ಹವಾಮಾನ ಬದಲಾವಣೆ ಪ್ರತಿಯೊಬ್ಬರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಉಸಿರಾಟ ಸಮಸ್ಯೆ ಹೊಂದಿರುವ ರೋಗಿಗಳು ಹಾಗೂ ಮಕ್ಕಳ ಮೇಲೆ ಇದರ ಪರಿಣಾಮ ಹೆಚ್ಚಾಗಿಯೇ ಇರುತ್ತದೆ. ಕೆಮ್ಮು ಮತ್ತು ಶೀತದಿಂದ ಬಳಲುತ್ತಿರುವ ಮಕ್ಕಳು ನಿದ್ರೆಯಿಲ್ಲದ ರಾತ್ರಿ ಕಳೆಯುವುದುಂಟು. ಇದು ಪೋಷಕರ ಮೇಲೂ ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ಶೀತ ಕಾಣಿಸಿಕೊಂಡ ಬಳಿಕ ಸಾಮಾನ್ಯವೆಂದು ಸಾಕಷ್ಟು ಪೋಷಕರು ನಿರ್ಲಕ್ಷ್ಯ ತೋರುವುದುಂಟು. ಆದರೆ, ಈ ಶೀತಬಾಧೆ ಮುಂಬರುವ ದಿನಗಳಲ್ಲಿ ಉಸಿರಾಟ ಸಮಸ್ಯೆಗೂ ಕಾರಣವಾಗಬಹುದು. ಹೀಗಾಗಿ ಶೀತ, ಉಸಿರಾಟದ ಸಮಸ್ಯೆ ಕುರಿತು ನಿರ್ಲಕ್ಷ್ಯ ತೋರುವುದು ಒಳ್ಳೆಯದಲ್ಲ.
ಈ ನಿಟ್ಟಿನಲ್ಲಿ ಪ್ರತೀ ಪೋಷಕರು ಮಕ್ಕಳಲ್ಲಿ ಕಾಣಿಸಿಕೊಳ್ಳುವ ನೆಗೆಡಿ, ಕೆಮ್ಮು, ಉಸಿರಾಟ ಸಮಸ್ಯೆಗಳ ಬಗ್ಗೆ ಅರಿಯುವುದು, ನಿರ್ವಹಿಸುವುದು ಹಾಗೂ ತಡೆಗಟ್ಟುವ ಕ್ರಮಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.
ಉಸಿರಾಟದ ತೊಂದರೆಯ ಹಿಂದೆ ಅನೇಕ ಕಾರಣಗಳಿರುತ್ತವೆ. ಅಲರ್ಜಿಗಳಿಂದ ಹಿಡಿದು ಹೃದ್ರೋಗಗಳವರೆಗೆ, ಹಲವಾರು ಸಮಸ್ಯೆಗಳಿಂದ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ, ಉಸಿರಾಟದ ತೊಂದರೆ ಉಂಟಾದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಉಸಿರಾಟದ ತೊಂದರೆಗಳಿಗೆ ಏನೇನು ಕಾರಣಗಳಿರಬಹುದು ಎನ್ನುವುದನ್ನು ನೋಡೋಣ.
ಶೀತ
ಶೀತಬಾಧೆ ಸಾಮಾನ್ಯ ಸಮಸ್ಯೆಯಾಗಿದ್ದು, ಶಾಲೆಗೆ ಹೋಗುವ ಮಕ್ಕಳಲ್ಲಿ ಇದು ಸಾಮಾನ್ಯವಾಗಿರುತ್ತದೆ. ವೈರಲ್ ಸೋಂಕು ಇರುವ ಮಕ್ಕಳಲ್ಲಿ ಕೆಮ್ಮು, ಗಂಟಲು ನೋವು ಇದ್ದೇ ಇರುತ್ತದೆ.
ಅಸ್ತಮಾ
ಇದು ಶ್ವಾಸನಾಳಗಳು ಉಬ್ಬುವ ಮತ್ತು ಕಿರಿದಾಗುವ ಸ್ಥಿತಿಯಾಗಿದೆ. ಇದು ಉಸಿರಾಟದ ತೊಂದರೆಯನ್ನು ಉಂಟುಮಾಡಬಹುದು ಮತ್ತು ಉಸಿರಾಡಲು ಕಷ್ಟ ಪಡುವಂತಹ ಸ್ಥಿತಿ ನಿರ್ಮಾಣವಾಗಬಹುದು. ಅಸ್ತಮಾಕ್ಕೆ ಯಾವುದೇ ಚಿಕಿತ್ಸೆ ಇಲ್ಲ, ಅದರ ರೋಗಲಕ್ಷಣಗಳನ್ನು ಮಾತ್ರ ನಿಯಂತ್ರಿಸಬಹುದು.
