ಮಹಾತ್ಯಾಗಿ, ಧರ್ಮ ರಕ್ಷಕ ಶ್ರೀ ಕೃಷ್ಣ
ಧರ್ಮಸ್ಥಾಪನೆಗಾಗಿ, ಶಿಷ್ಟರ ರಕ್ಷಣೆಗಾಗಿ ಜನ್ಮಿಸುವೆ – ಶ್ರೀಕೃಷ್ಣನ ವಾಗ್ದಾನ
ಆಗಸ್ಟ್ ಹಬ್ಬಗಳ ತಿಂಗಳು ಎಂದು ಹೆಸರುವಾಸಿಯಾಗಿದೆ. ಈ ತಿಂಗಳಲ್ಲಿ ನಾಗರ ಪಂಚಮಿ, ರಂಜಾನ್, ಗಣಪತಿ ಹಬ್ಬ, ಶ್ರೀಕೃಷ್ಣ ಜನ್ಮಾಷ್ಟಮಿ ಮುಂತಾದ ಹಬ್ಬಗಳು ಬರುತ್ತವೆ. ಈ ಹಬ್ಬಗಳನ್ನು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವೈವಿಧ್ಯಮಯವಾಗಿ ಆಚರಿಸಲಾಗುತ್ತದೆ.
ಶ್ರೀಕೃಷ್ಣ ಜನ್ಮಾಷ್ಟಮಿಯು ನಮ್ಮ ದೇಶದ ಅತ್ಯಂತ ಪ್ರಮುಖ ಆಚರಣೆಯಾಗಿದೆ. “ ಯುಗ-ಯುಗಗಳಲ್ಲಿ ಧರ್ಮವು ಕ್ಷೀಣಿಸಿದಾಗ, ಅನ್ಯಾಯ, ಮೋಸ, ವಂಚನೆಗಳು, ಕೊಲೆ, ಸುಲಿಗೆಗಳು, ಅಶಾಂತಿ ಅತಿರೇಕವಾಗಿ ಮಿತಿ ಮೀರಿದಾಗ ದುಷ್ಟರ ಶಿಕ್ಷೆ, ಶಿಷ್ಟರ ರಕ್ಷಣೆಗಾಗಿ, ಧರ್ಮ ಸಂಸ್ಥಾಪನೆಗಾಗಿ ನಾನು ಜನ್ಮತಳಯುತ್ತೇನೆ” ಎಂದು ಸಮಸ್ತ ಜೀವ ಕೋಟಿಗೆ ಶ್ರೀಕೃಷ್ಣನು ಅಭಯವಿತ್ತಿದ್ದು ಸ್ಮರಣೀಯವಾದುದು.
ಜರಾಸಂಧನ ಮದಾಂಧತೆ, ಕೌರವರ ಮಣ್ಣಿನ ಸ್ವಾರ್ಥ, ಕಂಸನ ಕ್ರೂರ ಕೃತ್ಯಗಳು, ಶಿಶುಪಾಲರಂತಹ ವಕ್ರರ ದಬ್ಬಾಳಿಕೆ, ನರಕಾಸುರನ ಹಾವಳಿ ಈ ರೀತಿಯ ಹತ್ತು ಹಲವು ಸಾಮಾಜಿಕ, ರಾಜಕೀಯ ಅಸ್ಥಿರತೆ, ಅನ್ಯಾಯ, ಅಶಾಂತಿ, ಅಧರ್ಮ ಕೃತ್ಯಗಳು ಹೆಚ್ಚಾದಾಗ ಅವುಗಳನ್ನು ದೂರ ಮಾಡಲು ಕಾರಣ ಪುರುಷನಾಗಿ ಶ್ರಾವಣ ಕೃಷ್ಣ ಅಷ್ಟಮಿ, ಬುಧುವಾರ, ರೋಹಿಣಿ ನಕ್ಷತ್ರದಲ್ಲಿ ನಡುರಾತ್ರಿ ಶ್ರೀಕೃಷ್ಣನು ಜನ್ಮವಾಯಿತು. ಕಲಿಯುಗ ಆರಂಭಕ್ಕಿಂತ ಎಪ್ಪತ್ತು ವರ್ಷ ಮುಂಚೆ ಎಂಟನೇ ಅವತಾರವಾಗಿ ಭಗವಂತ ಜಗತ್ತಿನ ಜನರನ್ನು ಕಷ್ಟದ ಸೆರೆಯಿಂದ ಬಿಡಿಸಲು ತಾನು ಸೆರೆಮನೆಯಿಂದ ಬಂದನು. ಕಶ್ಯಪ-ದಿತಿಯರೇ ವಸುದೈವ-ದೇವಕಿಯರಾಗಿ, ವೇದ ಉಪನಿಷತ್ತುಗಳೆ ಗೋವೃಂದವಾಗಿ, ಅಪ್ಸರ ಸ್ತ್ರೀಯರೆ ಗೋಪಿಯರಾಗಿ ಬಂದರು.
