ಕಣ್ರಪ್ಪೆಯಲ್ಲಿ ಕುಳಿತಿರುವ ಕನಸಿನ ಮೇಲಾಣೆ
ಕಣ್ರಪ್ಪೆಯಲ್ಲಿ ಕುಳಿತಿರುವ ಕನಸಿನ ಮೇಲಾಣೆ
ಜಯಶ್ರೀ.ಜೆ. ಅಬ್ಬಿಗೇರಿ
ಸುತ್ತಲೂ ಕಣ್ಣು ಹಾಯಿಸಿದರೆ ಕನಸುಗಾರರ ಲೋಕವೊಂದು ಕಣ್ಣಿಗೆ ಬೀಳುತ್ತದೆ. ಚಿಗುರು ಎಲೆಗಳು, ಹಣ್ಣಿನ ಗೊಂಚ¯ಗಳು, ಮುತ್ತುಗಳು ತುಂಬಿದ ತೆನೆಯಂತೆ ಹೃನ್ಮನಗಳನ್ನು ಆಕರ್ಷಿಸುತ್ತವೆ.ನಿಜಕ್ಕೂ ಅದ್ಭುತ ಮೂಡಿಸುವ ರಂಗು ರಂಗಿನ ಕನಸನ್ನು ಎಷ್ಟು ಹೊತ್ತು ಜಾರಿ ಬೀಳದಂತೆ ಅದಕ್ಕೆ ಜೋತು ಬಿದ್ದು ನನಸಾಗಿಸಿಕೊಂಡವರ ಲೆಕ್ಕವಿಡಲು ಹರಸಾಹಸ ಪಡುತ್ತಿದೆ ಜಗತ್ತು. ಅದೆಂಥ ತಾಕತ್ತಿನ ಕನಸು ಕಂಡನೋ ಸಚಿನ ತೆಂಡೂಲ್ಕರ್ ಕ್ರಿಕೆಟ್ ದೇವರೇ ಆಗಿಬಿಟ್ಟ!
ನಟನೆಯಲ್ಲಿ ರಾಜಕುಮಾರ ರಾಜನಂತೆ ಮೆರೆದು ನಟಸಾರ್ವಭೌಮನಾದ. ಗೆಳೆಯರಿಂದ ಆತ್ಮೀಯರಿಂದ ಹದಿನಾರು ವರ್ಷದವರೆಗೂ ಮಂದ ಬುದ್ಧಿಯವನೆಂದು ಹೀಯಾಳಿಸಿಕೊಂಡ ಅಲ್ಬರ್ಟ್ ಐನಸ್ಟೀನ್ ಮೇದಾವಿ ವಿಜ್ಞಾನಿ ಎಂದು ಗರಿ ಮೂಡಿಸಿಕೊಂಡ. ದಡ್ಡ ವಿದ್ಯಾರ್ಥಿಯೆಂದು ಅವಮಾನಿಸಿ, ಶಾಲೆಯಿಂದ ಹೊರ ಹಾಕಲ್ಪಟ್ಟ ಥಾಮಸ್ ಅಲ್ವಾ ಎಡಿಸನ್ ಅತಿ ಹೆಚ್ಚು ಸಂಶೋಧನೆ ನಡೆಸಿ ಹೆಚ್ಚಿನ ಸಂಖ್ಯೆಯ ಪೆಟೆಂಟ್ ಪಡೆದ ವ್ಯಕ್ತಿಯಾದ.
