ಮಹಿಳೆಯರ ಸಂರಕ್ಷಣೆಗೆ ಕಾನೂನು ಸಶಕ್ತ-ನ್ಯಾ.ಭಾಮಿನಿ
ವಿವಿಧ 9 ಕಡೆ ಕಾನೂನು ಅರಿವು ನೆರವು ಕಾರ್ಯಕ್ರಮ
yadgiri, ಶಹಾಪುರಃ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಶಹಾಪುರ ಮತ್ತು ವಡಗೇರಾ ತಾಲ್ಲೂಕಿನ ವಿವಿಧ 9 ಕಡೆ ಕಾನೂನು ಅರಿವು ನೆರವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಿದೆ ಎಂದು ಸಿವಿಲ್ ಪ್ರಧಾನ ನ್ಯಾಯಾಲಯದ ನ್ಯಾಯಾಧೀಶ ಕಾಡಪ್ಪ ಹುಕ್ಕೇರಿ ತಿಳಿಸಿದರು.
ನಗರದ ತಹಶೀಲ ಕಚೇರಿಯಲ್ಲಿ ಬುಧವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಇನ್ನಿತರ ಇಲಾಖೆಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರಾದ ಭಾಮಿನಿ ಅವರು ವಡಗೇರಾ ತಾಲ್ಲೂಕಿನ ನಾಯ್ಕಲ್, ಗುರಸಣಗಿ, ಗುಂಡಗುರ್ತಿ ಗ್ರಾಮಗಳಿಗೆ ತೆರಳಿ ಪ್ರತಿಯೊಬ್ಬರು ಕಾನೂನು ಜ್ಞಾನವನ್ನು ಪಡೆದುಕೊಳ್ಳಬೇಕು. ಮಹಿಳೆಯರ ಸಂರಕ್ಷಣೆಗೆ ಕಾನೂನು ಸಶಕ್ತವಾಗಿದೆ. ಕಾನೂನಿನ ಸದುಪಯೋಗ ಪಡೆಯಬೇಕು. ಆ ಕುರಿತು ಅರಿತುಕೊಳ್ಳಬೇಕು ಎಂದರು.
ತಾಲ್ಲೂಕಿನ ಸಗರ, ಹಯ್ಯಾಳ ಗ್ರಾಮಗಳಿಗೆ ತೆರಳಿ ಆಸ್ತಿ ಹಕ್ಕು, ಜೀವನಾಂಶ, ಮೋಟಾರ್ ಕಾಯ್ದೆ ಜನನ ಮತ್ತು ಮರಣ ಪ್ರಮಾಣ ಪತ್ರದ ಬಗ್ಗೆ ವಕೀಲರ ಸಂಘದ ಅಧ್ಯಕ್ಷ ಶಾಂತಗೌಡ ಹಾಗೂ ಇನ್ನುಳಿದ ವಕೀಲರು ಕಾನೂನು ಬಗ್ಗೆ ಮಾಹಿತಿ ನೀಡಿದರು. ಸಣ್ಣಪುಟ್ಟ ಸಮಸ್ಯೆಗಳು ಬಂದಾಗ ನಮ್ಮಲ್ಲಿಯೇ ಬಗೆಹರಿಸಿಕೊಳ್ಳಬೇಕು. ರಾಜಿ ಸಂಧಾನವೇ ರಾಜ ಮಾರ್ಗವಾಗಿದೆ. ಆರ್ಥಿಕವಾಗಿ ಹಿಂದುಳಿದ ಜನತೆಯು ತಾಲ್ಲೂಕು ಕಾನೂನು ಸೇವಾ ಕೇಂದ್ರಕ್ಕೆ ಬಂದರೆ ಅಲ್ಲಿ ಅಗತ್ಯ ಕಾನೂನು ನೆರವು ಅರಿವನ್ನು ಕಾನೂನು ಸೇವಾ ಸಮಿತಿಯ ಪ್ಯಾನಲ್ ವಕೀಲರು ಮಾಹಿತಿ ನೀಡುತ್ತಾರೆ ಎಂದರು.
ಅಲ್ಲದೆ ವಡಗೇರಾ ತಹಶೀಲ್ದಾರ ಪ್ರಕಾಶ ಹೊಸ್ಮನಿ ಹಾಗೂ ವಕೀಲರ ತಂಡವು ತಾಲ್ಲೂಕಿನ ವಡಗೇರಾ ತಾಲ್ಲೂಕಿನ ಟಿ.ವಡಗೇರಾ ಗ್ರಾಮದಲ್ಲಿ ಕಾನೂನು ಬಗ್ಗೆ ಮಾಹಿತಿ ಒದಗಿಸಿದರು. ಅಲ್ಲದೆ ಸರ್ಕಾರಿ ಅಭಿಯೋಜಕರಾದ ವಿನಾಯಕ ಕೋಡ್ಲಾ ಹಾಗೂ ದಿವ್ಯಾರಾಣಿ ನಾಯಕ ನೇತೃತ್ವದಲ್ಲಿ ತಾಲ್ಲೂಕಿನ ಹುರಸಗುಂಡಗಿ, ಇಬ್ರಾಹಿಂಪುರ ಗ್ರಾಮ ಪಂಚಾಯಿತಿಗಳಿಗೆ ತೆರಳಿ ಪ್ರತಿಯೊಬ್ಬರು ಕಾನೂನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ವಕೀಲರ ಸಂಘದ ಉಪಾಧ್ಯಕ್ಷ ಹಯ್ಯಾಳಪ್ಪ ಹೊಸ್ಮನಿ, ವಕೀಲರಾದ ಅಮರೇಶ ದೇಸಾಯಿ, ಶರಣು ಸಜ್ಜನ್, ಎಚ್.ಆರ್.ಪಾಟೀಲ್, ಮಲ್ಲಿಕಾರ್ಜುನ ಬುಕ್ಕಲ್, ಗುರುರಾಜ ದೇಶಪಾಂಡೆ, ಲಕ್ಷ್ಮಿನಾರಾಯಣ ಕುಲಕರ್ಣಿ, ಶ್ರೀಮಂತ ಕಂಚಿ, ಸಿದ್ದೂ ಪಸ್ಪೂಲ್, ಬಸನಗೌಡ ಹಯ್ಯಾಳ, ದೇವಿಂದ್ರಪ್ಪ ಟಣಕೆದಾರ, ವಿಶ್ವನಾಥ ಫಿರಂಗಿ ಇದ್ದರು.