ಕಥೆಸಾಹಿತ್ಯ

“ಬಂಗಾರದ ಜೀವ” ಹೆತ್ತಮ್ಮನ ಮಾದರಿ ಬದುಕು ನೆನೆದು ಕಣ್ಣೀರು -ಮುದನೂರ್ ಬರಹ

“ಬಂಗಾರದ ಜೀವ” ನನ್ನ ಹೆತ್ತಮ್ಮನ ಬದುಕು ಮಹಿಳೆಯರಿಗೆ ಮಾದರಿ

ನಿತ್ಯ ತೆಗೆದು ಹಾಕಿದ ಹಿಡಿ ಜೋಳ ಬರಗಾಲವನ್ನೇ ನೀಗಿಸಿತ್ತು…

ಆ ಹೆಣ್ಣುಮಗಳು ಸಿದ್ದಪ್ಪ ಸಾಹುಕಾರನ ಮನೆಯ ಮುದ್ದಿನ ಮಗಳು. ಹುಟ್ಟುತ್ತಲೇ ಚಿನ್ನದ ಒಡವೆ, ಆಭರಣಗಳನ್ನು ಮೈಗೊದ್ದುಕೊಂಡು ಬದುಕಿದ ಬಂಗಾರದಂತವಳು. ಬಂಗಾರವನ್ನು ಸೇರಿನಲ್ಲಿ ಅಳೆಯುವ ಶ್ರೀಮಂತಿಕೆಯ ಕುಟುಂಬದಲ್ಲಿ ಜನಿಸಿದ್ದಳು. ಅವಳ ಗಿಳಿ ಮೂಗಿಗೆ ಮುತ್ತಿನ ರಾಶಿ, ಕಿವಿಗಳಿಗೆ ಐದೌದು ಓಲೆ, ತೋಳಿಗೆ ಒಂಕಿ, ಕೈಗೆ ಜೋಡು ಬಳೆ, ಸೊಂಟಕ್ಕೆ ಡಾಭು, ಕಾಲಿಗೆ ನಾಲ್ಕು ಜತೆ ಬೆಳ್ಳಿ  ಚೈನು. ಹೂ ಮೂಡಿದಾಗ ತಲೆಗೂದಲಿಗೆ ಹಾಕುವ ಪಿನ್ನುಗಳು ಸಹ ಚಿನ್ನ-ಬೆಳ್ಳಿಯವೇ ಆಗಿದ್ದವು. ಆದರೆ, ನಿಜಕ್ಕೂ ಸತ್ವ ಪರೀಕ್ಷೆಯೇನೋ  ಗೊತ್ತಿಲ್ಲ. ಬಂಗಾರದ ವೈಭೋಗ ಅರಿವಿಗೆ ಬರುವ ಮುಂಚೆಯೇ ಆ ತಾಯಿಯನ್ನು ಬಂಗಾರದ ಪರಿಚಯವೇ ಇಲ್ಲದ ಕಡು ಬಡ ಕುಟುಂಬದ  ವ್ಯಕ್ತಿಗೆ ಕೊಟ್ಟು ಮದುವೆ ಮಾಡಲಾಯಿತು. ಆಗಲೇ ಬಂಗಾರದ ಮನೆಯ ಮುದ್ದು ಬಾಲೆಯೇ “ನಿಜವಾದ ಬಂಗಾರ” ಎಂಬುದು ಸಮಾಜಕ್ಕೆ ಗೊತ್ತಾಗಿದ್ದು.

