ಬೆಳಿಗ್ಗೆ ಎದ್ದ ಕೂಡಲೇ ಮೊಬೈಲ್ ನೋಡುತ್ತೀರಾ?
ಮೊಬೈಲ್ ಅನ್ನುವುದು ಇಂದಿನ ದಿನಗಳಲ್ಲಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದ್ದು, ಅದನ್ನು ಬಿಟ್ಟಿರಲು ಆಗುತ್ತಿಲ್ಲ. ಹೆಚ್ಚಿನ ಜನರು ಬೆಳಿಗ್ಗೆ ಕಣ್ಣು ಬಿಟ್ಟ ಕೂಡಲೇ ತಮ್ಮ ಮೊಬೈಲ್ ಫೋನ್ಗಳನ್ನು ನೋಡುತ್ತಾರೆ. ಮೆಸೇಜ್ ನೋಡುವುದು, ಅಲಾರಂ ಆಫ್ ಮಾಡುವುದು ಅಥವಾ ಕರೆಯನ್ನು ಪರಿಶೀಲಿಸುವುದು ಹೀಗೆ ಹಲವಾರು ಕಾರಣಗಳಿಗೆ ಹೆಚ್ಚಿನ ಜನರು ಬೆಳಿಗ್ಗೆ ಎದ್ದ ಕೂಡಲೇ ಮೊದಲು ಮೊಬೈಲ್ ನೋಡುತ್ತಾರೆ. ಮೊಬೈಲ್ ಸ್ಕ್ರೋಲಿಂಗ್ ಜನರ ಅಭ್ಯಾಸವಾಗಿ ಮಾರ್ಪಟ್ಟಿದೆ.
ನಮ್ಮ ಹಿರಿಯರು ಹಿಂದಿನ ಕಾಲದಲ್ಲಿ ಎದ್ದ ಬಳಿಕ ಮನೆಯಲ್ಲಿರುವ ದೇವರ ಫೋಟೊಗಳಿಗೆ ನಮಸ್ಕರಿಸುತ್ತಿದ್ದರು ಮತ್ತು ಮನೆಯ ಹೊರಗಡೆ ಇರುವಂತಹ ತುಳಸಿ ಕಟ್ಟೆಗೆ ಕೂಡ ಸುತ್ತು ಹಾಕಿ, ನಮಸ್ಕರಿಸಿ ಬರುತ್ತಿದ್ದರು. ಆದರೆ ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ಮೊಬೈಲ್ ನಲ್ಲಿ ವ್ಯಸ್ತರಾಗಿದ್ದು, ಹಾಸಿಗೆಯಿಂದ ಎದ್ದ ಕೂಡಲೇ ಅವರು ಮೊಬೈಲ್ ನೋಡುವುದನ್ನೇ ಅಭ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ. ಕೆಲವರು ಎದ್ದು ನಿತ್ಯಕರ್ಮಗಳನ್ನು ಪೂರೈಸುವ ಮೊದಲೇ ಮೊಬೈಲ್ ಕೈಗೆತ್ತಿಕೊಳ್ಳುವರು. ಈ ಡಿಜಿಟಲ್ ಗ್ಯಾಜೆಟ್ ಗಳು ಮನುಷ್ಯನ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತವೆ. ಎದ್ದ ಕೂಡಲೇ ಮೊಬೈಲ್ ಬಳಕೆ ಮಾಡುವವರು ನೀವಾಗಿದ್ದರೆ ಖಂಡಿತವಾಗಿಯೂ ಈ ಲೇಖನವನ್ನೊಮ್ಮೆ ಓದಿ.
ಬೆಳಗ್ಗೆ ಎದ್ದಾಗ ಮೊಬೈಲ್ನಲ್ಲಿ ಇ-ಮೇಲ್ ಚೆಕ್ ಮಾಡುವುದು, ವಾಟ್ಸಾಪ್ ನೋಡುವುದು, ಯೂಟ್ಯೂಬ್, ಇನ್ಸ್ಟಾಗ್ರಾಂ ನೋಡುವ ಅಭ್ಯಾಸಗಳು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಇದರಿಂದ ರಾತ್ರಿಯಿಡೀ ರಿಲ್ಯಾಕ್ಸ್ ಆಗಿದ್ದ ಮೆದುಳಿಗೆ ಇದ್ದಕ್ಕಿದ್ದಂತೆ ಒತ್ತಡ ನೀಡಿದಂತಾಗುತ್ತದೆ.
ಮೆದುಳು ಬಹಳಷ್ಟು ಡೋಪಮೈನ್ ಅನ್ನು ಬಿಡುಗಡೆ ಮಾಡುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಬೆಳಿಗ್ಗೆ ನಮ್ಮ ಫೋನ್‌ಗಳನ್ನು ಮೊದಲು ಪರಿಶೀಲಿಸುವುದರಿಂದ ನಾವು ನಮ್ಮ ಬೆಳಗಿನ ದಿನಚರಿಯನ್ನು ಕಳೆದುಕೊಳ್ಳುತ್ತೇವೆ. ನಾವು ನಮ್ಮ ಫೋನ್‌ಗಳಿಗೆ ದಾಸರಾಗುತ್ತೇವೆ. ಇದು ನಮ್ಮ ಆ ದಿನದ ಬಿಹೇವಿಯರ್ ಮತ್ತು ಮೂಡ್ ಮೇಲೂ ಪರಿಣಾಮ ಬೀರುತ್ತದೆ.