ಕೆಂಭಾವಿಃ ಸಂಭ್ರಮ ಸಡಗರದ ಮಲ್ಲಯ್ಯನ ಬಂಡಿ ಉತ್ಸವ

ಎಲ್ಲಲ್ಲೂ ಭಂಡಾರಮಯ ಭಕ್ತರ ಜಯಘೋಷ ಏಳೂಕೋಟಿಗಳೂ ಕೋಟಿಗೋ..!
yadgiri, ಸುರಪುರ: ತಾಲೂಕಿನ ಕೆಂಭಾವಿ ಪಟ್ಟಣದ ಐತಿಹಾಸಿಕ ಮಲ್ಲಯ್ಯನ ಬಂಡಿ ಉತ್ಸವ ವಿಜಯದಶಮಿ ಮಾರನೇ ದಿನವಾದ ಶನಿವಾರ ಅಪಾರ ಜನಸಾಗರದ ಮಧ್ಯೆ ಸಂಭ್ರಮ ಸಡಗರದಿಂದ ಜರುಗಿತು.
ಕಳೆದೆರಡು ವರ್ಷಗಳಿಂದ ಕೊರೊನಾ ಹಿನ್ನಲೆಯಲ್ಲಿ ಕಳೆಗುಂದಿದ ಸಂಭ್ರಮ ಈ ವರ್ಷ ಅದ್ದೂರಿಯಾಗಿ ನಡೆಯಿತು. ಬೆಳಿಗ್ಗೆ 11 ಗಂಟೆಗೆ ಶೃಂಗಾರಗೊಂಡ ಮಲ್ಲಯ್ಯನ ಪ್ರತಿಮೆ ಹೊತ್ತ ಬಂಡಿಯನ್ನು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಚಾಲನೆ ನೀಡಲಾಯಿತು.
ಕಿವಿಯಲ್ಲಿ ರಿಂಗಣಿಸುವಂತಹ ಡೊಳ್ಳಿನ ತಾಳಬದ್ಧ ಧ್ವನಿ, ಬೇರಾವುದೂ ಧ್ಯಾನವಿರದೆ ಕೇವಲ ಡೊಳ್ಳಿನ ನಾದದಲ್ಲಿ ಮೈಮರೆತು ಬಾರಿಸುವ ಭಕ್ತರ ಉತ್ಸಾಹ, ಎಲ್ಲೆಲ್ಲಿಯೂ ಭಂಡಾರ, ಬಂದ ಭಕ್ತಾಧಿಗಳು, ನೆಲದ ಹಾಸು, ಪಲ್ಲಕ್ಕಿ, ದೇವಸ್ಥಾನದ ಆವರಣದಿಂದ ಮೆರವಣಿಗೆಯುದ್ದಕ್ಕೂ ದಾರಿಗಳು ಭಂಡಾರಮಯ ದೃಶ್ಯ ಕಂಡುಬಂದಿತು. ಡೊಳ್ಳು ಕುಣಿತ, ಭಜನೆ ನೋಡುಗರ ಮನ ತಣಿಸಿತು.
ವಾಡಿಕೆ: ಮಲ್ಲಯ್ಯನ ಬಂಡಿ ಉತ್ಸವದಲ್ಲಿ ಮಲ್ಲಯ್ಯನ ಹೊತ್ತ ಬಂಡಿ ಮುಖ್ಯ ಬಜಾರ್ ಪ್ರವೇಶಿಸುತ್ತಿದ್ದಂತೆ ಸುಮಾರು ಒಂದು ಗಂಟೆಗೂ ಹೆಚ್ಚು ಬಂಡಿಯನ್ನು ಹಿಂದೆ ಮುಂದೆ ಹಗ್ಗದಿಂದ ಎಳೆದಾಡಿ ಹೋಗುವುದು ನಡೆದು ಬಂದ ವಾಡಿಕೆ. ಇಂಥಾ ಉತ್ಸಾಹ ನೋಡಲೆಂದು ಪ್ರತಿವರ್ಷ ಈ ಜಾತ್ರೆಗೆ ಹಲವಾರು ಗ್ರಾಮಗಳಿಂದ ಜನ ಸೇರುವುದು ಇಲ್ಲಿನ ವಿಶೇಷ.
ಮುಖ್ಯ ಬಜಾರ್ ರಸ್ತೆಯಲ್ಲಿ ಬಂಡಿ ಹಿಂದೆ ಮುಂದೆ ಎಳೆಯುವ ಸಂದರ್ಭದಲ್ಲಿ ಯುವಕರು ಉತ್ಸಾಹದಿಂದ ‘ಏಳು ಕೋಟಿಗೆ ಏಳು ಕೋಟಿಗೋ’ ಎಂದು ಜಯ ಘೋಷ ಕೂಗುತ್ತಾ ಸಂಭ್ರಮಿಸುವುದು, ಕುಸ್ತಿ ಪಂದ್ಯಾವಳಿ, ಶಿಬಾರದಲ್ಲಿ ಸರಪಳಿ ಹರಿಯುವುದು, ಹೇಳಿಕೆ ನೀಡುವುದು ಮುಂತಾದ ಕಾರ್ಯಕ್ರಮಗಳು ಭಕ್ತಾಧಿಗಳಿಂದ ಸಾಂಪ್ರದಾಯಿಕವಾಗಿ ನಡೆದವು.
ಹಿರಿಯರು ಮಲ್ಲಯ್ಯನ ಬಂಡಿಗೆ ಕಾಯಿ ಒಡೆದು ಬಂಡಾರ ಎರಚಿ ಹರಕೆ ತೀರಿಸಿದರು. ಮಲ್ಲಯ್ಯನ ಬಂಡಿ ಉತ್ಸವದ ನಿಮಿತ್ತ ಕೆಂಭಾವಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕುಸ್ತಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿತ್ತು.
ಸಿಪಿಐ ದೌಲತ್ ಎನ್.ಕೆ. ನೇತೃತ್ವದಲ್ಲಿ ಪಿಎಸ್‍ಐ ಗಜಾನಂದ ಬಿರಾದಾರ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.