ಪ್ರವಾಹ ಭೀತಿಃ ಕೃಷ್ಣಾ ನದಿ ತಟದ ಗ್ರಾಮಗಳಿಗೆ ಮುನ್ನೆಚ್ಚರಿಕೆ
ಕೊಳ್ಳೂರ ಸೇತುವೆಗೆ ತಹಶೀಲ್ದಾರ ಭೇಟಿ ಪರಿಶೀಲನೆ
ಕೊಳ್ಳೂರ ಸೇತುವೆಗೆ ತಹಶೀಲ್ದಾರ ಭೇಟಿ ಪರಿಶೀಲನೆ
yadgiri, ಶಹಾಪುರಃ ಮಹಾರಾಷ್ಟ್ರದಲ್ಲಿ ಮಳೆ ಜಾಸ್ತಿಯಾಗುತ್ತಿದ್ದು, ಬಸವಸಾಗರದಿಂದ ಸೋಮವಾರ 1 ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಬಿಟ್ಟಿರುವ ಕಾರಣ ತಾಲೂಕಿನ ಕೊಳ್ಳೂರ(ಎಂ) ಸೇತುವೆ ಮುಳುಗಡೆ ಭೀತಿ ಹೆಚ್ಚಾಗಿದ್ದು, ನದಿ ತಟದ ಗ್ರಾಮಸ್ಥರು ಎಚ್ಚರವಹಿಸಬೇಕೆಂದು ತಹಶೀಲ್ದಾರ ಮಧುರಾಜ ಕೂಡ್ಲಿಗಿ ತಿಳಿಸಿದ್ದಾರೆ.
ತಾಲೂಕಿನ ಕೊಳ್ಳೂರ(ಎಂ) ಗ್ರಾಮ ಬಳಿಯ ಸೇತುವೆ ಪರಿಶೀಲಿಸಿ ಅವರು ಮಾತನಾಡಿದರು. ತಾಲೂಕು ವ್ಯಾಪ್ತಿ ಕೃಷ್ಣಾ ನದಿ ತಟದಲ್ಲಿ ಬರುವ ಕೊಳ್ಳೂರ, ಮರಕಲ್, ಟೊಣ್ಣೂರ, ಗೌಡೂರ ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸಲಾಗಿದ್ದು, ಈಗಾಗಲೇ ಕೃಷ್ಣಾ ನದಿಗೆ ನಾರಾಯಣಪುರ ಡ್ಯಾಂನಿಂದ ನೀರು ಹರಿಬಿಡಲಾಗಿದ್ದು, ಮಹಾರಾಷ್ಟ್ರದಲ್ಲಿ ಮಳೆ ಜಾಸ್ತಿಯಾದಂತೆ ಹೆಚ್ಚಿನ ನೀರು ಬರುವ ಸಾಧ್ಯತೆ ಇರುವ ಕಾರಣ, ಯಾವುದೇ ಕಾರಣಕ್ಕೆ ಕುರಿ, ದನಕರು ಮೇಯಿಸುವವರು ಯಾರೊಬ್ಬರು ನದಿ ತೀರಕ್ಕೆ ಹೋಗಬಾರದು.
ತೀರದಲ್ಲಿ ವಾಸಿಸುವ ಈ ನಾಲ್ಕು ಗ್ರಾಮಗಳ ಜನರು ಎಚ್ಚರಿಕೆವಹಿಸಬೇಕು ಎಂದು ತಿಳಿಸಿದರು.
ಈ ಕುರಿತು ಆಯಾ ಗ್ರಾಮಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಸಂದೇಶ ರವಾನಿಸಿ ಡಂಗೂರ ಸಾರುವ ಮೂಲಕ ಎಚ್ಚರಿಸಲಾಗಿದೆ ಎಂದು ತಿಳಿಸಿದರು. ಅಲ್ಲದೆ ಪ್ರವಾಹ ಸಮಸ್ಯೆ ಎದುರಾದರೆ ತಕ್ಷಣಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.