‘ವಸಂತ’ಗಳಲ್ಲಿ ‘ಲೀನ’ವಾದ ಹಿರಿಯ ಸಾಹಿತಿಗೆ ಅಕ್ಷರ ನಮನ
ಕಲ್ಯಾಣ ಕರ್ನಾಟಕದ ಹಾಗೂ ನಾಡಿನ ಬಹುಮುಖ ಪ್ರತಿಭೆಯ ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿ
ಕಲ್ಯಾಣ ಕರ್ನಾಟಕದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಬಲವರ್ಧನೆಗೆ ಶ್ರಮಿಸಿದ ಮಹನೀಯರಲ್ಲಿ ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿ ಅವರು ಒಬ್ಬರು. ಕನ್ನಡದ ಬಹುಮುಖ ಪ್ರತಿಭೆಯ ಪ್ರತಿಭಾವಂತ ಸಾಹಿತಿ, ಲೇಖಕ, ವಿಮರ್ಶಕರಲ್ಲಿ ಪ್ರಮುಖರಾಗಿದ್ದ ಪ್ರೊ. ಕುಷ್ಟಗಿಯವರ ಅಗಲಿಕೆ ನಾಡಿನ ಸಾರಸ್ವತ ಪ್ರಪಂಚಕ್ಕೆ ತುಂಬಲಾರದ ನಷ್ಟ.
ರಾಘವೇಂದ್ರ ಕುಷ್ಟಗಿ ಮತ್ತು ಸುಂದರಬಾಯಿ ಎಂಬ ಸುಸಂಸ್ಕೃತ ದಂಪತಿಗಳ ಮಗನಾದ ಪ್ರ್ರೊ. ವಸಂತ ಕುಷ್ಟಗಿ ಅವರು ಯಾದಗಿರಿಯಲ್ಲಿ ಪ್ರಾಥಮಿಕ ಶಿಕ್ಷಣ ಶಹಾಪುರದಲ್ಲಿ ಮಾಧ್ಯಮಿಕ ಶಿಕ್ಷಣ, ಕಲಬುರ್ಗಿಯ ನೂತನ ಮಹಾವಿದ್ಯಾಲಯದಲ್ಲಿ ಪ್ರೌಢ ಶಿಕ್ಷಣ ಪೂರೈಸಿ ಸರ್ಕಾರಿ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಅಧ್ಯಯನ ಮಾಡಿದರು. ನಂತರ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಎಮ್. ಎ. ಸ್ನಾತಕೋತ್ತರ ಪದವಿ ಅದ್ಯಯನ ಮಾಡಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು.
ಬೀದರಿನ ಎಚ್.ಕೆ.ಇ ಸೋಸೈಟಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ ಪ್ರೊ. ವಸಂತ ಕುಷ್ಟಗಿ ಅವರು ಶಹಾಬಾದ ಕಲ್ಬುರ್ಗಿಯ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ, ರೀಡರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಾಸಾರಂಗದ ನಿರ್ದೇಶಕರಾಗಿ ಪ್ರಾಮಾಣಿಕತೆ, ನಿಷ್ಠೆ, ಬದ್ದತೆಯಿಂದ, ಸೇವಾಮನೋಭಾವದಿಂದ ಕಾರ್ಯನಿರ್ವಹಿಸಿದರು.
ಬದುಕು ಬರಹ ಒಂದಾಗಿಸಿಕೊಂಡಿದ್ದ ಪ್ರೊ. ವಸಂತ ಕುಷ್ಟಗಿ ಅವರು ನಾಡಿನ ಸಾರಸ್ವತ ಲೋಕಕ್ಕೆ ಭಕ್ತಿಗೋಪುರ, ಮುಂಡರಗಿ ಭೀಮರಾಯ, ಮದನ ಮೋಹನ ಮಾಳವೀಯ, ಜಗನಾಥ ದಾಸರ ಹಿರಿಮೆ, ಅಸಂಗತ-ಸ್ವಗತ, ಕಾವ್ಯಶ್ರೀ, ತೊದಲು, ರಾಘವೇಂದ್ರ ಮಹಿಮೆ ಮುಂತಾದ 60 ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅರ್ಪಿಸಿದ್ದಾರೆ.
