‘ಎಮ್ಮೆ ಬಾಲದ ಕಥೆ’ ನಮ್ಮಿಬ್ಬರಿಗೆ ಮಾತ್ರ ಗೊತ್ತು!
ನನಗಾಗ ಅಂದಾಜು 12ವರ್ಷ ಇರಬಹುದು. ಪ್ರೀತಿಯ ಹಿರಿಯಕ್ಕ ಹೊನ್ನಮ್ಮ ಆಗ ತಾನೇ ಮದುವೆ ಆಗಿ ಗಂಡನ ಮನೆ ಸೇರಿದ್ದಳು. ಅಕ್ಕನ ನೋಡುವಾಸೆಯಿಂದ ನಾನು ಸೈಕಲ್ ಏರಿ ನನ್ನೂರು ಶಹಾಪುರ ಪಟ್ಟಣದಿಂದ 12 ಕಿಲೋ ಮೀಟರ್ ದೂರದ ಸಲಾದಪುರ ಗ್ರಾಮಕ್ಕೆ ತೆರಳಿದ್ದೆ. ಅದೇ ಸಂದರ್ಭ ‘ಮಗದಾದ ಕೆರೆಗೆ ಮಾಯದ ಮಳೆ ಸುರಿದಂತೆ’ ಗೋಗಿ ಗ್ರಾಮದ ಕೆರೆಗೆ ಮಾಯದ ಮಳೆ ಸುರಿದು ಕೋಡಿಬಿದ್ದಿದ್ದು ಸಲಾದಪುರ ಗ್ರಾಮದ ಹಳ್ಳ ತುಂಬಿ ಹರಿಯುತ್ತಿತ್ತು. ‘ಎಲ್ಲೆಲ್ಲೂ ಹನಿ ಮಳೆಯೂ ಇಲ್ಲ ಈ ಹಳ್ಳ ನೋಡಿದ್ರೆ ತುಂಬಿ ಹರಿಯುತ್ತಿದೆಯಲ್ಲ ‘ ಎಂದು ನನಗೆ ಅಚ್ಚರಿಯೋ ಅಚ್ಚರಿ.

ಜಲದಿಗ್ಬಂಧನಕ್ಕೀಡಾದ ಸಲಾದಪುರ ಗ್ರಾಮದ ಕೆಲ ಜನ ತುಂಬಿ ಹರಿಯುವ ಹಳ್ಳದ ಭರ್ತಿ ಸೆಳವು ಕಂಡು ಕಾದುಕಾದು ಊರಿಗೆ ಹೋಗುವ ಆಸೆ ಬಿಟ್ಟು ಎತ್ತಿನ ಬಂಡಿ, ಆಟೋಗಳ ಮೂಲಕ ಸಂಬಂಧಿಕರಿರುವ ಪರ ಊರಿಗೆ ಹೋಗಲಾರಂಭಿಸಿದರು. ಕೆಲವರು ನನ್ನನ್ನು ಮಾತನಾಡಿಸಿ ‘ಅಳಿಯ ದೇವ್ರು ಸುಮ್ಮನೆ ಈವತ್ತು ವಾಪಸ್ ನಿಮ್ಮೂರಿಗೆ ಹೋಗಪಾ. ನಾಳೆ ಅಷ್ಟೊತ್ತಿಗೆ ಹಳ್ಳದ ಹರಿವು ಕಡಿಮೆ ಆಗುತ್ತೆ ಮತ್ತೆ ಬರುವಿಯಂತೆ’ ಅಂತ ಹೇಳಿದರು. ಆದರೆ, ನನಗೆ ಮಾತ್ರ ಅಕ್ಕನ ನೋಡಿಯೇ ಊರಿಗೆ ಹಿಂದಿರುಗಬೇಕೆಂಬ ಹಂಬಲ.
