬಿಟ್ಟು ಬಂದವರಿಗೆ ಆಶ್ರಯ ಕೊಟ್ಟು ಅವರಿಗೆ ಹಲವಾರು ರೀತಿಯ ಕುಸ್ತಿ, ಗುಂಡು ಎತ್ತುವುದು, ಎತ್ತರ ಜಿಗಿತ, ಉದ್ದ ಜಿಗಿತ, ಭಾರ ಹೊರುವುದು ಮುಂತಾದ ಸಾಹಸಮಯ ಕೆಲಸಗಳಲ್ಲಿ ತರಬೇತಿ ನೀಡುವುದರಲ್ಲಿ ನಿರತರಾಗಿರುತ್ತಿದ್ದರು. ಸುಮಾರು 300 ಜನರ ಸ್ವಯಂ ಸೇವಕರನ್ನು ನೇಮಿಸಿಕೊಂಡು ಅವರಿಗೂ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದರು.

ಗೌಡರ ಬಾಲ್ಯದಿಂದಲೂ ಕ್ರೀಯಾಶೀಲರಾಗಿದ್ದ ರಾಯಪ್ಪ ಮತ್ತು ಹಣಮಂತ ಅಚ್ಚಪ್ಪ ಗೌಡರ ಆಪ್ತರಾಗಿದ್ದರು. ಅವರೊಂದಿಗೆ ಕುದುರೆ ಸವಾರಿ, ಶಸ್ತ್ರ ತರಬೇತಿಯಲ್ಲಿ ತೊಡಗುತ್ತಿದ್ದರು. ಖಾಕಿ ಟೋಪಿ, ಖಾಕಿ ಉಡುಪು, ಕಾಲಲ್ಲಿ ಬೂಟು, ಕೈಯಲ್ಲಿ ಬಂದೂಕ ನಿತ್ಯವೂ ಪರೇಡ ನಡೆಸುತ್ತಿದ್ದರು. ನೋಡುವುದಕ್ಕೆ ನೇತಾಜಿ ರೂಪದಲ್ಲಿ ಕಾಣುತ್ತಿದ್ದರು. ಅವರ ಮಾತಂತೂ ಮಾಣಿಕ್ಯದಂತೆ ಅವರ ಜೀವನದ ಮಾತಿಗೆ ಇಂದು ಜನಪದ ಮಹಿಳೆಯರ ಒಂದು ಹಾಡಿನ ತುಣುಕು ಹೀಗಿದೆ.

‘ಪುಂಡಿಯ ಕಟಿಗ್ಯಾಗ
ಕೆಂಡ ಒಗೆದವರ್ಯಾರ
ಪುಂಡ ಸಗರದ ಅಚ್ಚಪ್ಪಗೌಡರಾಡಿದ
ಮಾತ
ಬಂಡೀಗ ಕೀಲ ಜಡಿದಂಗ’

ಭಂಟನೂರು ಕ್ಯಾಂಪಿನಲ್ಲಿ ಬ್ಯಾರಿಸ್ಟರ್ ವೆಂಕಟಪ್ಪ ನಾಯಕ ಮತ್ತು ಅಪ್ಪಾರಾವ ವಕೀಲ ಹಾಗೂ ಸುಬೇದಾರರು ರಜಾಕಾರರ ವಿರುದ್ಧ ಹೋರಾಟದ ಯೋಜನೆ ಹಾಕುತ್ತಿದ್ದರು. ಸುತ್ತಮುತ್ತಲಿನ ಹಳ್ಳಿಗಳ ಮೇಲೆ ರಾತ್ರೋರಾತ್ರಿ ಗಸ್ತು ತಿರುಗುತ್ತಿದ್ದರು. ರಜಾಕಾರರ ವಿರುದ್ಧ ನೇರವಾಗಿ ಸಂಘರ್ಷಕ್ಕಿಳಿದು ಅವರೊಂದಿಗೆ ಸೆಣಸಾಡಿ ಏಟಿಗೆ ಪ್ರತಿ ಏಟು ಕೊಡುತ್ತಿದ್ದರು.

