ಪ್ರಮುಖ ಸುದ್ದಿ

ಶಹಾಪುರಃ ಧಾರ್ಮಿಕ ಭಾವನೆಗಳ ಜೊತೆ ಆಟವಾಡಿದ ತಹಸೀಲ್ದಾರ ಸೇನೆ ಆಕ್ರೋಶ

ಕರೆ ಸ್ವೀಕರಿಸದೆ ಅಂತಿಮವಾಗಿ ಠಾಣೆಗೆ ಕರೆಯಿಸಿ ಡಿಎಸ್‍ಪಿ ಮೂಲಕ ಸಂದೇಶ ರವಾನೆ

yadgiri, ಶಹಾಪುರಃ ಕೋವಿಡ್ ನಿಯಮ ಅನುಸರಿಸುವ ಮೂಲಕ ‌ಆರಾಧಿಸುವದಾದರೆ, ನಿಯಮ ಪಾಲಿಸುವದಾದರೆ ಪಲ್ಲಕ್ಕಿ ಮೂಲಕ ಗಂಗಾ ಸ್ನಾನಕ್ಕೆ ತೆರಳಲು ಅನುವು ಮಾಡಿಕೊಡುವೆ ಎಂದಿದ್ದ ಇಲ್ಲಿನ ತಹಸೀಲ್ದಾರ ಮಧುರಾಜ್ ಕೂಡ್ಲಿಗಿ ಜ.13 ರಾತ್ರಿ 11 ಗಂಟೆವರೆಗೂ ನಮ್ಮನ್ನು ಕಾಯಿಸಿ ಕೊನೆ ಗಳಿಗೆಯಲ್ಲಿ ಕರೆ ತಿರಸ್ಕರಿಸುವ ಮೂಲಕ ಡಿಎಸ್‍ಪಿಯಿಂದ ಯಾವುದೇ ಕಾರ್ಯಕ್ಕೂ ಆಸ್ಪದವಿಲ್ಲ ಎಂದು ಸ್ಪಷ್ಟ ಸಂದೇಶ ನೀಡಿಸುವ ಮೂಲಕ ಧಾರ್ಮಿಕ ಭಾವನೆಗಳ ಜೊತೆ ಚಲ್ಲಾಟವಾಡಿದ್ದಾರೆ ಎಂದು  ಕಲ್ಯಾಣ  ಕರ್ನಾಟಕ ಯುವ ಸೇನೆ ಜಿಲ್ಲಾಧ್ಯಕ್ಷ, ಬಲಭೀಮೇಶ್ವರರ ಸೇವಕ  ಭೀಮಾಶಂಕರ ಕಟ್ಟಿಮನಿ ಆರೋಪಿಸಿದ್ದಾರೆ.

ಕೋವಿಡ್ ಹಿನ್ನೆಲೆ ಈ ಬಾರಿಯ ಪಲ್ಲಕ್ಕಿ ಉತ್ಸವ, ಜಾತ್ರೆ, ಸಭೆ ಸಮಾರಂಭಗಳಿಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಅದರಂತೆ ಸಗರನಾಡಿನ ಆರಾಧ್ಯ ದೇವರಾದ ಇಲ್ಲಿನ ಭೀಮರಾಯನ ಗುಡಿ ಬಲಭೀಮೇಶ್ವರ ಹಾಗೂ ದಿಗ್ಗಿಯ ಸಂಗಮೇಶ್ವರರ ಪಲ್ಲಕ್ಕಿ ಉತ್ಸವ, ಜಾತ್ರೆಗೂ ಕೋವಿಡ್ ನಿಯಮ ಜಾರಿ ಹಿನ್ನೆಲೆ ಯಾವುದೇ ಉತ್ಸವ, ಮೆರವಣಿಗೆಗೆ ಆಸ್ಪದ ನೀಡದಿರುವದು ಸೋಜಿಗವೇನು ಅಲ್ಲ. ಮೊದಲೇ ಸ್ಪಷ್ಟವಾಗಿ‌ ಹೇಳಿದ್ರೆ ನಾವ್ಯಾರು ರಾತ್ರಿವರೆಗೂ ಕಾಯುತ್ತಿರಲಿಲ್ಲ. ಈಗ ಬರುವೆ ಆಗ ಬರುವೆ ಎಂದು ಕಾಗೆ ತೋರಿಸಿರುವದು ಸರಿಯಲ್ಲ ಎಂದ ಅವರು, ತಹಸೀಲ್ದಾರ ಮಧುರಾಜ ಕೂಡ್ಲಿಗಿ ಅವರ ವಿರುದ್ಧ ಹರಿಹಾಯ್ದಿದ್ದಾರೆ.

