ಹಿಂದೂ-ಮುಸ್ಲೀಂ ನಡುವಿನ ಮದುವೆ ಕಾನೂನಿನಡಿ ಮಾನ್ಯವಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ಅಂತರ್ ಧರ್ಮೀಯ ವಿವಾಹದಲ್ಲಿ ದಂಪತಿಗೆ ರಕ್ಷಣೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ಬಗ್ಗೆ ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ಅಚ್ಚರಿಯ ತೀರ್ಪು ನೀಡಿದೆ. ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ, ಮುಸ್ಲಿಂ ಪುರುಷ ಮತ್ತು ಹಿಂದೂ ಮಹಿಳೆಯ ನಡುವಿನ ವಿವಾಹವು ಮಾನ್ಯವಲ್ಲ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.
ವಿಶೇಷ ವಿವಾಹ ಕಾಯ್ದೆ, 1954 ರ ಅಡಿಯಲ್ಲಿ ಅಂತರ್ಧರ್ಮೀಯ ವಿವಾಹಗಳನ್ನು ನೋಂದಾಯಿಸಲು ಪೊಲೀಸ್ ರಕ್ಷಣೆ ಕೋರಿ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗುರ್ಪಾಲ್ ಸಿಂಗ್ ಅಹ್ಲುವಾಲಿಯಾ, ಮುಸ್ಲಿಂ ಪುರುಷ ಮತ್ತು ಹಿಂದೂ ಮಹಿಳೆಯ ನಡುವಿನ ವಿವಾಹವು ವಿಶೇಷ ವಿವಾಹ ಕಾಯ್ದೆಯಡಿ ವಿವಾಹವಾಗಿದ್ದರೂ ಮುಸ್ಲಿಂ ಕಾನೂನಿನ ಅಡಿಯಲ್ಲಿ “ಅನಿಯಮಿತ” ವಿವಾಹವಾಗುತ್ತದೆ ಎಂದು ಹೇಳಿದರು.
ಮದುವೆ ಕಾನೂನು ಬಾಹಿರ ಎಂದ ಹೈಕೋರ್ಟ್
ಬಾರ್ ಅಂಡ್ ಬೆಂಚ್ ವರದಿಯ ಪ್ರಕಾರ, ಹೈಕೋರ್ಟ್ ಮೇ 27 ರಂದು ತನ್ನ ಆದೇಶದಲ್ಲಿ, “ಮುಸ್ಲಿಂ ಹುಡುಗನು ವಿಗ್ರಹಾರಾಧಕ ಅಥವಾ ಬೆಂಕಿ ಪೂಜಿಸುವ ಹುಡುಗಿಯನ್ನು ಮದುವೆಯಾಗುವುದು ಮಾನ್ಯ ವಿವಾಹವಲ್ಲ.
ವಿಶೇಷ ವಿವಾಹ ಕಾಯ್ದೆಯಡಿ ವಿವಾಹವನ್ನು ನೋಂದಾಯಿಸಿದರೂ, ವಿವಾಹವು ಮಾನ್ಯ ವಿವಾಹವಾಗುವುದಿಲ್ಲ ಮತ್ತು ಅನಿಯಮಿತ (ಫಾಸಿದ್) ವಿವಾಹವಾಗಿರುತ್ತದೆ ” ಎಂದು ಮುಸ್ಲಿಂ ಪುರುಷರು ಮತ್ತು ಹಿಂದೂ ಮಹಿಳೆಯರಿಗೆ ರಕ್ಷಣೆ ಕೋರಿ ಸಲ್ಲಿಸಿದ ಮನವಿಗೆ ಪ್ರತಿಕ್ರಿಯೆಯಾಗಿ ನ್ಯಾಯಾಲಯ ಹೇಳಿದೆ.
ಮುಸ್ಲಿಂ ಸಂಗಾತಿಯನ್ನು ಮದುವೆಯಾಗುವ ಮೊದಲು ಮಹಿಳೆ ತಮ್ಮ ಮನೆಯಿಂದ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದರು ಎಂದು ಕುಟುಂಬ ಹೇಳಿಕೊಂಡಿದೆ.
ದಂಪತಿಗಳ ವಕೀಲರು ಈ ವಾದವನ್ನು ಮಂಡಿಸಿದರು
ದಂಪತಿಗಳ ವಕೀಲರ ಪ್ರಕಾರ, ಅವರು ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗಲು ಬಯಸಿದ್ದರು. ಆದರೆ ಮಹಿಳೆ ಮದುವೆಗಾಗಿ ಮತ್ತೊಂದು ಧರ್ಮವನ್ನು ಸ್ವೀಕರಿಸಲು ಬಯಸಲಿಲ್ಲ. ಮತ್ತೊಂದೆಡೆ, ಹುಡುಗನು ತನ್ನ ಧರ್ಮವನ್ನು ಬದಲಾಯಿಸಲು ಬಯಸಲಿಲ್ಲ. ವಿಶೇಷ ವಿವಾಹ ಕಾಯ್ದೆಯಡಿ ತಮ್ಮ ಮದುವೆಯನ್ನು ನೋಂದಾಯಿಸಲು ವಿವಾಹ ಅಧಿಕಾರಿಯ ಮುಂದೆ ಹಾಜರಾದಾಗ ದಂಪತಿಗಳಿಗೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ವಕೀಲರು ಹೇಳಿದರು.
ಅಂತರ್ ಧರ್ಮೀಯ ವಿವಾಹವು ವಿಶೇಷ ವಿವಾಹ ಕಾಯ್ದೆಯಡಿ ಮಾನ್ಯವಾಗಿರುತ್ತದೆ. ಮುಸ್ಲಿಂ ವೈಯಕ್ತಿಕ ಕಾನೂನನ್ನು ಮೀರುತ್ತದೆ ಎಂದು ವಕೀಲರು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹೈಕೋರ್ಟ್, “ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಮಾನ್ಯವಲ್ಲದ ವಿಶೇಷ ವಿವಾಹ ಕಾಯ್ದೆಯಡಿ ಮದುವೆಯನ್ನು ಮಾನ್ಯಗೊಳಿಸಲು ಸಾಧ್ಯವಿಲ್ಲ. ವಿಶೇಷ ವಿವಾಹ ಕಾಯ್ದೆಯ ಸೆಕ್ಷನ್ 4 ರ ಪ್ರಕಾರ, ದಂಪತಿಗಳು ಕಾನೂನುಬದ್ಧ ಸಂಬಂಧದಲ್ಲಿದ್ದರೆ ಮಾತ್ರ ಮದುವೆಯನ್ನು ನಡೆಸಬಹುದು ಎಂದು ಹೇಳಿ, ಹಿಂದೂ-ಮುಸ್ಲೀಂ ನಡುವಿನ ಮದುವೆ ಕಾನೂನಿನಡಿ ಮಾನ್ಯವಲ್ಲ ಎಂಬುದಾಗಿ ಮಹತ್ವದ ತೀರ್ಪು ನೀಡಿದೆ.