ನಿಜವಾದ ಸ್ನೇಹಿತ ಈ ಕಥೆ ಓದಿ
ದಿನಕ್ಕೊಂದು ಕಥೆ
ನಿಜವಾದ ಸ್ನೇಹಿತ
ಒಂದೂರಿನಲ್ಲಿ ಮಹಾದೇವ ಎಂಬ ವ್ಯಕ್ತಿಯಿದ್ದ. ಇವನು ತುಂಬಾ ಓದಿ, ಪದವಿ ಗಳಿಸಿ ಉನ್ನತ ಹುದ್ದೆಯಲ್ಲಿದ್ದನು.
ಅವನಿಗೆ ಒಳ್ಳೆಯ ಸಂಪಾದನೆ, ಆಸ್ತಿ, ಕಾರು, ಬಂಗಲೆ ಎಲ್ಲವೂ ಇದ್ದು ಹೆಂಡತಿ ಮಕ್ಕಳ ಜೊತೆ ಸಂಸಾರ ಸಾಗಿಸುತ್ತಿದ್ದನು. ಅವನಿದ್ದ ಪಟ್ಟಣದ ಪಕ್ಕದ ಹಳ್ಳಿಯಲ್ಲಿ ಸೋಮದೇವವೆಂಬಾತನಿದ್ದ. ಈತ ಅಷ್ಟೇನೂ ಓದಿರಲಿಲ್ಲ. ಇದ್ದ ಒಂದು ಹೊಲದಲ್ಲಿ ದುಡಿದು ಸಂಸಾರ ಸಾಗಿಸುತ್ತಿದ್ದನು.
ಒಮ್ಮೆ ಹೀಗೇ ಕೆಲಸದ ನಿಮಿತ್ತ ಯಾವುದೋ ಊರಿಗೆ ಹೋದಾಗ ಸೋಮದೇವ ಮತ್ತು ಮಹಾದೇವ ಆಕಸ್ಮಿಕವಾಗಿ ಭೇಟಿಯಾಗಿ ಪರಸ್ಪರ ಪರಿಚಯವಾದರು. ಹೀಗೆ ಒಂದೆರಡು ಸಲ ಮತ್ತೆ ಭೇಟಿಯಾದಾಗ ಇಬ್ಬರೂ ಸ್ನೇಹಿತರಾದರು. ಮಹಾದೇವ ಸೋಮದೇವನ ಮನೆಗೆ ಬಂದು ಅವನ ಮನೆಯಲ್ಲಿ ಉಂಡೂ ಹೋಗಿದ್ದನು.
ಕೆಲವು ವರ್ಷಗಳ ನಂತರ ಅದೊಂದು ದಿನ ಇದ್ದಕ್ಕಿದ್ದಂತೆ ಮಹಾದೇವ ಸೋಮದೇವನ ಮನೆಗೆ ಬಂದನು. ಸೋಮದೇವನಿಗೆ ಸ್ನೇಹಿತ ತನ್ನನ್ನು ನೋಡಲು ಬಂದಿದ್ದು ತುಂಬಾ ಖುಷಿಯಾಗಿ ಹೆಂಡತಿಗೆ ಹೇಳಿ ಅವನಿಗೆ ಇಷ್ಟವಾದ ರೊಟ್ಟಿ, ಪಲ್ಯ, ಹೋಳಿಗೆ ಎಂದು ಗಡದ್ದಾಗಿ ಮಾಡಿಸಿ ಸತ್ಕರಿಸಿದನು.
ನಂತರ ಮಹಾದೇವನು ಸೋಮದೇವನ ಬಳಿ, ‘ಸೋಮಣ್ಣಾ ನಿನ್ನಿಂದ ಒಂದು ಉಪಕಾರವಾಗಬೇಕು, ನಾನು ನಿನಗಿಂತ ಹಣವಂತನಾಗಿದ್ದರೂ ನನ್ನ ವೈಯಕ್ತಿಕ ಕಾರಣಗಳಿಗೆ ತುಂಬಾ ಸಾಲ ಮಾಡಬೇಕಾಯಿತು. ನನಗೆ ನೀನು ಸ್ವಲ್ಪ ಹಣದ ಸಹಾಯ ಮಾಡಿದರೆ ಮುಂದೆ ನನಗೆ ಹಣ ಒದಗಿ ಬಂದಾಗ ಖಂಡಿತಾ ನಿನಗೆ ಅದನ್ನು ಹಿಂದಿರುಗಿಸುತ್ತೇನೆ. ದಯವಿಟ್ಟು ತಪ್ಪು ತಿಳಿಯಬೇಡ ‘ ಎಂದನು.
