ಪ್ರಮುಖ ಸುದ್ದಿ

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸಚಿವ ಪಾಟೀಲ್ ಸೂಚನೆ

ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ

ಯಾದಗಿರಿಃ ಜಿಲ್ಲೆಯಲ್ಲಿ ಬರಗಾಲ ಇದೆ. ಕುಡಿಯುವ ನೀರಿನ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಗ್ರಾಮ ಪಂಚಾಯಿತಿಗಳ 14ನೇ ಹಣಕಾಸು ಯೋಜನೆಯಲ್ಲಿ ಇಂತಿಷ್ಟು ಪ್ರತಿಶತ ಹಣವನ್ನು ಕುಡಿಯುವ ನೀರು ಪೂರೈಕೆಗೆ ಮಾತ್ರ ಖರ್ಚು ಮಾಡಬೇಕು ಎಂದು ಗಣಿ ಮತ್ತು ಭೂವಿಜ್ಞಾನ, ಮುಜರಾಯಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ರಾಜಶೇಖರ ಬಿ.ಪಾಟೀಲ್ ಅವರು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ(ಕೆಡಿಪಿ)ಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಅಗತ್ಯ ಸಿದ್ಧತೆ ಕೈಗೊಳ್ಳಲು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಆದೇಶಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಅವರಿಗೆ ಸಚಿವರು ಸೂಚಿಸಿದರು.

ಜಿಲ್ಲೆಯಲ್ಲಿನ ಶೇ 70ರಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಶಾಸಕರಾದ ಶರಣಬಸಪ್ಪಗೌಡ ದರ್ಶನಾಪೂರ ಅವರು ಸಭೆಯ ಗಮನಕ್ಕೆ ತಂದರು. ಆಗ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಂಜಿನಿಯರ್ ರಾಜ್‍ಕುಮಾರ ಅವರು, ಜಿಲ್ಲೆಯ ಒಟ್ಟು 340 ಘಟಕಗಳಲ್ಲಿ 297 ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

ಆಗ ಶಾಸಕರಾದ ನರಸಿಂಹ ನಾಯಕ (ರಾಜುಗೌಡ) ಅವರು ಮಾತನಾಡಿ, ಎಂಜಿನಿಯರ್ ಅವರು ತಿಳಿಸಿದ 297 ಘಟಕಗಳಲ್ಲಿ 150 ಕೂಡ ಕಾರ್ಯ ನಿರ್ವಹಿಸುತ್ತಿಲ್ಲ. ಒಂದು ವೇಳೆ ಕಾರ್ಯನಿರ್ವಹಿಸುತ್ತಿದ್ದರೆ ಶಾಸಕರೆಲ್ಲರೂ ರಾಜೀನಾಮೆ ನೀಡುತ್ತೇವೆ ಎಂದು ಹೇಳಿದರು. ಸಚಿವರು ಮಾತನಾಡಿ, ಸಭೆಗೆ ತಪ್ಪು ಮಾಹಿತಿ ನೀಡದಂತೆ ಇಂಜಿನಿಯರ್‍ಗೆ ತಾಕೀತು ಮಾಡಿದರು.

ಕೆಆರ್‍ಐಡಿಎಲ್ ಅಧಿಕಾರಿಗಳೊಂದಿಗೆ 10-15 ದಿನಗಳಲ್ಲಿ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿಗೊಳಿಸಬೇಕು. ಜಲಮೂಲ ಇದ್ದಲ್ಲಿ ಮಾತ್ರ ನೀರಿನ ಘಟಕಗಳನ್ನು ನಿರ್ಮಿಸಬೇಕು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಶೀಲಿಸಿದ ಬಳಿಕವೇ ಕಾಮಗಾರಿ ಆರಂಭಿಸಬೇಕು ಎಂದು ಸೂಚಿಸಿದರು.

ಇನ್ನು ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿ ಪೂರ್ಣಗೊಳಿಸದ ಟೆಂಡರದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಶಾಸಕರಾದ ರಾಜುಗೌಡ ಅವರು ಒತ್ತಾಯಿಸಿದರು.

