![](https://vinayavani.com/wp-content/uploads/2023/09/09SHP04.jpg)
ಲೋಕ ಅದಾಲತ್ ಕಾರ್ಯಕ್ರಮ
ಜೀವನಾಂಶ ಕೋರಿ ಬಂದ ಪತ್ನಿ: ಒಂದಾದ ದಂಪತಿಗಳು
ಶಹಾಪುರಃ ಪತಿ ನಿರ್ಲಕ್ಷ ಮಾಡುತ್ತಿದ್ದು ಜೀವನ ನಡೆಸಲು ಕಷ್ಟವಾಗುತ್ತಿದೆ. ಪ್ರತಿ ತಿಂಗಳು ಜೀವನಾಂಶ ಕೊಡಿಸಬೇಕು ಎಂದು ನ್ಯಾಯಾಲಯದ ಮೊರೆ ಹೋದ ಪತ್ನಿ ಕೊನೆಗೆ ನ್ಯಾಯಾಧೀಶರ ಪ್ರಬುದ್ಧ ಮಾತಿಗೆ ಮನ್ನಣೆ ನೀಡಿ ದಂಪತಿಗಳಿಬ್ಬರು ಒಂದಾಗಿ ಮತ್ತೆ ಬಾಳ ಬಂಡಿ ಎಳೆಯಲು ಮುಂದಾದ ಘಟನೆ ಶನಿವಾರ ಇಲ್ಲಿನ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ಸಂದರ್ಭದಲ್ಲಿ ಜರುಗಿತು.
ದಂಪತಿಗಳು ಇಬ್ಬರು ನ್ಯಾಯಾಧೀಶರ ಸಮ್ಮುಖದಲ್ಲಿ ಪರಸ್ಪರ ಹಾರ ಬದಲಾಯಿಸಿ ಸಿಹಿ ಹಂಚಿ ಧನ್ಯತೆಯ ಭಾವ ಬೀರಿದರು. ವಕೀಲರು ಇದಕ್ಕೆ ಸಾಕ್ಷಿಯಾದರು.
2013 ಫೆಬ್ರವರಿ 22 ರಂದು ತಾಲ್ಲೂಕಿನ ಗೋಗಿ(ಪಿ) ಗ್ರಾಮದ ಸೀಮಾ ಹಾಗೂ ಸಿಂದಗಿ ತಾಲ್ಲೂಕಿನ ಕುಲೆಕುಮಟಗಿ ಗ್ರಾಮದ ಶಿವರಾಜ ಅಗಸರ ಜೊತೆ ಮದುವೆಯಾಗಿತ್ತು. ಕೌಟಂಬಿಕ ಭಿನ್ನಾಭಿಪ್ರಾಯದ ಬಂದು ಕಳೆದ 2 ವರ್ಷದಿಂದ ಸೀಮಾ ಪತಿಯಿಂದ ದೂರ ಇದ್ದು, ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು. ಜೀವನ ಮುನ್ನಡೆಸಲು ಕಷ್ಟವಾಗುತ್ತಿದೆ. ಪತಿಯಿಂದ ಪ್ರತಿ ತಿಂಗಳು 10 ಸಾವಿರ ರೂ. ಜೀವನಾಂಶ ನೀಡಬೇಕು ಎಂದು ಸೀಮಾ ಅವರು 9 ತಿಂಗಳ ಹಿಂದೆ ತನ್ನ ಪತಿಯ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಾಧೀಶರಾದ ಬಸವರಾಜ ಅವರು ಲೋಕ ಅದಾಲತನಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡು ಕುಟುಂಬದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬರುವುದು ಸಹಜ. ಚಿಕ್ಕ ವಯಸ್ಸಿನವರಾದ ನೀವು ಸಣ್ಣತನವನ್ನು ಮರೆತು ಬಿಡಿ. ದ್ವೇಷಬೇಡ ಪ್ರೀತಿಯಿಂದ ಎಲ್ಲವನ್ನು ಗೆಲ್ಲಲು ಸಾಧ್ಯ. ಇಬ್ಬರು ಒಂದಾಗಿ ಜೀವನ ಮುನ್ನೆಡೆಯಿಸಿಕೊಂಡು ಸಾಗಿ ಎಂಬ ಸಲಹೆಯನ್ನು ನ್ಯಾಯಾಧೀಶರು ನೀಡಿದಾಗ ಇಬ್ಬರು ತಮ್ಮ ಸ್ವಪ್ರತಿಷ್ಠೆಯನ್ನು ಬಿಟ್ಟು ಒಂದಾಗಲು ನಿರ್ಧರಿಸಿದರು. ಇದಕ್ಕೆ ಉಭಯ ಪಕ್ಷಗಾರರ ವಕೀಲರಾದ ಎಸ್.ಎಂ.ಸಜ್ಜನ ಹಾಗೂ ಸಿದ್ದಪ್ಪ ಪಸ್ಪೂಲ ಹೆಚ್ಚಿನ ಮುತುವರ್ಜಿವಹಿಸಿದರು.
ನ್ಯಾಯಾಧೀಶರು ಹಿರಿಯಣ್ಣನ ಸ್ಥಾನದಲ್ಲಿ ನಿಂತು ಬುದ್ಧಿವಾದ ಹೇಳಿ ಬಿರುಕುಗೊಂಡ ಬಾಳಿನಲ್ಲಿ ಮತ್ತೆ ನಗುವಿನ ಅಲೆ ಮೂಡಿಸಿ ಬಾಂದವ್ಯದ ಬೆಸುಗೆ ಮೂಡಿಸಿದರು. ಜೀವನಾಂಶ ಕೋರಿದ ನನಗೆ ಮತ್ತೆ ಪತಿಯ ಪ್ರೀತಿಯ ಆಸರೆ ಮೂಡಿಸಿ ಸುಖ ದಾಂಪತ್ಯಕ್ಕೆ ಕಾರಣವಾದ ನ್ಯಾಯಾಧೀಶರ ಸಲಹೆ ಜೀವನ ದಿಕ್ಕನ್ನೆ ಬದಲಿಸಿತು’ ಎಂದು ಇಬ್ಬರು ದಂಪತಿಗಳು ಆಶಯ ವ್ಯಕ್ತಪಡಿಸಿದರು.
ನ್ಯಾಯಾಲಯದ ಶಿರಸ್ತೆದಾರ ಪ್ರಕಾಶ ಪಾಟೀಲ್, ರಿಜ್ವಾನ ಅರಿಕೇರಿ ಹಾಗೂ ಹಿರಿಯ ವಕೀಲರಾದ ಟಿ.ನಾಗೇಂದ್ರ, ಸಂದೀಪ ದೇಸಾಯಿ, ಸಿದ್ದೂ ಪಸ್ಪೂಲ, ಮಲ್ಲಪ್ಪ ಕುರಿ, ಬಸಮ್ಮ ರಾಂಪುರೆ, ಭೀಮಣ್ಣಗೌಡ ಪಾಟೀಲ್, ಸಂತೋಷ , ಮಲ್ಲಿಕಾರ್ಜುನ ಹಯ್ಯಾಳಕರ್ ಇತರರಿದ್ದರು.