ಶ್ರೀಕೃಷ್ಣ ನಿರ್ಲೇಪ, ನಿರ್ಮಮ, ನಿರಹಂಕರಿ, ಸಿದ್ದ, ಮಹಾತ್ಯಾಗಿ ಜೀವಿಯಾಗಿದ್ದಾನೆ. “ತ್ಯಾಗೇನೈಕೇ ಅಮೃತತ್ವ ಮಾನುಶು” ಎನ್ನುವಂತೆ ಶ್ರೀಕೃಷ್ಣ ಏಷ್ಟೇ ರಾಜ್ಯವನ್ನು ಗೆದ್ದರೂ ಎಂದೂ ಗದ್ದುಗೆ ಏರಲಿಲ್ಲ. ಕಂಸನನ್ನು ಕೊಂದು ಅವನ ತಂದೆ ಉಗ್ರಸೇನನಿಗೆ ಮಥುರಾ ಪಟ್ಟ ಕಟ್ಟಿದ, ಜರಾಸಂಧನನ್ನು ಕೊಂದು ಅವನ ಮಗ ಸಾಲ್ವನಿಗೆ ಪಟ್ಟ ಕಟ್ಟಿದ, ನರಕನನ್ನು ಕೊಂದು ಭಗದತ್ತನಿಗೆ ಪಟ್ಟ ಕಟ್ಟಿದ. ಎರಡನೇಯದಾಗಿ ಸತ್ಯ ಧರ್ಮ ಮೀರಿದವ ಬಂಧುವಾದರೂ ಶಿಕ್ಷೆಗೆ ಯೋಗ್ಯ ಎಬುದನ್ನು ತಿಳಿದು ಮಾವ ಕಂಸ, ಭಾವ ಶಿಶುಪಾಲ, ಅಜ್ಜ ಮಾಗಧ ಮುಂತಾದವರನ್ನು ವಧಿಸುವ ಮೂಲಕ ತೋರಿಸಿದ್ದಾನೆ. ತ್ಯಾಗದಿಮದ ಮಾತ್ರ ಮನುಷ್ಯ ಹರನಾಗಬಲ್ಲ; ಮಾನವ ಮಾಧವನಾಗಬಲ್ಲ ಎಂಬುದನ್ನು ತನ್ನ ತ್ಯಾಗ ಗುಣ, ಕಾರ್ಯಗಳಿಂದ ತೋರಿಸಿಕೊಟ್ಟಿದ್ದಾನೆ.
ಮಹಾಭಾರತದಲ್ಲಿ ಶ್ರೀಕೃಷ್ಣ ಪೂರ್ಣ ಮಾನವನಾಗಿಯೂ, ದೇವತೆಯಾಗಿಯೂ ಕಾಣಿಸಿಕೊಂಡಿದ್ದಾನೆ. ಭಗವದ್ಗೀತೆಯೂ ಕೇವಲ ಕೃಷ್ಣನನ್ನೇ ಅವತಾರವೆಂದೂ, ಯುಗ-ಯುಗಗಳಲ್ಲಿ ಅವತರಿಸಿ ಬರುತ್ತಾನೆ ಎಂದೂ ಪರಿಗಣಿಸಿರುವು ಗಮನಾರ್ಹ. ಶ್ರೀಕೃಷ್ಣನ ನಯ-ವಿನಯ ಅನುಕರಣೀವಾದುದ್ದು. ರಾಜಸೂಯ ಯಾಗದಲ್ಲಿ ಆತ ಬ್ರಾಹ್ಮಣರ ಹಾಗೂ ಹಿರಿಯರ ಕಾಲ್ತೊಳೆಯುತ್ತಾನೆ. ಇಂತಹ ದೊಡ್ಡ ಗುಣದಿಂದಲೇ ಕೃಷ್ಣನಿಗೆ ಆ ಯಾಗದ ದೊಡ್ಡ ಸ್ಥಾನವಾದ ಅಗ್ರಪೂಜೆ ಲಭಸಿತು. ನಂಬಿ ಕರೆದರೆ ಓ ಎಂದು ಕೂಗಿ ಓಡಿ ಬಂದು ಉದ್ದರಿಸುವುದು ಅವನ ವೈಶಿಷ್ಠ್ಯ.
