ಕಾಣೆಯಾಗಿರುವ ನ್ಯಾಯಾಧೀಶರ ನಾಯಿಗಾಗಿ ಪೊಲೀಸರ ಹುಡುಕಾಟ: ಹಲವರ ಬಂಧನ
ಉತ್ತರ ಪ್ರದೇಶ: ಕಾಣೆಯಾಗಿರುವ ವ್ಯಕ್ತಿ ಒಂದು ವೇಳೆ ಹೆಚ್ಚು ದಿನ ಕಾಣಿಸಿಕೊಳ್ಳದೇ ಇದ್ದರೆ, ಮಿಸ್ಸಿಂಗ್ ಕಂಪ್ಲೇಟ್ ನೀಡುತ್ತೇವೆ. ಪ್ರೀತಿಯಿಂದ ಸಾಕಿದ ಸಾಕು ಪ್ರಾಣಿ ಕಾಣೆಯಾದರೂ, ಪೊಲೀಸ್ ಠಾಣೆಯಲ್ಲಿ ನಾಯಿಯ ಫೋಟೋ ಸಮೇತ ದೂರು ನೀಡುತ್ತೇವೆ. ಪೊಲೀಸರು ನೋಡೋಣ.., ಮಾಡೋಣ.. ಅನ್ನುವ ಮಾತು ಹೇಳುತ್ತಾರೆ. ಆದರೆ, ಈ ಕೇಸ್ ಕೊಂಚ ಡಿಫ್ರಂಟ್ ಆಗಿದೆ. ನಾಯಿ ಕಾಣೆಯಾಗಿದೆ ಎಂದು ಪೊಲೀಸರಲ್ಲಿ ದೂರು ನೀಡುತ್ತಲೆ, ಅನುಮಾನಾಸ್ಪದ ವ್ಯಕಿಗಳನ್ನು ಖಾಕಿ ದಾರಿಗಳು ಬಂಧಿಸಿದ್ದಾರೆ.
ಅಬ್ಬಾ.. ಏನ್ ರಿ ಇದು.. ಎಂದು ನೀವು ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವ ಮುನ್ನ ಕಂಪ್ಲೇಟ್ ನೀಡಿದವರು ಯಾರು ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ. ಅಲ್ಲದೆ ಪ್ರಕರಣದಲ್ಲಿ ಆಗಿದ್ದೇನು, ಪೊಲೀಸರು ಜನರನ್ನು ಏಕೆ ಬಂಧಿಸಿದ್ದಾರೆ, ಎಂಬ ಕುತೂಹಲ ಸಹ ನಿಮ್ಮಲ್ಲಿ ಮೂಡಬಹುದು. ಅಸಲಿಗೆ ನಾಯಿ ಕಾಣೆ ಆಗಿದ್ದು, ನ್ಯಾಯಾಧೀಶರ ಮನೆಯಿಂದ!
ನ್ಯಾಯಾಧೀಶರ ನಾಯಿ ನಾಪತ್ತೆ
ಉತ್ತರ ಪ್ರದೇಶದ ಬರೇಲಿಯಲ್ಲಿ ನ್ಯಾಯಾಧೀಶರೊಬ್ಬರ ನಾಯಿ ನಾಪತ್ತೆಯಾಗಿರುವ ಘಟನೆ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ನಾಯಿಯನ್ನು ಹುಡುಕಲು ಈಗಾಗಲೇ ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಕಾರ್ಯಾಚರಣೆ ಚುರುಕಿನಿಂದ ನಡೆಯುತ್ತಿದೆ. ನಾಯಿ ನಾಪತ್ತೆಯಾಗಿ ಐದು ದಿನಗಳೇ ಕಳೆದರೂ ಅದರ ಕುರುಹು ಇನ್ನು ಪತ್ತೆಯಾಗದಿರುವುದು ನ್ಯಾಯಾಧಿಶರ ಕುಟುಂಬದಲ್ಲಿ ತಲ್ಲಣ ಸೃಷ್ಟಿ ಮಾಡಿದೆ.