ಹೆಸರು ಮಾರಾಟಕ್ಕೆ 8 ಸಾವಿರ ರೈತರ ನೋಂದಣಿ: ಸರಕಾರ ನಿಗದಿಪಡಿಸಿದ ಬೆಂಬಲ ಬೆಲೆಯಲ್ಲಿ ಹೆಸರು ಮಾರಾಟಕ್ಕಾಗಿ ಜಿಲ್ಲೆಯ 8,015 ಸಾವಿರ ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕರಾದ ದೇವಿಕಾ ಆರ್. ಅವರು ಸಭೆಯ ಗಮನಕ್ಕೆ ತಂದರು.

ಆಗ ಶಾಸಕರು, ಎಲ್ಲಾ ರೈತರ ಹೆಸರು ಖರೀದಿಸುವಂತೆ ಒತ್ತಾಯಿಸಿದರು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಒಟ್ಟು 9930 ಕ್ವಿಂಟಲ್ ಹೆಸರು ಖರೀದಿ ಗುರಿ ನಿಗದಿಪಡಿಸಿ, ಪ್ರತಿ ರೈತರಿಂದ 10 ಕ್ವಿಂಟಲ್ ಬದಲಿಗೆ 4 ಕ್ವಿಂಟಲ್ ಮಾತ್ರ ಖರೀದಿಸಬೇಕು ಎಂದು ಸರಕಾರ ಹೊಸ ಆದೇಶ ಹೊರಡಿಸಿದೆ.

ಆದರೆ, ಜಿಲ್ಲೆಯಲ್ಲಿ 8 ಸಾವಿರ ರೈತರು ಹೆಸರು ನೋಂದಾಯಿಸಿರುವುದರಿಂದ 32 ಸಾವಿರ ಕ್ವಿಂಟಲ್ ಖರೀದಿಸಬೇಕಾಗುತ್ತದೆ. ಈ ಬಗ್ಗೆ ಸಚಿವರಾದ ಬಂಡೆಪ್ಪ ಖಾಶೆಂಪೂರ ಅವರೊಂದಿಗೆ ಚರ್ಚಿಸಿದ್ದೇನೆ. ದೆಹಲಿಗೆ ನಿಯೋಗ ತೆರಳಿ ಹೆಸರು ಖರೀದಿಯಲ್ಲಿನ ಎಲ್ಲಾ ಜಿಲ್ಲೆಗಳ ಸಮಸ್ಯೆ ಕುರಿತು ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಲಿದ್ದಾರೆ. ಪರಿಷ್ಕøತ ಆದೇಶ ಬರುವ ನಿರೀಕ್ಷೆ ಇದೆ. ನಂತರದ ದಿನಗಳಲ್ಲಿ ಖರೀದಿ ಆರಂಭಿಸಲಾಗುವುದು ಎಂದು ತಿಳಿಸಿದರು.

ಎಸ್‍ಎಸ್‍ಎಲ್‍ಸಿ ಫಲಿತಾಂಶ ಹೆಚ್ಚಳಕ್ಕೆ ಕ್ರಮ: ಜಿಲ್ಲೆಯ ಕಳೆದ ಸಾಲಿನ ಎಸ್‍ಎಸ್‍ಎಲ್‍ಸಿ ಫಲಿತಾಂಶ ಶೇ. 35.54 ಇದ್ದು, ರಾಜ್ಯದಲ್ಲಿ ಕೊನೆಯ ಸ್ಥಾನದಲ್ಲಿದೆ. ಫಲಿತಾಂಶ ಹೆಚ್ಚಳಕ್ಕಾಗಿ ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ ಸಿಇಒ ಅವರು ಮುಖ್ಯಶಿಕ್ಷಕರ ಸಭೆ ನಡೆಸಿದ್ದಾರೆ. ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ.

ಈ ಬಾರಿಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ತಾವಾಗಿಯೇ ಪಾಸಾಗುವ ಜಾಣ ಮಕ್ಕಳು, ಸಹಶಿಕ್ಷಕರ ಸಹಕಾರ ಅವಶ್ಯವಿರುವ ಮಕ್ಕಳು ಮತ್ತು ಸರಿಯಾಗಿ ಓದಲು ಮತ್ತು ಬರೆಯಲು ಬಾರದ ವಿದ್ಯಾರ್ಥಿಗಳು. ಸರಿಯಾಗಿ ಓದು-ಬರಹ ಗೊತ್ತಿಲ್ಲದ 5 ಸಾವಿರ ವಿದ್ಯಾರ್ಥಿಗಳಿಗೆ ವಿಶೇಷ ಗಮನಹರಿಸಿ, ಬೆಳಿಗ್ಗೆ ಮತ್ತು ಸಂಜೆ ವಿಶೇಷ ತರಗತಿ ತೆಗೆದುಕೊಳ್ಳಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಉಪ ನಿರ್ದೇಶಕರಾದ ಶ್ರೀಶೈಲ್ ಬಿರಾದಾರ ಅವರು ಸಚಿವರ ಗಮನಕ್ಕೆ ತಂದರು.

