ಕಾವ್ಯ
ನಾಳೆ ಸಾಯುವ ಜೀವಕ್ಕೆ ಇಂದೇ ಗೋರಿ ತೆಗೆಯುವ ಕೈಗಳು
ಎಲ್ಲಿದೆ ಆ ದಿನ??
**************
ಈ ದಾರಿ ಸಾಗುತ್ತಲೇ ಇದೆ
ನಿಶ್ಯಕ್ತಗೊಂಡ ಪಾದಗಳ ಕರೆದುಕೊಂಡು.
ಅಲ್ಲಲ್ಲಿ ಏಕಾಂತ, ಅನಾಥ ಹೆಣಗಳ ಮುಂದೆ ನೊಣದ ಮೌನ.
ಕರುಣೆಯ ಪೈರು ನೆಲ ಬಿಟ್ಟು ಅಳುತ್ತಿದೆ.
ಹಸಿದು ಸತ್ತವರಿಗೆ ಅನ್ನವಾಗಲಿಲ್ಲವೆಂದು.
ಆದರೂ ಕೊನೆಯಿಲ್ಲದ ದಾರಿ ಸಾಗುತ್ತಲೇ ಇದೆ.
ಬಿರುಕು ಬಿಟ್ಟ ಪಾದದ ರಕುತ ಕುಡಿಯುತ್ತ.
ಗಂಟಲು ಹರಿದುಕೊಳ್ಳುತ್ತಿವೆ ಮಾಧ್ಯಮಗಳು.
ಸೂಟು ಬೂಟು ಹಾಕಿಕೊಂಡವರ ಬರ್ತಡೇ ಕೇಕಿನ ಮುಂದೆ.
ಮಹಾ ಗೋಡೆ ಕಟ್ಟಿಕೊಂಡು ನಮ್ಮಲ್ಲೇ ಮೊದಲೆಂದು.
ಗರೀಬರ ಮನೆ ಮುಂದೆ ಹಸಿವಿನ ಹಾಹಾಕಾರ.
ನಾಳೆ ಸಾಯುವ ಜೀವಕ್ಕೆ ಇಂದೇ ಗೋರಿ
ತೆಗೆಯಲು ಹೋದ ಕೈಗಳು.
ನೇಕಾರನ ಮನೆಯ ಬಣ್ಣದ ದಾರ
ಕೊರಳಿಗೆ ಕುಣಿಕೆಯಾಗುವಾಗ,
ಯಾವಾಗ ಬರಬಹುದು ನೀವೇ ಹೇಳಿ ಆ ದಿನಗಳು?.
—- *ಅಲ್ಲಾಗಿರಿರಾಜ್ ಕನಕಗಿರಿ*