ನ್ಯುಮೋನಿಯಾ
ಇದು ಶ್ವಾಸಕೋಶದ ಶ್ವಾಸನಾಳಗಳಲ್ಲಿ ಉರಿಯೂತವನ್ನು ಉಂಟುಮಾಡುವ ಒಂದು ಸೋಂಕಾಗಿದೆ. ಈ ಸಮಸ್ಯೆ ಉಂಟಾದರೆ ಶ್ವಾಸಕೋಶದ ಚೀಲವು ದ್ರವ ಅಥವಾ ಕೀವುಗಳಿಂದ ತುಂಬಿರಬಹುದು, ಇದು ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಯನ್ನು ಉಂಟುಮಾಡುತ್ತದೆ. ವೈರಸ್, ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ಇತರ ಜೀವಿಗಳು ನ್ಯುಮೋನಿಯಾಕ್ಕೆ ಕಾರಣವಾಗಬಹುದು. ನ್ಯುಮೋನಿಯಾಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ, ಮಾರಣಾಂತಿಕವಾಗಬಹುದು ಎಚ್ಚರವಿರಲಿ.
ಕಿವಿ ಸೋಂಕು
ಉಸಿರಾಟದ ಸೋಂಕುಗಳು ಕೆಲವೊಮ್ಮೆ ಕಿವಿ ಸೋಂಕುಗಳಿಗೆ ಕಾರಣವಾಗಬಹುದು. ಕಿವಿಯೋಲೆಯ ಹಿಂದೆ ದ್ರವದ ಶೇಖರಣೆಯು ನೋವು, ಜ್ವರ ಮತ್ತು ಇತರೆ ಸಮಸ್ಯೆಗಳಿಗೆ ಕಾರಣವಾಗಬಹುದು,
ಅಡೆನಾಯ್ಡ್ ಸಮಸ್ಯೆ
ಅಡೆನಾಯ್ಡ್ಗಳು ಗಂಟಲಿನ ಹಿಂಭಾಗದಲ್ಲಿರುವ ಗ್ರಂಥಿಗಳಾಗಿವೆ. ಅಡೆನಾಯ್ಡ್ ಗ್ರಂಥಿಯ ಹಿಗ್ಗುವಿಕೆ ಕಿವಿ ಮತ್ತು ಸೈನಸ್ ಸೋಂಕುಗಳಿಗೆ ಕಾರಣವಾಗುತ್ತದೆ.
ಉಸಿರಾಟ ಸಮಸ್ಯೆಯಿಂದ ದೂರ ಇರುವುದು ಹೇಗೆ?
ಉಸಿರಾಟದ ಸೋಂಕುಗಳನ್ನು ತಡೆಗಟ್ಟಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಗೆ ಒಡ್ಡಿಕೊಳ್ಳುವುದನ್ನು ಮಿತಿಗೊಳಿಸುವುದು. ನಾವು ಏನೇ ಮಾಡಿದರೂ ಮಕ್ಕಳು ಶಾಲೆಗಳಲ್ಲಿ ಮತ್ತು ಆಟದ ಪ್ರದೇಶಗಳಲ್ಲಿ ಆಟವಾಡಿ ತಾವಾಗಿಯೇ ವೈರಸ್ ಹಾಗೂ ಬ್ಯಾಕ್ಟೀರಿಯಾಗಳಿಗೆ ಆಹ್ವಾನ ನೀಡುತ್ತಾರೆ. ಹೀಗಾಗಿ ಮಕ್ಕಳಿಗೆ ಆಗಾಗ್ಗೆ ಕೈ ತೊಳೆಯುವುದು, ಅನಾರೋಗ್ಯದ ಮಕ್ಕಳೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸುವುದು ಮತ್ತು ಕೆಮ್ಮು ಮತ್ತು ಸೀನುವಾಗ ಬಾಯಿ ಹಾಗೂ ಮೂಗು ಮುಚ್ಚಿಕೊಳ್ಳುವಂತೆ ನೋಡಿಕೊಳ್ಳಬೇಕು. ಇದರಿಂದ ಸೋಂಕಿಗೊಳಗಾಗುವುದನ್ನು ತಪ್ಪಿಸಬಹುದು.