ಭಕ್ತಾಧಿಗಳಿಗೆ ಸಂಜೆ ಬನ್ನಿ, ಒಂದು ಗಂಟೆ ಬಿಟ್ಟು ಬನ್ನಿ ನಾನು ಬೇರೆ ಕಡೆ ಇದ್ದೀನಿ ಸ್ವಲ್ಪ ವೇಟ್ ಮಾಡಿ ಬರುವೆ ಎನ್ನುವ ಮೂಲಕ ಭಕ್ತರ ಧಾರ್ಮಿಕ ಭಾವನೆಗಳ ಜೊತೆ ಚಲ್ಲಾಟವಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಶಾಸಕ ದರ್ಶನಾಪುರ ಅವರೊಂದಿಗೆ ಭಕ್ತಾಧಿಗಳು ಒಂದು ಸುತ್ತಿನ ಸಭೆ ನಡೆಸಿ ಕೆಲವೇ ಜನರೊಂದಿಗೆ ಶ್ರೀದೇವರ ಗಂಗಾ ಸ್ನಾನಕ್ಕೆ ಅನುಮತಿ ಕೋರಿ ಜಿಲ್ಲಾಡಳಿತಕ್ಕೆ ಮನವಿ ಮಾಡುವದಾಗಿ ಭಕ್ತರ ಕೋರಿಕೆ ಮೇರೆಗೆ ದರ್ಶನಾಪುರ ಅವರು ಭರವಸೆ ನೀಡಿದ್ದರು. ಅವರಿಂದಲೂ ಕೊನೆವರೆಗೂ ಸ್ಪಷ್ಟ ಉತ್ತರ ಬರಲಿಲ್ಲ ಎಂದು ಬೇಸರಿಸಿದರು.

ಮಾಜಿ ಶಾಸಕರಾಗಲಿ, ಹಾಲಿಯಾಗಲಿ ಯಾರೊಬ್ಬರು ಜನರ ಭಾವನೆಗಳನ್ನು ಅರ್ಥೈಸಿಕೊಂಡು ಜನರೊಂದಿಗೆ ಬೆರೆತು ಮನ ಗೆಲ್ಲುವ ಮಾತನಾಡಲಿಲ್ಲ. ತಹಸೀಲ್ ಕಚೇರಿ ಮುಂದೆ ಸುಮಾರು 200 ಮಂದಿ ಭಕ್ತಾಧಿಗಳು ಸೇರಿದ್ದರು. ತಹಸೀಲ್ದಾರ ಕಚೇರಿಗೆ ಆಗಮಿಸದೆ, ಕೊನೆಗೆ ಪ್ರಮುಖರನ್ನು ಪೊಲೀಸ್ ಠಾಣೆಗೆ ಕರೆಸಿ ಡಿಎಸ್ಪಿ ಅವರಿಂದ ಸಂದೇಶ ರವಾನಿಸುವ ಮೂಲಕ ಅವಮಾನಿಸಿದ್ದಾರೆ ಎಂದು ಆರೋಪಿಸಿದರು.

ಐತಿಹಾಸಿಕವಾಗಿ ಪಾರಂಪರಿಕವಾಗಿ ಸಂಕ್ರಾಂತಿ ವಿಶೇಷ ಸಂದರ್ಭದಲ್ಲಿ ಭೀ.ಗುಡಿ ಬಲಭೀಮೇಶ್ವರ ಮೂರ್ತಿ ಹಾಗೂ ದಿಗ್ಗಿಯ ಸಂಗಮೇಶ್ವರರ ಮೂರ್ತಿ ಪಲ್ಲಕ್ಕಿಯೊಂದಿಗೆ ವೈಭವಯುತವಾಗಿ ಸೂರ್ಯನ ಪಥ ಬದಲಿಸುತ್ತಿರುವ ಶುಭ ಗಳಿಗೆಯಲ್ಲಿ ಸಹಸ್ರಾರು ಜನರ ಸೇವೆಯೊಂದಿಗೆ ಯಾವುದೇ ಜಾತಿ ಧರ್ಮ ಎನ್ನದೆ ಸರ್ವ ಜಾತಿಯವರು ಭಾಗವಹಿಸಿ ನೆರವೇರಿಸುವ ಈ ಉತ್ಸವ ರದ್ದಾಗಿರುವದು ಇದೇ ಮೊದಲ ಬಾರಿಗೆ.

