ಗಡಿನಾಡ ಜಾನಪದ ಉತ್ಸವ ಕಾರ್ಯಕ್ರಮದಲ್ಲಿ ಗಮನ ಸೆಳೆದ ಕಲಾ ತಂಡಗಳು
ಯಾದಗಿರಿ, ಶಹಾಪುರ: ಜಾನಪದ ಕಲೆ ಸಂಸ್ಕೃತಿಯ ಪ್ರತಿಬಿಂಬವಾಗಿದ್ದು ಅದು ನಾಡಿನ ಘನತೆ ಗೌರವಗಳನ್ನು ಹೆಚ್ಚಿಸಿದೆ ಎಂದು ಜಾನಪದ ಸಾಹಿತಿ ನರಸಪ್ಪ ಚಿನ್ನಾಕಟ್ಟಿ ತಿಳಿಸಿದರು.
ತಾಲೂಕಿನ ಕನ್ಯಾಕೋಳೂರು ಗ್ರಾಮದಲ್ಲಿ ನವೋದಯ ಸಾಂಸ್ಕೃತಿಕ ಯುವಕ ಸಂಘ ಕನ್ಯಾಕೋಳೂರು, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಸ್ಥಳೀಯ ಗುರು ಮಹಾಂತೇಶ್ವರ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಗಡಿನಾಡು ಜಾನಪದೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದರು.
ಜಾನಪದ ಜನರ ಜೀವನದಲ್ಲಿ ಹಾಸು ಹೊಕ್ಕಾಗಬೇಕು, ಆದರೆ ಪ್ರಸ್ತುತ ಸಂದರ್ಭದಲ್ಲಿ ಜಾನಪದ ಕಲೆ ಗ್ರಾಮೀಣ ಭಾಗದಲ್ಲಿಯೂ ಅಪರೂಪವಾಗುತ್ತಿದೆ. ಜಾನಪದ ಸಾಹಿತ್ಯದ ಮೂಲ ಸೊಗಡನ್ನು ಕಳೆದುಕೊಳ್ಳುವಂಥ ಪರಿಸ್ಥಿತಿ ಬರುತ್ತಿದೆ.
ಇಂತಹ ಸಂದರ್ಭದಲ್ಲಿ ಹಲವು ಸಾಂಸ್ಕøತಿಕ ಯುವಕ ಸಂಘಗಳು, ಕರ್ನಾಟಕ ಜಾನಪದ ಪರಿಷತ್ ಹಾಗೂ ಕರ್ನಾಟಕ ಗಡಿ ಪ್ರಾಧಿಕಾರ ಜಾನಪದ ಕಲೆ ಉಳಿಸುವಲ್ಲಿ ನಾಡಿನ ಗ್ರಾಮೀಣ ಭಾಗದ ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸಿಕೊಡುವ ಕಾರ್ಯ ಇದು ಜನಪದ ಕಲೆಯ ಬೆಳವಣಿಗೆಗೆ ಸಾಕ್ಷಿಯಾಗಿದ್ದು, ಜಾನಪದ ಸಾಹಿತ್ಯ ಸಂಸ್ಕೃತಿ ಜನಸಾಮಾನ್ಯರಿಗೆ ದಿನದ ದುಡಿಮೆಯ ಬೇಸರವನ್ನು ಮನಸ್ಸಿನ ಭಾರವನ್ನು ನೀಗಿಸುವಲ್ಲಿ ಕಲೆ ಮನೋಲ್ಲಾಸವನ್ನು ಕೊಡುತ್ತದೆ.
ಜಾನಪದ ರಂಗಭೂಮಿ ಜಾನಪದ ಹಾಡುಗಳು ಉತ್ತಮ ಸಂದೇಶ ಬೀರುತ್ತಾ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪ್ರೇರಣೆ ನೀಡಿವೆ ಎಂದರು.
ಕರ್ನಾಟಕ ಜನಪದ ಪರಿಷತ್ ಯಾದಗಿರಿ ಜಿಲ್ಲಾಧ್ಯಕ್ಷ ಪ್ರಕಾಶ ಅಂಗಡಿ ಕನ್ನಳ್ಳಿ ಮಾತನಾಡಿ, ಜಾನಪದ ಕಲೆ ಸಂಸ್ಕೃತಿ ಗಡಿಭಾಗದ ಪ್ರದೇಶಗಳಲ್ಲಿ ನಶಿಸಿ ಹೋಗದಂತೆ ಜಾನಪದ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಅತ್ಯಂತ ಮಹತ್ವದ್ದಾಗಿದೆ, ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಗಡಿಜಿಲ್ಲೆಗಳಲ್ಲಿ ಅನೇಕ ಜನಪದ ಪ್ರತಿಭೆಗಳು ಮುಖ್ಯವಾಹಿನಿಗೆ ತರುವ ಕಾರ್ಯ ನಡೆಯಬೇಕಿದೆ.