ಆಗ ಸಚಿವರು ಮಾತನಾಡಿ, ಎಸ್‍ಎಸ್‍ಎಲ್‍ಸಿಯಲ್ಲಿ ಓದು-ಬರಹ ಗೊತ್ತಿಲ್ಲದ 5 ಸಾವಿರ ಮಕ್ಕಳಿರುವುದು ದುರದುಷ್ಟಕರ. ಶಿಕ್ಷಕರು ಇಂತಹ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಗಮನಹರಿಸಿ ಪಾಠ ಮಾಡಬೇಕು ಎಂದು ಸೂಚಿಸಿದರು.
ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಒಟ್ಟು 6 ಸಾವಿರ ಹುದ್ದೆಗಳಲ್ಲಿ 1,945 ಖಾಲಿ ಇವೆ.

124 ಪ್ರೌಢಶಾಲೆಗಳ ಒಟ್ಟು 1,206 ಶಿಕ್ಷಕರ ಹುದ್ದೆಗಳಲ್ಲಿ 250 ಖಾಲಿ ಇವೆ ಎಂದು ಡಿಡಿಪಿಐ ತಿಳಿಸಿದರು. ಆಗ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪೂರ ಅವರು, ಕೆಲ ಪ್ರೌಢಶಾಲೆಗಳಲ್ಲಿ ಗಣಿತ ಮತ್ತು ಇಂಗ್ಲೀಷ್ ವಿಷಯ ಶಿಕ್ಷಕರ ಹುದ್ದೆಗಳ ಮಂಜೂರಾತಿಯೇ ಇಲ್ಲ ಎಂದು ಗಮನ ಸೆಳೆದರು. ಇದಕ್ಕೆ ಸಚಿವರು ಪ್ರತಿಕ್ರಿಯಿಸಿ, ಅತಿಥಿ ಶಿಕ್ಷಕರ ನೇಮಕಾತಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಮಹಿಳಾ ಪದವಿ ಕಾಲೇಜು ಕಟ್ಟಡ ಕಾಮಗಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ. ನೆಲಮಟ್ಟದಲ್ಲಿದ್ದು, ಮಳೆ ನೀರು ಒಳಗಡೆ ನುಗ್ಗುತ್ತದೆ ಎಂದು ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ್ ಅವರು ಇದೇ ಸಂದರ್ಭದಲ್ಲಿ ದೂರಿದರು.
ಜಿಲ್ಲೆಯಲ್ಲಿ ಸಾಕಷ್ಟು ತಜ್ಞವೈದ್ಯರ ಹುದ್ದೆಗಳು ಖಾಲಿ ಇವೆ. ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದರೂ ಯಾರೂ ಬರುತ್ತಿಲ್ಲ.

ಇರುವ ಸಿಬ್ಬಂದಿಯನ್ನು ಬಳಸಿಕೊಂಡು ಇಂದ್ರಧನುಷ್ ಸೇರಿದಂತೆ ಇಲಾಖೆಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 167 ಆರೋಗ್ಯ ಉಪ ಕೇಂದ್ರಗಳಿವೆ. ಸರಕಾರದ ನಿಯಮದಂತೆ 5 ಸಾವಿರ ಜನಕ್ಕೊಂದು ಉಪ ಕೇಂದ್ರ ಬೇಕು. ಈಗ 7 ಸಾವಿರ ಜನರಿಗೊಂದು ಉಪ ಕೇಂದ್ರವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹಬೀಬ ಉಸ್ನಾನ್ ಪಟೇಲ್ ಅವರು ತಿಳಿಸಿದರು.