ವಿಶೇಷ ಚೇತನನಾದ ಫ್ರಾಂಕ್ಲಿನ್ ರೂಸ್‍ವೆಲ್ಟ್ ವಿಶ್ವದ ಹಿರಿಯಣ್ಣನೆಂದು ಕರೆಸಿಕೊಳ್ಳುವ ಅಮೇರಿಕ ಅಧ್ಯಕ್ಷನಾಗಿ ಕಂಗೊಳಿಸಿದ. ಹೊರಗಿನ ಪ್ರಪಂಚವನ್ನು ನೋಡುವ ಕಣ್ಣುಗಳನ್ನು ಮಾತ್ರ ತೆರೆದರೆ ಬದುಕು ಢಾಳಾಗಿ ಎದ್ದು ಕಾಣುತ್ತದೆ. ಜಡತ್ವವನ್ನು ಸಾರುತ್ತದೆಂದು ನಮ್ಮ ಒಳಗಣ್ಣು ತೆರೆಯಿಸಿ ನೈಜ ಅಮೂಲ್ಯ ಬದುಕಿನ ಅಂದ ಆನಂದವನ್ನು ಸಾರಿದ, ವಿಶ್ವಕೆಲ್ಲ ವಿವೇಕವನ್ನು ಧಾರೆ ಎರೆದ ಸ್ವಾಮಿ ವಿವೇಕಾನಂದರ ಆಧ್ಯಾತ್ಮ ದೇಶವಾಸಿಗಳಿಗಾಗಿ ಮಿಡಿವ ಹೃದಯ ಎಲ್ಲಿ ಹುಡುಕಿದರೆ ಸಿಕ್ಕೀತು? ಇವನಾರವ ಇವನಾರವ ಎಂದೆನನ್ನದೇ ಇವ ನಮ್ಮವ ಎಂಬ ದೊಡ್ಡ ಗುಣ ಸಾರಿ ಪ್ರಪ್ರಥಮವಾಗಿ ಪ್ರಜಾಪ್ರಭುತ್ವದ ಪರಿಕಲ್ಪನೆಯ ರೀತಿಯಲ್ಲಿ ನಾಡು ನುಡಿ ಕಟ್ಟಿದ ಜಗದ್ಗುರು ಬಸವಣ್ಣನವರು, ಕನ್ನಡ ನಾಡಿನ ಮೊಟ್ಟ ಮೊದಲ ಕವಯಿತ್ರಿ ಅಕ್ಕ, ಮಾಡಿದ ಸಹಾಯ ಮರೆತು ಹೋಗುತ್ತದೆ.
ಕೊಟ್ಟ ನೋವು ನೆನಪಿನಲ್ಲಿರುತ್ತದೆ. ನೋವುಗಳನ್ನೇ ಇನ್ನಿಲ್ಲವಾಗಿಸಿ ಬಿಟ್ಟರೆ ದಿವ್ಯ ಜೀವನ ಪ್ರಾಪ್ತಿಯೆಂದು ಮದರ್ ತೆರೆಸಾ ನಗುತ್ತಲೇ ನೋವುಗಳನ್ನು ಮರೆಯಾಗಿಸುವ ಶಪಥ ತೊಟ್ಟವರಂತೆ ಸೇವೆಗೈದಳು. ಸೇವೆಗೆ ಪರ್ಯಾಯ ಪದವಾಗಿ ನಿಂತಳು.ಶಿಸ್ತು ಬದ್ಧತೆಯಿಂದ ಸಾಗುವ ಇರುವೆ ಸಾಲಿನಂತೆ ಕೈಗೆತ್ತಿಕೊಂಡ ಯೋಜನೆಯಿಂದ ಹಿಂದೆ ಹೆಜ್ಜೆ ಇಡದೇ ಮುಂದೆ ಮುಂದೆ ಸಾಗಿ ಪ್ರಗತಿ ಮಾರ್ಗಕ್ಕೆ ರಾಜ ಮಾರ್ಗವನ್ನು ನಿರ್ಮಿಸಿದ ಎಂ ವಿಶ್ವೇಶ್ವರಯ್ಯನವರು.ಹೀಗೆ ವಿಶ್ವದಾದ್ಯಂತ ಕನಸಿನ ರುಚಿಯನ್ನು ಜಗಕ್ಕೆ ತೋರಿಸಿದ ವಿಶ್ವ ವಂದ್ಯರನ್ನು ಪಟ್ಟಿ ಮಾಡುತ್ತ ಹೋದರೆ ಹನುಮನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ.