ಇದಕ್ಕೆ ಸಾಂಸ್ಕೃತಿಕ ಯುವಕ ಸಂಘಗಳು ಮುಂದೆ ಬರಬೇಕು ಸರ್ಕಾರದ ಮಾನದಂಡಕ್ಕನುಗುಣವಾಗಿ ಕಲಾವಿದರಿಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡಲು ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಗರನಾಡಿನ ಹಿರಿಯ ಜಾನಪದ ಕಲಾವಿದ ಮೈಲಾರಪ್ಪ ಸಗರ ಮಾತನಾಡಿ ಜಾನಪದ ಸಾಹಿತ್ಯ ಜನರ ನಡೆ-ನುಡಿಯಲ್ಲಿ ತುಂಬಿಹೋಗಿದ್ದು ಅದರ ಕಂಪನ್ನು ಸೂಸುವ ಕಾರ್ಯ ಎಲ್ಲೆಡೆ ನಡೆಯಬೇಕು ಎಂದು ಜಾನಪದದ ಮೋಹರಂ ಪದ, ಹಂತಿ ಹಾಡುಗಳ ಮೂಲಕ ಗಮನಸೆಳೆದರು.
ಕಾರ್ಯಕ್ರಮದಲ್ಲಿ ಹಿರಿಯ ಜಾನಪದ ಕಲಾವಿದರಾದ ಪ್ರವೀಣ್ ಪತ್ತಾರ್ ಹುಣಸಿಗಿ, ಈರಪ್ಪ ಶಹಪೂರ್, ಚಂದಪ್ಪ, ಶರಣು ಕನ್ನಳ್ಳಿ, ಬಸಪ್ಪ ಗುಂತಗೋಳ ಹಣಮಾಸಗರ್, ಹಣಮಂತರಾಯ ಪೂಜಾರಿ ಹೆಗ್ಗಣದೊಡ್ಡಿ, ಭಾಷಾ ಸಾಬ್ ಜಮಾದಾರ್, ಶಂಕರ್ ಶಾಸ್ತ್ರಿ ಯಾದಗಿರಿ, ಅಯ್ಯಣ್ಣ ದೊಡ್ಮನಿ ದೋರನಹಳ್ಳಿ ಅವರಿಗೆ ಜಾನಪದ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆ ಮೇಲೆ ವಿಶ್ವಸೇವಾ ಸಂಸ್ಥೆಯ ನಾಗಯ್ಯ ಸ್ವಾಮಿ ಅಲ್ಲೂರು, ವಿಜಯ್ ಕುಮಾರ್, ಸಾಯಿಬಣ್ಣ ಪುರ್ಲೆ, ಮಡಿವಾಳಪ್ಪ ಪಾಟೀಲ್, ಮಲ್ಲಯ್ಯಸ್ವಾಮಿ ಇಟಿಗಿ , ಯುವ ಬರಹಗಾರ ಬಳಗದ ಎನ್.ಕೆ.ಶೇಖ್, ಮಲ್ಲಿಕಾರ್ಜುನ ಪಾಟೀಲ್, ನಾರಾಯಣಾಚಾರ್ಯ ಸಗರ ಇದ್ದರು.
ಜಾನಪದ ಗಾಯನ ಮತ್ತು ಕಲಾಪ್ರದರ್ಶನದಲ್ಲಿ ಪರಶುರಾಮ ಜಾವಳಕರ್ ಹಲಗೆ ವಾದನ, ಜಟ್ಟೆಪ್ಪ ಯಲಗಟ್ಟಿ ಡೊಳ್ಳುಕುಣಿತ, ಭಾಷಾ ಸಾಬ್ ಜಮಾದಾರ್ ಶಹನಾಯಿ ವಾದನ, ಬಸಪ್ಪ ಹನುಮಸಾಗರ ಡೊಳ್ಳು ಕುಣಿತ, ವಿಶ್ವನಾಥ ತೊಟ್ನಳ್ಳಿ ಪೋತರಾಜ ಕುಣಿತ, ಭೀಮರಾಯ ಭೋಸಗ ಕಣಿಹಲಗೆ, ಶಿವಪ್ಪ ಹೆಬ್ಬಾಳ ಹೆಜ್ಜೆ ಕುಣಿತ, ಮನೋಹರ ವಿಶ್ವಕರ್ಮ ಜಾನಪದ ಗಾಯನ, ಶ್ರೀ ಬಂಡೇಶ್ವರ ಭಜನ ಮಂಡಳಿ ಪಾರಿಜಾತ ಭಜನೆ, ನಾಗಪ್ಪ ಕುಂಬಾರ್ ತತ್ವಪದ, ಚಿನ್ನಪ್ಪ ಬಡಿಗೇರ್ ರಿವಾಯತ್ ಪದ, ನಿಂಗಣ್ಣ ನಾರಾಯಣಪುರ ಡೊಳ್ಳಿನ ಹಾಡು, ಯಂಕಣ್ಣ ಅಮ್ಮಾಪೂರ ಭಜನೆಪದ, ರಾಜಶೇಖರ್ ಶಹಾಪುರ ಗಜಲ್, ನಿಂಗಣ್ಣ ಸಾಹು ತಡಿಬಿಡಿ ರಂಗಗೀತೆ, ಮಹೇಶ್ ಪತ್ತಾರ ಜಾನಪದ, ಶಿವಮೂರ್ತಿ ಗೀಗಿಪದ ನಡೆಸಿಕೊಟ್ಟರು.