ಪತ್ನಿಯ ಗರ್ಭದಲ್ಲಿರುವ ಮಗು ಗಂಡೋ , ಹೆಣ್ಣೋ ತಿಳಿಯಲು ಹೊಟ್ಟೆ ಕತ್ತರಿಸಿದವನಿಗೆ ಜೀವಾವಧಿ ಶಿಕ್ಷೆ
ಲಕ್ನೋ : ಪತ್ನಿಯ ಗರ್ಭದಲ್ಲಿರುವ ಮಗು ಗಂಡೋ ಅಥವಾ ಹೆಣ್ಣೋ ಎಂದು ತಿಳಿಯಲು ಕುಡುಗೋಲಿನಿಂದ ಹೊಟ್ಟೆಯನ್ನು ಕತ್ತರಿಸಿದ್ದ ಉತ್ತರ ಪ್ರದೇಶದ ಬದೌನ್‍ನ ವ್ಯಕ್ತಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಬದೌನ್‍ನ ಸಿವಿಲ್ ಲೈನ್ಸ್‍ನ ನಿವಾಸಿ ಪನ್ನಾ ಲಾಲ್ ಹಾಗೂ ಅನಿತಾ ದಂಪತಿಗೆ ಮದುವೆಯಾಗಿ 22 ವರ್ಷಗಳಾಗಿದ್ದು, ಐದು ಹೆಣ್ಣು ಮಕ್ಕಳಿದ್ದರು. ಆದರೆ, ಪನ್ನಾ ಲಾಲ್ ಗಂಡು ಮಗು ಬೇಕೆಂದು ಹೆಂಡತಿಯೊಂದಿಗೆ ಆಗಾಗ ಗಲಾಟೆ ಮಾಡುತ್ತಿದ್ದ. ಅಲ್ಲದೇ ವಿಚ್ಛೇದನ ನೀಡಿ ಬೇರೆ ಮದುವೆಯಾಗುವುದಾಗಿ ಹೆಂಡತಿಗೆ ಬೆದರಿಕೆ ಸಹ ಹಾಕಿದ್ದ. ಇದೇ ವಿಚಾರಕ್ಕೆ ಸೆಪ್ಟೆಂಬರ್ 2020 ರಲ್ಲಿ ಪತ್ನಿ ಅನಿತಾ ಮೇಲೆ ಹಲ್ಲೆ ನಡೆಸಿದ್ದ. ಈ ವೇಳೆ ಪನ್ನಲಾಲ್, ಅನಿತಾ ಗರ್ಭದಲ್ಲಿರುವ ಮಗುವಿನ ಲಿಂಗದ ಬಗ್ಗೆ ಮತ್ತೆ ಜಗಳವಾಡಿ, ಬಳಿಕ ಗರ್ಭದಲ್ಲಿರುವ ಮಗುವಿನ ಲಿಂಗ ತಿಳಿಯಲು ಆಕೆಯ ಹೊಟ್ಟೆಗೆ ಕುಡುಗೋಲಿನಿಂದ ಇರಿದಿದ್ದ.
ಈ ಘಟನೆ ನಡೆಯುವಾಗ ಆಕೆ ಎಂಟು ತಿಂಗಳ ಗರ್ಭಿಣಿಯಾಗಿದ್ದಳು. ಈ ವೇಳೆ ಆಕೆ ತಪ್ಪಿಸಿಕೊಂಡು ಹೊರಗೆ ಓಡಿದ್ದಳು. ಬಳಿಕ ಆಕೆಯ ಸಹೋದರನನ್ನು ಕಂಡು ಪನ್ನಲಾಲ್ ಪರಾರಿಯಾಗಿದ್ದ. ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ವೈದ್ಯರು ತಾಯಿಯನ್ನು ಕಾಪಾಡಿದ್ದರು. ಗರ್ಭದಲ್ಲಿದ್ದ ಗಂಡು ಮಗುವನ್ನು ಉಳಿಸಲಾಗಿರಲಿಲ್ಲ. ಈ ವಿಚಾರವನ್ನು ವಿಚಾರಣೆ ವೇಳೆ ಅನಿತಾ ನ್ಯಾಯಾಲಯದ ಮುಂದೆ ಹೇಳಿದ್ದಾರೆ.
ವಿಚಾರಣೆ ವೇಳೆ ಅನಿತಾ ತನ್ನ ಸಹೋದರರೊಂದಿಗೆ ಸೇರಿ ಆಸ್ತಿ ವಿವಾದದಕ್ಕೆ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲು ತನಗೆ ತಾನೇ ಗಾಯ ಮಾಡಿಕೊಂಡಿದ್ದಾಳೆ ಎಂದು ಪನ್ನಾ ಲಾಲ್ ನ್ಯಾಯಾಲಯದಲ್ಲಿ ವಾದಿಸಿದ್ದ. ಸಾಕ್ಷ್ಯಾಧಾರಗಳನ್ನು ಗಮನಿಸಿದ ನ್ಯಾಯಾಲಯ ಪನ್ನಾ ಲಾಲ್‍ಗೆ ಜೀವಾವಧಿ ಶಿಕ್ಷೆ ವಿಧಿಸಿದೆ.