ಮೊಬೈಲ್ ಕೈಯಲ್ಲಿ ಇಲ್ಲದಿದ್ದರೆ ಪ್ರಪಂಚವೇ ಶೂನ್ಯ ಅನ್ನಿಸುವುದೇಕೆ!
ಆಧುನಿಕ ಯುಗದಲ್ಲಿ ಮಾಹಿತಿ ತಂತ್ರಜ್ಞಾನವು ಅತ್ಯಂತ ಮಹತ್ವದ ಪಾತ್ರ ನಿರ್ವಹಿಸುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನ ಮಾನವ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. 21 ನೇ ಶತಮಾನದಲ್ಲಿ ಇದು ಒಂದು ರಾಷ್ಟ್ರದ ಅಭಿವೃದ್ಧಿಯನ್ನು ನಿರ್ಧರಿಸುವ ಮಹತ್ವದ ಅಂಶವಾಗಿದೆ. ಆಧುನಿಕ ತಂತ್ರಜ್ಞಾನದ ಕೊಡುಗೆಯಾದ ಮಾಹಿತಿ ತಂತ್ರಜ್ಞಾನ ಮಾನವನ ಜೀವನ ಶೈಲಿಯನ್ನು ಗಣನೀಯವಾಗಿ ಪ್ರಭಾವಿಸಿದೆ. ಮಾಹಿತಿ ತಂತ್ರಜ್ಞಾನದ ಮಹಾಕ್ರಾಂತಿ ಇದು. ಮಾಹಿತಿ ತಂತ್ರಜ್ಞಾನ ಇಂದು ನಾಗಲೋಟದಲ್ಲಿದೆ. ಅದರಲ್ಲಿಯೂ ವಿದ್ಯುನ್ಮಾನ ಮಾದ್ಯಮಗಳ ವೇಗದಿಂದ ಮಾಹಿತಿ ತಂತ್ರಜ್ಞಾನ ಈಗ ಗಾಳಿಗಿಂತಲೂ ವೇಗವಾಗಿದೆ. ಕಣ್ ಮುಚ್ಚಿ ತೆಗೆಯುವಷ್ಟರಲ್ಲಿ ಇಡೀ ಪ್ರಪಂಚವನ್ನು ಕಣ್ಣಿನಲ್ಲಿ ತುಂಬಿಕೊಳ್ಳುವಂತಹ ಅದ್ಭುತ ಸಾಧನಳಿಂದು ಇಡೀ ಪ್ರಪಂಚವನ್ನು ಆವರಿಸಿವೆ.

ಮಾಹಿತಿ ತಂತ್ರಜ್ಞಾನದ ಮೊದಲ ರೂಪ ಮೊಬೈಲ್ ಎಂದರೆ ತಪ್ಪಲ್ಲ. ಅಂಗೈಯಲ್ಲಿ ಒಂದು ಮೊಬೈಲ್ ಪ್ರತಿಯೊಬ್ಬರಲ್ಲಿಯೂ ಕುಣಿದಾಡುತ್ತಿದೆ. ಪ್ರಾಯಶಃ ಇಂದು ಮೊಬೈಲ್ ಇಲ್ಲದೇ ಪ್ರಪಂಚವೇ ಶೂನ್ಯ ಎಂಬ ಭ್ರಮೆ ಕೂಡಾ ನಿರ್ಮಾಣವಾಗಿದೆ. ಮೊಬೈಲ್ ತಯಾರಿಕಾ ಕಂಪನಿಗಳು ಸಾಮಾನ್ಯ ಗ್ರಾಹಕರನ್ನು ಗುರಿಯಾಗಿಟ್ಟುಕೊಂಡೇ ಇಂದು ದಿನಕ್ಕೊಂದು ನೂತನ ಉಪಕರಣವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿರುವುದು ಗಮನಾರ್ಹ. ಹೀಗೆ ಮೊಬೈಲ್ ತಯಾರಿಕೆಯ ಒಳ ಮತ್ತು ಹೊರ ವಿನ್ಯಾಸದಲ್ಲಿ ಬದಲಾವಣೆ ಆಗುತ್ತಿದ್ದಂತೆ ಸಾಮಾಜಿಕ ಮಾದ್ಯಮಗಳ ಆಯಾಮವೂ ಬದಲಾಗತೊಡಗಿದೆ. ಕಾರ್ಪೊರೇಟ್ ಕಂಪನಿಗಳು ಮತ್ತು ಮಾಹಿತಿ ತಂತ್ರಜ್ಞಾನದ ವಾಹಕಗಳ ನಡುವೆ ಇಂದು ನೇರ ಸಂಬಂಧಗಳಿವೆ. ಈ ರೀತಿಯಾಗಿ ಮಾಹಿತಿ ತಂತ್ರಜ್ಞಾನದ ದೂರ ಸಂಪರ್ಕ ವ್ಯವಸ್ಥೆಯು ಅತೀ ವೇಗದ ಸಂಪರ್ಕ ವಿಧಾನವಾಗಿದೆ. ಇದು ಜಾಗತಿಕ ಪೈಪೋಟಿ ಸಾಮರ್ಥೈದ ಪ್ರಮುಖ ಆಧಾರವಾಗಿದೆ.
