ಕಲ್ಲಿನಲ್ಲಿ ಅರಳಿದ ಕಲೆ ಬಾಳಿಗೆ ಇದುವೆ ನೆಲೆ..!
ಬಳುವಳಿಯಿಂದ ಬಂದ ಕಲೆಗೆ ಅನಕ್ಷರದ ಕರಿನೆರಳು
ಜೀವನ ಸಾಗಿಸುವುದಕ್ಕೆ ಯಾವುದೇ ಕೆಲಸದ ಭರವಿಲ್ಲ. ಮಾಡುವ ಮನಸ್ಸೊಂದಿದ್ದರೆ ಸಾಕು ಎನ್ನುವಂತೆ,
ಯಾವ ಕೆಲಸವಾದರೂ ಸರಿ ಶ್ರದ್ಧೆಯಿಂದ ಮಾಡಿದ್ದಲ್ಲಿ ಯಶಸ್ಸು ಖಂಡಿತ. ಸ್ವಲ್ಪ ತಡವಾದರೂ ಕೈಹಿಡಿಯಲಿದೆ ಎನ್ನುವದಕ್ಕೆ ಇಲ್ಲಿನ ಕಲ್ಲು ಕೆತ್ತುವ ಶಿಲ್ಪಿಗಾರರ ಕುಟುಂಬವೇ ಸಾಕ್ಷಿ.
ಮನುಷ್ಯನಿಗೆ ಮೊದಲು ಮಾಡುವ ಕೆಲಸದ ಮೇಲೆ ನಂಬಿಕೆ, ಶ್ರದ್ಧೆ, ಸ್ವಾಭಿಮಾನ ಮುಖ್ಯ ಎನ್ನುವ ಇಲ್ಲಿನ ಶಿಲ್ಪಕಲಾಕಾರರು ಕೆತ್ತಿದ ಮೂರ್ತಿ ಗಳನ್ನು ಧಕ್ಕೆಯಾಗದಂತೆ ನೋಡಿ ಕೊಳ್ಳುತ್ತಾರೆ.
ಸ್ವಲ್ಪ ಧಕ್ಕೆಯಾದರು ಆ ಮೂರ್ತಿ ಯಾರು ತೆಗೆದುಕೊಂಡು ಹೋಗುವದಿಲ್ಲ. ಅದರಿಂದ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಎಚ್ಚರಿಕೆವಹಿಸುತ್ತಾರೆ.
ಹಲವಾರು ತಲೆಮಾರಿನಿಂದ ಬಳುವಳಿಯಾಗಿ ಬಂದ ಶಿಲ್ಪ ಕೆತ್ತನೆ ಕೆಲಸವನ್ನೆ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಪ್ರಸ್ತುತ ಕಾಲದಲ್ಲಿ ಅಷ್ಟೇನು ವ್ಯಾಪಾರವಹಿವಾಟು ಇಲ್ಲದಿದ್ದರೂ ಇದರಲ್ಲೇ ಬದುಕು ದೂಡುತ್ತಿದ್ದಾರೆ. ಸರ್ಕಾರ ನಿಜಕ್ಮೂ ಇಂತಹ ಕಲಾವಿದರ ಬದುಕಿಗೆ ಆಸೆಯಾಗಬೇಕಿದೆ.
ಮಳೆ, ಛಳಿ, ಬಿಸಿಲೆನ್ನದೆ ದುಡಿಯುವ ಕಲ್ಲು ಕೆತ್ತನೆಗಾರರ ಶ್ರಮಕ್ಕೆ ತಕ್ಕ ಬೆಲೆ ಸಿಗದಿದ್ದರೂ ದೊರೆತದರಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ.
