ಸೈದಾಪುರ ಗ್ರಾಮದಲ್ಲಿ ಮಕ್ಕಳ ಗ್ರಾಮ ಸಭೆ
ಮಕ್ಕಳಿಗೆ ಗ್ರಾಮ ಸಭೆಯ ಅರಿವು ಅಗತ್ಯ
ಶಹಾಪುರ: ಗ್ರಾಮೀಣ ಪ್ರದೇಶದ ಮಕ್ಕಳಿಗೆ ತಮ್ಮ ಗ್ರಾಮದ ಸಮಸ್ಯೆ ಹಾಗೂ ಸವಾಲುಗಳನ್ನು ಯಾವ ರೀತಿ ಎದುರಿಸುತ್ತಾರೆ. ಗ್ರಾಮ ಪಂಚಾಯಿತಿ ಯಾವ ರೀತಿ ಜನಪರ ಕೆಲಸಗಳನ್ನು ನಿರ್ವಹಿಸುತ್ತದೆ ಎಂಬುವುದರ ಬಗ್ಗೆ ಮಕ್ಕಳಿಗೆ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಮಕ್ಕಳ ಗ್ರಾಮ ಸಭೆ ಹಾಗೂ ಓದುವ ಬೆಳಕು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೈದಾಪುರ ಶಾಲೆಯ ಮುಖ್ಯಗುರು ರಾಜಶೇಖರ ರೊಟ್ಟಿ ತಿಳಿಸಿದರು.
ತಾಲ್ಲೂಕಿನ ಸೈದಾಪುರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಕ್ಕಳ ಗ್ರಾಮ ಸಭೆ ಹಾಗೂ ಓದುವ ಬೆಳಕು ಕಾರ್ಯಕ್ರಮದಲ್ಲಿ ಅವರು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರ ಆಯ್ಕೆ ಹಾಗೂ ಅವರ ಕಾರ್ಯಭಾರ ಹಾಗೂ ಹೊಣೆಗಾರಿಕೆ. ಗ್ರಾಮದ ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸುವ ಪರಿ. ಶಾಲಾ ಮಕ್ಕಳಿಗಾಗಿ ಗ್ರಾಮ ಪಂಚಾಯಿತಿಯಲ್ಲಿ ಇರುವ ಅನುದಾನದ ಸದ್ಭಳಕೆ. ಕಡ್ಡಾಯವಾಗಿ ಶೌಚಾಲಯ ಬಳಕೆ, ಬಾಲ್ಯ ವಿವಾಹ ತಡೆ ಹೀಗೆ ಹಲವಾರು ರಚನಾತ್ಮಕ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು.
ಮಕ್ಕಳ ಪಾಲಿಗೆ ಗ್ರಂಥಾಲಯ ಪವಿತ್ರ ದೇಗುಲವಿದ್ದಂತೆ ಓದು ನಮ್ಮ ಅರಿವಿನ ಬೆಳಕನ್ನು ವಿಸ್ತರಿಸುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಳು ಕಡ್ಡಾಯವಾಗಿ ಗ್ರಂಥಾಲಯದಲ್ಲಿ ಒಂದಿಷ್ಟು ಓದುವ ಅಭ್ಯಾಸ ಮಾಡಿಕೊಳ್ಳಬೇಕು. 1 ರಿಂದ 7ನೇ ತರಗತಿಯ ವರೆಗೆ ಶಾಲೆಯಿದ್ದು 320 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು. ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಸಿದ್ದಣ್ಣಗೌಡ ಪಾಟೀಲ್, ಶಾಲೆಯ ಶಿಕ್ಷಕಿಯರಾದ ಭಾಗ್ಯ ದೊರೆ, ಸಾವಿತ್ರಿ, ನಾಗಮಣಿ, ಸುನಿತಾ ಇದ್ದರು.