ಇದರ ಜೊತೆಗೆ, ಕೆಲವರು ಅಲರ್ಜಿಯಿಂದ ಉಲ್ಬಣಗೊಳ್ಳುವ ಉಸಿರಾಟದ ಸಮಸ್ಯೆಯನ್ನೂ ಎದುರಿಸುತ್ತಿರುತ್ತಾರೆ. ಹೀಗಾಗಿ ಮಕ್ಕಳಿಗೆ ಯಾವುದರಿಂದ ಅಲರ್ಜಿಯಾಗುತ್ತಿದೆ ಎಂಬುದುನ್ನು ತಿಳಿಯುವುದು ಮುಖ್ಯವಾಗುತ್ತದೆ. ಅಲರ್ಜಿ ಯಾವುದರಿಂದ ಆಗುತ್ತಿದೆ ಎಂಬುದನ್ನು ತಿಳಿದು ಆ ವಸ್ತು ಅಥವಾ ಆಹಾರ ಪದಾರ್ಥದಿಂದ ದೂರ ಉಳಿಯಬೇಕು. ಅಗತ್ಯವಿದ್ದಲ್ಲಿ ವೈದ್ಯರ ಸಲಹೆಗಳನ್ನು ಪಡೆಯಬೇಕು.
ಸಮಸ್ಯೆ ತಡೆಗಟ್ಟುವುದು ಹೇಗೆ?
ಸಮತೋಲಿತ ಆಹಾರ ಮತ್ತು ಪೋಷಣೆ
ಹಣ್ಣುಗಳು, ತರಕಾರಿಗಳು, ಧಾನ್ಯಗಳನ್ನು ಸೇವನೆ ಮಾಡಬೇಕು. ಪ್ರೋಟೀನ್‌ಗಳು ಸಮೃದ್ಧವಾಗಿರುವ ಸಮತೋಲಿತ ಆಹಾರವು ಮಕ್ಕಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.
ಸ್ಥೂಲಕಾಯತೆ
ಇದು ಆಸ್ತಮಾ ಮತ್ತು ನಿದ್ರಾಹೀನತೆ ಸೇರಿದಂತೆ ಮಕ್ಕಳಲ್ಲಿ ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮಕ್ಕಳಿಗೆ ಸಮತೋಲಿತ ಆಹಾರ ನೀಡಿ, ವಯಸ್ಸಿಗೆ ತಕ್ಕಂತೆ ತೂಕ ಇರುವುದಂತೆ ನೋಡಿಕೊಳ್ಳಿ.
ವಿಟಮಿನ್ ಕೊರತೆ
ನಿಮ್ಮ ಮಕ್ಕಳಿಗೆ ನೀಡುವ ಆಹಾರಗಳಲ್ಲ ಸಾಕಷ್ಟು ಜೀವಸತ್ವಗಳು ಮತ್ತು ಖನಿಜಗಳು ಇರುವಂತೆ ನೋಡಿಕೊಳ್ಳಿ. ಇದರಿಂದ ಅವರ ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಹೆಚ್ಚಾಗುತ್ತದೆ.
ವ್ಯಾಕ್ಸಿನೇಷನ್
ಇನ್ಫ್ಲುಯೆನ್ಝ ಮತ್ತು ನ್ಯುಮೋಕೊಕಲ್ ಕಾಯಿಲೆಯಂತಹ ಉಸಿರಾಟದ ಸೋಂಕುಗಳನ್ನು ತಡೆಗಟ್ಟುವಲ್ಲಿ ವ್ಯಾಕ್ಸಿನೇಷನ್ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ವೈದ್ಯರು ಶಿಫಾರಸು ಮಾಡುವ ವ್ಯಾಕ್ಸಿನೇಷನ್ ಗಳನ್ನು ವೇಳಾಪಟ್ಟಿಗಳನ್ನು ಅನುಸರಿಸಿ ಕೊಡಿಸಿ. ಇದು ಗಂಭೀರವಾದ ಉಸಿರಾಟದ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.