ಅಬ್ದುಲ್ ಅಜಿತ್ ಕಡಪೂರ್ ಎಂಬ ಕಲ್ಲು ಕೆತ್ತನೆಗಾರರ ಕುಟುಂಬವೇ ಕಳೆದ 35 ವರ್ಷದಿಂದ ಇಲ್ಲಿನ ಬಸವೇಶ್ವರ ವೃತ್ತದ ಹಿಂದೆ ತಮ್ಮ ವೃತ್ತಿಯಾದ ಮೂರ್ತಿ ಕೆತ್ತೆನೆಯ ಕೆಲಸದಲ್ಲಿ ಸದಾ ಮಗ್ನರಾಗಿರುತ್ತಾರೆ.
ಬ್ರಿಟಿಷ್ರ ಕಾಲದಿಂದಲ್ಲೂ ಈ ವೃತ್ತಿಯಲ್ಲಿ ತೊಡಗಿಸಿಕೊಂಡ ನಮ್ಮ ಪೂರ್ವಜರ ಮಾರ್ಗ ವನ್ನೆ ಇಂದಿಗು ಅನುಸರಿಸುತ್ತಿರುವ ಈ ಕುಟುಂಬ ಅನಕ್ಷರಸ್ಥರು.
ಅಕ್ಷರ ಅಭ್ಯಾಸ ಈ ಕುಟುಂಬಕ್ಕೆ ದೊರೆತಲ್ಲಿ ಅವರು ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಸರ್ಕಾರ ಕೂಡಲೇ ಇಂತಹ ಶಿಲ್ಪಿಕಾರರ ಕುಟುಂಬಕ್ಕೆ ಶೈಕ್ಷಣಿಕ ವ್ಯವಸ್ಥೆ ಜೊತೆಗೆ ಆಶ್ರಯ ಮತ್ತು ಅವರ ವೃತ್ತಿ ಅಭಿವೃದ್ಧಿಗೆ ಸಹಾಯಧನ ಕಲ್ಪಿಸಬೇಕಿದೆ.
ವಿವಿಧ ಕಲ್ಲುಗಳ ಬಳಕೆ: ಸುಂದರವಾದ ಮೂರ್ತಿಗಳ ಕೆತ್ತನೆಗಾಗಿ ವಿವಿಧ ಪ್ರಕಾರದ ಕಲ್ಲುಗಳನ್ನು ಊಡುರ, ಆಳಬಾಳ, ಮುಧೋಳ, ಚಳಿಕೇರಿ, ನಿಪಾಣಿ, ಮುಂತಾದ ಊರುಗಳಿಂದ ಸಾದ ಕಲ್ಲುಗಳನ್ನು ತಂದು ಆ ಕಲ್ಲುಗಳಿಗೆ ಭಿನ್ನವಾದ ರೂಪವನ್ನು ಇವರು ನೀಡುತ್ತಾರೆ.
ಅಂತಹ ಕಲ್ಲುಗಳಲ್ಲಿ ಪ್ರಮುಖವೆಂದರೆ ಕಡಪ, ಮಾರ್ಬಲ್, ಗ್ರಾನೈಟ್, ಈ ಕಲ್ಲುಗಳಿಂದ ಮಾತ್ರ ಚೆಂದವಾದ ಮೂರ್ತಿಗಳನ್ನು ಕಟಿಯಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಶಿಲ್ಪ ಕೆತ್ತನೆಗಾರರು.
ಮೂರ್ತಿಗಳು: ಲಕ್ಷ್ಮೀ, ಹನುಮಾನ, ನಾಗದೇವತೆ, ಬಸವಣ್ಣ, ಲಿಂಗ, ರಾಮ ಸೀತಾ, ಹೀಗೆ ಮುಂತಾದ ಮೂರ್ತಿಗಳ ಜೊತೆಗೆ ನಮ್ಮ ಮನೆಗೆ ಅಗತ್ಯವಿರುವ ಒಳಕಲ್ಲು, ಬೀಸುವ ಕಲ್ಲು, ತುಳಸಿ ಕಟ್ಟೆ, ಆಮೆಯ ಕಲ್ಲು, ಹಂಚುಗಳನ್ನು ಸಹ ಕೆತ್ತನೆಯನ್ನು ಮಾಡುತ್ತಾರೆ.