ಕೈಯಲ್ಲಿ ಯಾವಾಗಲೂ ಬಂದೂಕು, ಮದ್ದು ಗುಂಡುಗಳಿಡಿದು ತಿರುಗುತ್ತಿದ್ದರು. ರಜಾಕಾರರಿಂದ ಲೂಟಿ ಮಾಡಿದ ಹಣ, ದವಸ-ಧಾನ್ಯಗಳನ್ನು ಬಂಡಿಗಳಲ್ಲಿ ಕ್ಯಾಂಪಿಗೆ ಸಾಗಿಸುತ್ತಿದ್ದರು. ಅವುಗಳನ್ನು ನೊಂದ ಬಡ ಜನರಿಗೆ ಹಂಚುತ್ತಿದ್ದರು ಎಂದು ಇಂದಿಗೂ ಸ್ವಾತಂತ್ರ್ಯ ಹೋರಾಟಗಾರ ಮಲ್ಲಪ್ಪ ನಂದಿಕೋಲ ನೆನಪಿಸುತ್ತಾರೆ.

ಅಚ್ಚಪ್ಪಗೌಡರು ಮೊದಲಿನಿಂದಲೂ ಬಳ್ಳಾರಿ ಉಮರ್‍ನ ಕಣ್ಣಲ್ಲಿ ನೆಟ್ಟಿದ್ದರು. ಗೌಡರನ್ನು ಹತ್ಯೆಗೈಯುವುದಕ್ಕೆ ಬಳ್ಳಾರಿ ಉಮರ್ ಒಳಸಂಚು ರೂಪಿಸಿದ್ದ. ಒಂದು ದಿನ ಸಗರ ಚಾವಡಿಯಲ್ಲಿ ಕುಳಿತಿದ್ದ ಗೌಡರ ಮೇಲೆ ಹಠಾತ್ತನೆ ಉಮರ್ ದಾಳಿ ಮಾಡಿದ. ಗೌಡರನ್ನು ತಲವಾರದಿಂದ ಸದೆಬಡಿಯುವುದಕ್ಕೆ ಪ್ರಯತ್ನಿಸಿದ. ಗೌಡರು ತಮ್ಮ ಕೈಯಲ್ಲಿನ ಖಡ್ಗದಿಂದ ತಪ್ಪಿಕೊಳ್ಳುತ್ತ ಉಮರ್ ವಿರುದ್ಧ ಹೋರಾಡುತ್ತಾರೆ.

ಅಷ್ಟಾದರೂ ಉಮರ್‍ನಿಂದ ಗೌಡರ ಮುಖದ ಮೇಲೆ ಬಲವಾದ ಏಟು ಬೀಳುತ್ತೆ. ರಕ್ತಗಾಯಗಳಾಗುತ್ತವೆ. ಅಷ್ಟರಲ್ಲಿ ಗಲಾಟೆ ನಡೆದಿದ್ದನ್ನು ಕೇಳಿದ ಪಕ್ಕದ ಹೊನಕಲ್ ಕಿರಾಣಿ ಅಂಗಡಿಯ ಗುಮಾಸ್ತನಾದ ಅಡಿವೆಪ್ಪ ಕೆಂಭಾವಿ ಎಂವರು ಅಂಗಡಿಯಲ್ಲಿನ ತೂಕದ ಕಲ್ಲಿನಿಂದ ನೇರವಾಗಿ ಗುರಿಯಿಟ್ಟು ಉಮರನ ತಲೆಗೆ ಹೊಡೆಯುತ್ತಾನೆ.