ಮಾಹಿತಿ ತಂತ್ರಜ್ಞಾನದ ಅಂತರ್ಜಾಲ ಅಥವಾ ಇಂಟರ್‍ನೆಟ್ ಪರಿಚಯ ಮತ್ತು ವೇಗ-ಸರಾಗವಾಗಿ ಅಂತರರಾಷ್ಟ್ರೀಯ ದತ್ತಾಂಶ ಪಡೆಯುವ ಹಾಗೂ ತೆರಿಗೆ ವಿರಾಮ ಒದಗಿಸುವ ತಂತ್ರಜ್ಞಾನ ಪಾರ್ಕ್‍ಗಳನ್ನು ಸ್ಥಾಪಿಸುವ ಸರ್ಕಾರದ ಉತ್ಸಾಹಿ, ಕ್ರೀಯಾಶೀಲ ಯೋಜನೆಗಳು, ಉದ್ಯಮಗಳು ಶರವೇಗದಲ್ಲಿ ಬೆಳೆಯಲು ಸಹಕಾರಿಯಾದವು. ಹೊಸ ಸಹಸ್ರಮಾನವು ಜಾಗತಿಕ ನೆಲೆಯಲ್ಲಿ ತಂತ್ರಜ್ಞರ ಕೊರತೆಯನ್ನು ಭಾರತ ತುಂಬಲು ಮತ್ತು ನಾಯಕತ್ವ ವಹಿಸಿಕೊಳ್ಳಲು ಅನುವು ಮಾಡಿಕೊಟ್ಟಿತು. ಅಂತರ್ಜಾಲ ಸಂಪರ್ಕ (ಇಂಟರ್‍ನೆಟ್) ವ್ಯವಸ್ಥೆಯಲ್ಲಿ ದೂರಾವಾಣಿ ಮತ್ತು ಉಪಗ್ರಹ ಸಂಪರ್ಕ ಮೂಲಕ ಜಾಗತಿಕ ಕಂಪ್ಯೂಟರ್ ಜಾಲದೊಂದಿಗೆ ಜಗತ್ತಿನ ಮಿಲಿಯಾಂತರ ಜನರೊಂದಿಗೆ ಸಂಪರ್ಕ ಸಾಧಿಸಿ ಮಾಹಿತಿಗಳನ್ನು ಹಂಚಿಕೊಳ್ಳಲು ಯತ್ನಿಸಲಾಗುತ್ತದೆ.