15ಕ್ಕೂ ಹೆಚ್ಚು ಜನರ ವಿರುದ್ಧ ದೂರು
ಕಾಣೆಯಾಗಿರುವ ನಾಯಿಗೆ ಸಂಬಂಧಿಸಿದಂತೆ ನ್ಯಾಯಾಧೀಶರ ಪತ್ನಿ ನೆರೆಹೊರೆಯವರ ಹೆಸರನ್ನು ಹೆಸರಿಸಿ 15 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, ಈಗಾಗಲೇ ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ನಾಯಿ ನಾಪತ್ತೆ ಪ್ರಕರಣ ನ್ಯಾಯಾಧೀಶರ ಕುಟುಂಬದಲ್ಲಿ ಆತಂಕ ಸೃಷ್ಟಿಸಿದೆ.
ನಾಯಿ ಕಾಣೆಯಾಗಿದ್ದು ಹೇಗೆ?
ಬರೇಲಿಯ ಇಜ್ಜತ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ಖಾಕಿ ಧಾರಿಗಳ ನಿದ್ದೆ ಗೆಡಿಸಿದೆ. ಸಿವಿಲ್ ನ್ಯಾಯಾಧೀಶ ವಿಶಾಲ್ ದೀಕ್ಷಿತ್ ಅವರ ನಾಯಿ ಮೇ 18 ರಂದು ಅವರ ಮನೆಯ ಹೊರಗೆ ನಡೆದಾಡುತ್ತಿದ್ದಾಗ ಇದ್ದಕ್ಕಿದ್ದಂತೆ ನಾಯಿ ಕಾಣೆಯಾಗಿದೆ. ಬಳಿಕ ಈ ಬಗ್ಗೆ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಕಾಲೋನಿಯ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರೂ ನ್ಯಾಯಾಧೀಶರ ನಾಯಿಯ ಕುರುಹು ಪತ್ತೆಯಾಗಿರಲಿಲ್ಲ.
ಇದೀಗ ಇಜ್ಜತ್ ನಗರ ಪೊಲೀಸ್ ಠಾಣೆಯಲ್ಲಿ ನ್ಯಾಯಾಧೀಶರ ಪತ್ನಿ ಪೂಜಾ ದೀಕ್ಷಿತ್ ಪರವಾಗಿ ಪ್ರಕರಣ ದಾಖಲಿಸಿದ್ದಾರೆ. ಪೂಜಾ ದೀಕ್ಷಿತ್ ಅವರು ನೆರೆಹೊರೆಯಲ್ಲಿ ವಾಸಿಸುವ ಡಂಪಿ ಅಹ್ಮದ್ ಮತ್ತು ಅವರ ಹತ್ತಕ್ಕೂ ಹೆಚ್ಚು ಸಹಾಯಕರ ವಿರುದ್ಧ ದೂರು ನೀಡಿದ್ದಾರೆ. ಡಂಪಿ ಅಹ್ಮದ್ ತನ್ನ ಹೆಣ್ಣು ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಮತ್ತು ತನ್ನ ನಾಯಿಯನ್ನು ಕಾಣೆಯಾಗಿಸಿ ತನ್ನ ನ್ಯಾಯಾಧೀಶ ಪತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಇದರಿಂದ ನ್ಯಾಯಾಧೀಶರ ಮನೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ನ್ಯಾಯಾಧೀಶರ ಪತ್ನಿಯ ದೂರಿನ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಡಂಪಿ ಅಹಮದ್ ತಲೆಮರೆಸಿಕೊಂಡಿದ್ದಾನೆ.
ದೂರುದಾರೆ ನ್ಯಾಯಾಧೀಶರ ಪತ್ನಿ, ಡಂಪಿ ಅಹ್ಮದ್ ತಮ್ಮ ನಾಯಿಯನ್ನು ಕಾಣೆಯಾಗಿಸುವಲ್ಲಿ ಸಫಲನಾಗಿದ್ದಾನೆ. ನ್ಯಾಯಾಧೀಶರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ಅವರು ತಮ್ಮ ಹೆಣ್ಣು ಮಕ್ಕಳನ್ನು ಟ್ಯೂಷನ್ ಮತ್ತು ಶಾಲೆಗೆ ಕಳುಹಿಸುತ್ತಿಲ್ಲ ಎಂದು ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.