ಸುಧಾಮನ ಪ್ರಸಂಗ, ದ್ರೌಪದಿಯ ವಸ್ತ್ರಾಪರಣ ಸಂದರ್ಭ, ದೂರ್ವಾಸಾತಿಥ್ಯ ಸನ್ನಿವೇಶ, ಕುಬ್ಜೆಯ ಗೂನು ತಿದ್ದಿ ಮುದ್ದಾಗಿ ಮಾಡಿದ್ದು, ದೃತರಾಷ್ಟ್ರನಿಗೆ ದಿವ್ಯದೃಷ್ಟಿ ನೀಡಿದ್ದು ಮುಂತಾದ ಸಂದರ್ಭ ಸನ್ನಿವೇಶಗಳು ಇದಕ್ಕೆ ಉದಾಹರಣೆಯಾಗಿ ನಿಲ್ಲುತ್ತವೆ.
ಶ್ರೀಕೃಷ್ಣ ಪರಮಾತ್ಮನ ಜನ್ಮ ದಿನವನ್ನು ನಮ್ಮ ದೇಶದ ಜನರು ಬಹಳಷ್ಟು ವಿಶಿಷ್ಟವಾಗಿ ಆಚರಿಸುತ್ತಾರೆ. ಅಷ್ಟಮಿಯಂದು ಬೆಳಗ್ಗೆ ಎದ್ದು ಸ್ನಾನಾದಿಗಳನ್ನು ಮುಗಿಸಿ, ತಳಿರು ತೋರಣಾದಿಗಳಿಂದ ಮನೆ ಸಿಂಗರಿಸಿ, ವೃತ ಸಂಕಲ್ಪ ಮಾಡಿ ಶ್ರೀಕೃಷ್ಣನನ್ನು ಪೂಜಿಸುತ್ತಾರೆ. ಕೃಷ್ಣನ ಮೂರ್ತಿಗೆ ವಸ್ತ್ರಾಭರಣ, ಅಲಂಕಾರಾದಿಗಳನ್ನು ಮಾಡಿ, ಶೃಂಗರಿಸಿ ಕಥಾ ಶ್ರವಣ ಮಾಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ.ಕೃಷ್ಣನನ್ನು ಕೆಲವು ಕಡೆ ತೊಟ್ಟಿಲಲ್ಲಿಟ್ಟು ಲಾಲಿ ಹಾಡಿ ತೂಗುತ್ತಾರೆ.
ಮತ್ತು ನಾಮಕರಣ ಮಾಡುತ್ತಾರೆ. ಕೃಷ್ಣನಿಗೆ ನೈವೇದ್ಯ ಸಲ್ಲಿಸುತ್ತಾರೆ, ಕೃಷ್ಣನ ಭಜನಾ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಅಲ್ಲದೆ ತಮ್ಮ ಚಿಕ್ಕ ಮಕ್ಕಳನ್ನು ಕೃಷ್ಣನ ವೇಶ ಧರಿಸಿ ಸಿಂಗಾರ ಮಾಡುತ್ತಾರೆ. ಆ ಮಕ್ಕಳನ್ನು ಬಾಲಕೃಷ್ಣನೆಂದು ಹಾರೈಸುತ್ತಾರೆ. ನಮ್ಮ ರಾಜ್ಯ ಸರ್ಕಾರ ಕಳೆದ ವರ್ಷಗಳಿಂದ ಮಹಾತ್ಯಾಗಿ ಕೃಷ್ಣ ಜನ್ಮಾಷ್ಟಮಿಯನ್ನು ಸರ್ಕಾರದ ವತಿಯಿಂದ ಆಚರಿಸುವುದರ ಮೂಲಕ ಬಹು ಸಂಸ್ಕೃತಿಯ ವೈವಿಧ್ಯಮಯ ಸಮಾಜದ ಜನರ ನಂಬಕೆಗಳನ್ನು, ಆಚರಣೆಗಳನ್ನು ಗೌರವಸುವುದರ ಮೂಲಕ ತನ್ನ ದೂರದೃಷ್ಟಿಯನ್ನು ಮೆರೆದಿದೆ ಎಂದು ಹೇಳಬಹುದು. ಸರ್ವರಿಗೂ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು.
–ರಾಘವೇಂದ್ರ ಹಾರಣಗೇರಾ.
ಸಮಾಜಶಾಸ್ತ್ರ ಉಪನ್ಯಾಸಕರು ಬಾಪೂಗೌಡ ದರ್ಶನಾಪೂರ ಸ್ಮಾರಕ ಮಹಿಳಾ ಪದವಿ ಕಾಲೇಜು ಶಹಾಪುರ ಜಿ|| ಯಾದಗಿರಿ ಮೊ.9901559873