ಅಂದಹಾಗೆ ಮಹತ್ತಾದ ಕನಸೊಂದೇ ಮನುಷ್ಯನನ್ನು ದೊಡ್ಡವನನ್ನಾಗಿಸುವುದಿಲ್ಲ. ಹೊಡೆದ ಕಲ್ಲುಗಳಿಂದಲೇ ಕೋಟೆ ಕಟ್ಟಿಕೊಳ್ಳಬೇಕೆನ್ನುವ ಸಂದೇಶದ ಜೀವನ ನಡೆಸಿದವರು ಸಂವಿಧಾನ ಶಿಲ್ಪಿ ಡಾ: ಬಿ ಆರ್ ಅಂಬೇಡ್ಕರ್. ಇದೇ ಸಾಲಿನಲ್ಲಿ ಅಬ್ರಹಾಂ ಲಿಂಕನ್ ಅಮಿತಾಬ್ ಬಚ್ಚನ್ ನಿಲ್ಲುತ್ತಾರೆ.
ಇರುವ ಕಂಗಳು ಎರಡೇ ಆದರೂ ಕಾಣುವ ಕನಸುಗಳಿಗೆ ಲೆಕ್ಕವಿಲ್ಲ. ಅತ್ಯಂತ ವಿಚಿತ್ರವಾದ ಕನಸುಗಳು ಕಣ್ರೆಪ್ಪೆಗಳು ಅಂಟದಂತೆ ನೋಡಿಕೊಳ್ಳುತ್ತವೆ. ಒಮ್ಮೊಮ್ಮೆ ಗಾಢ ನಿದ್ದೆಯಲ್ಲಿ ಬೆಚ್ಚಿ ಬೀಳಿಸುತ್ತವೆ ಹಾಸಿಗೆಯಲ್ಲಿ ಉರುಳಾಡುವಂತೆ ಮಾಡುತ್ತವೆ. ಬೀದಿ ಬದಿ ತುಟಿ ಅರಳಿಸಿ ನಿಂತ ಸುಂದರ ಹೂಗಳ ಕಣ್ಣೆವೆ ಮುಚ್ಚದೇ ನೋಡಿದಂತಾಗಿ ವಾವ್! ಚೆಂದ ಎಂದು ಬಡಬಡಿಸುತ್ತೇವೆ. ತಿಳಿನೀರಿನ ಕೊಳದಷ್ಟೇ ಶುದ್ಧ ಎನಿಸುವ ಭಾವವನ್ನೂ ಉಕ್ಕಿಸುತ್ತವೆ. ಕನಸುಗಳ ರೂಪ ಒಂದೋ ಎರಡೋ ಹೇಳತೀರದು.ಅವುಗಳ ಬಣ್ಣ ಸಾವಿರ ಸಾವಿರ.
ಕನಸುಗಳು ಆತ್ಮದ ಭಾಷೆಗಳು.’ ಎಂದು ಪ್ರಾಜ್ಞರು ಹೇಳುವ ಮಾತನ್ನು ಕೇಳಿದ ನೆನಪು.ಮುದ್ದು ಕಂದಮ್ಮನಂತೆ ಅವುಗಳ ಭಾವ ದಿವ್ಯ ಜಗದಲ್ಲಿ ಏನು ದೊರೆತರೂ ಸಂತಸವಿಲ್ಲ ಸಮಾಧಾನವಿಲ್ಲ. ಆದರೆ ಕಂಡ ಕನಸೊಂದು ನನಸಾದರೆ ಅದಕ್ಕಿಂತ ಮಿಗಿಲಾದ ಆನಂದ ಮತ್ತೊಂದಿಲ್ಲ. ಪುಟ್ಟ ಮಕ್ಕಳು ಪುಟಿಯುವ ಚಿಕ್ಕ ಚೆಂಡಿಗೆ ಅಳುವಂತೆ ನಮ್ಮ ದೇಹ ದೊಡ್ಡದಾದರೂ ಮನಸ್ಸು ಕನಸು ಸಾಕಾರಗೊಳ್ಳುವವರೆಗೆ ರಚ್ಚೆ ಹಿಡಿಯುತ್ತದೆ. ಕನಸಿನಲ್ಲಿ ಹಾರುವ ಶಕ್ತಿ ದೊರೆತರೆ ಶುಭ್ರ ನೀಲಾಗಸದಲ್ಲಿ ತೇಲುವಂತೆ ಮಾಡುತ್ತದೆ.