ಸೋಮದೇವನಿಗೆ ಗೆಳೆಯನ ಕಷ್ಟ ಕೇಳಿ ಪಶ್ಚಾತ್ತಾಪವಾಯಿತು. ‘ಜೀವನ ಎಂದಮೇಲೆ ಎಲ್ಲರಿಗೂ ಕಷ್ಟ-ನಷ್ಟಗಳು ಇದ್ದೇ ಇರುತ್ತದೆ, ನೀನು ಸಂಕಟಪಡಬೇಡ, ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ.
ಸ್ನೇಹಿತ ಎಂದಮೇಲೆ ಕೇವಲ ಸುಖದಲ್ಲಿ ಮಾತ್ರ ಭಾಗಿಯಾಗುವುದು ನ್ಯಾಯವಲ್ಲ. ನಿನಗೆ ಅನುಕೂಲವಾದಾಗ ಹಿಂದಿರುಗಿಸುವೆಯಂತೆ’ ಎಂದು ತನ್ನಲ್ಲಿ ಆಪತ್ಕಾಲಕ್ಕೆಂದು ಇಟ್ಟುಕೊಂಡಿದ್ದ ಒಂದಿಷ್ಟು ಹಣವನ್ನು ಮಹಾದೇವನಿಗೆ ಕೊಟ್ಟು ಕಳಿಸಿದನು.
ತುಂಬಾ ವರ್ಷಗಳಾದರೂ ಮಹಾದೇವನ ಸುದ್ದಿಯೇ ಇಲ್ಲ. ಒಂದು ದಿನವೂ ಸೋಮದೇವನ ಹಳ್ಳಿಗೆ ಬರಲೇ ಇಲ್ಲ. ಹೀಗೇ ಕೆಲವು ವರ್ಷಗಳೇ ಕಳೆದುಹೋದವು.
ಸೋಮದೇವನ ಮಗ ದೊಡ್ಡವನಾಗಿದ್ದ. ಆತ ಓದಲು ತುಂಬಾ ಚುರುಕಾಗಿದ್ದರಿಂದ ಅವನನ್ನು ಚೆನ್ನಾಗಿ ಓದಿಸಿ ದೊಡ್ಡ ಆಫೀಸರ್ ಮಾಡಬೇಕೆಂಬ ಕನಸು ಸೋಮದೇವನಿಗೆ. ಹೀಗಾಗಿ ಸೋಮದೇವನಿಗೆ ಹಣದ ಅವಶ್ಯಕತೆಯೂ ಬಂತು.
ಆಗ ನೆನಪಿಗೆ ಬಂದವನು ಗೆಳೆಯ ಮಹಾದೇವ. “ತುಂಬಾ ವರ್ಷಗಳೇ ಕಳೆದವು. ಒಬ್ಬರಿಗೊಬ್ಬರು ಭೇಟಿಯಾಗಲಿಲ್ಲ, ಹೇಗಿದ್ದಾನೋ ಏನೋ. ಅವನನ್ನು ನೋಡಿದಂತೆಯೂ ಆಯಿತು, ಜೊತೆಗೆ ಅವನ ಕಷ್ಟಗಳು ಕಳೆದಿದ್ದರೆ ತಾನು ಕೊಟ್ಟ ಹಣ ಹಿಂದಿರುಗಿಸಬಹುದು.
ನಾನೇನು ಅವನ ಬಳಿ ಸಾಲವನ್ನೇನೂ ಕೇಳುತ್ತಿಲ್ಲ. ಮತ್ತ್ಯಾಕೆ ಮುಜುಗರಪಡುವುದು’ ಎಂದುಕೊಳ್ಳುತ್ತಾ ಮಹಾದೇವನ ಆಫೀಸಿಗೆ ಬಂದನು. ಆದರೆ ಅರ್ಧ ದಿನ ಕುಳಿತರೂ ಅವನನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ.
ನಂತರ ಆತ ಊಟಕ್ಕೆ ಹೋಗುವಾಗ ಅವಸರ ಮಾಡಿ ಅವನನ್ನು ಭೇಟಿಯಾದನು. ಆದರೆ ಮಹಾದೇವನೋ ಇವನ ಪರಿಚಯವೇ ಇಲ್ಲವೆಂಬಂತೆ ಒಮ್ಮೆ ನೋಡಿ ಆಮೇಲೆ ನೆನಪಿಸಿಕೊಂಡು ‘ಕ್ಷ ಮಿಸಿ, ತುಂಬಾ ಕೆಲಸದ ಒತ್ತಡದಲ್ಲಿದ್ದೇನೆ ಇನ್ನೊಮ್ಮೆ ಭೇಟಿಯಾಗುತ್ತೇನೆ’ ಎಂದು ಹೇಳಿ ಕಾರಿನಲ್ಲಿ ಸೊಂಯ್,, ಎಂದು ಹೊರಟೇಬಿಟ್ಟನು. ಸೋಮದೇವನ ಕಣ್ಣಲ್ಲಿ ನೀರು ಬಂತು. ತುಂಬಾ ಬೇಸರವಾಯಿತು.