ಭೀಮರಾಯ ಮಾವ ಏನಾದರೂ ಹೊಲದಲ್ಲಿ ಇರಬಹುದೇ ಎಂದು ಯೋಚಿಸಿ ‘ಕ್ವಾನೇರ ಹೊಲ’ಕ್ಕೆ ಹೋಗಿ ನೋಡಿದರೆ ಮಾವ ನಾಪತ್ತೆ. ಅಕ್ಕಪಕ್ಕದ ಹೊಲದಲ್ಲಿದ್ದವರನ್ನು ಮಾತನಾಡಿಸಿ ಕೇಳಿದರೆ ನಿಮ್ಮ ಮಾವ ಬಲು ಜಾಣ ಕಣಪ್ಪೋ. ಆಗಲೇ ನಿಮ್ಮ ಕಾಕ ಹೊಲಕ್ಕೆ ಬಂದಿದ್ದ, ಗೋಗಿ ಕಡೆ ಭಾರೀ ಮಳೆ ಆಗಿದ್ದು ಕೆರೆ ತುಂಬಿ ಹರಿಯುತ್ತಿದೆ ಎಂದು ಹೇಳಿದ್ದೇ ತಡ ಹಳ್ಳದಾಕಡೆ ಇರುವ ‘ರಾಮನಸಗಿ ಹೊಲ’ಕ್ಕೆ ಹೋಗುವುದಾಗಿ ಹೇಳಿ ಹೋದ ಅಂತ ಒಬ್ಬರು ಹೇಳಿದರು. ಮತ್ತೊಬ್ಬರು ಹೋಗಲಿ ಬಿಡು ಪಾಪ ಪಟ್ಟಣದ ಹುಡುಗಿ ಮದ್ವೆ ಆದ ಬಳಿಕ ಭೀಮರಾಯ ಬದಲಾಗಿದ್ದಾನೆಂದು ನನ್ನನ್ನು ರೇಗಿಸಿ ‘ಮಜಾಕ್’ ಮಾಡಿದರು. ಅಯ್ಯೋ ನನ್ನ ಚಿಂತಿ ನನಗೆ ಇವರಿಗೆ ‘ನಗಚಟಗಿ’ ಎಂದು ಗೊಣಗುತ್ತ ಮತ್ತೆ ಸಲಾದಪುರದ ಹಳ್ಳದತ್ತ ಹೊರಟೆ. ಅದೇ ಹೊತ್ತಲ್ಲಿ ಕೆಲ ಯುವಕರು ಈಜಿ ಸಲಾದಪುರ ಸೇರಿದರು.
ನಾನೋ ‘ಈಜು ಬಾರದ ಪಂಡಿತ’ ಏನು ಮಾಡುವುದೆಂದು ತೋಚದೆ ನಿರಾಸೆಯಿಂದ ಕಾದು ನಿಂತೆ. ನಿಂತು ನಿಂತು ಸುಸ್ತಾಗಿ ಹಳ್ಳದ ಬದಿಯ ಕಲ್ಲು ಬಂಡೆಯ ಮೇಲೆ ಕುಳಿತಿದ್ದೆ. ಅಷ್ಟೊತ್ತಿಗೆ ‘ಬಸು’ ಎಂದು ಕೂಗಿದ ಅಕ್ಕನ ದನಿ ಕಿವಿಗೆ ಬಿತ್ತು. ತಕ್ಷಣಕ್ಕೆ ಎದ್ದು ನೋಡಿದರೆ ಹಳ್ಳದ ಆ ದಡಕ್ಕೆ ನಿಂತು ಅಕ್ಕ ಕೈ ಬೀಸುತ್ತಿದ್ದಳು. ಅವಳಿಗೂ ಪ್ರೀತಿಯ ಪುಟ್ಟ ತಮ್ಮನ ನೋಡುವಾಸೆ. ತಮ್ಮನಿಗೆ ಏನು ಹೇಳಬೇಕೆಂಬ ಪ್ರಬುದ್ಧತೆಯೂ ಇಲ್ಲದ ಬಾಲೆ ಅವಳು. ಅಜ್ಜ -ಅಜ್ಜಿ ಸಂಬಂಧಿಕರ ಒತ್ತಡಕ್ಕೆ ಮಣಿದು ನನ್ನ ಅಜ್ಜಿಯ ತವರು ಮನೆಗೆ ಕೊಟ್ಟು ಬಾಲ್ಯ ವಿವಾಹ ಮಾಡಿ ಕಳಿಸಿದ್ದರು ಸುಶಿಕ್ಷಿತ, ಶಿಕ್ಷಕ ನಮ್ಮ ಅಪ್ಪ ಸಂಗಪ್ಪ ಮಾಸ್ತರ್!.