ಆಗ ಉಮರನ ತಲೆಗೆ ಪೆಟ್ಟು ಬಿದ್ದುದರಿಂದ ದಿಗ್ಭ್ರಮೆಗೊಂಡು ಆತ ಕಕ್ಕಾಬಿಕ್ಕಿಯಾಗಿ ಪಲಾಯನಗೈಯ್ಯುತ್ತಾನೆ. ಆಗ ಅಲ್ಲಿ ನೆರೆದಿದ್ದ ಗ್ರಾಮದ ಜನ ಅವನನ್ನು ಬೆನ್ನಟ್ಟಿಸಿಕೊಂಡು ಹೋಗುತ್ತಾರೆ. ಊರಿನ ಶಂಕನಾರಾಯಣನ ಕೆರೆಯಲ್ಲಿ ಆತನು ದಮ್ಮು ಗಟ್ಟಿ ಜನರ ಕೈಗೆ ಸಿಕ್ಕಿ ಬೀಳುತ್ತಾನೆ. ಆಗ ಎಲ್ಲರೂ ಕಲ್ಲು ದೊಣ್ಣೆಗಳಿಂದ ಉಮರ್‍ನನ್ನು ಥಳಿಸಿ ಹತ್ಯೆಗೈದು ಆತನ ಮೃತದೇಹವನ್ನು ಕರೆಯ ದಂಡೆಗೆ ಎಳೆದು ತಂದು ಸುಡುತ್ತಾರೆ.

ಮುಂದೆ ಗೌಡರನ್ನು ಪಲ್ಲಕ್ಕಿಯಲ್ಲಿ ಹೊತ್ತು ಹತ್ತಿಗೂಡುರ ಮಾರ್ಗವಾಗಿ ಚಿಕಿತ್ಸೆಗೆಂದು ಹೈದರಾಬಾದಿಗೆ ಸಾಗಿಸುತ್ತಾರೆ.
ಭಂಟನೂರ ಕ್ಯಾಂಪ ಹಾಗೂ ಹುಣಸಗಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇಷ್ಟೆಲ್ಲಾ ಕದನಗಳಾದರೆ ಸುರಪುರದಲ್ಲಿ ಇದರ ಸುದ್ದಿಯೇ ಇರಲಿಲ್ಲ.

ಹೀಗೆ ಸ್ವಾತಂತ್ರ್ಯದ ಸಲುವಾಗಿ ಮನೆ-ಮಾರು, ಹೆಂಡತಿ-ಮಕ್ಕಳು ಬಿಟ್ಟು ಭಂಟನೂರ ಕ್ಯಾಂಪಿನಲ್ಲಿ ಸೇನೆ ಕಟ್ಟಿಕೊಂಡು ನಿರಂತರವಾಗಿ ಹೈದರಾಬಾದ ಕರ್ನಾಟಕದ ವಿಮೋಚನೆಗಾಗಿ ಮತ್ತು ಏಳಿಗೆಗಾಗಿ ಗೌಡರು ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ಗೌಡರ ನಿರಂತರ ಹೋರಾಟ ಜೀವನದ ಆದರ್ಶ ತತ್ವಗಳು ಇಂದಿಗೂ ಬದುಕುಳಿದಿವೆ. ಆದರೆ ಗೌಡರ ಹೋರಾಟದ ಅರಿವು ಇಂದಿನ ಯುವಕರಿಗಿಲ್ಲ.

ಸಾರ್ಥಕ ಬದುಕಿನಿಂದ ಬಾಳಿದ ಅಚ್ಚಪ್ಪಗೌಡರು 1983 ಡಿಸೆಂಬರ್ 3 ರಂದು ವಿಧಿವಶರಾದಾಗ ಸಗರನಾಡಿಗೆ ಕತ್ತಲಾವರಿದಂತಾಗಿ ಜನರೆಲ್ಲರೂ ದುಃಖದ ಮಡುವಿನಲ್ಲಿ ಮುಳುಗಿದ್ದರು. ಅವರು ಅಗಲಿ 25 ವರ್ಷಗಳು ಗತಿಸಿದರೂ ಅವರ ವೀರಗಾಥೆ ಮಾತ್ರ ಇನ್ನೂ ಜೀವಂತವಾಗಿದೆ.

Related Articles

Leave a Reply

Your email address will not be published. Required fields are marked *

Back to top button