ಬಂಗಾರ ಬಣ್ಣದ ತುಣುಕನ್ನು ಓರೆಗೆ ಹಚ್ಚಿ ನೋಡಿದ ಬಳಿಕವಷ್ಟೇ ಅಕ್ಕಸಾಲಿಗ ಬಂಗಾರದ ಅಸಲಿಯತ್ತನ್ನು ಹೇಳುತ್ತಾನಲ್ಲವೇ ಅಂಥದ್ದೇ ಕಥೆಗೆ ಆ ತಾಯಿ ಜೀವಂತ ಸಾಕ್ಷಿಯಾದಳು. ಬಡ ಕುಟುಂಬದ ಮನೆಯ ಹಿರಿಯ ಸೊಸೆಯಾದ ಆ ತಾಯಿಗೆ ದೊಡ್ಡ ಕುಟುಂಬದ ನೊಗ ಹೊರುವ ಜವಬ್ದಾರಿ ಹೆಗಲಿಗೆ ಬಿದ್ದಿತ್ತು. ಪಟ್ಟಣದಲ್ಲಿದ್ದ ಮನೆಯಲ್ಲಿ 8ಜನ ಸೇರಿ, ನಾಲ್ಕಾರು ಜನ ಮಕ್ಕಳು, ಬೀಗರು-ಬಿದ್ದರು ಅಂತ ನಿತ್ಯವೂ ಬಂದು ಹೋಗುವವರಿದ್ದರು. ಎಲ್ಲರಿಗೂ ಅಡಿಗೆ ಮಾಡುವುದು ಸೇರಿ ಕಟ್ಟಿಗೆ ಒಲೆ ಹಚ್ಚಲು ಗುಡ್ಡಕ್ಕೆ ಹೋಗಿ ಕಟ್ಟಿಗೆ ತರುವುದು, ಕೆರೆಗೆ ಹೋಗಿ ಬಟ್ಟೆ ಒಗೆಯುವುದು ಹಾಗೂ ಇಸ್ತ್ರೀ ಮಾಡುವ ಕುಲ ಕಸುಬನ್ನು ನಿಭಾಯಿಸಬೇಕಿತ್ತು. ಹೀಗೆ ಕ್ಷಣಹೊತ್ತೂ ಪುರಸೊತ್ತಿಲ್ಲದೆ ಎಲ್ಲವನ್ನೂ ಆ ತಾಯಿ ಮಾಡಲೇಬೇಕಿತ್ತು.  ಬಂಗಾರದ ಮನೆಯಿಂದ ಬಂದ ಆ ತಾಯಿ ಕೊಂಚವೂ ಬೇಸರಿಸಿಕೊಳ್ಳದೇ, ಒಂದಿನವೂ ಇದೆಲ್ಲಾ ನನ್ನಿಂದಾಗಲ್ಲ ಎಂಬ ಮಾತನಾಡಲೇ ಇಲ್ಲ.  ಬದಲಾಗಿ ಇದು ನನ್ನ ಕರ್ತವ್ಯ ಎಂದೇ ಭಾವಿಸಿ ಎಲ್ಲಾ ಕೆಲಸವನ್ನು ಮಾಡುತ್ತಿದ್ದಳು.

ಸಿರಿವಂತರ ಮನೆಯಿಂದ ಬಂದಿದ್ದ ತಾಯಿ ಎಂದೂ ಸಿರಿತನದ ದೌಲತ್ತು ತೋರಲೇ ಇಲ್ಲ. ಎಲ್ಲರೊಳಗೊಂದಾಗಿ ತನ್ನ ತವರುಮನೆಯ ಶ್ರೀಮಂತಿಕೆಯನ್ನೇ ಮರೆತು ಬಡವರ ಮನೆಯ ಹೆಣ್ಣಾಗಿ ಬಾಳಿದಳು. ತನ್ನ ಕಾಲ್ಗುಣದಿಂದಲೇ ಗಂಡನ ಮನೆಗೆ ಸಿರಿವಂತಿಕೆ ಬಂದಿತೆಂದರೂ ಸಹ ಎಂದೂ ಗರ್ವ ಪಡಲೇ ಇಲ್ಲ. ಕೊನೆವರೆಗೆ ಗುಲಗಂಜಿ ಬಂಗಾರವನ್ನು ಸಹ ಪತಿ, ಪುತ್ರರ ಬಳಿ ಕೇಳಲೇ ಇಲ್ಲ. ಯಾರೊಬ್ಬರಿಗೂ ಕೇಡನ್ನು ಬಯಸದೆ ,  ಒಂದೇ ಒಂದು ಮಾತು ಯಾರೊಬ್ಬರಿಗೂ ತಿರುಗಿ ಹೇಳದೆ ಬದುಕಿದಳು. ತನ್ನ ತವರು ಮನೆಯವರು ನೀಡಿದ ಆಭರಣವನ್ನು ಸಹ ತನ್ನ ಕುಟುಂಬದ ಏಳ್ಗೆಗಾಗಿ ನಿಸ್ವಾರ್ಥದಿಂದ ತ್ಯಾಗ ಮಾಡಿದಳು. ಆದರೆ. ಬಲಗೈಯಿಂದ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಎಂಬಂತೆ ಕೊನೆವರೆಗೂ ಒಂದೇ ಒಂದು ಮಾತನ್ನು ತನ್ನ ಮಕ್ಕಳಿಗೂ ಸಹ ಹೇಳಲಿಲ್ಲ. ಪರಿಣಾಮ ಆ ತಾಯಿಯ ಮನೆತನಕ್ಕೆ ಕೇಡು ಬಯಸುವವರೂ ಸಹ ಆ ಹೃದಯಜೀವಿ ನೆನದರೆ ಸಾಕು ಎದೆ ಮುಟ್ಟಿಕೊಂಡು ನಮಸ್ಕರಿಸುತ್ತಾರೆ. ಅದು ಆ ತಾಯಿಯ ಹೃದಯ ಶ್ರೀಮಂತಿಕೆಗಿರುವ ತಾಕತ್ತು!

