ಶಹಾಪುರಃ ದೆಹಲಿ ಹೋರಾಟ ಬೆಂಬಲಿಸಿ ರೈತರಿಂದ ರಸ್ತೆ ತಡೆದು ಪ್ರತಿಭಟನೆ
ಒಂದು ತಾಸಿಗೂ ಹೆಚ್ಚು ಕಾಲ ರಸ್ತೆ ತಡೆ, ವಾಹನ ಸಂಚಾರಕ್ಕೆ ಅಡ್ಡಿ
ಶಹಾಪುರಃ ಕೇಂದ್ರ ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ರಾಜ್ಯದಲ್ಲಿ ಶನಿವಾರ ಕರೆ ಕೊಟ್ಟ ರಸ್ತೆ ತಡೆ ಪ್ರತಿಭಟನೆಗೆ ಓಗೊಟ್ಟು ಇಲ್ಲಿನ ರೈತ ಕಾರ್ಮಿಕ ಸಂಯುಕ್ತ ಹೋರಾಟ ಸಮಿತಿ ನಗರದ ತಹಸೀಲ್ ಕಚೇರಿ ಬಳಿ ಬೀದರ-ಬೆಂಗಳೂರ ಹೆದ್ದಾರಿ ತಡೆದು ಒಂದು ತಾಸು ಪ್ರತಿಭಟನೆ ನಡೆಸಿತು.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತು ಬಿಜೆಪಿ ವಿರುದ್ಧ ಪ್ರತಿಭಟನಾ ರೈತರಿಂದ ಘೋಷಣೆಗಳು ಮೊಳಗಿದವು. ಅಲ್ಲದೆ ರಸ್ತೆ ತಡೆಯಿಂದ ಸರ್ಕಾರಿ ಬಸ್‍ಗಳು ಸೇರಿದಂತೆ ಖಾಸಿ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಯಿತು. ಟಿಪ್ಪರ್, ಲಾರಿ, ಬಸ್ಸುಗಳು ಸೇರಿದಂತೆ ದ್ವಿಚಕ್ರವಾಗನಗಳ ಸವರರಿಗೆ ಮತ್ತು ಆಟೋಗಳಿಗೆ ಸುಮಾರು ಒಂದು ತಾಸುಗಳ ಕಾಲ ತೊಂದರೆಯುಂಟಾಯಿತು. ಈ ನಡುವೆ ಅಂಬ್ಯುಲೆನ್ಸ್ ವಾಹನ ಸೇರಿದಂತೆ ಆರೋಗ್ಯ ತುರ್ತು ವಾಹನಗಳಿಗೆ ಪೊಲೀಸರು ಅನುವು ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಪ್ರತಿಭಟನಾ ನೇತೃತ್ವವಹಿಸಿದ್ದ ರೈತ ಮುಖಂಡ ಚನ್ನಪ್ಪ ಆನೇಗುಂದಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳು ರೈತರಿಗೆ ಮಾರಕವಾಗಿದ್ದು, ರೈತಪರ ಸರ್ಕಾರ ಎಂದು ಜಂಬಕೊಚ್ಚಿಕೊಳ್ಳವ ಬಿಜೆಪಿ ರೈತರಿಗೆ ಹಿಂಬದಿಯಿಂದ ಚೂರಿ ಹಾಕಿದೆ ಎಂದು ಆರೋಪಿಸಿದರು.
ಕಳೆದ 70 ದಿನಗಳಿಂದ ದೆಹಲಿಯಲ್ಲಿ ಕೊರೆಯುವ ಚಳಿ, ಬಿಸಿಲು ಲೆಕ್ಕಿಸದೆ ನಿರಂತರ ಹೋರಾಟದಲ್ಲಿ ಭಾಗವಹಿಸಿ ಕಮಿಷ್ಠ ಡಿಗ್ರಿ ತಾಪಮಾನವನ್ನು ಲೆಕ್ಕಿಸದ ಕಾರಣ ಸುಮಾರು 150 ಜನ ರೈತರು ಅಸುನೀಗಿದ್ದಾರೆ. ಲಾಠಿ ಏಟು, ಅಶ್ರುವಾಯು ಮತತು ಜಲಫಿರಂಗಿಗೂ ಅಂಜದೆ ರೈತರು ತಮ್ಮ ಜೀವವನ್ನು ಪಣಕ್ಕಿಟ್ಟು ಹೋರಾಟ ಮುಂದುವರೆಸಿದ್ದಾರೆ. ಇದಾವದನ್ನು ಗಣನೆಗೆ ತೆಗೆದುಕೊಳ್ಳದ ಕೇಂದ್ರ ಸರ್ಕಾರ ಲಜ್ಜೆಗೇಡಿತನಕ್ಕೆ ಬಿದ್ದಿದೆ. ಕೇಂದ್ರ ಸರ್ಕಾರದಲ್ಲಿ ಫುಲ್ ಬಹುಮತ ಇದೆ ಎಂದ ಮಾತ್ರಕ್ಕೆ ಏನಾದರೂ ಮಾಡಬಹುದು ಎಂಬ ಭಂಡತನಕ್ಕೆ ಬಿದ್ದಿದೆ. ರೈತರನ್ನು ಒತ್ತೆಯಾಳುಗಳನ್ನಾಗಿಸುವ ಹುನ್ನಾರ ನಡೆಸಿದೆ. ಸಂವಿಧಾನ ಬಾಹಿರ ನಡೆಯನ್ನು ಪ್ರದರ್ಶಿಸುತ್ತಿರುವ ಕೇಂದ್ರ ಸರ್ಕಾರದ ನಡೆ ಸರಿಯಲ್ಲ. ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿಯವರು, ರೈತಪರ ಕಾಳಜಿ ಹೊಂದಿದ್ದಲ್ಲಿ ಈ ಕೂಡಲೇ ತಿದ್ದುಪಡಿ ತಂದಿರುವ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲಿ ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಎಸ್.ಎಂ.ಸಾಗರ, ಶರಣು ಮಂದರವಾಡ, ನಾಗರತ್ನ ಪಾಟೀಲ್, ಚಂದ್ರಕಲಾ, ಮಲಕಣ್ಣ ಚಿಂತಿ ಸೇರಿದಂತೆ ರೈತರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ತಹಸೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.