ಶಹಾಪುರ: ಹಿಜಾಬ್ – ಕೆಲಕಾಲ ಕಲುಷಿತಗೊಂಡ ವಾತಾವರಣ ಪೊಲೀಸರಿಂದ ಸಂಧಾನ

ಶಾಲೆಯಲ್ಲಿ ಹಿಜಾಬ್ ಧರಿಸದಂತೆ ಬಿಇಓ ಮನವಿ
ಕೆಲಕಾಲ ಕಲುಷಿತಗೊಂಡ ವಾತಾವರಣ ಪೊಲೀಸರಿಂದ ಸಂಧಾನ
yadgiri, ಶಹಾಪುರ: ತಾಲ್ಲೂಕಿನ ಗೋಗಿ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಶಾಲೆಗೆ ಹಾಜರಾಗಲು ಅನುಮತಿ ನೀಡುವಂತೆ ಪಾಲಕರು ಒತ್ತಾಯಿಸಿದ ಘಟನೆ ನಡೆದಿದೆ. ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಗೌಡ ಪಾಟೀಲ್ ತೆರಳಿ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದಾಗ್ಯು 200 ರಿಂದ 300 ಜನ ಪಾಲಕರು ಜಮಾವಣೆಗೊಂಡು ಕಲುಷಿತ ವಾತಾವರಣ ನಿರ್ಮಾಣಗೊಳ್ಳುತ್ತಿದ್ದಂತೆ ಪೊಲೀಸರು ಮಧ್ಯ ಪ್ರವೇಶಿಸಿದ ಕಾರಣ ವಾತಾವರಣ ತಿಳಿಗೊಂಡಿದೆ.
ಕಳೆದ ಎರಡು ದಿನದಿಂದ ಶಾಲೆಗೆ ಆಗಮಿಸುವ ವಿದ್ಯಾರ್ಥಿನಿಯರಲ್ಲಿ ಬೆರಳಣಿಜೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಆಗಮಿಸಿದ ಕಾರಣ ಹೈಕೋರ್ಟ್ ಮಧ್ಯಂತರ ಆದೇಶ ಉಲ್ಲಂಘನೆಯಾಗಲಿದೆ. ಯಾರೊಬ್ಬರು ಹಿಜಾಬ್ ಧರಿಸಿ ಶಾಲೆಯೊಳಗೆ ಹಾಜರಾಗಬೇಡಿ, ಅದನ್ನು ಶಾಲೆಯೊಳಗೆ ಬಂದ ತಕ್ಷಣ ತೆಗೆದು ಹಾಕಿ ಇಲ್ಲವಾದಲ್ಲಿ ಯಾರಾದರೂ ಅಧಿಕಾರಿಗಳು ಬಂದರೆ ಕಾನೂನು ಉಲ್ಲಂಘನೆ ಕುರಿತು ಶಿಕ್ಷಕರಾದ ನಮ್ಮನ್ನು ಗುರಿ ಪಡಿಸಲಾಗುತ್ತದೆ ಎಂದು ಮಕ್ಕಳಿಗೆ ತಿಳಿಸಿದ್ದಾರೆ.
ಆದರೆ, ಮೂರಿಂದ ನಾಲ್ಕು ಜನ ಮಕ್ಕಳು ಹಿಜಾಬ್ ಧರಿಸಿಯೇ ಆಗಮಿಸಿರುವ ಕಾರಣ, ಮಂಗಳವಾರ ಬಿಇಓ ಅವರು ಶಾಲೆಗೆ ಭೇಟಿ ನೀಡಿದ್ದು, ಕೋರ್ಟ್ ಆದೇಶ ಉಲ್ಲಂಘನೆ ಮಾಡುವಂತಿಲ್ಲ. ಕೋರ್ಟ್‍ನಲ್ಲಿ ಈಗಾಗಲೇ ವಿಚಾರಣೆ ನಡೆದಿದೆ. ಮುಂದಿನ ಆದೇಶ ಏನಾಗಿರುತ್ತದೆ ಅದರಂತೆ ನಡೆದುಕೊಳ್ಳಬೇಕಾಗುತ್ತದೆ. ಎಲ್ಲರೂ ಕಾನೂನಿಗೆ ಗೌರವ ನೀಡಬೇಕು ಎಂದು ಮಕ್ಕಳಿಗೆ ತಿಳಿ ಹೇಳಿದ್ದಾರೆ. ಅಷ್ಟರಲ್ಲಿ ಶಾಲಾ ಮುಂದೆ ಜಮಾವಣೆಗೊಂಡ ಪಾಲಕರು ಬಿಇಓ ಅವರೊಂದಿಗೆ ಮಾತಿಗಿಳಿದು ಕೆಲ ಕಾಲ ಕಲುಷಿತ ವಾತಾವರಣ ನಿರ್ಮಾಣವಾಗಿದೆ.
