ಗೋವಾಃ ಕೊರೊನಾ ಕರ್ಫ್ಯೂ ಆ.23 ರವರೆಗೆ ಮುಂದೂಡಿಕೆ
ಕೇರಳದಿಂದ ಬರುವವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ
ಪಣಜಿ: ಗೋವಾ ರಾಜ್ಯದಿಂದ ಕೊರೊನಾ ಸೋಂಕು ಸಂಪೂರ್ಣ ನಶಿಸಲು ರಾಜ್ಯ ಸರ್ಕಾರ ರಾಜ್ಯದಲ್ಲಿ ಜಾರಿಯಲ್ಲಿರುವ ಕರ್ಫ್ಯೂವನ್ನು ಅಗಷ್ಟ 23 ರ ವರೆಗೆ ವಿಸ್ತರಣೆ ಮಾಡಿದೆ.
ಕೊರೊನಾ ಎರಡನೇಯ ಅಲೆ ಆರಂಭಗೊಂಡ ಸಂದರ್ಭದಲ್ಲಿ ಮೇ 9 ರಂದು ರಾಜ್ಯದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿತ್ತು, ಈ ಕರ್ಫ್ಯೂ ಕಾಲಾವಧಿಯನ್ನು ಹಂತ ಹಂತವಾಗಿ ವಿಸ್ತರಣೆ ಮಾಡಲಾಗುತ್ತಿದೆ.
ಇದೀಗ ಆ.23 ರವರೆಗೆ ಕರ್ಫ್ಯೂ ಮುಂದುವರೆಸಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ತಿಳಿಸಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಾರ್ವಜನಿಕ ಸಭೆ ಸಮಾರಂಭಗಳಿಗೂ ಆಗಷ್ಟ 23 ರ ವರೆಗೂ ನಿರ್ಬಂಧ ಮುಂದುವರೆಯಲಿದೆ.
ಅಲ್ಲದೆ ಸಾರ್ವಜನಿಕ ಕಾರ್ಯಕ್ರಮಗಳನ್ನು ಕೇವಲ 50 ಜನರ ಉಪಸ್ಥಿತಿಯಲ್ಲಿ ನಡೆಸಲು ಪರವಾನಗಿ ನೀಡಲಾಗುತ್ತಿದೆ.
ರಾಜ್ಯದಲ್ಲಿ ಕ್ಯಾಸಿನೊ, ಸಿನೆಮಾ ಹಾಲ್, ಕ್ರೂಜ್, ಸ್ಪಾಗಳನ್ನು ಆರಂಭಿಸಲು ಪರವಾನಗಿ ನೀಡಿರುವದಿಲ್ಲ.
ಗೋವಾ ರಾಜ್ಯಕ್ಕೆ ಕೇರಳದಿಂದ ಆಗಮಿಸುವವರಿಗೆ ಆರ್ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರುವುದು ಖಡ್ಡಾಯವಾಗಿದೆ. ಇಷ್ಟೇ ಅಲ್ಲದೆಯೇ ಇತರ ರಾಜ್ಯಗಳಿಂದ ಗೋವಾಕ್ಕೆ ಆಗಮಿಸಲು ಕೋವಿಡ್ ಎರಡೂ ಲಸಿಕೆ ಪಡೆದವರು ಅಥವಾ ಕೋವಿಡ್ ಎಂಟಿಜನ್ ನೆಗೆಟಿವ್ ವರದಿ ಹೊಂದಿರುವವರಿಗೆ ಪ್ರವೇಶಾವಕಾಶ ನೀಡಲಾಗುತ್ತಿದೆ.
ಗೋವಾದಲ್ಲಿ ಸದ್ಯ ಕೊರೊನಾ ಪೋಜಿಟಿವಿಟಿ ದರವು ಶೇ 1.54 ರಷ್ಟಿದೆ. ಕೊರೊನಾ ಸೋಂಕು ಇಳಿಕೆಯಾಗಿದ್ದರೂ ಕೂಡ ರಾಜ್ಯದಲ್ಲಿ ಮತ್ತೆ ಕೊರೊನಾ ಹರಡದಂತೆ ಕೆಲ ನಿರ್ಬಂಧಗಳನ್ನು ಮುಂದುವರಿಸಲಾಗುತ್ತಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.