ಇವತ್ತಿನ ದಿನಗಳಲ್ಲಿ ಅಂತರ್ಜಾಲ ಸೌಲಭ್ಯಗಳನ್ನು ಎಲ್ಲಾ ಸ್ಥಳಗಳಲ್ಲಿ ಮತ್ತು ಜೀವನದ ಎಲ್ಲಾ ಸ್ತರಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಕಳೆದ ಒಂದು ದಶಕದಲ್ಲಿ ಭಾರತವು ಕಂಪ್ಯೂಟರ್ ಸಂಪರ್ಕ ಜಾಲದಲ್ಲಿ ಭಾರೀ ಬೆಳವಣಿಗೆ ಕಂಡಿದೆ. ವ್ಯಕ್ತಿಗತ ಗೃಹಗಳಿಗೆ ಮತ್ತು ಕಂಪನಿಗಳಿಗೆ ನೀಡುತ್ತಿರುವ ಇಂಟರ್‍ನೆಟ್ ಸಂಪರ್ಕ ವ್ಯಾಪಕ ಹೆಚ್ಚುತ್ತಿದೆ. ಬಸ್ಸು, ರೈಲು, ವಿಮಾನ ಟೀಕೆಟ್‍ಗಳ ಮುಂಗಡ ಕಾಯ್ದಿರಿಸುವಿಕೆಯಂತೂ ಬಹುಪಾಲು ಜಾಲ ತಾಣಗಳ ಮೂಲಕವೇ ಆಗುತ್ತಿದೆ. ಅಷ್ಟೇ ಅಲ್ಲ, ನಿರ್ದಿಷ್ಟ ಬಗೆಯ ವಸ್ತುಗಳನ್ನಷ್ಟೆ ಮಾರಾಟ ಮಾಡುವ ತಾಣಗಳೂ ಪ್ರಾರಂಭವಾಗಿವೆ. ಇಂತಹ ತಾಣಗಳಲ್ಲಿ ಮಾರಾಟವಾಗುವ ವಸ್ತುಗಳ ವಿಷಯ ವ್ಯಾಪ್ತಿ ಒಳ ಉಡುಪುಗಳಿಂದ ಲೇಖನ ಸಾಮಗ್ರಿಗಳವರೆಗೆ, ತಾಂತ್ರಿಕ ಪುಸ್ತಕಗಳಿಂದ ಮಕ್ಕಳ ಆಟಿಕೆಗಳವರೆಗೆ ಹರಡಿಕೊಂಡಿರುವುದು ವಿಶೇಷ. ಪ್ರಸ್ತುತ ನಮ್ಮ ದೇಶದಲ್ಲಿ ಹತ್ತು ಕೋಟಿಗಿಂತ ಹೆಚ್ಚಿನ ಅಂತರರ್ಜಾಲ ಬಳಕೆದಾರರಿದ್ದಾರೆ ಎಂದು ಅಂಕಿ-ಅಂಶಗಳು ಹೇಳುತ್ತವೆ.
ಆನ್‍ಲೈನ್ ಶಾಪಿಂಗ್ ಹಾಗೂ ಸೊಶಿಯಲ್ ನೆಟವರ್ಕ್ ಪರಿಕಲ್ಪನೆಗಳನ್ನು ಒಟ್ಟುಗೂಡಿಸುವ ಸೋಶಿಯಲ್ ಶಾಪಿಂಗ್ ಕೂಡಾ ಸಾಕಷ್ಟು ಜನಪ್ರಿಯವಾಗಿವೆ. ಯಾವುದೇ ವಸ್ತು ಅಥವಾ ಸೇವೆಯನ್ನು ಒಂದಷ್ಟು ಜನ ಒಟ್ಟಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕೊಂಡಾಗ ಅದರ ಬೆಲೆ ಕಡಿಮೆಯಾಗುತ್ತದೆ ಎಂಬ ಸರಳ ತತ್ವವನ್ನು ಈ ಪರಿಕಲ್ಪನೆ ಬಳಸಿಕೊಳ್ಳುತ್ತದೆ. ಊಟ, ತಿಂಡಿ, ಪುಸ್ತಕ, ಸಿಡಿ, ಡಿವಿಡಿಗಳು, ಇಲೆಕ್ಟ್ರಾನಿಕ್ ಉತ್ಪನ್ನಗಳು, ಆರೋಗ್ಯಕ್ಕೆ ಸಂಬಂಧ ಸೇವೆಗಳು, ಪ್ರವಾಸ ಪ್ಯಾಕೇಜ್‍ಗಳು ಹೀಗೆ ಹಲವಾರು ಬಗೆಯ ಉತ್ಪನ್ನಗಳು ಸೊಶಿಯಲ್ ಶಾಪಿಂಗ್ ತಾಣಗಳ ಮೂಲಕ ಮಾರಾಟವಾಗುತ್ತವೆ.