ತಕ್ಷಣ ಸ್ಥಳಕ್ಕೆ ಆಗಮಿಸಿ ಸಿಪಿಐ ಚನ್ನಯ್ಯ ಹಿರೇಮಠ ಅವರು, ಕಾನೂನು ಉಲ್ಲಂಘನೆ ಸರಿಯಲ್ಲ. ಈಗಾಗಲೇ ಕೋಟ್ ನಲ್ಲಿ ಹಿಜಾಬ್ ಕುರಿತು ವಿಚಾರಣೆ ನಡೆದಿದೆ. ಅಂತಿಮ ಆದೇಶ ಏನಿರುತ್ತದೆ ಆ ಪ್ರಕಾರ ಎಲ್ಲರೂ ನಡೆಯಬೇಕು. ಅಲ್ಲಿವರೆಗೂ ಮಧ್ಯಂತರ ಆದೇಶ ಪಾಲನೆ ಮಾಡಬೇಕು. ಇಲ್ಲವಾದಲ್ಲಿ ನಾವು ಸುಕ್ತ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ವೇಳೆ ಬಿಇಓ ಅವರು ಮುತುವರ್ಜಿವಹಿಸಿ ಪಾಲಕರು ಕೇಳಿದ ಪ್ರತಿ ಪ್ರಶ್ನೆಗೆ ಸಮರ್ಪಖವಾಗಿ ಉತ್ತರ ನೀಡುವ ಮೂಲಕ ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂತಿಮವಾಗಿ ಹಿಜಾರ್ಬ ತೆಗೆದಿಟ್ಟು ಮಕ್ಕಳು ಶಾಲೆಗೆ ಹಾಜರಾಗಲಿದ್ದಾರೆ. ಇಲ್ಲವಾದಲ್ಲಿ ಕೋರ್ಟ್ ಆದೇಶದವರೆಗೆ ಕಾಯಲಿದ್ದಾರೆ ಯಾವುದೇ ಸಮಸ್ಯೆ ಉಂಟು ಮಾಡುವದಿಲ್ಲ ಎಂದು ಪಾಲಕರಲ್ಲಿ ಮುಖಂಡರು ಸಮಜಾಯಿಸಿ ನೀಡಿದ್ದಾರೆ. ಶಾಂತಿ ಸಭೆ ಈ ಸಮಸ್ಯೆಗೆ ಇತಿಶ್ರೀ ಹಾಡಲಾಗಿದೆ ಎಂದು ಬಿಇಓ ರುದ್ರಗೌಡ ಪಾಟೀಲ್ ತಿಳಿಸಿದರು.
ಎಲ್ಲರೂ ಸಾಮರಸ್ಯದಿಂದ ಜೊತೆಯಾಗಿ ಸಾಗಬೇಕಾಗಿದೆ. ಅನವಶ್ಯಕವಾಗಿ ಗೊಂದಲ ಬೇಡ. ಹಾರಿಕೆ, ಗಾಳಿ ಸುದ್ದಿಗೆ ಕಿವಿಗೊಡಬಾರದು. ಮಕ್ಕಳನ್ನು ಅತ್ಯಂತ ಸುರಕ್ಷಿತವಾಗಿ ನೋಡಿಕೊಳ್ಳುವುದು ನಮ್ಮ ಹೊಣೆಯಾಗಿದೆ. ನಮ್ಮ ತಾಲೂಕಿನಲ್ಲಿ ಯಾವುದೇ ಸಮಸ್ಯೆ ಇಲ್ಲ. ಈಗ ಗೋಗಿ ಗ್ರಾಮದಲ್ಲಿ ಅನಗತ್ಯವಾಗಿ ಸಮಸ್ಯೆ ಸೃಷ್ಠಿಸಿ ಮಾಧ್ಯಮದವರ ಬಾಯಿಗೆ ಆಹಾರವಾಗಬೇಡಿ. ಗ್ರಾಮಕ್ಕೆ ಕೆಟ್ಟ ಹೆಸರು ತರಬೇಡಿ. ಹೈಕೋರ್ಟ್ ಮಧ್ಯಂತರ ಆದೇಶ ಸರ್ಕಾರದ ಸುತ್ತೋಲೆ ಪ್ರಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸುವದು ಅಧಿಕಾರಿಗಳಾದ ನಮ್ಮ ಕರ್ತವ್ಯ. ಶಾಲೆಗಳಲ್ಲಿ ಈ ಮಧ್ಯಂತ ಆದೇಶ ಉಲ್ಲಂಘನೆಯಾದಲ್ಲಿ ಶಾಲಾ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಲಾಗುವದು ಎಂದು ಎಚ್ಚರಿಸಿದ್ದೇನೆ. ಮಂಗಳವಾರ 195 ವಿದ್ಯಾರ್ಥಿಗಳಲ್ಲಿ 70 ವಿದ್ಯಾರ್ಥಿಗಳು ಮಾತ್ರ ಹಾಜರಿದ್ದರು.
– ರುದ್ರಗೌಡ ಪಾಟೀಲ್.ಬಿಇಓ