ಅಬ್ಬಬ್ಬಾ! ನೀವು ಏನೇ ಹೇಳಿ ಕನಸಿನ ಲೋಕವೇ ಸುಂದರ ಅನ್ನಿಸದೇ ಇರಲಾರದು. ಬದುಕನ್ನು ಬದಲಿಸುವ ಗ್ರಹಿಕೆಯನ್ನು ವಿಸ್ತರಿಸುವ ಅಗಾಧ ತಾಕತ್ತು ಕನಸುಗಳಿಗಿದೆ. ಹಾಗೆ ನೋಡಿದರೆ ಕನಸು ಇರದೇ ಇದ್ದಿದ್ದರೆ ನಾವಿಷ್ಟು ಕ್ರಿಯಾಶೀಲರಾಗಿರಲು ಸೃಜನಶೀಲರಾಗಿರಲು ಸಾಧ್ಯವೇ ಇರುತ್ತಿರಲಿಲ್ಲ ಎನಿಸುತ್ತದೆ. ಜಡತ್ವವನ್ನು ಹೋಗಲಾಡಿಸುವ ಚುಂಬಕಗಳು ಈ ಕನಸುಗಳು.ಕನಸಿನ ಕಡಲಲ್ಲಿ ಬಿದ್ದವರಿಗಿದು ಈಜು ಕಲಿಸದಿರದು. ಏಕತಾನತೆಯ ನಡುವೆ ಬಿದ್ದರೆ ಸುತ್ತ ಮುತ್ತಲಿರುವ ಸುತ್ತಲಿನವರು ತುಳಿಯಬಹುದು.
ತಳ್ಳಬಹುದು ಪಕ್ಕಕ್ಕೆ ಎಳೆದು ಒಗೆಯಬಹುದೆಂಬ ಅರಿವು ಮೂಡಿಸಿ ಇನ್ನಿಲ್ಲದಂತೆ ಆವರಿಸಿಬಿಡುವುದು.ಒಬ್ಬ ವ್ಯಕ್ತಿ ಮುಳ್ಳು ಮತ್ತು ಕಲ್ಲಿನ ಮೇಲೆ ನಡೆಯದೇ ಒಮ್ಮೆಲೇ ರೇಷ್ಮೆಯ ಹಾಸಿಗೆ ಮೇಲೆ ಮಲಗಿದರೆ ರೇಷ್ಮೆಯ ಹಿತಾನುಭವ ಅಷ್ಟಾಗಿ ಅನುಭವಕ್ಕೆ ಬಾರದು. ಅಷ್ಟೇ ಅಲ್ಲ ಮನಸ್ಸಿಗೆ ಅಷ್ಟೊಂದು ಮುದವನ್ನೂ ನೀಡದು. ಕನಸನ್ನು ಪ್ರೀತಿಸುವವನು ಬದುಕನ್ನು ಅತಿಯಾಗಿ ಪ್ರೀತಿಸುತ್ತಾನೆ. ಅದು ಎಷ್ಟೇ ಚಾಟಿ ಏಟು ಕೊಟ್ಟರೂ ನಗುತ್ತಲೇ ಸ್ವೀಕರಿಸುತ್ತಾನೆ. ವಿವೇಕಾನಂದರ ವಿವೇಕದ ನುಡಿಯಂತೆ ‘ನಿಮ್ಮ ತಪ್ಪುಗಳನ್ನು ಹರಿಸಿರಿ. ನೀವು ಸಾವಿರ ಬಾರಿ ಸೋತರೂ ಇನ್ನೊಂದು ಬಾರಿ ಪ್ರಯತ್ನಿಸಿ.’ ಎನ್ನುತ್ತವೆ ಕನಸುಗಳು.