ಅಂಥ ಅಪರೂಪದ ತಾಯಿಯಿಂದ ಒಂದಿನ ಆ ಮನೆಯಲ್ಲೊಂದು ಪವಾಡವೇ ನಡೆದು ಬಿಡುತ್ತದೆ. ಭೀಕರ ಬರ ಎದುರಾದ ಪರಿಣಾಮ ಕೆಲಸವೂ ಇರಲ್ಲ. ಜಮೀನಿನಲ್ಲಿ ಬೆಳೆಯೂ ಇರೋದಿಲ್ಲ. ಬಡ ಕುಟುಂಬಕ್ಕೆ ಸಾಲ ಕೊಡುತ್ತಿದ್ದ ರಾಮಾದ್ಬಿ ಎಂಬ ಓರ್ವ ಮಹಿಳೆ ಆಗಲೇ ಎರಡು ಸಲ ಸಾಲ ಕೊಟ್ಟಿರುತ್ತಾಳೆ. ಹೀಗಾಗಿ, ಯಾರ ಬಳಿಯೂ ಸಾಲ ಸಿಗದೆ ಇಡೀ ಕುಟುಂಬ ಊಟಕ್ಕೆ ಗತಿಯಿಲ್ಲದೆ ಕುಳಿತಿರುತ್ತದೆ. ಅಂಗಡಿಗಳಲ್ಲಿ ಒಂದೊಂದೇ ಸೇರು ಜೋಳ ತಂದು ರೊಟ್ಟಿ ಮಾಡುವುದು, ರೊಟ್ಟಿಗೆ ತರಕಾರಿ ಕೂಡ ತಂದು ಪಲ್ಯ ಮಾಡಲೂ ಆಗದೆ ಬೆಲ್ಲ ತಂದು ರೊಟ್ಟಿ ಬೆಲ್ಲ ಕಲಿಸಿ ತಿನ್ನುವ ದುಸ್ಥಿತಿ ಎದುರಾಗುತ್ತದೆ. ಒಂದಿನ, ಎರಡು ದಿನಗಳ ಬಳಿಕ ಅದೂ ಕಷ್ಟವಾಗುತ್ತದೆ.

ಮನೆಯ ಹಿರಿಯಜ್ಜಿ ಮುದ್ದಮ್ಮ ತನ್ನ ಆತ್ಮೀಯ ಗೆಳತಿಗೆ ಹೇಗೋ ಪುಸಲಾಯಿಸಿ ಒಂದು ಗಡಗಿ ಜೋಳ ಕೇಳಿ ಬರುತ್ತಾಳೆ. ಸರಿ ಸಂಜೆ ಹೊತ್ತಿಗೆ ಜೋಳ ಕೊಡುತ್ತೇನೆಂದಾಗ ಹೇಗೋ ಈ ತಿಂಗಳು ಕಳೆದ್ರೆ ಸಾಕು ಮುಂದೇ ಹೇಗೋ ಆಗುತ್ತದೆಂದು ಸಂಭ್ರಮದಿಂದ ಮನೆಗೆ ಬಂದು ಅಡಕಲು ಗಡಿಗೆ ತೆಗೆಯುತ್ತಾಳೆ. ಆಗ ಅಜ್ಜಿಗೆ ಅಚ್ಚರಿ ಕಾದಿರುತ್ತದೆ. ಅಡಕಲು ಗಡಿಗೆ ತೆಗೆದರೆ ಕೆಳಗಿದ್ದ ದೊಡ್ಡ ಗಡಿಗೆ ತುಂಬೆಲ್ಲಾ ಬೆಳ್ಳನೆ ಜೋಳ! ‘ಏ ಬಾರಮ್ಮ ಇಲ್ಲಿ’ ಎಂದು ಸೊಸೆಯನ್ನು ಕರೆಯುತ್ತಾಳೆ, ‘ಅಲಾ ಬಾರಾ ಇಲ್ಲಿ ನೋಡು ಬಾ’ ಅಂತ ಪತಿಯನ್ನು ಕರೆಯುತ್ತಾಳೆ, ಮಕ್ಕಳು, ಮೊಮ್ಮಕ್ಕಳನ್ನು ಕರೆದು ಬೆರಗಾಗುತ್ತಾಳೆ. ತನ್ನನ್ನು ತಾನೇ ನಂಬದೆ  ಖುಷಿಯಲ್ಲಿ ಜೋರಾಗಿ ಮಾತನಾಡಲಾರಂಭಿಸುತ್ತಾಳೆ ಅಜ್ಜಿ. ಗಡಿಗಿ ಜೋಳ ಕಂಡವರಿಗೆಲ್ಲಾ ಅಚ್ಚರಿಯೋ ಅಚ್ಚರಿ.

