ಪೊಲೀಸರ ಮೇಲೆ ದರೋಡೆ ಪ್ರಕರಣ ದಾಖಲು ಏನದು ಕೇಸ್.?
ಪಿಎಸ್ಐ, ಕಾನ್ಸ್ಟೇಬಲ್ ವಿರುದ್ಧ ಪ್ರಕರಣ ದಾಖಲು
ಪೊಲೀಸರ ಮೇಲೆ ದರೋಡೆ ಪ್ರಕರಣ ದಾಖಲು
yadgiri, ಶಹಾಪುರಃ ಜೇವರ್ಗಿ ಠಾಣೆಯ ಪಿಎಸ್ಐ ಸಂಗಮೇಶ ಅಂಗಡಿ, ಕಾನಸ್ಟೆಬಲ್ ಆನಂದ ಹಾಗೂ ಇತರೆ ಇಬ್ಬರು ವಿರುದ್ಧ ಶಹಾಪುರ ಠಾಣೆಯಲ್ಲಿ ಗುರುವಾರ ದರೋಡೆ ಪ್ರಕರಣ ದಾಖಲಾಗಿದೆ.
ಜೇವರ್ಗಿಯ ಶರಣು ಕೋಬಾಳ ಹಾಗೂ ಮರೆಪ್ಪ ಕೋಬಾಳ ಇನ್ನಿತರ ಆರೋಪಿಗಳು ಆಗಿದ್ದಾರೆ.
“ತಾಲ್ಲೂಕಿನ ಗೌಡೂರ ಗ್ರಾಮದ ಬಳಿ ಶನಿವಾರ ಟಿಪ್ಪರನಲ್ಲಿ ಮರಳು ತುಂಬಿಕೊಳ್ಳಲು ಹೋದಾಗ ಅಲ್ಲಿಗೆ ಆನಂದ, ಶರಣು, ಮರೆಪ್ಪ ಈ ಮೂವರು ಕೂಡಿಕೊಂಡು ಬಂದು ನಿನ್ನ ಟಿಪ್ಪರ ಮೇಲೆ ಕೇಸು ಆಗಿದೆ ಹಿಡಿದುಕೊಂಡು ಬಾ ಎಂದು ಪಿಎಸ್ಐ ಸಂಗಮೇಶ ಅಂಗಡಿ ತಿಳಿಸಿದ್ದಾರೆ ಎಂದು ನನಗೆ ಹೆದರಿಸಿ ನನ್ನ ಜೇಬಿನಲ್ಲಿ ಇದ್ದ ಸುಮಾರು 64 ಸಾವಿರ ಕಸಿದುಕೊಳ್ಳುವಾಗ ಚೀರಾಡಿದೆ.
ಅಲ್ಲದೆ ಒತ್ತಾಯ ಪೂರ್ವಕವಾಗಿ ಎಳೆದುಕೊಂಡು ಹೋಗುವಾಗ 15 ಗ್ರಾಂ ಬಂಗಾರ ಚೈನ್ (75ಸಾವಿರ ಮೌಲ್ಯದ) ಹರಿದು ಕೆಳಗಡೆ ಬಿದ್ದಾಗ ಮರೆಪ್ಪ ಎನ್ನುವರು ತನ್ನ ಜೇಬಿನಲ್ಲಿಟ್ಟುಕೊಂಡರು. ನಂತರ ಟಿಪ್ಪರನ್ನು ಆನಂದ ಅವರು ಚಾಲನೆ ಮಾಡಿಕೊಂಡು ಮುಂದೆ ಸಾಗಿದರೆ ಅದರ ಹಿಂದೆ ಎರ್ಟಿಗಾ ಕಾರಿನಲ್ಲಿ ನನ್ನನ್ನು ಕೂಡಿಸಿಕೊಂಡು ಜೇವರ್ಗಿ ಠಾಣೆಯ ಹತ್ತಿರ ಹೋಗಿ ಬಿಟ್ಟು ಹೋಗಿದ್ದಾರೆ’ ಎಂದು ಟಿಪ್ಪರ ಚಾಲಕ ಹಣಮಂತರಾಯ ಮಕಾಶಿ ದೂರಿನಲ್ಲಿ ತಿಳಿಸಿದ್ದಾರೆ.
ಶಹಾಪುರ ಠಾಣೆಯಲ್ಲಿ ನಾಲ್ವರ ವಿರುದ್ಧ 323, 504, 506, 392 ಐಪಿಸಿ ಅಡಿಯಲ್ಲಿ ದೂರು ದಾಖಲಾಗಿದೆ.