ಈ ಗೆಳೆಯ ನನ್ನನ್ನು ನೋಡಿಯೂ ಪರಿಚಯವಿಲ್ಲದಂತೆ ಹೊರಟೇಬಿಟ್ಟನಲ್ಲಾ.. ಇನ್ನು ನಮ್ಮ ಮನೆಗೆ ಬಂದು ಊಟ ಮಾಡಿ ಹಣ ತೆಗೆದುಕೊಂಡು ಹೋಗಿದ್ದು ಹೇಗೆ ನೆನಪಲ್ಲಿ ಇರುವುದಕ್ಕೆ ಸಾಧ್ಯ? ನಾನು ಕೊಟ್ಟ ಹಣಕ್ಕೆ ಎಳ್ಳು ನೀರು ಬಿಟ್ಟಂತೆ ಎನಿಸಿತು. ನಾನು ಯಾವುದೋ ಬಡವನಿಗಾದರೂ ಸಹಾಯ ಮಾಡಿದ್ದರೆ ಪುಣ್ಯವಾದರೂ ಬರುತ್ತಿತ್ತು. ಹೋಗಿ ಹೋಗಿ ಇಂತಹ ಮನುಷ್ಯನಿಗೆ ನಂಬಿ ಸಹಾಯ ಮಾಡಿದೆನಲ್ಲಾ ಎಂದು ಬೇಸರಪಟ್ಟುಕೊಂಡನು.
ಸೋಮದೇವನು ಊಟ ಮಾಡಿ ಮಗನ ಓದಿಗೆ ಹಣವನ್ನು ಹೇಗೆ ಹೊಂದಿಸುವುದೆಂದು ಯೋಚಿಸುತ್ತ ಜಗುಲಿಯ ಮೇಲೆ ಮಲಗಿದ್ದನು.
ಅದೇ ವೇಳೆಗೆ ಅವನ ಬಾಲ್ಯ ಸ್ನೇಹಿತ ಮಲ್ಲಪ್ಪ ಬಂದವನೇ, ‘ಸೋಮಣ್ಣಾ,, ತುಂಬಾ ದಿನಗಳಿಂದ ನಿನ್ನನ್ನು ನೆನಪಿಸಿಕೊಳ್ಳುತ್ತಿದ್ದೆ. ಆದರೆ ಬರುವುದಕ್ಕೆ ಸಾಧ್ಯವಾಗಿರಲಿಲ್ಲ. ನಿನ್ನ ಮಗನನ್ನು ಓದಿಸುವುದಕ್ಕೆ ಪೇಟೆಗೆ ಕಳಿಸಬೇಕು ಅಂದಿದ್ದೆಯಲ್ಲಾ.. ನಿನಗೆ ಹಣದ ಮುಗ್ಗಟ್ಟು ಆಗಿರಬೇಕು.
ನಮ್ಮಂಥ ರೈತರ ಹತ್ತಿರ ಕೂಡಿಟ್ಟ ಹಣ ಎಷ್ಟಿರುವುದಕ್ಕೆ ಸಾಧ್ಯ..? ನಿನ್ನಿಂದ ನಾನು ಎಷ್ಟೊಂದು ಸಲ ಸಹಾಯ ಪಡೆದ ನೆನಪಿದೆ. ಈಗ ನನ್ನ ಬಳಿ ಇಟ್ಟುಕೊಂಡಿದ್ದ ಒಂದಿಷ್ಟು ಹಣ ತೆಗೆದುಕೊಂಡು ಬಂದಿದ್ದೇನೆ. ನಿನಗೆ ಸ್ವಲ್ಪವಾದರೂ ಅನುಕೂಲವಾದರೆ ಅದೇ ನನ್ನ ಪುಣ್ಯ’ ಎನ್ನುತ್ತಾ ತಾನು ತಂದ ಹಣವನ್ನು ಸೋಮದೇವನ ಕೈಯಲ್ಲಿಟ್ಟನು.
ಸೋಮದೇವನ ಸಂತೋಷಕ್ಕೆ ಎಣೆಯೇ ಇಲ್ಲ. ‘ದೇವರು ತುಂಬಾ ದೊಡ್ಡವನು. ಸರಿಯಾದ ಸಮಯಕ್ಕೆ ನಿನ್ನನ್ನು ನನ್ನ ಸಹಾಯಕ್ಕೆ ಕಳುಹಿಸಿದ್ದಾನೆ. ನಿನ್ನಿಂದ ತುಂಬಾ ಉಪಕಾರವಾಯಿತು ಮಲ್ಲಣ್ಣ’ ಎಂದು ಸೋಮದೇವನು ಅವನನ್ನು ಆಲಂಗಿಸಿಕೊಂಡನು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.