ಆಗ ವಿಚಾರಿಸಿ ನೋಡಿದಾಗ ಎಲ್ಲರಿಗೂ ಗೊತ್ತಾಗುತ್ತದೆ ಇದು ಹಿರಿ ಸೊಸೆಯ ಪವಾಡ. ಹೌದು ಹಿಂದೆಲ್ಲೋ ಕೇಳಿದ್ದ ಕಥೆಯನ್ನು ಅನುಸರಿಸಿದ್ದ ಆ ತಾಯಿ ಪ್ರತಿ ದಿನ ಅಡಕಲು ಗಡುಗೆಯಿಂದ ಜೋಳ ತೆಗೆಯುವ ವೇಳೆ ಒಂದು ಹಿಡಿ ಜೋಳವನ್ನು ದೊಡ್ಡ ಗಡುಗೆಗೆ ಹಾಕುತ್ತ ಬಂದಿರುತ್ತಾಳೆ. ಆ ಗಡುಗೆ ಜೋಳ ಕಷ್ಟಕಾಲದಲ್ಲಿ ಆ ಕುಟುಂಬಕ್ಕೆ ಎದುರಾಗಿದ್ದ ಬರವನ್ನು ನೀಗಿಸುತ್ತದೆ. ಅಂತ ಸಿರಿತನದ ಮನೆಯಿಂದ ಬಂದಿದ್ದ ತಾಯಿ ಬಡತನದ ಮನೆಯಲ್ಲಿ ಬಡವಳಾಗಿ ಬದುಕುತ್ತಾಳೆ. ಮಾದರಿ ಜೀವನ ನಡೆಸಿ ‘ನಿಜ ಬಂಗಾರ’ ಅನ್ನಿಸಿಕೊಳ್ಳುತ್ತಾಳೆ ಕಣ್ರೀ.

ಆ ‘ಬಂಗಾರದ ಜೀವ’ ಬೇರಾರು ಅಲ್ಲ. ನನ್ನ ಹೆತ್ತಮ್ಮ ಅಯ್ಯಮ್ಮ ಮುದನೂರ್! ಈವತ್ತು ಮಹಾಲಯ ಅಮಾವಾಸ್ಯೆ ಅಂತೆ. ನನ್ನ ಪತ್ನಿ ಅಮ್ಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನನಗೂ ಕರೆದಳು. ಅಮ್ಮ ನೆನಪಾದಳು… ಪೂಜಿಸುವುದೆಂದರೆ ಇಂಥ ಆದರ್ಶಗಳನ್ನು ನೆನೆಯುವುದು, ಸಾಧ್ಯವಾದಷ್ಟು ಅನುಕರಣೆ ಮಾಡುವುದೇ ಅಲ್ಲವೇ? ಅಮ್ಮನನ್ನು ನೆನೆದು ಇಬ್ಬರೂ ಕಣ್ಣೀರಾದೆವು…

-ಬಸವರಾಜ ಮುದನೂರ್

Related Articles

5 Comments

  1. ಅದ್ಭುತವಾದ ಕಥೆ ಅಣ್ಣ.ನೈಜ ಘಟನೆ ಜೀವನದಲ್ಲಿ ಎಲ್ಲರಿಗೂ ಮಾದರಿಯಾಗ ಬೇಕು ಇಂತಹ ಕಥೆಗಳು..

Leave a Reply

Your email address will not be published. Required fields are marked *

Back to top button