ಅಪಾಯ ಕುತ್ತಿಗೆ ಮಟ್ಟಕ್ಕೆ ಬಂದರೂ ಭರವಸೆಯ ಹೆಜ್ಜೆ ದೃಢವಾಗಿಯೇ ಇರುತ್ತದೆ. ಹೇಗೆ ಮುನ್ನಡೆಯಬೇಕು? ಗೊತ್ತು ಗುರಿಯಿಲ್ಲದೇ ಕಂಡ ಕಂಡ ಕೆಲಸಗಳಿಗೆ ಕೈ ಹಾಕುವವರ ಕನಸುಗಳು ಅಲ್ಲಿಯೇ ಮಲಗಿ ಬಿಡುತ್ತವೆ. ಕನಸು ನನಸಾಗಿಸಲು ಸುಸ್ಪಷ್ಟವಾದ ಹಾಗೂ ವಿವರಪೂರ್ಣವಾದ ಯೋಜನೆಯನ್ನು ರೂಪಿಸಲೇಬೇಕು.ಉಪಯೋಗಿಸುವ ಮುನ್ನ ಕತ್ತಿಯನ್ನು ಚೆನ್ನಾಗಿ ಮಸಿಯಲಾಗುತ್ತದೆ. ಅಂತೆಯೇ ಸದಾ ಬುದ್ಧಿಯನ್ನು ಸಾಣೆ ಹಿಡಿಯುವ ರೂಢಿ ಇಲ್ಲದವರಿಗೆ ಯೋಜನೆ ರೂಪಿಸಲು ಬೌದ್ಧಿಕ ಸಾಮಥ್ರ್ಯದ ಕೊರತೆಯಾಗುತ್ತದೆ.
ಅಂಥವರು ಬದುಕಿನ ಉಸಿರಿನ ಕೊನೆಯವರೆಗೂ ಕನಸಿನ ಲೋಕದಲ್ಲೇ ಉಳಿದು ಬಿಡುತ್ತಾರೆ.ಪ್ರತಿ ದಿನವೂ ನಮಗೆ ಕನಸನ್ನು ಬೆನ್ನು ಹತ್ತುವ ಅವಕಾಶವಿರುತ್ತದೆ. ಆಗ ಸುರಕ್ಷಿತ ಗೂಡಿನಲ್ಲಿ ಉಳಿಯಲು ನೋಡಿದರೆ ಕನಸುಗಳು ಹಳಸಲಾಗಿ ಬಿಡುತ್ತವೆ. ನಾವು ಯೋಚಿಸುತ್ತ ಕುಳಿತುಕೊಂಡರೆ ಯೋಚನೆಯಲ್ಲೇ ಜೀವನದ ಅಂಚು ಬಂದು ಬಿಡುತ್ತದೆ. ಆಗ ಪಶ್ಚಾತ್ತಾಪ ಪಟ್ಟರೆ ಯಾವುದೇ ಪ್ರಯೋಜನವಿಲ್ಲ.