ಪಾರಂಪರಿಕವಾಗಿ ಬಂದ ಪದ್ಧತಿ ಬಿಡಬಾರದು ಎಂಬ ಉದ್ದೇಶಕ್ಕೆ ಭಕ್ತಾಧಿಗಳು ಕೆಲವೇ ಜನರೊಂದಿಗೆ ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಗಂಗಾ ಸ್ನಾನಕ್ಕೆ ಮಾತ್ರ ಹೋಗಿ ಬರಲು ಅನುವು ಮಾಡಿಕೊಡುವಂತೆ ಪ್ರಾರ್ಥಿಸಲಾಗಿತ್ತು. ಅದಕ್ಕೆ ಮೊದಲಿಗೆ ಓಗೊಟ್ಟ ತಹಸಿಲ್ದಾರ ಕೊನೆ ಗಳಿಗೆಯಲ್ಲಿ ತಪ್ಪಿಸಿಕೊಂಡು ನಮ್ಮನ್ನು ತಹಸೀಲ್ ಕಚೇರಿ ಮುಂದೆ ಕಾಯುವಂತೆ ಮಾಡಿದ್ದಾರೆ.

ಅದೇ ವಿಜಯಪುರದಲ್ಲಿ ಸಿದ್ರಾಮೇಶ್ವರ ಜಾತ್ರೆ ರದ್ದು ಪಡಿಸಿದರೂ ನಂದಿಕೋಲು ಕುಣಿತ, ಇತರೆ ಕಾರ್ಯಕ್ರಮಕ್ಕೆ ಅಲ್ಲಿನ ಶಾಸಕರೇ ಸ್ವತಃ ಚಾಲನೆ ನೀಡಿದರು. ಅಲ್ಲದೆ ಶ್ರೀ ದೇವರ ದರ್ಶನ ಪಡೆಯಲು ನೂಕು ನುಗ್ಗಲು ನಡೆಯಿತು. ಅಲ್ಲಿನ ಶಾಸಕರೇ ಸ್ವತಃ ವಿಶೇಷ ಪೂಜೆ ನೆರವೇರಿಸಿ ದರ್ಶನಕ್ಕೆ ಅನುವು ಮಾಡಿಕೊಟ್ಟರು.

ಮತ್ತು ಕೋವಿಡ್ ಹಿನ್ನೆಲೆ ಯಾದಗಿರಿ ಜಿಲ್ಲೆಯಲ್ಲಿ ಕುರಿ ಸಂತೆ ರದ್ದು ಪಡಿಸಿರುವ ಜಿಲ್ಲಾಡಳಿತ ಮೈಲಾರಲಿಂಗೇಶ್ವರರಿಗೆ ಅರ್ಪಣೆ ಮಾಡಲು ಭಕ್ತಾಧಿಗಳು ತಂದಿದ್ದ ಕುರಿಗಳನ್ನು ಸಂಗ್ರಹಿಸಿ ಅವುಗಳ ಬಹಿರಂಗ ಹರಾಜು ನಡೆಸುತ್ತವೆ. ಕರ್ಫ್ಯೂ ಇದ್ದರೂ ಜಿಲ್ಲಾಡಳಿತ ಬಹಿರಂಗ ಹರಾಜು ನಡೆಸುತ್ತದೆ. ಅಂದರೆ ಸಾಮಾನ್ಯರಿಗೊಂದು ಕಾನೂನು ಜಿಲ್ಲಾಡಳಿತ,‌‌ ಅಧಿಕಾರಿಗಳಿಗೊಂದು ಕಾನೂನಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button