
ನೋಂದಣಿ ಕ್ಯಾಂಪ್‍ಗೆ ದರ್ಶನಾಪುರ ಚಾಲನೆ
ಯೋಜನೆಗಳ ಸದುಪಯೋಗ ಪಡೆಯಿರಿ – ದರ್ಶನಾಪುರ
yadgiri, ಶಹಾಪುರಃ ಕಾರ್ಮಿಕ ಇಲಾಖೆಯಡಿ ಕಾರ್ಮಿಕರಿಗಾಗಿಯೇ ಹಲವಾರು ಯೋಜನೆಗಳಿದ್ದು, ಅವುಗಳ ಸೌಲಭ್ಯಗಳನ್ನು ಕಾರ್ಮಿಕರು ಪಡೆದುಕೊಳ್ಳುವ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ತಾಪಂ, ಕಾರ್ಮಿಕ ಇಲಾಖೆ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಮತ್ತು ಕಾರ್ಮಿಕ ಕಲ್ಯಾಣ ಮಂಡಳಿ ಸಂಯುಕ್ತಾಶ್ರಯದಲ್ಲಿ ನಡೆದ ವಿವಿಧ ಯೋಜನೆಯಡಿ ಫಲಾನುಭವಿಗಳ ನೋಂದಣಿ ಕ್ಯಾಂಪ್‍ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ಮಿಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಕಾರ್ಮಿಕರ ಮಕ್ಕಳಿಗಾಗಿ ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅದರ ಸದುಪಯೋಗ ಪಡೆದುಕೊಂಡು ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ಮಾಡದೆ ಅವರಿಗೆ ಶಿಕ್ಷಣ ಒದಗಿಸುವ ಕೆಲಸ ಮಾಡಬೇಕು ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಉಮಾಶ್ರಿ ಎಸ್.ಕೋಳಿ ಮಾತನಾಡಿ, ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆ ಕೈಗೊಂಡ ಪ್ರಗತಿಯನ್ನು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ವಿವರಿಸಿದರು. ಅಲ್ಲದೆ ಅಸಂಘಟಿತ ವಯಲದಲ್ಲಿ ದುಡಿಯುವ ಎಲ್ಲಾ ವರ್ಗದ ಕಾರ್ಮಿಕರು ಇ-ಶ್ರಮ ಹಾಗೂ ಪಿಎಂಎಸ್‍ವೈ ಯೋಜನೆಯಡಿ ಹೆಸರು ನೋಂದಾಯಿಸಿಕೊಳ್ಳುವಂತೆ ತಿಳಿಸಿದರು.
ತಹಶೀಲ್ದಾರ ಮಧುರಾಜ್ ಕೂಡ್ಲಿಗಿ ಅಧ್ಯಕ್ಷತೆವಹಿಸಿದ್ದರು. ತಾಲ್ಲೂಕು ಯೋಜನಾಧಿಕಾರಿ ರಾಘವೇಂದ್ರ ಕುಲಕರ್ಣಿ, ಸಹಾಯಕ ನಿರ್ದೇಶಕ ರವಿಚಂದ್ರ, ತಾಲ್ಲೂಕು ಕಾರ್ಮಿಕ ನಿರೀಕ್ಷಕ ಗಂಗಾಧರ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಾರ್ಮಿಕರಿಗೆ ಕಿಟ್ ವಿತರಿಸಲಾಯಿತು. ನೂರಾರು ಜನರ ಕಾರ್ಮಿಕರು ವಿವಿಧ ಯೋಜನೆಯಡಿ ಹೆಸರು ನೋಂದಾಯಿಸಿದರು.
ಕಾರ್ಮಿಕ ಇಲಾಖೆ ಸಿಬ್ಬಂದಿಗಳಾದ ಮಹ್ಮದ್ ಎತ್ತೇಶಾಮ್, ಜಾವೀದ್, ಭಗತ್ ವಾಡೇಕಾರ, ಅಂಬರೀಶ, ಕಾರ್ಮಿಕ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು. ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್ ವರ್ಕನಳ್ಳಿ ನಿರೂಪಿಸಿದರು. ಸಂತೋಷ ವಂದಿಸಿದರು.