ಕನಸಿನ ನಿಜವಾದ ತುಡಿತ ಮತ್ತು ದುಡಿತ ಸೀಮಾತೀತವಾದ ಆನಂದವನ್ನು ನೀಡುತ್ತದೆ. ನಾನೊಬ್ಬ ದೊಡ್ಡ ಕನಸುಗಾರ ನನ್ನ ಹತ್ತಿರ ಒಳ್ಳೆಯ ಯೋಜನೆಗಳಿವೆ. ಕನಸುಗಾರನೊಬ್ಬ ಎಲ್ಲೆಂದರಲ್ಲಿ ಹೇಳಿಕೊಂಡು ತಿರುಗುವುದಿಲ್ಲ. ನಾನು ಕಂಡ ಕನಸುಗಳನ್ನು ಖಂಡಿತ ನನಸಾಗಿಸುತ್ತಿದ್ದೆ ಆದರೆ ಅದಕ್ಕೆ ಸಾಥ್ ನೀಡುವ ವಾತಾವರಣವಿಲ್ಲ ಎಂದು ಹೇಳುತ್ತ ತಿರುಗುವ ವ್ಯಕ್ತಿಗಳನ್ನು ಕಾಣುತ್ತೇವೆ. ನನ್ನಿಂದಾಗುವುದಿಲ್ಲ ಅದೇನು ಮಹಾ ಎಂಬ ಗರ್ವ ದುರಭಿಮಾನಗಳು ಕನಸಿನ ಹಾದಿಯಲ್ಲಿ ಮುಳ್ಳುಗಳಿದ್ದಂತೆ.ಸೋಲಿಗೆ ಹೆದರಿ ಕನಸುಗಳ ಬೆಂಬತ್ತಲು ಹಿಂಜರಿಯುವರು.
ಹೆದರಬೇಡಿ ಪ್ರಯತ್ನಿಸಿ ಏಕೆಂದರೆ ಯಾವುದೇ ವ್ಯಕ್ತಿ ಪ್ರಯತ್ನಿಸುವುದನ್ನು ನಿಲ್ಲಿಸುವವರೆಗೆ ಸೋಲುವುದಿಲ್ಲ. ಪ್ರಯತ್ನಿಸುವವರೆಗೆ ನನಸು ಹಸಿರಾಗಿಯೇ ಇರುತ್ತದೆ. ಕನಸಿನಲ್ಲಿರುವ ಸೌಂದರ್ಯವನ್ನು ಆನಂದಿಸಬೇಕೆಂದರೆ ಅದನ್ನು ನನಸಾಗಿಸಲು ಬೆವರು ಹರಿಸಬೇಕು. ನನಸಾಗುವವರೆಗೂ ಕಾಯುವ ತಾಳ್ಮೆಯೂ ನಮ್ಮಲ್ಲಿರಬೇಕು. ಕನಸಿನಷ್ಟು ಪ್ರಬಲವಾದ ಪ್ರೇರಕ ಶಕ್ತಿ ಇನ್ನೊಂದಿಲ್ಲ. ಕನಸುಗಳನ್ನು ಅದುಮಿಟ್ಟುಕೊಂಡರೆ ಮುಂದೊಂದು ದಿನ ಮನಸ್ಸನ್ನು ನೋಯಿಸುವುದು ಖಚಿತ. ಕನಸುಗಳನ್ನು ತುಳಿದರೆ ಅದರಿಂದ ಸಂತೋಷವೇ ನಾಶವಾಗುತ್ತದೆ. ಜೀವನ ಪ್ರೀತಿಯೇ ಮಾಯವಾಗುತ್ತದೆ. ಕನಸು ಎಲ್ಲಕ್ಕಿಂತ ಬಲಶಾಲಿಯಾದುದು ಆದರೆ ಅದರ ಮುಂದೆ ಮೈ ಬಗ್ಗಿಸಬೇಕು.ಕಣ್ರಪ್ಪೆಯಲ್ಲಿ ಕುಳಿತಿರುವ ಕನಸಿನ ಮೇಲಾಣೆ. ಬದುಕು ಆನಂದ ಸಾಗರದಂತೆ ಮುದ ನೀಡುವುದು ಶತಸಿದ್ಧ.
ಇಂಗ್ಲೀಷ್ ಉಪನ್ಯಾಸಕರು.
ಸ.ಪ.ಪೂ.ಕಾಲೇಜು ಬೆಳಗಾವಿ.
9449234142