ಆಗ ಸಚಿವರು ಮಾತನಾಡಿ, ಜನಪ್ರತಿನಿಧಿಗಳ ಸಹಕಾರ ಪಡೆದು ತಜ್ಞವೈದ್ಯರನ್ನು ನೇಮಕ ಮಾಡಿಕೊಳ್ಳಬೇಕು. ನಾಯಿ ಮತ್ತು ಹಾವು ಕಡಿತಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಔಷಧ ಇಟ್ಟುಕೊಳ್ಳಬೇಕು. ಔಷಧಕ್ಕಾಗಿ ಸಾಕಷ್ಟು ಅನುದಾನ ಇರುವುದರಿಂದ ಸಾರ್ವಜನಿಕರು ಹೊರಗಡೆ ಖರೀದಿಗಾಗಿ ಚೀಟಿ ಬರೆಯಬಾರದು. ಅಪಘಾತ ಮತ್ತು ಇನ್ನಿತರ ಸಂದರ್ಭಗಳಲ್ಲಿ ರೋಗಿಗಳನ್ನು ಅನವಶ್ಯಕವಾಗಿ ಬೇರೆ ಜಿಲ್ಲೆಗೆ ಶಿಫಾರಸು ಮಾಡಬಾರದು ಎಂದು ಡಿಎಚ್‍ಒ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಸಂಜೀವ್‍ಕುಮಾರ್ ರಾಯಚೂರಕರ್ ಅವರಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಸೊಳ್ಳೆ ಕಾಟ ಹೆಚ್ಚು ಇರುವುದರಿಂದ ಕಡ್ಡಾಯವಾಗಿ ಫಾಗಿಂಗ್ ಮಾಡಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಇಒಗಳಿಗೆ ಸಚಿವರು ಸೂಚಿಸಿದರು.

ಬಂಧನಕ್ಕೆ ಸೂಚನೆ: ಸುರಪುರ ತಾಲ್ಲೂಕಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅವ್ಯವಹಾರ ನಡೆದಿದ್ದು, ಈ ಪ್ರಕರಣದಲ್ಲಿ ಓರ್ವ ಅಮಾಯಕನನ್ನು ಬಂಧಿಸಲಾಗಿದೆ ಎಂದು ಶಾಸಕರಾದ ರಾಜುಗೌಡ ಅವರು ದೂರಿದರು. ಇದಕ್ಕೆ ಸಚಿವರು ಪ್ರತಿಕ್ರಿಯಿಸಿ, ಅವ್ಯವಹಾರ ನಡೆಸಿದವರನ್ನು ಕೂಡಲೇ ಬಂಧಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರಿಗೆ ಸೂಚಿಸಿದರು.

ಬಹುತೇಕ ಇಲಾಖೆಗಳ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆ ಇದ್ದು, ಪ್ರಭಾರಿ ಅಧಿಕಾರಿಗಳು ಕೆಲಸ ಮಾಡುತ್ತಿರುವುದು ತಿಳಿದುಬಂದಿದೆ. ಆದರೆ, ಅಧಿಕಾರಿಗಳು ಇದನ್ನೇ ನೆಪವಾಗಿಟ್ಟುಕೊಂಡು ಅಭಿವೃದ್ಧಿ ಕೆಲಸಗಳನ್ನು ಕಡೆಗಣಿಸಬಾರದು. ನಿಷ್ಠೆಯಿಂದ ಕಾರ್ಯ ನಿರ್ವಹಿಸಿದರೆ ಅಭಿವೃದ್ಧಿ ಖಂಡಿತ ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು, ಎಲ್ಲಾ ಹಂತದ ಸರ್ವ ಪಕ್ಷಗಳ ರಾಜಕೀಯ ಧುರೀಣರು, ಜನಪ್ರತಿನಿಧಿಗಳು ಕೂಡ ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಬಸರೆಡ್ಡಿಗೌಡ ಮಾಲಿಪಾಟೀಲ್ ಅನಪೂರ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಚಂದ್ರಕಲಾ ಶರಣಗೌಡ ಹೊಸಮನಿ, ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ ಜಿ.ರಜಪೂತ, ಸಹಾಯಕ ಆಯುಕ್ತರಾದ ಡಾ.ಬಿ.ಎಸ್.ಮಂಜುನಾಥ ಸ್ವಾಮಿ, ಜಿ.ಪಂ ಉಪ ಕಾರ್ಯದರ್ಶಿಗಳಾದ ವಸಂತರಾವ್ ವಿ.ಕುಲಕರ್ಣಿ, ಮುಖ್ಯ ಯೋಜನಾಧಿಕಾರಿ ಗುರುನಾಥ್, ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button