ಹಳ್ಳದ ದಂಡೆಗೆ ನಿಂತು ತಮ್ಮನ ನೋಡುವಾಸೆಯಿಂದ ಬಾ ಎಂದು ಕೈ ಮಾಡಿ ಕರೆದಿದ್ದಳು ಅಕ್ಕ. ವಾಪಸ್ ಹೋದರಾಯ್ತು ಎಂದು ಯೋಚಿಸುತ್ತಿದ್ದವನಿಗೆ ಅಕ್ಕನ ಕರೆಗೆ ಇಲ್ಲ ಎನ್ನಲಾಗಲೇ ಇಲ್ಲ. ಆದರೆ, ಹಳ್ಳ ದಾಟುವುದು ಹೇಗೆಂದು ಯೋಚಿಸುತ್ತಿದ್ದವನಿಗೆ ಯಮನ ವಾಹನಗಳು ದಾರಿ ತೋರಿದವು. ಎಮ್ಮೆಗಳು ಸರಾಗವಾಗಿ ಈಜಿ ಸಲಾದಪುರ ಸೇರುತ್ತಿದ್ದವು. ಎಮ್ಮೆ ಕಾಯುವ ಕೆಲ ಹುಡುಗರು ಎಮ್ಮೆ ಬಾಲ ಹಿಡಿದು ಹಳ್ಳ ದಾಟಿದರು. ತಕ್ಷಣಕ್ಕೆ ನಾನು ಹಳ್ಳಕ್ಕಿಳಿದ ಎಮ್ಮೆ ಬಾಲ ಹಿಡಿದುಬಿಟ್ಟೆ. ಎಮ್ಮೆ ಕಾಯುವ ಯುವಕ ‘ಕಣ್ಣುಮುಚ್ಚಿಬಿಡು ಅರ್ಧಕ್ಕೆ ಕೈಬಿಟ್ಟರೆ ನೀನು ಕೈಗೆ ಸಿಗದಂಗೆ ಹೋಗಿ ಸನ್ನತಿ ಬ್ರಿಡ್ಜ್ ಗೆ ಸೇರ್ತಿ’ ಎಂದು ಬಿಟ್ಟ. ಆದದ್ದಾಗಲಿ ಎಂದು ಹೊರಟೇ ಬಿಟ್ಟೆ. ಐದಾರು ನಿಮಿಷದಲ್ಲಿ ಹಳ್ಳ ದಾಟಿ ಸಲಾದಪುರ ಸೇರಿದೆ.
ಓಡೋಡಿ ಬಂದ ಅಕ್ಕ ಅಪ್ಪಿಕೊಂಡು ಕಣ್ಣೀರಿಟ್ಟಳು… ‘ಯಾಕೆ ಬರೋಕೋಗಿದ್ದಿ ಈ ಸಂದರ್ಭದಲ್ಲಿ ನಾಳೆ ಬಂದರಾಗಿತ್ತು’ ಅಂತ ಅವಳು. ನನಗೇನು ಗೊತ್ತು ಎಲ್ಲೂ ಮಳೆಯೇ ಇಲ್ಲ , ನಿಮ್ಮೂರ ಹಳ್ಳಕ್ಕೆ ಮಾಯದ ಮಳೆ ಬಂದಿದೆ ನೋಡು ಅಂತ ನಾನು. ಮನೆಗೆ ಓದಾಕ್ಷಣ ಟವಲ್ ನಿಂದ ತಲೆ ಒರಿಸಿದ ಅಕ್ಕ ‘ಇರು ಶೀತಗೀತ ಆದೀತು’ ಅಂದು ಮೊಟ್ಟೆ ಬೇಯಿಸಿ ಕೊಟ್ಟಳು. ಬಳಿಕ ಮಾವ ಬರುವವರೆಗೂ ಅಕ್ಕ-ತಮ್ಮ ಮಾತಿನ ಮಂಟಪ ಕಟ್ಟಿದೆವು. ಮರಳಿ ಊರಿಗೆ ಹೊರಡುವ ವೇಳೆ ಎಮ್ಮೆ ಬಾಲ ಹಿಡಿದು ಹಳ್ಳ ದಾಟಿದ ವಿಚಾರ ಸಿಟ್ಟಿನ ಅಪ್ಪಗೆ ಹೆಳೋದು ಬೇಡ. ಇಬ್ಬರಿಗೂ ಗ್ರಹಚಾರ ಬಿಡಿಸುತ್ತಾರೆಂದು ಅಂದು ನಾವಿಬ್ಬರು ನಿರ್ಧರಿಸಿದ್ದೆವು. ಅಕ್ಕ ಈಗ ಮೊಮ್ಮಕ್ಕಳನ್ನು ಕಂಡಿರುವ ಅಜ್ಜಿ!. ಇಂದಿಗೂ ‘ಎಮ್ಮೆ ಬಾಲದ ಕಥೆ’ ನಮ್ಮಿಬ್ಬರಿಗೆ ಬಿಟ್ಟರೆ ನಿಮಗೆ ಮಾತ್ರ ಗೊತ್ತು!