ಪ್ರಮುಖ ಸುದ್ದಿ

ನಗರದ ಹೃದಯಭಾಗದಲ್ಲಿ 9 ಅಡಿ ಪ್ರತಿಮೆ ಸ್ಥಾಪನೆಗೆ ದರ್ಶನಾಪುರ ಭರವಸೆ

ಡಾ.ಅಂಬೇಡ್ಕರರು ವಿಶ್ವಮಾನ್ಯರು ಭಾರತದ ಹೆಮ್ಮೆ – ದರ್ಶನಾಪುರ

ನಗರದ ಹೃದಯಭಾಗದಲ್ಲಿ 9 ಅಡಿ ಪ್ರತಿಮೆ ಸ್ಥಾಪನೆಗೆ ದರ್ಶನಾಪುರ ಭರವಸೆ

yadgiri, ಶಹಾಪುರಃ ವಿಶ್ವ ಜ್ಞಾನಿ, ಭಾರತ ರತ್ನ ಎಂದು ಇಂದಿಗೂ ವಿಶ್ವದಾದ್ಯಂತ ಹೆಸರು ಮಾಡಿದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರವರ ಆದರ್ಶ ಮತ್ತು ತತ್ವ ಸಿದ್ಧಾಂತಗಳನ್ನು ನಾವೆಲ್ಲ ಸೇರಿದಂತೆ ಯುವಕರು ಮೈಗೂಡಿಸಿಕೊಂಡು ಅವರು ತೋರಿದ ಮಾರ್ಗದಂತೆ ನಡೆದಲ್ಲಿ ದೇಶ ಅಗಾಧ ಪ್ರಗತಿಯತ್ತ ಸಾಗಲಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ 131 ನೇ ಜಯಂತಿ ಅಂಗವಾಗಿ ನಗರಸಭೆ ಆವರಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಂದಿನ ಪೀಳಿಗೆಗೆ ಬಾಬಾ ಸಾಹೇಬರ ತತ್ವ ಸಿದ್ಧಾಂತ ಅಚ್ಚಳಿಯದೇ ಉಳಿಯಬೇಕಾದರೆ ಅವರ ಆದರ್ಶಗಳನ್ನು ಮಕ್ಕಳ ಮನ ತುಂಬುವಂತೆ ಮಾಡಲು ನಗರದ ಹೃದಯ ಭಾಗದಲ್ಲಿ 9 ಅಡಿ ಎತ್ತರದ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ಏಪ್ರಿಲ್ 14 ಬರಿ ನಮ್ಮ ದೇಶಕಷ್ಟೆ ಅಲ್ಲದೆ ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ವಿಶೇಷ ದಿನವಾಗಿದೆ. ಅವರು ವಿಶ್ವಮಾನ್ಯರು, ದೇಶದ ಹೆಮ್ಮೆ. ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಭಾರತೀಯ ಸಂವಿಧಾನ ರಚನೆ ಮಾಡಿದ ಡಾ.ಬಾಬಾಸಾಹೇಬರು ಸರ್ವ ಧರ್ಮ ಸರ್ವ ಸಮಾಜದ ಅಭಿವೃದ್ಧಿಯ ಹರಿಕಾರರಾಗಿದ್ದರು. ಅವರು ರಚಿಸಿದ ಸಂವಿಧಾನ ಇಂದು ವಿಶ್ವದಲ್ಲೆ ಮಾದರಿಯಾಗಿದೆ.

ಡಾ.ಬಾಬಾ ಸಾಹೇಬರು ಸಮಾನತೆಯ ಬೆಳಕು ನೀಡಿ ಸರ್ವರಿಗೂ ಬದುಕಿನ ಹಾದಿಯನ್ನು ಕಲಿಸಿದರು. ಆದರೆ ಇಂದು ರಾಜಕೀಯ ಕಲುಷಿತ ವಾತಾವರಣಗೊಂಡು ಜಾತಿ, ಧರ್ಮ ಧರ್ಮಗಳ ಮಧ್ಯ ಅಸಮಾನತೆ ತಾಂಡವವಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಡಾ.ಅಂಬೇಡ್ಕರರ ಮೂರು ನೀತಿ ನಿಯಮಗಳನ್ನು ಮೈಗೂಡಿಸಿಕೊಂಡು ಆ ನಿಟ್ಟಿನಲ್ಲಿ ಯುವ ಸಮುದಾಯ ಶಿಕ್ಷಣ, ಸಮಾನತೆ ಮತ್ತು ಹೋರಾಟ ಮಾರ್ಗಗಳನ್ನು ಅನುಸರಿಸಬೇಕಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ತಹಸೀಲ್ದಾರ ಮಧುರಾಜ ಕೂಡ್ಲಿಗಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಮಲ್ಲಿಕಾರ್ಜುನ ಚಿಲ್ಲಾಳ, ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ರಾಮಣ್ಣ ಸಾದ್ಯಾಪುರ, ನಗರಸಭೆ ಪೌರಾಯುಕ್ತ ಓಂಕಾರ ಪೂಜಾರಿ, ತಾಪಂ ಇಓ ಬಸವರಾಜ ಸಜ್ಜನ್, ವಕೀಲರಾದ ಚಂದ್ರಶೇಖರ ಲಿಂಗದಳ್ಳಿ, ತಾಲೂಕು ಆರೋಗ್ಯ ಅಧಿಕಾರಿ ಡಾ.ರಮೇಶ ಗುತ್ತೇದಾರ, ಸಿಡಿಪಿಓ ಗುರುರಾಜ ಶೆಟ್ಟಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಯಪ್ಪಗೌಡ ಹುಡೇದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ದಲಿತ ಮುಖಂಡ ನೀಲಕಂಠ ಬಡಿಗೇರ ಕ್ರಾಂತಿ ಗೀತೆ ಹಾಡಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕ ಲಕ್ಷ್ಮಣ ಲಾಳಸಗೇರಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ಇದೇ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್‍ಗಳಾ ಕೆಲಸ ಮಾಡಿದ ವಿವಿಧ ಕ್ಷೇತ್ರದ ಅಧಿಕಾರಿ, ಸಿಬ್ಬಂದಿಗಳನ್ನು ಸನ್ಮಾನಿಸಿದರು, ಮತ್ತು ಸಮಾಜ ಸೇವೆಯಲ್ಲಿ ನಿರತ ಮುಖಂಡರಾದ ಶಿವಪುತ್ರ ಜವಳಿ, ಬಾಬುರಾವ್ ಬೂತಾಳೆ, ಶರಣಪ್ಪ ಅಣಬಿ, ಶರಣಪ್ಪ ಕೊಂಬಿನ್, ಚಂದ್ರು ಚಕ್ರವರ್ತಿ ಅವರನ್ನು ಸನ್ಮಾನಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button