ಮಾಹಿತಿ ತಂತ್ರಜ್ಞಾನದ ಸಾಧನವಾದ ದೇಶದ ವಿದ್ಯುನ್ಮಾನ ಉತ್ಪಾದನಾ ಕ್ಷೇತ್ರ ಅಪಾರವಾದ ಬೆಳವಣಿಗೆಯ ಅವಕಾಶಗಳ ಶೃಂಗದಲ್ಲಿದೆ. ಬಹಳ ವೇಗವಾಗಿ ಬೆಳೆಯುತ್ತಿರುವ ಜಾಗತಿಕ ಉದ್ಯಮಗಳಲ್ಲಿ ವಿದ್ಯುನ್ಮಾನ ಉದ್ಯಮ ಪ್ರಮುಖವಾದುದಾಗಿದೆ. ಭಾರತದಲ್ಲಿ ಈ ಉದ್ಯಮಕ್ಕೆ ಇರುವ ಬೇಡಿಕೆ 2020 ರ ವೇಳೆಗೆ 400 ಶತಕೋಟಿ ಡಾಲರ್‍ಗಳನ್ನು ತಲುಪುವ ನಿರೀಕ್ಷೆ ಇದೆ. ಜನಸಂಖ್ಯೆ ಬಾಹುಳ್ಯದಲ್ಲಿ ಜಗತ್ತಿನ ಎರಡನೇ ದೇಶವಾಗಿರುವ ಭಾರತ ತನ್ನ ಭರ್ಜರಿ ಬೆಳವಣಿಗೆಯೊಂದಿಗೆ ವಿಶ್ವದ ವಿದ್ಯುನ್ಮಾನ ಕ್ಷೇತ್ರದ ಪ್ರಮುಖ ಬಳಕೆದಾರ ದೇಶವಾಗಿದೆ. ಮತ್ತು ಆಗಿರುತ್ತದೆ.
ಮಾಹಿತಿ ತಂತ್ರಜ್ಞಾನದಲ್ಲಿ ಕಂಪ್ಯೂಟರ್ ಯಂತ್ರವೇ ರಾಜ. ಮಾಹಿತಿಯನ್ನು ವೇಗವಾಗಿ ರವಾನಿಸುವ ತಂತ್ರಜ್ಞಾನವು ಅದನ್ನು ಶೇಖರಿಸುವ ಮತ್ತು ರಕ್ಷಿಸುವ ಜವಾಬ್ದಾರಿಯನ್ನು ಹೊರುತ್ತದೆ. ಮಾಹಿತಿ ಎನ್ನುವುದರ ಬಗ್ಗೆ ಮಾನವನಿಗೆ ಬಹು ಪೂರ್ವದಿಂದಲೇ ಅರಿವಿದ್ದರೂ ಅದು ತಂತ್ರಜ್ಞಾನದ ಜೊತೆಗೆ ಬೆರೆತದ್ದು ಇತ್ತಿಚೆಗೆ. ಇಂದು ಪ್ರಪಂಚದ್ಯಾದಂತ ಜನ ಕಂಪ್ಯೂಟರ್‍ಗಳನ್ನು ವ್ಯವಹಾರಕ್ಕಾಗಿ ಮತ್ತು ಗೃಹೊಪಯೋಗಿ ಬಳಕೆಗಾಗಿ ಬಳಸುತ್ತಿದ್ದಾರೆ. ಮಾಹಿತಿ ತಂತ್ರಜ್ಞಾನದಲ್ಲಿ ಬಳಕೆಗೊಳ್ಳುತ್ತಿರುವ ಕಂಪ್ಯೂಟರ್‍ಗಳು ಆಧುನಿಕ ಸಂದರ್ಭದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಮಹತ್ತರ ಪಾತ್ರ ವಹಿಸಿದೆ. ಕಂಪ್ಯೂಟರ್‍ನ ಬಳಕೆ ವೈಜ್ಞಾನಿಕ ಸಂಶೋಧನೆಗಳಲ್ಲಿ, ವಾಣಿಜ್ಯ ವ್ಯವಹಾರದಲ್ಲಿ, ಆಡಳಿತದಲ್ಲಿ, ಉದ್ದಿಮೆಗಳಲ್ಲಿ, ಜಾಹಿರಾತುಗಳಲ್ಲಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ, ಬೃಹತ್ ಕೈಗಾರಿಕೆಗಳಲ್ಲಿ ಮುಂತಾದವುಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದೆ.
-ಸತೀಶ ರಡ್ಡಿ ಹಳ್ಳದಮನಿ
ಅರ್ಥಶಾಸ್ತ್ರ ಉಪನ್ಯಾಸಕರು
ಶ್ರೀ ಬಾಪುಗೌಡ ದರ್ಶನಾಪುರ ಸ್ಮಾರಕ
ಮಹಿಳಾ ಪದವಿ ಕಾಲೇಜು ಶಹಾಪುರ
ಮೋ.9986174385