ಇವರು ಮೂರ್ತಿಗಳ ಜೊತೆಗೆ ಸಮಾಧಿಯ ಮೇಲೆ ಹಾಕುವ ಕಲ್ಲುಗಳ ಮೇಲೆ ಹೆಸರು ಕೆತ್ತೆನೆಯು ಸಹ ಮಾಡುತ್ತಾರೆ. ಸಾದ ಕಲ್ಲಿನಿಂದಾಗಿ ಅದರ ಮೇಲೆ ಅವರು ಹುಟ್ಟಿದ ದಿನಾಂಕ, ಮತ್ತು ಮರಣದ ದಿನಾಂಕ, ಹೆಸರನ್ನು ಚೆಂದವಾಗಿ ಕೆತ್ತಿ ಕೊಡುತ್ತಾರೆ.
ಹೀಗೆ ಒಂದು ಸಮಾಧಿಯ ಕಲ್ಲನ್ನು ಮಾಡುವುದಕ್ಕೆ ಅವರು ಕಲ್ಲಿನ ಮೇಲೆ ಕೆತ್ತಿದ ಸೆಂಟಿ ಮೀಟರ್ ಅಳತೆಯ ಮೇಲೆ ಹಣವನ್ನು ಸಂಪಾದಿಸುತ್ತಾರೆ.
ಬೆಲೆ: ಮೂರ್ತಿಯ ಕಲ್ಲುಗಳಿಗೆ ಸುಮಾರು ೧೦೦೦ ದಿಂದ ೨೦೦೦ದವರೆಗೂ ಬೆಲೆಯಲ್ಲಿ ನಾವು ಮಾರಾಟ ಮಾಡುತ್ತಾರೆ. ಕೆಲವೊಂದು ಬಾರಿ ನಾವು ಮೂರ್ತಿಗಳ ಗಾತ್ರಕ್ಕೆ ಅನುಗುಣವಾಗಿ ಬೆಲೆಯನ್ನು ನಿಗದಿ ಮಾಡುತ್ತಾರೆ.
ಹಬ್ಬದ ದಿನಗಳಲ್ಲಿ ಮಾತ್ರ ಮೂರ್ತಿಗಳ ವ್ಯಾಪಾರ ಚೆನ್ನಾಗಿ ನಡೆಯುತ್ತದೆ. ನಾವು ಕೆತ್ತೆನೆ ಮಾಡಿದ ಕಲ್ಲುಗಳನ್ನು ತುಂಬಾ ಜೋಪಾನದಿಂದ ನೋಡಿಕೊಳ್ಳುತ್ತೇವೆ. ಅವುಗಳಿಗೆ ಸ್ವಲ್ಪ ಏನಾದರೂ ಕಲ್ಲು ಹೊಡೆದರೆ ಗ್ರಾಹಕರು ಅಂತಹ ವಿಗ್ರಹಗಳನ್ನು ತೆಗೆದುಕೊಂಡು ಹೋಗುವುದಿಲ್ಲ. ಹೀಗಾಗಿ ನಮಗೆ ನಷ್ಟವಾಗುತ್ತದೆ.
ನಾನು ಓದುಬರಹ ಇಲ್ಲದ ಮನುಷ್ಯ ನನ್ನ ತಂದೆ ಮಾಡುತ್ತಿದ್ದ ಮೂರ್ತಿ ಕೆತ್ತನೆಯ ಕೆಲಸವನ್ನೆ ಮುಂದುವರೆಸಿಕೊಂಡು ಬಂದಿದ್ದೇನೆ. ಈ ವ್ಯಾಪಾರದಿಂದಾಗಿಯೇ ನಾವು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವೆ.ಇದೇ ವೃತ್ತಿಯನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿದ್ದೇನೆ.
-ಅಬ್ದುಲ್ ಅಜಿತ್ ಕಡಪೂರ್ ಶಿಲ್ಪಿಗಾರ.
-ಶ್ವೇತಾ ಜಂಗಳಿ
ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ. ವಿಜಯಪುರ.