ಬರಹ, ಚರ್ಚೆ, ಸಂವಾದ, ಉಪನ್ಯಾಸ, ವಿಮರ್ಶೆ, ಸಾಹಿತ್ಯ ಸಂಘಟನೆ ಮುಂತಾದವುಗಳ ಮೂಲಕ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕವನ್ನು ಸದಾ ಎಚ್ಚರವಾಗಿಡಲು ಶ್ರಮಿಸಿದ ಪ್ರೊ. ಕುಷ್ಟಗಿ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ, ಇತಿಹಾಸ ಅಕಾಡೆಮಿ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ, ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್, ಗುಲ್ಬರ್ಗ ವಿಶ್ವವಿದ್ಯಾಲಯದ ಸೆನೆಟ್ ಮುಂತಾದ ಸಂಘ ಸಂಸ್ಥೆಗಳ ಸದಸ್ಯರಾಗಿ ಕಾರ್ಯನಿರ್ವಹಿಸಿ ಅವುಗಳ ಮಹತ್ವವನ್ನು ಹೆಚ್ಚಿಸಿದ್ದಾರೆ.
ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಲ್ಲಿಸಿಸ ಸೇವೆಗೆ ಗೊರೂರು ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕಲ್ಬುರ್ಗಿ ಜಿಲ್ಲಾ 9 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅದ್ಯಕ್ಷತೆ, ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಮುಂತಾದ ಪ್ರಶಸ್ತಿ, ಗೌರವಗಳು ಸಂದಿವೆ. –
ಅಪಾರ ಜೀವಪರ, ಮಾನವೀಯಪರ ಕಾಳಜಿಯುಳ್ಳವರಾಗಿದ್ದ ಪ್ರೊ.ವಸಂತ ಕುಷ್ಟಗಿ ಅವರು ನಮ್ಮ ಕುಟುಂಬದೊಂದಿಗೆ ತುಂಬಾ ಆಪ್ತರಾಗಿದ್ದರು.
ಸಾಹಿತಿ ನಮ್ಮ ಚಿಕ್ಕಪ್ಪ ನಾ.ತಿ. ಹಾರಣಗೇರಾ ಅವರ ಎರಡು ಮೂರು ಕೃತಿಗಳಿಗೆ ಮುನ್ನುಡಿ ಬರೆದು ಕೃತಿಗಳ ಮೌಲ್ಯವನ್ನು ಹೆಚ್ಚಿಸಿದವರು. ಹೊಸ ತಲೆಮಾರಿನ ಅನೇಕ ಬರಹಗಾರರಿಗೆ, ಲೇಖಕರಿಗೆ, ಸಾಹಿತಿಗಳಿಗೆ ಪ್ರೋತ್ಸಾಹ, ಮಾರ್ಗದರ್ಶನ, ಪ್ರೇರಣೆ ನೀಡಿ ಬೆಳಿಸಿದ್ದಾರೆ.
ನಾಡಿನ ಸಾಹಿತ್ಯ ಲೋಕದಲ್ಲಿ ಪ್ರೊ.ವಸಂತ ಕುಷ್ಟಗಿ ಅವರ ವಿವಿಧ ಪ್ರಕಾರಗಳ ಸಾಹಿತ್ಯದ ಕುರಿತು ಹೆಚ್ಚು ಚರ್ಚೆ, ಸಂವಾದ, ವಿಮರ್ಶೆ ಸಾಕಷ್ಟು ನಡೆಯಲಿಲ್ಲ ಎಂದು ಹೇಳಬಹುದು. ಕಲ್ಯಾಣ ನಾಡಿನ ನೆಲದ ಸತ್ವ ಸಾರವನ್ನು ಹೀರಿಕೊಂಡು ಸಾಹಿತ್ಯದ ಮೂಲಕ ಉಣಬಡಿಸಿದ ಕನ್ನಡದ ಪ್ರಮುಖ, ಧೀಮಂತ, ಬಹುಶ್ರುತ ಹಾಗೂ ಪ್ರಜ್ಞಾವಂತ ಹಿರಿಯ ಸಾಹಿತಿಗಳಲ್ಲಿ ಒಬ್ಬರಾಗಿದ್ದ ಪ್ರೊ. ವಸಂತ ಕುಷ್ಟಗಿ ಅವರಿಗೆ ನಮ್ಮ ವಿನಯವಾಣಿ ಬಳಗ ಅಕ್ಷರ ನಮನಗಳನ್ನು ಅರ್ಪಿಸುತ್ತದೆ.
— ರಾಘವೇಂದ್ರ ಹಾರಣಗೇರಾ. ಸಮಾಜಶಾಸ್ತ್ರ ಉಪನ್ಯಾಸಕರು ಹಾಗೂ ಲೇಖಕರು ಶಹಾಪುರ.